/newsfirstlive-kannada/media/post_attachments/wp-content/uploads/2025/07/IIT_INDORE_NEW.jpg)
ಭಾರತದಲ್ಲಿ 12ನೇ ತರಗತಿ ವಿದ್ಯಾಭ್ಯಾಸ ಮುಗಿದ ಬಳಿಕ ಬಹಳಷ್ಟು ಮಂದಿ ವಿದ್ಯಾರ್ಥಿಗಳು, ಐಐಟಿ ಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಓದಲು ಬಯಸುತ್ತಾರೆ. ಐಐಟಿಗಳಲ್ಲಿ ಓದಿದ್ದರೇ, ವಾರ್ಷಿಕ ಕೋಟಿ ರೂಪಾಯಿ ಸಂಬಳದ ಪ್ಯಾಕೇಜ್ ಪಡೆಯಬಹುದು ಎಂಬ ಆಸೆ, ನಿರೀಕ್ಷೆ ವಿದ್ಯಾರ್ಥಿಗಳು, ಪೋಷಕರಲ್ಲಿ ಇರುತ್ತೆ. ಇಂಥ ಪ್ರತಿಷ್ಠಿತ ಐಐಟಿಗಳ ಪೈಕಿ ಮಧ್ಯಪ್ರದೇಶದ ಇಂದೋರ್ ಐಐಟಿ ಕೂಡ ಒಂದು. ಮಧ್ಯಪ್ರದೇಶದ ಇಂದೋರ್ ಐಐಟಿ ತನ್ನ ಪ್ಲೇಸ್ ಮೆಂಟ್ ಫಲಿತಾಂಶದಿಂದ ಈ ಬಾರಿ ಇಡೀ ದೇಶದ ಗಮನ ಸೆಳೆದಿದೆ.
ಇಂದೋರ್ ಐಐಟಿಯ ವಿದ್ಯಾರ್ಥಿಗಳ ಪೈಕಿ 5 ವಿದ್ಯಾರ್ಥಿಗಳಿಗೆ ವಾರ್ಷಿಕ 1 ಕೋಟಿ ರೂಪಾಯಿ ಉದ್ಯೋಗ ಸಿಕ್ಕಿದೆ. ಇದು ಇಂದೋರ್ ಐಐಟಿ ಸಂಸ್ಥೆಯ ಇತಿಹಾಸದಲ್ಲೇ ಒಂದು ದೊಡ್ಡ ಮೈಲಿಗಲ್ಲು ಆಗಿದೆ. 2024ರ ಪ್ಲೇಸ್ ಮೆಂಟ್ ಸೀಸನ್ನಲ್ಲಿ ಐಐಟಿ ಇಂದೋರ್ ಮಹತ್ವದ ಸಾಧನೆಯನ್ನು ಮಾಡಿತ್ತು. 2023ರಲ್ಲಿ ಓರ್ವ ವಿದ್ಯಾರ್ಥಿ ಮಾತ್ರವೇ ಒಂದು ಕೋಟಿ ರೂಪಾಯಿಗಿಂತ ಹೆಚ್ಚಿನ ಸಂಬಳದ ಪ್ಯಾಕೇಜ್ ಪಡೆದಿದ್ದರು. ಆದರೇ, 2025 ರಲ್ಲಿ ಕನಿಷ್ಠ ಸಂಬಳದ ಪ್ಯಾಕೇಜ್ನಲ್ಲಿ ಭಾರಿ ಏರಿಕೆಯಾಗಿದೆ.
2024ರ ಡಿಸೆಂಬರ್ನಿಂದ ಇಲ್ಲಿಯವರೆಗೂ 500 ಉದ್ಯೋಗಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಐಐಟಿ ಇಂದೋರ್ನ ಶೇ.88 ರಷ್ಟು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಉದ್ಯೋಗ ಸಿಕ್ಕಿದೆ.
ಕಂಪನಿಗಳಿಂದ ಕ್ಯಾಂಪಸ್ ಸೆಲೆಕ್ಷನ್
ಐಐಟಿ ಇಂದೋರ್ಗೆ 150 ಪ್ರತಿಷ್ಠಿತ ಕಂಪನಿಗಳು ಬಂದು ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಅಭ್ಯರ್ಥಿಗಳನ್ನು ತಮ್ಮ ಕಂಪನಿಗಳಿಗೆ ಆಯ್ಕೆ ಮಾಡಿಕೊಂಡಿವೆ. ಸಾರ್ವಜನಿಕ ವಲಯದ ಕಂಪನಿಗಳು, ಐಟಿ, ಕೋರ್ ಇಂಜಿನಿಯರಿಂಗ್, ಫಿನಟೆಕ್, ಆಟೋಮೊಬೈಲ್, ಎನರ್ಜಿ, ಎನ್ವಿರಾನ್ ಮೆಂಟ್, ಕನ್ಸಲ್ಟಿಂಗ್, ಬ್ಯಾಂಕಿಂಗ್, ಸೆಮಿಕಂಡಕ್ಟರ್, ಕನ್ಸಟ್ರಕ್ಷನ್ ಸೇರಿದಂತೆ ವಿವಿಧ ವಲಯದ ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಭಾಗವಹಿಸಿದ್ದವು.
