/newsfirstlive-kannada/media/post_attachments/wp-content/uploads/2024/10/PLANTS-IN-BEDROOM.jpg)
ನಿದ್ದೆ, ದೇಹ ಅತ್ಯಂತ ಪ್ರಮುಖವಾಗಿ ಬೇಡುವ ಒಂದು ಬಯಕೆ. ನಿದ್ದೆ ಚೆನ್ನಾಗಿ, ಗಾಢವಾಗಿ ಮಾಡಿದಷ್ಟು ಮನಸ್ಸು ಹಾಗೂ ದೇಹ ಆರೋಗ್ಯವಾಗಿ ಇರುತ್ತವೆ. ನಿದ್ರೆ ಮಾಡಲು ನಾವು ಒಳ್ಳೆಯ ಮಂಚ, ಒಳ್ಳೆಯ ಹಾಸಿಗೆ, ಒಳ್ಳೆಯ ಬೆಡ್ ಇಂತವುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ. ಬೆಡ್ರೂಮ್ನ್ನು ವಿವಿಧ ರೀತಿಯಲ್ಲಿ ಅಲಂಕಾರ ಮಾಡುತ್ತೇವೆ. ಆದ್ರೆ ನೆನಪಿರಲಿ ನಿಮ್ಮ ಬೆಡ್ರೂಮ್ನಲ್ಲಿ ಸಸಿಗಳನ್ನು ತಂದು ನೆಟ್ಟು ಅಲಂಕಾರ ಮಾಡುವುದರಿಂದ ಕೇವಲ ನಿದ್ದೆ ಮಾತ್ರವಲ್ಲ ನಿಮ್ಮ ಆರೋಗ್ಯದ ಒಟ್ಟು ವ್ಯವಸ್ಥೆಯ ಮೇಲೆ ಅದು ಧನಾತ್ಮಕ ಪರಿಣಾಮ ಬೀರುತ್ತದೆ. ಹೀಗೆ ಬೆಡ್ರೂಮ್ಗಳಲ್ಲಿ ಸಸಿ ಮರಗಳನ್ನು ಬೆಳೆಸುವುದರಿಂದ ಏನೆಲ್ಲಾ ಲಾಭಗಳಿವೆ ಅನ್ನೋದನ್ನ ನೋಡುವುದಾದ್ರೆ.
1. ಉತ್ತಮ ಗಾಳಿಯ ಉಸಿರಾಟ ನಿಮ್ಮದಾಗುತ್ತದೆ.
ಸದ್ಯ ದೊಡ್ಡ ದೊಡ್ಡ ಸಿಟಿಗಳಲ್ಲಿ ಈಗ ದೊಡ್ಡ ಸಮಸ್ಯೆ ಅಂದ್ರೆ ಅದು ಅತ್ಯಂತ ಕಳಪೆ ಮಟ್ಟದ ಗಾಳಿ. ಕಲುಷಿತ ಗಾಳಿಯನ್ನೇ ಸೇವಿಸುತ್ತಿದ್ದಾರೆ. ದೆಹಲಿಯಂತಹ ದೊಡ್ಡ ದೊಡ್ಡ ನಗರಗಳಲ್ಲಂತೂ ಏರ್ ಕ್ವಾಲಿಟಿ ಇಂಡೆಕ್ಷ್ ಕೆಲವೊಮ್ಮೆ ಅಪಾಯದ ಮಟ್ಟವನ್ನು ತಲಪುತ್ತವೆ ಹೀಗಾಗಿ ಬೆಡ್ರೂಮ್ಗಳಲ್ಲಿ ಒಂದಿಷ್ಟು ಸಸಿ, ಮರ ಬಳ್ಳಿಗಳನ್ನು ಬೆಳೆಸುವುದರಿಂದ ನಿಮಗೆ ಉಸಿರಾಡಲು ಉತ್ತಮ ಗಾಳಿ ಲಭಿಸುತ್ತದೆ. ಇವು ಇಂಗಾಲದ ಡೈಆಕ್ಸೈಡ್ನ್ನು ಹೀರಿಕೊಂಡು ಶುದ್ಧವಾದ ಆಮ್ಲಜನಕವನ್ನು ಬಿಡುಗಡೆ ಮಾಡುವುದರಿಂದ ನಿಮಗೆ ಅತ್ಯಂತ ಶುದ್ಧವಾದ ಗಾಳಿ ಉಸಿರಾಡಲು ಸಿಗುತ್ತದೆ.
2. ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ.
ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ಕೇಂದ್ರದ ಅಧ್ಯಯನದ ಪ್ರಕಾರ ನಮ್ಮ ಕೋಣೆಯನ್ನು ಸಸ್ಯಗಳಿಂದ ಅಲಂಕಾರಗೊಳಿಸಿದಲ್ಲಿ ಅದು ನಮ್ಮ ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ನಿಯಂತ್ರಿಸುವುತ್ತವೆ. ನಮ್ಮ ಮೂಡ್ ಸದಾ ಉಲ್ಲಾಸದಿಂದ ಇರಲು ಅವು ಸಹಾಯ ಮಾಡುತ್ತವೆ ಎಂದು ಹೇಳಲಾಗಿದೆ. ಇದು ಒಂದು ನಿರಾಳತೆಯನ್ನು ಸೃಷ್ಟಿ ಮಾಡುತ್ತದೆ. ಅದು ಮಾತ್ರವಲ್ಲ ಬೆಡ್ರೂಮ್ನಲ್ಲಿ ಈ ರೀತಿ ಸಸಿಮರಗಳನ್ನು ಬೆಳೆಸುವುದರಿಂದ ನಿಮ್ಮ ದೇಹದ ಬ್ಲಡ್ ಪ್ರೆಶರ್ ಕೂಡ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಸದಾ ಪ್ರಶಾಂತಗೊಂಡ ಮನಸ್ಸು ನಿಮ್ಮದಾಗಿರುತ್ತದೆ ಎಂದು ಅಧ್ಯಯನದಲ್ಲಿ ಉಲ್ಲೇಖವಾಗಿದೆ.
3. ಗಮನಶಕ್ತಿಯನ್ನು ಹೆಚ್ಚಿಸುತ್ತದೆ
ಸದ್ಯ ಪ್ಲಾಸ್ಟಿಕ್ ಪ್ಲಾಂಟ್ಗಳಿಂದ ಬೆಡ್ರೂಮ್ನ್ನು ಅಲಂಕರಿಸುವ ಒಂದು ಟ್ರೆಂಡ್ ಈಗ ಸೃಷ್ಟಿಯಾಗಿದೆ. ಅದರಿಂದ ಯಾವುದೇ ಲಾಭಗಳು ಇಲ್ಲ. ಆದ್ರೆ ಸಸಿ ಮರಗಳನ್ನು ಬೆಳೆಸುವುದರಿಂದ ನಿಮ್ಮ ಗಮನಶಕ್ತಿ ಹೆಚ್ಚುತ್ತದೆ. ಉಳಿದವರಿಗಿಂತ ಬೆಡ್ರೂಮ್ನಲ್ಲಿ ನೈಸರ್ಗಿಕ ಸಸಿಗಳನ್ನು ಬೆಳೆಸಿದವರ ಗಮನಶಕ್ತಿ ಹೆಚ್ಚು ಇರುತ್ತದೆ ಎಂದು International Journal of Environmental Research and Public Health ನ ಒಂದು ಅಧ್ಯಯನದಲ್ಲಿ ವರದಿಯಾಗಿದೆ. ಇದು ಮಾತ್ರವಲ್ಲ ನಿಮ್ಮ ಬೆಡ್ರೂಮ್ನಲ್ಲಿ ಸಸಿಗಳನ್ನು ಬೆಳೆಸುವುದರಿಂದ ಮೆದುಳಿನಲ್ಲಿ ಥೀಟಾ ಅಲೆಗಳು( Theta Waves) ಸೃಷ್ಟಿಮಾಡುತ್ತದೆ. ಇದು ನಮ್ಮ ಗಮನಶಕ್ತಿಯನ್ನ, ಲಕ್ಷ್ಯವಹಿಸುವಿಕೆಯ ಸಾಮರ್ಥ್ಯವನ್ನ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
4 Emissions ಕಡಿಮೆ ಮಾಡುವುದರಲ್ಲಿ ಸಹಾಯಕ
ಕೋಣೆಯಲ್ಲಿ ಬೆಳೆಸುವ ಸಸಿಗಳು ಕೇವಲ ಗಾಳಿಯಲ್ಲಿರುವ ಕಾರ್ಬನ್ ಡೈಆಕ್ಸೈಡ್ಗಳನ್ನು ಮಾತ್ರ ನಿರ್ಮೂಲನೆ ಮಾಡುವುದಿಲ್ಲ. ಅದರ ಜೊತೆಗೆ ಗಾಳಿಯಲ್ಲಿರುವ ಟಾಕ್ಸಿನ್ ಹಾಗೂ ಕಲ್ಮಶಗಳನ್ನು ನಾಶ ಮಾಡುವ ನಿಟ್ಟಿನಲ್ಲಿ ಹೋರಾಡುತ್ತವೆ. ಈಗಾಗಲೇ ಹೇಳಿದಂತೆ ಗಾಳಿಯಲ್ಲಿನ ಪರಿಶುದ್ಧತೆ ದಿನೇ ದಿನೇ ಕಡಿಮೆಯಾಗುತ್ತಲೇ ಹೋಗುತ್ತಿದೆ. ಸಸಿಗಳನ್ನು ನೆಡುವುದರಿಂದ ಈ ರೀತಿಯ ಅನೇಕ ಪ್ರಯೋಜನಗಳು ಇವೆ.
