/newsfirstlive-kannada/media/post_attachments/wp-content/uploads/2024/04/Drinking-Water.jpg)
ವೈದ್ಯರಾಗಲಿ, ಮನೆಯಲ್ಲಿರುವ ಹಿರಿಯರಾಗಲಿ ಸದಾ ಒಂದು ಸಲಹೆಯನ್ನ ನೀಡುತ್ತಿರುತ್ತಾರೆ. ಅದು, ನೀರು ಹೆಚ್ಚು ಕುಡಿರಿ, ನೀರು ಜಾಸ್ತಿ ಕುಡಿದರೆ ದೇಹವನ್ನು ಹೈಡ್ರೇಟ್ ಆಗಿ ಇಡಬಹುದು. ಕಿಡ್ನಿ ಸ್ಟೋನ್ ಅಜೀರ್ಣ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ದೂರ ಮಾಡಬಹುದು ಎಂದು ಹೇಳುತ್ತಾರೆ. ಆದ್ರೆ ನೀರು ಕುಡಿಯಲು ಕೂಡ ಒಂದು ಮಿತಿ ಇದೆ. ಅದು ಮೀರಿ ಹೋದರೆ ನೀರು ಕೂಡ ವಿಷವಾಗಿ ಪರಿಣಮಿಸುವುದಂತೂ ಪಕ್ಕಾ. ದೇಹವು ವಿಪರೀತ ಆರ್ದ್ರತೆ(ಹೈಡ್ರೇಟ್) ಆದರೂ ಕೂಡ ನಮಗೆ ಜೀವ ಕಂಟಕವಾಗುವುದು ಫಿಕ್ಸ್. ನೀರನ್ನು ವಿಪರೀತ ಕುಡಿಯುವುದರಿಂದ ಅನೇಕ ಅಡ್ಡ ಪರಿಣಾಮಗಳು ಇವೆ.
ಇದನ್ನೂ ಓದಿ:ಬೆಳಗಿನ ಈ 5 ಅಭ್ಯಾಸಗಳು ನಿಮ್ಮನ್ನು ಮಾರಣಾಂತಿಕ ಕಾಯಿಲೆಯಿಂದ ಕಾಪಾಡುತ್ತವೆ; ತಪ್ಪದೇ ಪಾಲಿಸಿ!
ಇದನ್ನು ವೈದ್ಯಕೀಯ ಭಾಷೆಯಲ್ಲಿ ವಾಟರ್ ಇಂಟೊಕ್ಸಿಕೇಷನ್ ಎನ್ನುತ್ತಾರೆ. ಅಂದ್ರೆ ನೀರು ಹೆಚ್ಚು ಕಡಿಮೆ ದೇಹಕ್ಕೆ ವಿಷವಾಗಿ ಪರಿಣಮಿಸುವುದು ಅಂತ. ಒಬ್ಬ ವ್ಯಕ್ತಿ ದೇಹಕ್ಕೆ ಅಗತ್ಯವಿರುವುದಕ್ಕಿಂತ ಜಾಸ್ತಿ ನೀರು ಕುಡಿದಲ್ಲಿ, ಆ ನೀರು ಅಕ್ಷರಶಃ ವಿಷವಾಗಿ ಪರಿಣಮಿಸುತ್ತೆ. ಇದು ಶಾರೀರಿಕ ಕಾರ್ಯಕ್ಷಮತೆಯನ್ನು ಬಿಗಡಾಯಿಸುವಂತಹ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ.ಅಷ್ಟು ಮಾತ್ರವಲ್ಲ ಪ್ರಾಣ ಕಂಟಕವೇ ಆಗುವ ಸಾಧ್ಯತೆ ಇರುತ್ತದೆ. ಅದು ಮಾತ್ರವಲ್ಲ, ಇದು ಅತಿಯಾಗಿ ನೀರು ಕುಡಿದಿರುವುದರಿಂದ ಬಂದ ಸಮಸ್ಯೆ ಅಂತ ಕಂಡು ಹಿಡಿಯಲು ಕೂಡ ಅಷ್ಟು ಸರಳವಾಗಿ ಸಾಧ್ಯವಾಗುವುದಿಲ್ಲ.
ವಾಟರ್ ಇಂಟೊಕ್ಸಿಕೇಷನ್ ಆದಾಗ ಪ್ರಮುಖವಾಗಿ ಕೆಲವು ಲಕ್ಷಣಗಳು ಕಂಡು ಬರುತ್ತವೆ.
ಹುಳಿತೇಗು ಮತ್ತು ವಾಂತಿ: ಇದು ಅತಿಯಾಗಿ ನೀರು ಕುಡಿದಯುವವರಲ್ಲಿ ಕಾಣುವ ಮೊದಲ ಲಕ್ಷಣ. ಹುಳಿತೇಗು ಹಾಗೂ ವಿಪರೀತ ವಾಂತಿಯ ಲಕ್ಷಣಗಳು ಕಂಡು ಬರುತ್ತವೆ. ಯಾವಾಗ ದೇಹವು ವಿಪರೀತವಾದ ನೀರು ತೆಗೆದುಕೊಳ್ಳುತ್ತದೆ ಹೆಚ್ಚುವರಿ ನೀರು ಹೊಟ್ಟೆಯ ಉಬ್ಬರಗೊಂಡಂತೆ ಅನಿಸಲು ಶುರುವಾಗುತ್ತೆ, ಹೀಗಾಗಿ ಹುಳಿತೇಗು ಹಾಗೂ ವಾಂತಿ ಶುರುವಾಗುತ್ತದೆ. ವಾಂತಿಯ ಮೂಲಕ ದೇಹದಲ್ಲಿ ಹೋಗಿರುವ ಹೆಚ್ಚುವರಿ ನೀರನ್ನು ದೇಹವೇ ತೆಗೆದು ಹಾಕುತ್ತದೆ.
