/newsfirstlive-kannada/media/post_attachments/wp-content/uploads/2025/02/maha-kumba3.jpg)
ಉತ್ತರಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಮಹಾ ಕುಂಭಮೇಳ ಜಗತ್ತಿನ ಗಮನ ಸೆಳೆದಿದೆ. ಜನವರಿ 13ರಿಂದ ಶುರುವಾಗಿ ಸತತ ಆರು ವಾರಗಳ ನಂತರ ಅಂದರೆ 45 ದಿನಗಳ ನಂತರ ಮಹಾಶಿವರಾತ್ರಿ ಪ್ರಯುಕ್ತ ಅಮೃತಸ್ನಾನದೊಂದಿಗೆ ಕೊನೆಗೊಳ್ಳಲಿದೆ.
ಇದನ್ನೂ ಓದಿ:144 ವರ್ಷದ ಮಹಾಕುಂಭಮೇಳಕ್ಕೆ ಇಂದು ತೆರೆ; ಮುಂದಿನ ಕುಂಭಮೇಳ ಎಲ್ಲಿ ನಡೆಯಲಿದೆ? ಯಾವಾಗ?
ಬರೋಬ್ಬರಿ 144 ವರ್ಷಗಳ ನಂತರ ನಡೆದ ಮಹಾಕುಂಭಮೇಳಕ್ಕೆ ಭಕ್ತಾದಿಗಳಿಂದ ನಿರೀಕ್ಷೆ ಮೀರಿ ಪ್ರೋತ್ಸಾಹ ದೊರೆಯಿತು. 40 ಕೋಟಿ ಜನರ ಆಗಮನದ ನಿರೀಕ್ಷೆಯಿಟ್ಟಿದ್ದ ಆಡಳಿತ ಮಂಡಳಿಯ ಲೆಕ್ಕಾಚಾರವೇ ತಲೆಕೆಳಗಾಗುವಂತೆ ಮಾಡಿತ್ತು. ಇಂದು ಒಂದೇ ದಿನ ಮಹಾ ಕುಂಭಮೇಳದಲ್ಲಿ 1.44 ಕೋಟಿ ಭಕ್ತಾದಿಗಳು ತೀರ್ಥಸ್ನಾನ ಮಾಡಿದ್ದಾರೆ.
ಈಗಾಗಲೇ ಸುಮಾರು 66 ಕೋಟಿಗೂ ಹೆಚ್ಚು ಜನರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಾರೆ. ಇಂದು ಶಿವರಾತ್ರಿ, ಶಿವ ಹಾಗೂ ಪಾರ್ವತಿಯ ಸ್ಮರಣಾರ್ಥವಾಗಿ ವಿಶೇಷ ದಿನದಂದ ಅಮೃತ ಸ್ನಾನದೊಂದಿಗೆ ಕೊನೆಗೊಳ್ಳಲಿದೆ.
ಈಗಾಗಲೇ ದೇಶದ ಅರ್ಧದಷ್ಟು ಜನರು ಮಹಾಕುಂಭಮೇಳದಲ್ಲಿ ತೀರ್ಥಸ್ನಾನ ಮಾಡಿದ್ದಾರೆ ಎಂದು ಜುನಾ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಹೇಳಿದ್ದಾರೆ. ಎಲ್ಲ ಜಾತಿ, ಧರ್ಮ, ಪಂಥದ ಜನರು ಬಂದು ತೀರ್ಥಸ್ನಾನ ಮಾಡಿದ್ದಾರೆ.
ಜಗತ್ತು ನಮ್ಮ ಒಗ್ಗಟ್ಟು ಅನ್ನು ನೋಡಿದೆ. ಜಗತ್ತು ನಮ್ಮ ನಾಗರಿಕತೆ, ಪರಂಪರೆಯನ್ನು ನೋಡಿದೆ. ಭಾರತದ ಅರ್ಧದಷ್ಟು ಜನರು ಜಗತ್ತಿನ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿದ್ದಾರೆ. ಮಹಾಕುಂಭಮೇಳ ಇಂದು ಪೂರ್ಣವಾಗಿದೆ. ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಇನ್ನೂ, ಕುಂಭಮೇಳವನ್ನು ಒಟ್ಟು ಪ್ರತಿ ಮೂರು ವರ್ಷಕ್ಕೊಮ್ಮೆ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ನಡೆಸಲಾಗುತ್ತದೆ. ಪ್ರಯಾಗ್ರಾಜ್, ಹರಿದ್ವಾರ, ಉಜ್ಜೈನಿ ಹಾಗೂ ನಾಸಿಕ್ ಇನ್ನು ಮತ್ತೆ ಪ್ರಯಾಗರಾಜ್ನಲ್ಲಿ ಕುಂಭಮೇಳ ನಡೆಯಬೇಕು ಅಂದ್ರೆ 12 ವರ್ಷ ಕಾಯಬೇಕು 2037ಕ್ಕೆ ಪ್ರಯಾಗರಾಜ್ನಲ್ಲಿ ಕುಂಭಮೇಳ ನಡೆಯಲಿದೆ.
