ಚನ್ನಪಟ್ಟಣದಲ್ಲಿ ಮತ್ತೊಂದು ಪೆಟ್ಟು ತಿಂದ ನಿಖಿಲ್​; ದೊಡ್ಡ ಗೌಡರ ಮೊಮ್ಮಗನಿಗೆ ಮತ್ತೆ ಸೋಲಾಗಿದ್ದು ಏಕೆ?

author-image
Gopal Kulkarni
Updated On
ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್​ಗೆ ಭರ್ಜರಿ ಗೆಲುವು.. ನಿಖಿಲ್​​ಗೆ ಹ್ಯಾಟ್ರಿಕ್ ಸೋಲು
Advertisment
  • ನಿಖಿಲ್​ಗೆ ಹ್ಯಾಟ್ರಿಕ್​ ಸೋಲು..ಬೊಂಬೆಯಾಡಿಸಿದ್ದು ಯಾರು?
  • ಅಪ್ಪ-ತಾತ ಹಗಲು ರಾತ್ರಿ ಹಗಲು ಸುತ್ತಿದರೂ ಜಯ ಸಿಗಲಿಲ್ಲವೇಕೆ?
  • 5 ಕಾರಣ, ಈ ಮತಗಳಿಂದ ಪಟ್ಟಣದ ಚಿತ್ರಣ ಬದಲಾಗಿ ಹೋಯ್ತು!

ಮೊಮ್ಮಗನನ್ನು ಗೆಲಸಬೇಕು ಅಂತಾ ಮಾಜಿ ಪ್ರಧಾನಿ ದೇವೇಗೌಡ್ರು ತಮ್ಮ ವಯಸ್ಸು, ವಯೋ ಸಹಜ ಅನಾರೋಗ್ಯವನ್ನು ಲೆಕ್ಕಿಸದೇ ಅಖಾಡಕ್ಕಿಳಿದಿದ್ರು. ಕುಮಾರಸ್ವಾಮಿ ಅವರು ನಿಖಿಲ್‌ಗಾಗಿ ರಣತಂತ್ರ ರೂಪಿಸಿ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ರು. ನಿಖಿಲ್‌ 18 ದಿನಗಳ ಕಾಲ ಪ್ರತಿಯೊಂದು ಹಳ್ಳಿ ಹಳ್ಳಿಗೂ ಹೋಗಿ ಮತಶಿಕಾರಿ ನಡೆಸಿದ್ದರು. ಆದರೂ ಹ್ಯಾಟ್ರಿಕ್‌ ಸೋಲು ತಪ್ಪಿಸಲು ಸಾಧ್ಯವಾಗಿಲ್ಲ. ಹಾಗಾದ್ರೆ, ದಳಪತಿಗಳು ಎಡವಿದ್ದು ಎಲ್ಲಿ? ನಿಖಿಲ್‌ ಸೋಲಿಗೆ ಆ 10 ಕಾರಣ ಏನು? ಚಕ್ರವ್ಯೂಹ ಭೇದಿಸಲು ಈ ಬಾರಿಯೂ ಯಾಕೆ ಸಾಧ್ಯವಾಗಿಲ್ಲ?

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ್ರ ಮೊಮ್ಮಗ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿಗೆ ಹ್ಯಾಟ್ರಿಕ್‌ ಸೋಲು ಜಸ್ಟ್​ ಎರಡೇ ಎರಡು ಗಂಟೆಗಳಲ್ಲಿ ಬೆಳಗ್ಗೆಯಿದ್ದ ಸಂತೋಷ ಮಾಯವಾಗಬಿಟ್ಟಿತ್ತು. ಅಪ್ಪನ ಭದ್ರಕೋಟೆಯಲ್ಲಿ ಈ ಬಾರಿಯಾದ್ರೂ ಗಟ್ಟಿಯಾಗಿ ನೆಲೆಯೂರಬಹುದು ಅಂತಾ ಕಂಡಿದ್ದ ಕನಸು ಛಿದ್ರವಾಗಿ ಹೋಯ್ತು. ದೊಡ್ಡಗೌಡರ ಮೊಮ್ಮಗ ನಿಖಿಲ್​ ಕುಮಾರಸ್ವಾಮಿ ಮತ್ತೆ ಎಡವಿದ್ದಾರೆ. ಚನ್ನಪಟ್ಟಣದಿಂದ ಸ್ಪರ್ಧಿಸಿದ್ದ ದಳಪಡೆಯ ಅಭಿಮನ್ಯುಗೆ ಮತ್ತೆ ಸೋಲುಂಟಾಗಿದೆ. ಸಿಪಿ ಯೋಗೇಶ್ವರ್​​ ಗೆಲುವು ದಾಖಲಿಸಿದ್ದಾರೆ.