ಸರಾಸರಿ ಸಂಬಳವು ಈ ವರ್ಷ ಶೇ.13 ರಷ್ಟು ಏರಿಕೆಯಾಗಿ, ಪ್ರತಿ ವರ್ಷಕ್ಕೆ 27 ಲಕ್ಷ ರೂಪಾಯಿಗೆ ತಲುಪಿತ್ತು. ಇದು ಐಐಟಿ ಇಂದೋರ್ ವಿದ್ಯಾರ್ಥಿಗಳ ಗುಣಮಟ್ಟ ಮತ್ತು ಕೌಶಲ್ಯಯುತ ಉದ್ಯೋಗಿಗಳಿಗೆ ಹೆಚ್ಚಾಗುತ್ತಿರುವ ಬೇಡಿಕೆಯ ಪ್ರತಿಬಿಂಬದಂತೆ ಇತ್ತು. ಐಐಟಿ ಇಂದೋರ್ನ ವಿದ್ಯಾರ್ಥಿಗಳಿಗೆ ಕೋಟಿಗಟ್ಟಲೇ ಸಂಬಳದ ಆಫರ್ಗಳು ಬರುತ್ತಿವೆ. ಶೇ.88 ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್ ಮೂಲಕವೇ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೇ, ಕ್ಯೂಎಸ್ ವರ್ಲ್ಡ್ ಯೂನಿರ್ವಸಿಟಿ ಱಂಕಿಂಗ್ನಲ್ಲಿ ಐಐಟಿ ಇಂದೋರ್ ಸ್ಥಾನವು 2023ರಲ್ಲಿದ್ದ 396ನೇ ಸ್ಥಾನದಿಂದ 2025 ರಲ್ಲಿ 556ಕ್ಕೆ ಕುಸಿದಿದೆ.
ಇದನ್ನೂ ಓದಿ:BHEL ಅಲ್ಲಿ 500ಕ್ಕೂ ಅಧಿಕ ಉದ್ಯೋಗಗಳು.. 10th, ಐಟಿಐ ಪಾಸ್ ಆಗಿದ್ರೆ ಅಪ್ಲೇ ಮಾಡಬಹುದು
ಇಂದೋರ್ನ ಐಐಟಿ ನಿರ್ದೇಶಕ ಏನಂದ್ರು?
ಐಐಟಿ ಇಂದೋರ್ ಡೈರೆಕ್ಟರ್ ಸುಹಾಸ್ ಜೋಷಿ ಅವರು ಸಂಸ್ಥೆಯ ಱಂಕಿಂಗ್ ಕುಸಿತವನ್ನು ಒಪ್ಪಿಕೊಂಡಿದ್ದಾರೆ. ಸಂಸ್ಥೆಯ ರಿಸರ್ಚ್, ಪೇಟೇಂಟ್, ಇನ್ನೋವೇಶನ್, ಜಾಗತಿಕ ಸಹಭಾಗಿತ್ವ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳ ಮೂಲಕ ಱಂಕಿಂಗ್ ಉತ್ತಮಪಡಿಸಿಕೊಳ್ಳುವ ಯತ್ನ ಮಾಡುತ್ತಿದ್ದೇವೆ ಎಂದು ಸುಹಾಸ್ ಜೋಷಿ ಹೇಳಿದ್ದಾರೆ.
ಐಐಟಿ ಇಂದೋರ್, 34 ದೇಶಗಳೊಂದಿಗೆ 118 ಎಂಓಯು ಗಳಿಗೆ ಸಹಿ ಹಾಕಿದೆ. ಸಂಸ್ಥೆಯಲ್ಲಿ 220 ಪ್ರಾಧ್ಯಾಪಕರಿದ್ದು, 3 ಸಾವಿರ ವಿದ್ಯಾರ್ಥಿಗಳಿದ್ದಾರೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಸಂಸ್ಥೆಯು ಮತ್ತಷ್ಟು ಎತ್ತರಕ್ಕೇರಲಿದೆ ಎಂಬ ವಿಶ್ವಾಸದಲ್ಲಿ ಸಂಸ್ಥೆಯ ನಿರ್ದೇಶಕರು, ಪ್ರಾಧ್ಯಾಪಕರು ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