ಮಹಾಕುಂಭಮೇಳದಲ್ಲಿ ಅಮೃತಸ್ನಾನದಿಂದಾಗಿ ಪವಿತ್ರ ನದಿಗಳ ಸಂಗಮದಲ್ಲಿ ಮಿಂದೆಳುವುದರಿಂದ ನಮ್ಮ ಪಾಪಗಳೆಲ್ಲಾ ಕರಗಿ ಹೊಗಿ, ಮೋಕ್ಷದ ದಾರಿಗೆ ನಾವು ತೆರೆದುಕೊಳ್ಳುತ್ತೇವೆ ಎಂಬ ಪ್ರತೀತಿ ಇದೆ. ಹೀಗಾಗಿ ಪ್ರತಿ ಕುಂಭಮೇಳವು ಭಕ್ತಸಾಗರದಿಂದ ತುಂಬಿ ಹೋಗುತ್ತದೆ. ಇಂದು ಪ್ರಯಾಗರಾಜ್ನಲ್ಲಿ ಮಹಾಕುಂಭಮೇಳಕ್ಕೆ ತೆರೆ ಬೀಳಲಿದೆ.
ಮುಂದಿನ ಪೂರ್ಣ ಕುಂಭಮೇಳ ಮಹಾರಾಷ್ಟ್ರದ ನಾಸಿಕ್ನಲ್ಲಿ 2027ರಂದು ನಡೆಯಲಿದೆ. 12 ವರ್ಷಗಳ ಹಿಂದೆ ಅಂದ್ರೆ 2013ರಲ್ಲಿ ನಾಸಿಕ್ನಲ್ಲಿ ಪೂರ್ಣಕುಂಭಮೇಳ ನಡೆದಿತ್ತು. ನಾಸಿಕ್ನ್ನು ಕೂಡ ನಾವು ಧಾರ್ಮಿಕ ಹಾಗೂ ಪೌರಾಣಿಕವಾಗಿ ಪವಿತ್ರ ಸ್ಥಳ ಎಂದು ಗುರುತಿಸುತ್ತೇವೆ. ಮುಂಬರುವ ಪೂರ್ಣಕುಂಭಮೇಳ ಗೋದಾವರಿ ನದಿ ತೀರದಲ್ಲಿ ನೆಡಯಲಿದೆ.
ಇದನ್ನು ಸಿಂಹಹಸ್ತಾ ಕುಂಭಮೇಳ ಎಂದು ಕೂಡ ಕರೆಯಲಾಗುತ್ತದೆ. ಸುಮಾರು 17ನೇ ಶತಮಾನದಿಂದಲೂ ಕೂಡ ನಾಸಿಕ್ನಲ್ಲಿ ಕುಂಭಮೇಳ ನಡೆಯುತ್ತಲೇ ಬಂದಿವೆ ಎಂಬುದಕ್ಕೆ ಪ್ರಮಾಣ ಸಿಗುತ್ತವೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರ ಕುಂಭಮೇಳದ ಆಯೋಜನೆಗೆ ರೂಪುರೇಷೆಗಳನ್ನು ಹಾಕಲು ಶುರು ಮಾಡಿದೆ. ಪಿಡಬ್ಲ್ಯೂಡಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನಿಶಾ ಪಟನ್ಕರ್ ಇತ್ತೀಚೆಗೆ ನಾಸಿಕ್ಗೆ ಭೇಟಿ ನೀಡಿ ಮುಂದಿನ ಯೋಜನೆಯ ಲೆಕ್ಕಾಚಾರವನ್ನು ಹಾಕಿದ್ದಾರೆ.
ರಸ್ತೆಯ ಮೂಲಸೌಕರ್ಯದ ಅಭಿವೃದ್ಧಿಯ ಜೊತೆಗೆ ಟ್ರಾಫಿಕ್ ನಿರ್ವಹಣೆಯ ಬಗ್ಗೆಯೂ ಮತ್ತು ಸರಿಯಾದ ಸಂಪರ್ಕ ಕಲ್ಪಿಸುವ ಬಗ್ಗೆಯೂ ಚರ್ಚೆ ಮಾಡಿದ್ದಾರೆ ಎಂದು ವರದಿಗಳಾಗಿವೆ. ನಾಸಿಕ್ನ ಬಳಿಕ ಮಧ್ಯಪ್ರದೇಶದ ಉಜ್ಜೈನಿ ಮಹಾಕಾಳೇಶ್ವರನ ಸನ್ನಿಧಾನದಲ್ಲಿ 2028ಕ್ಕೆ ಮಹಾಕುಂಭಮೇಳ ನಡೆಯಲಿದೆ ಇದಾದ ಬಳಿಕ ಅಂದ್ರೆ 2030ಕ್ಕೆ ಮತ್ತೆ ಪ್ರಯಾಗರಾಜ್ನಲ್ಲಿ ಅರ್ಧಕುಂಭಮೇಳವನ್ನು ನಡೆಸಲಾಗುವುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