publive-image

ತಂದೆಗೆ 2 ಬಾರಿ ಆಶೀರ್ವಾದ ಮಾಡಿದ ಜನ ಮಗನಿಗೆ ಮಾಡಿಲ್ಲ!
2019ರಲ್ಲಿ ಮಂಡ್ಯ ಲೋಕಸಮರದಲ್ಲಿ ಸೋಲು, 2023ರಲ್ಲಿ ರಾಮನಗರ ವಿಧಾನಸಭೆಯಲ್ಲಿ ಸೋಲು, ಇದೀಗ ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿಯೂ ನಿಖಿಲ್‌ ಪರಾಭವಗೊಂಡಿದ್ದಾರೆ. ಬೇಸರದ ವಿಚಾರ ಏನಂದ್ರೆ, ಹೆಚ್‌ಡಿ ದೇವೇಗೌಡರು, ಹೆಚ್‌ಡಿ ಕುಮಾರಸ್ವಾಮಿಗೆ ಆಶೀರ್ವಾದ ಮಾಡಿರೋ ಜನ ನಿಖಿಲ್‌ಗೆ ಮಾಡಿಲ್ಲ. ರಾಮನಗರದಲ್ಲಿ ದೇವೇಗೌಡರು, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಮೂವರಿಗೆ ಅಲ್ಲಿಯ ಜನ ಗೆಲುವು ಕೊಟ್ಟಿದ್ರು. ಆದ್ರೆ, ನಿಖಿಲ್‌ನ ಕೈ ಬಿಟ್ಟಿದ್ದಾರೆ. ಇನ್ನು ಚನ್ನಪಟ್ಟಣ ಕ್ಷೇತ್ರಕ್ಕೆ ಬರೋದಾದ್ರೆ 2018 ಮತ್ತು 2023ರಲ್ಲಿ ಇದೇ ಸಿಪಿ ಯೋಗೇಶ್ವರ್‌ ವಿರುದ್ಧ ಕುಮಾರಸ್ವಾಮಿಯನ್ನ ಅಲ್ಲಿನ ಮತದಾರರು ಹೊತ್ತು ಮೆರೆಸಿದ್ರು. 2018ರಲ್ಲಿ 21 ಸಾವಿರ, 2023ರಲ್ಲಿ 15 ಸಾವಿರ ಮತಗಳ ಅಂತರದಲ್ಲಿ ಹೆಚ್​​ಡಿಕೆಗೆ ವಿಜಯಮಾಲೆ ಹಾಕಿದ್ರು. ಆದ್ರೆ, ಈಗ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿಗೆ ಬರೋಬ್ಬರಿ 25 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಸೋಲು ಕೊಟ್ಟಿದ್ದಾರೆ. ಇಷ್ಟೆಲ್ಲಾ ಸಾಲು ಸಾಲು ಸೋಲುಗಳಾಗಿದ್ರೂ ನಿಖಿಲ್​ ಹೇಳ್ತಿರೋದು ಒಂದೇ ಮಾತು, ನಾನು ಯಾವತ್ತಿಗೂ ಎದೆಗುಂದಲ್ಲ, ಕ್ಷೇತ್ರದ ಋಣ ಮರೆಯೋದಿಲ್ಲ ಅನ್ನೋ ಮಾತು.