5 ಗಾಢವಾದ ನಿದ್ರೆ ನಿಮ್ಮದಾಗುತ್ತದೆ
ಇಂಡೋರ್ ಪ್ಲಾಂಟ್ಸ್ನಿಂದಾಗಿ ಉತ್ತಮ ಗುಣಮಟ್ಟದ ನಿದ್ದೆಯನ್ನು ನೀವು ಮಾಡಬಹುದು. ಈಗಾಗಲೇ ಹೇಳಿದಂತೆ ರೂಮ್‌ನಲ್ಲಿ ಸಸಿಗಳನ್ನು ಬೆಳೆಸುವುದರಿಂದ ನಿಮ್ಮ ಮನಸ್ಸು ಉಲ್ಲಾಸದಿಂದ ತುಂಬಿರುತ್ತದೆ. ಹೀಗಾಗಿ ಯಾವುದೇ ಆತಂಕಗಳು ಒತ್ತಡಗಳು ಇಲ್ಲದೇ ಪ್ರಶಾಂತವಾಗಿ ಮಗುವಿನಂತೆ ನೀವು ಮಲಗಬಹುದು. ಸುವಾಸನೆ ಭರಿತ ಹೂವುಗಳನ್ನು ಬಿಡುವ ಸಸಿಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಅದರ ಸುಗಂಧ ನಿಮ್ಮ ನಿದ್ದೆಯನ್ನು ಗಾಢಗೊಳಿಸುತ್ತವೆ. ಮಲ್ಲಿಗೆಯ ಬಳ್ಳಿಯೂ ನಿಮ್ಮ ಕೋಣೆಯಲ್ಲಿದ್ದರೆ anxietyಯಂತಹ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.
6. ಇನ್ನೂ ಅನೇಕ ಆರೋಗ್ಯಕರ ಲಾಭಗಳು
ಉತ್ತಮವಾದ ಗಾಳಿ ಹಾಗೂ ನಿದ್ರೆಯಾಚೆಯೂ ಬೆಡ್ರೂಮ್ನಲ್ಲಿ ಸಸಿಗಳನ್ನು ಬೆಳೆಯುವುದರಿಂದ ಇನ್ನೂ ಅನೇಕ ಆರೋಗ್ಯಕರ ಲಾಭಗಳು ಇವೆ. ಇಂಡೋರ್ ಪ್ಲಾಂಟ್ಗಳು ನಿಮ್ಮನ್ನು ಪದೇ ಪದೇ ಬಾಧಿಸುವ ತಲೆನೋವು, ಕಣ್ಣಿನ ಕಿರಿಕಿರಿ ಹಾಗೂ ಆಯಾಸಗಳನ್ನು ಇಲ್ಲದಂತೆ ಮಾಡುತ್ತವೆ. ಹೀಗಾಗಿ ಬೆಡ್ರೂಮ್ನ್ನು ಪ್ಲಾಸ್ಟಿಕ್ ಹೂವು, ಬೇಡದ ಫೋಟೋಗಳು ಪೇಟಿಂಗ್ಗಳಿಗಿಂತ ಸಸಿಗಳೊಂದಿಗೆ ಅಲಂಕರಿಸಿದಲ್ಲಿ ಬೆಡ್ರೂಮ್ ಸುಂದರವಾಗಿ ಕಾಣುವುದರ ಜೊತೆಗೆ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿಯೂ ಕೂಡ ಸುಧಾರಣೆ ಆಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