ತಲೆನೋವು: ಆಗಾಗ ಕಾಡುವ ತಲೆನೋವು ಕೂಡ ಅತಿಯಾಗಿ ಕುಡಿದ ನೀರಿನ ಪ್ರಮಾಣದಿಂದಲೇ ಆಗಿರುವ ಸಾಧ್ಯತೆ ಇರುತ್ತದೆ. ಯಾವಾಗ ದೇಹದ electrolyte levels ಅಸಮತೋಲನಕ್ಕೆ ಈಡಾಗತ್ತದೆಯೋ ಮೆದುಳು ತಾತ್ಕಾಲಿಕವಾಗಿ ಊದಿಕೊಂಡು ತಲೆನೋವಿನಂತಹ ಸಮಸ್ಯೆಗಳು ಬರುತ್ತವೆ.
ಗೊಂದಲಗಳು ಮತ್ತು ದಿಗ್ಭ್ರಮೆಗಳು : ಅತಿಯಾಗಿ ನೀರು ಕುಡಿಯುವುದು ಮಾನಸಿಕವಾಗಿಯೂ ಕೂಡ ಪರಿಣಾಮ ಬೀರುತ್ತದೆ. ಇದರಿಂದಾಗಿ ಮನಸ್ಸಿನಲ್ಲಿ ತಳಮಳ, ಗೊಂದಲ ಹಾಗೂ ದಿಗ್ಬ್ರಮೆಗಳಂತಹ ಸಮಸ್ಯೆಗಳು ಶುರುವಾಗುತ್ತದೆ ಇದಕ್ಕೆ ಪ್ರಮುಖ ಕಾರಣ ನಾವು ವಿಪರೀತ ಕುಡಿದ ನೀರಿನ ಪ್ರಮಾಣದಲ್ಲಿರುವ ಸೋಡಿಯಂ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರತ್ತದೆ. ಇದರಿಂದ ಏಕಾಗ್ರತೆಯ ಕೊರತೆ ಹಾಗೂ ಅನೇಕ ಮಾನಸಿಕ ಸಮಸ್ಯೆಗಳು ಶುರುವಾಗುತ್ತವೆ.
ಬಾವು ಬರುವುದು: ದೇಹಕ್ಕೆ ಅಗತ್ಯ ಮೀರಿ ನೀರು ಪೂರೈಕೆಯಾದಲ್ಲಿ ಕೈ ಮತ್ತು ಮುಖದಲ್ಲಿ ಬಾವು ಕಾಣಿಸಿಕೊಳ್ಳುತ್ತದೆ. ಈ ಒಂದು ಪರಿಸ್ಥಿತಿಯನ್ನು ಎಡೆಮಾ ಎಂದು ಕರೆಯುತ್ತಾರೆ.
ಸ್ನಾಯುಗಳ ಬಲಹೀನತೆ: ಇನ್ನು ವಿಪರೀತ ನೀರು ಕುಡಿಯುವುದರಿಂದ ಸ್ನಾಯುಗಳು ಬಲಹೀನಗೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ದೇಹದಲ್ಲಿ ಸೋಡಿಯಂ ಲೇವಲ್ ವಿಪರೀತವಾಗಿ ಕಡಿಮೆಯಾಗಿರುತ್ತೆ. ಸ್ನಾಯುಗಳು ಬಲಹೀನಗೊಳ್ಳುವುದರಿಂದ ಹೃದಯ ಕಾರ್ಯಕ್ಷಮತೆಯ ಮೇಲೂ ಇದು ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ:ಗರ್ಭಿಣಿಯರೇ ಟೀ, ಕಾಫಿ ಕುಡಿಯುವ ಮೊದಲು ಇದನ್ನು ಓದಿ; ಪ್ರಾಣಕ್ಕೆ ಕಂಟಕವಾಗಲಿವೆ ನಿಮಗೆ ಪ್ರಿಯವಾದ ಪಾನೀಯ
ದೇಹವನ್ನು ಹೈಡ್ರೇಟ್ ಆಗಿ ಇಡಲು ಹೆಚ್ಚು ನೀರು ಕುಡಿಯುವುದು ಒಳ್ಳೆಯದೇ, ಆದ್ರೆ ಅದು ವಿಷವಾಗುವ ಮಟ್ಟಕ್ಕೆ ಕುಡಿದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಈ ಮೇಲಿನ ಯಾವುದೇ ಸಮಸ್ಯೆಗಳು ನಿಮ್ಮಲ್ಲಿ ಕಾಣುತ್ತಿದ್ದರೆ ಕೂಡಲೇ ನಿಮ್ಮ ಫ್ಯಾಮಿಲಿ ಡಾಕ್ಟರ್ರನ್ನು ಭೇಟಿ ಮಾಡಿ ವಿಷಯ ತಿಳಿಸಿ ಈ ರೀತಿಯ ಸಮಸ್ಯೆಗಳು ಆರಂಭದಲ್ಲಿಯೇ ಚಿವುಟಿ ಹಾಕದಿದ್ದರೆ ಮುಂದೆ ದೊಡ್ಡ ಸಮಸ್ಯೆಗಳನ್ನು ಅವು ತಂದೊಡ್ಡುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