ಅಪ್ಪ ಕಂಡೂ ಕೇಳರಿಯದ ರೀತಿ ಮಗನ ಗೆಲುವಿಗೆ ಶ್ರಮ ಹಾಕಿದ್ರು. ತಾತ ಇಳಿವಯಸ್ಸಿನಲ್ಲೂ, ಅನಾರೋಗ್ಯವಿದ್ದರೂ ಮೊಮ್ಮಗನಿಗಾಗಿ ಬಂದು ಮತಬೇಟೆಯಾಡಿದ್ರು.. ಕ್ಷೇತ್ರದ ಜನರು ಜೊತೆಗೇ ಇದ್ದರು ಕಣ್ಣೀರು ಹಾಕಿದಾಗ ಕಣ್ಣೊರೆಸಿ ಈ ಬಾರಿ ನಿಮ್ಮನ್ನ ಬಿಡೋದಿಲ್ಲ ಅಂತಾ ಹೇಳಿದ್ದರು, ಇಷ್ಟೆಲ್ಲಾ ವಿಶ್ವಾಸವಿದ್ದರೂ ಕೂಡ ಬೊಂಬೆನಾಡಿನಲ್ಲಿ ನಡೆದ ಒಳ ಆಟವಾದ್ರೂ ಯಾವುದು? ಗೆಲ್ಲುವ ಎಲ್ಲಾ ಚಾನ್ಸ್​ಗಳಿದ್ರೂ ನಿಖಿಲ್​ ಸೋತಿದ್ದೇಗೆ? ಈ ಪ್ರಶ್ನೆಗಳನ್ನ ಬೆನ್ನತ್ತಿ ಹೊರಟ್ರೆ ಹಲವು ಉತ್ತರಗಳು ತೆರೆದುಕೊಳ್ತಾ ಹೋಗ್ತಾವೆ

publive-image

ನಿಖಿಲ್‌ ಸೋಲಿಗೆ ಕಾರಣ-01; ಮುಸ್ಲಿಂ ಮತಗಳು ಕಾಂಗ್ರೆಸ್‌ನತ್ತ!
ನಿಖಿಲ್‌ ಸೋಲಿಗೆ ಬಹುಮುಖ್ಯ ಕಾರಣ ಏನು ಅಂತಾ ನೋಡುತ್ತಾ ಹೋದರೆ, ಅದರಲ್ಲಿ ಮೊಟ್ಟ ಮೊದಲನೇಯದಾಗಿ ಕಾಣಿಸೋದು ಮುಸ್ಲಿಂ ಮತಗಳು ಕಾಂಗ್ರೆಸ್ ಬಿಟ್ಟು ಕದಲದೇ ಇರೋದು ಅಂತಾನೇ ಹೇಳಬಹುದು. ಚನ್ನಪಟ್ಟಣದಲ್ಲಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಅಲ್ಲ 100ಕ್ಕೆ ಶೇಕಡಾ 90ಕ್ಕೂ ಹೆಚ್ಚು ಮುಸ್ಲಿಂ ಮತಗಳು ಯೋಗೇಶ್ವರ್ ತೆಕ್ಕೆಗೆ ಜಾರಿವೆ. ಕ್ಷೇತ್ರದಲ್ಲಿ ಸುಮಾರು 30 ಸಾವಿರ ಮುಸ್ಲಿಂ ಮತಗಳಿದ್ದವು . ಅದರಲ್ಲಿ ಬಹುಶಃ ಕಾಂಗ್ರೆಸ್‌ಗೆ 60 ಅಥವಾ 70 ಪರ್ಸೆಂಟ್‌ ಹೋಗಿ ಜೆಡಿಎಸ್‌ಗೆ ಕನಿಷ್ಠ 30 ರಷ್ಟು ವೋಟ್‌ ಬಿದ್ದಿದ್ದರೆ ಚಿತ್ರಣವೇ ಬದಲಾಗುತ್ತಾ ಇತ್ತು. ಆದ್ರೆ, ಆ ವೋಟ್‌ಗಳಲ್ಲಿ ಜೆಡಿಎಸ್‌ಗೆ ಬಂದಿದ್ದು ಬೆರಳೆಣಿಕೆಯ ಮತಗಳು ಮಾತ್ರ. ನಿಮಗೆ ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ.ಮುಸ್ಲಿಂ ಪ್ರಾಬಲ್ಯವಿರುವ ಬೂತ್​ಗಳಲ್ಲಿ ವೋಟ್​ಗಳು ಸುಮಾರು 1 ಸಾವಿರದಷ್ಟಿದ್ದರೆ ಅದರ ಸಿಂಹಪಾಲು ಯೋಗೇಶ್ವರ್​​ಗೆ ಹೋಗಿದೆ. ನಿಖಿಲ್​ಗೆ 30,40,50 ಈ ರೀತಿಯ ಮತಗಳು ಬಿದ್ದಿದೆ ಚನ್ನಪಟ್ಟಣ ಟೌನ್​​ನಲ್ಲಿ ದೊಡ್ಡ ಹೊಡೆತ ಕೊಟ್ಟಿದೆ. ನಿಖಿಲ್ ಸೋಲಿಗೆ ಬಲವಾದ ಕಾರಣ ಇದೇ ನೋಡಿ
ಚನ್ನಪಟ್ಟಣ ನಗರದಲ್ಲಿ ಮುಸ್ಲಿಂ ಸಂಖ್ಯೆ ಜಾಸ್ತಿ ಇರೋ ವಾರ್ಡ್‌ಗಳಲ್ಲಿರೋ ಬೂತ್‌ಗಳ ಸಂಖ್ಯೆ 14, ಆ 14 ಬೂತ್‌ಗಳಲ್ಲಿ ವೋಟಿಂಗ್‌ ಆಗಿದ್ದು 22 ಸಾವಿರ ಮತ. ಅದರಲ್ಲಿ ಕಾಂಗ್ರೆಸ್‌ ಕ್ಯಾಂಡಿಡೇಟ್‌ ಯೋಗೇಶ್ವರ್‌ಗೆ ಬರೋಬ್ಬರಿ 19 ಸಾವಿರ ಮತಗಳು ಬಿದ್ದಿವೆ. ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿಗೆ ಬೆರಳಣಿಕೆಯ ಮತಗಳು ಮಾತ್ರ ಬಿದ್ದಿವೆ.ಇನ್ನು, ಕೌಂಟಿಂಗ್​ ಶುರುವಾಗುತ್ತಿದ್ದಂತೆ ಪಂದ್ಯ ಅಕ್ಷರಶಃ ಹಾವು-ಏಣಿ ಆಟದಂತಿತ್ತು.. ಆದ್ರೆ, ಅದ್ಯಾವಾಗ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕೌಂಟಿಂಗ್​ ಶುರುವಾಯ್ತೋ, ಅಲ್ಲಿಂದ ಯೋಗೇಶ್ವರ್​​ ಲಕ್​ ಬದಲಾಗಿಬಿಡ್ತು ಅಂತಾ ಹೇಳುತ್ತೆ ಗ್ರೌಂಡ್ ರಿಪೋರ್ಟ್​.

publive-image

ನಿಖಿಲ್‌ ಸೋಲಿಗೆ ಕಾರಣ-02 ಅಭ್ಯರ್ಥಿಯನ್ನು ತಡವಾಗಿ ನಿರ್ಧಾರ ಮಾಡಿದ್ದು!
ಇದೂ ಕೂಡ ನಿಖಿಲ್​ ಸೋಲಿಗೆ ಕಾರಣ ಅಂತಾನೇ ಹೇಳಬಹುದು. ಹೆಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಾ ಇದ್ದಂತೆ ಚನ್ನಪಟ್ಟಣಕ್ಕೆ ಜೆಡಿಎಸ್‌ ಅಭ್ಯರ್ಥಿ ಯಾರು ಅನ್ನೋದ್‌ ನಿರ್ಧಾರ ಮಾಡಿದ್ದರೆ ಬಹುಶಃ ಗೌಡರ ಕುಟುಂಬಕ್ಕೆ ಇಂತಹ ಪರಿಸ್ಥಿತಿ ಮತ್ತೆ ಎದುರಾಗುತ್ತಾ ಇರಲಿಲ್ಲ. ಆದ್ರೆ, ಯೋಗೇಶ್ವರ್‌ಗೆ ಟಿಕೆಟ್‌ ಕೊಡಬೇಕೋ? ನಿಖಿಲ್‌ರನ್ನು ಅಖಾಡಕ್ಕೆ ಇಳಿಸಬೇಕೋ? ಅನ್ನೋ ಗೊಂದಲ್ಲದಲ್ಲಿಯೇ ಮೂರು ನಾಲ್ಕು ತಿಂಗಳು ಕಳೆದು ಬಿಟ್ಟರು. ಆದ್ರೆ, ಕಾಂಗ್ರೆಸ್‌ ತನ್ನ ರಣಕಲಿಯನ್ನು ಡಿಸೈಡ್‌ ಮಾಡದೇ ಇದ್ದರೂ ಚನ್ನಪಟ್ಟಣದಲ್ಲಿ ಗೆಲ್ಲಬೇಕು ಅಂತಾ ಡಿಕೆಶಿ ರಣತಂತ್ರ ಮಾಡುತ್ತಲೇ ಇದ್ದರು. ಯೋಗೇಶ್ವರ್‌ ಅನ್ನು ಪಕ್ಷಕ್ಕೆ ಕರೆದುಕೊಂಡು ಬಂದು ಅಭ್ಯರ್ಥಿ ಮಾಡೋದಕ್ಕೆ ಸರ್ಕಸ್​ ನಡೀತಾನೇ ಇತ್ತು. ಹೀಗಾಗಿ, ಆ ಸರ್ಕಸ್ಸೇ ಇವತ್ತು ದೊಡ್ಡ ಬೆಲೆ ತೆರುವಂತೆ ಮಾಡಿದೆ ಅಂದರೂ ತಪ್ಪಿಲ್ಲ. ಒಂದು ವೇಳೆ ನಿಖಿಲ್‌ ಕ್ಯಾಂಡಿಡೇಟ್‌ ಅಂತಾ ಮೊದಲೇ ತೀರ್ಮಾಸಿ ಅನೌನ್ಸ್‌ ಮಾಡಿದ್ರೆ ಜೆಡಿಎಸ್‌ ಕಾರ್ಯಕರ್ತರಿಗೆ ಜಾಸ್ತಿ ಟೈಮ್‌ ಸಿಕ್ತಾ ಇತ್ತು. ನಿಖಿಲ್‌ಗೂ ಹಳ್ಳಿ ಹಳ್ಳಿ ಸುತ್ತಾಡಲು ಬೇಕಾದಷ್ಟು ಕಾಲಾವಕಾಶ ದೊರೆಯುತ್ತಾ ಇತ್ತು. ದೇವೇಗೌಡ್ರು, ಕುಮಾರಸ್ವಾಮಿ ಇಬ್ಬರೂ ಸೇರಿ ವಿಭಿನ್ನ ರಣತಂತ್ರ ಮಾಡಬಹುದಾಗಿತ್ತು.

ನಿಖಿಲ್‌ ಸೋಲಿಗೆ ಕಾರಣ-03 ಒಕ್ಕಲಿಗ ವೋಟ್‌ಗಳು ಡಿವೈಡ್‌ ಆಗಿದ್ದು!
ರಿಸಲ್ಟ್‌ ಬರೋದಕ್ಕೂ ಮುನ್ನ ಏನ್‌ ಲೆಕ್ಕಾಚಾರ ಇತ್ತು ಅಂದ್ರೆ ಚನ್ನಪಟ್ಟಣದಲ್ಲಿ ಒಕ್ಕಲಿಗ ವೋಟ್‌ಗಳು ಬಹುತೇಕ ಓನ್‌ಸೈಡೆಡ್​ ಆಗ್ತವೆ. ಅದು ನಿಖಿಲ್‌ ಕುಮಾರಸ್ವಾಮಿ ಗೆಲುವಿಗೆ ನೆರವಾಗಬಹುದು ಅಂತಾ ಹೇಳಲಾಗ್ತಿತ್ತು. ಜೆಡಿಎಸ್‌ ನಾಯಕರು ಮತ್ತು ಕಾರ್ಯಕರ್ತರು ಅಂತಹದೊಂದು ಲೆಕ್ಕಾಚಾರ ಹಾಕಿದ್ರು. ಒಂದು ವೇಳೆ ಒಕ್ಕಲಿಗ ಮತಗಳು ಓನ್‌ಸೈಡ್‌ ಆಗಿ ದಳಕ್ಕೆ ಬಂದಿದ್ದರೆ ನಿಖಿಲ್‌ ಸುಲಭವಾಗಿ ಗೆಲುವು ಸಾಧಿಸುತ್ತಿದ್ರು. ಯಾಕಂದ್ರೆ, ಕ್ಷೇತ್ರದಲ್ಲಿರೋ 2.18 ಲಕ್ಷ ವೋಟ್‌ಗಳಲ್ಲಿ ಒಕ್ಕಲಿಗ ವೋಟ್‌ಗಳು ಬರೋಬ್ಬರಿ 1.15 ಲಕ್ಷ ಇದೆ. ಆದ್ರೆ, ಯೋಗೇಶ್ವರ್‌ ಕೂಡ ಒಕ್ಕಲಿಗರು ಆಗಿರೋದ್ರಿಂದ, ಹಾಗೇ ಡಿಕೆ ಬ್ರದರ್ಸ್‌ ಪಣತೊಟ್ಟಿರೋ ಪರಿಣಾಮ ಒಕ್ಕಲಿಗ ವೋಟ್‌ಗಳು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಡಿವೈಡ್‌ ಆಗಿವೆ. ಇದು ನಿಖಿಲ್‌ ಸೋಲಿಗೆ ಮತ್ತೊಂದು ಕಾರಣವಾಗಿ ಕಾಣಿಸ್ತಿದೆ.

ನಿಖಿಲ್‌ ಸೋಲಿಗೆ ಕಾರಣ-04 ಅಪ್ಪ-ತಾತ ಹಗಲು ರಾತ್ರಿ ಸುತ್ತಿದರೂ ವೋಟ್‌ ಕೈತಪ್ಪಿದ್ದೇಗೆ?
ನಿಜ ಹೇಳ್ಬೇಕು ಅಂದ್ರೆ, ಚನ್ನಪಟ್ಟಣ ಅಖಾಡದಲ್ಲಿ ನಿಖಿಲ್‌ ಗೆಲುವಿನ ಆತ್ಮವಿಶ್ವಾಸ ಮೂಡಿಸಲು ಕಾರಣವಾಗಿದ್ದೇ ದೇವೇಗೌಡ್ರು ಮತ್ತು ಕುಮಾರಸ್ವಾಮಿಯಾಗಿದ್ರು. ಅದರಲ್ಲಿಯೂ ದೇವೇಗೌಡರು ತಮ್ಮ ಅನಾರೋಗ್ಯವನ್ನು ಲೆಕ್ಕಿಸದೇ, ವಯಸ್ಸನ್ನು ಗಣನೆಗೆ ತೆಗೆದ್ಕೊಳ್ಳದೇ ಕ್ಯಾಂಪೇನ್‌ಗೆ ಇಳಿದಿದ್ದರು. ಪ್ರತಿಯೊಂದ್‌ ಗ್ರಾಮ ಮಂಚಾಯಿತಿ ಮಟ್ಟಕ್ಕೂ ದೇವೇಗೌಡ್ರು ಹೋಗಿದ್ದಾರೆ. ತಮ್ಮ ಮೊಮ್ಮಗ ಗೆಲ್ಲಿಸಿ ಅಂತಾ ಕೇಳ್ಕೊಂಡಿದ್ದಾರೆ. ಹಾಗೇ ಕುಮಾರಸ್ವಾಮಿ ಅವರು ಕೂಡ ಇಡೀ ಕ್ಷೇತ್ರವನ್ನು ಸಂಚಾರ ಮಾಡಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಎರಡು ಬಾರಿ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದರೂ ಇಷ್ಟೊಂದು ಕ್ಯಾಂಪೇನ್‌ ಮಾಡಿದ್ದು ಇಲ್ಲವೇ ಇಲ್ಲವಾಗಿತ್ತು. ಆದ್ರೆ, ಈ ಬಾರಿ ಮಗನನ್ನು ಗೆಲ್ಲಿಸಬೇಕು ಅಂತಾನೇ ಜಿದ್ದಿಗೆ ಬಿದ್ದು ಕ್ಯಾಂಪೇನ್‌ ಮಾಡಿದ್ದರು. ಆದ್ರೆ, ಅದು ದೊಡ್ಡ ಪ್ರಮಾಣದಲ್ಲಿ ವೋಟ್‌ ಟರ್ನ್‌ ಮಾಡಲು ಯಶಸ್ವಿಯಾಗಿಲ್ಲ ಅನ್ನೋದು ಕಾಣಿಸ್ತಿದೆ.

publive-image

ನಿಖಿಲ್‌ ಸೋಲಿಗೆ ಕಾರಣ-05 ಡಿಕೆ ಬ್ರದರ್ಸ್‌ ಸೇಡಿನ ತಂತ್ರ ಅರಿಯುವಲ್ಲಿ ವೈಫಲ್ಯ!
2023 ರಲ್ಲಿ ರಾಮನಗರ ಕ್ಷೇತ್ರದಲ್ಲಿ ನಿಖಿಲ್‌ ಸೋಲಿಸಿದ್ದು ಡಿಕೆ ಬ್ರದರ್ಸ್‌ ಆಗಿದ್ರು. ಇದೀಗ ಚನ್ನಪಟ್ಟಣದಲ್ಲಿ ನಿಖಿಲ್‌ ಸೋಲಿಗೂ ಡಿಕೆ ಬ್ರದರ್ಸ್‌ ಕಾರಣ ಅಂದರೆ ಖಂಡಿತ ತಪ್ಪಾಗದು. ಯಾಕಂದ್ರೆ, ಕಳೆದ ಲೋಕಸಭೆಯಲ್ಲಿ ಡಿಕೆ ಸುರೇಶ್‌ ಸೋಲಿಸಿದ ಮೇಲೆ ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು ಅಂತಾನೇ ಡಿಕೆ ಬ್ರದರ್ಸ್‌ ಸಮಯ ಕಾಯ್ತಾನೆ ಇದ್ರು. ಅದು ಹೇಗಾದರೂ ಮಾಡಿ ಚನ್ನಪಟ್ಟಣದಲ್ಲಿ ದಳವನ್ನು ಸೋಲಿಸಿ ಸೇಡು ತೀರಿಸ್ಕೊಳ್ಳಬೇಕು ಅಂತಾನೇ ಪಣತೊಟ್ಟಿದ್ದರು. ಹೀಗಾಗಿ ಅವ್ರು ಲೋಕಸಮರ ಮುಗೀತಾ ಇದ್ದಂತೆ ಚನ್ನಪಟ್ಟಣದಲ್ಲಿ ಕಾರ್ಯತಂತ್ರ ಶುರು ಮಾಡಿದ್ರು. ಡಿಕೆ ಸುರೇಶ್‌ ಸಂಪೂರ್ಣ ಜವಾಬ್ದಾರಿ ತೆಗೆದ್ಕೊಂಡಿದ್ದರು. , ಅದನ್ನು ಅರಿತು ಪ್ರತ್ಯಸ್ತ್ರ ರೂಪಿಸುವಲ್ಲಿ ದಳಪತಿಗಳು ಎಲ್ಲೋ ವಿಫಲರಾಗಿದ್ದಾರೆ ಅನ್ನೋದನ್ನು ಈ ಫಲಿತಾಂಶ ಹೇಳುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment