/newsfirstlive-kannada/media/post_attachments/wp-content/uploads/2024/10/Wife-and-husband-Photo-3.jpeg)
ಒಂದು ಆರೋಗ್ಯಕರ ದಾಂಪತ್ಯ ಎಂದಿಗೂ ನಂಬಿಕೆ ಹಾಗೂ ಪಾರದರ್ಶಕತೆಯ ಸೂಕ್ಷ್ಮ ಎಳೆಯ ಮೇಲೆ ನಿಂತಿರುತ್ತದೆ. ಗಂಡ ಹೆಂಡಿರ ಜಗಳ ಉಂಡು ಮಲಗುವರೆಗೂ ಅನ್ನೋ ಗಾದೆ ತರ, ಸಂಸಾರ ಎಂದ ಮೇಲೆ ಜಗಳಗಳು, ಮನಸ್ತಾಪಗಳು, ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆಗ ನಾವು ಆಡುವ ಮಾತು ಸಂಗಾತಿಯ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಮನಗಂಡಿರಬೇಕು. ವ್ಯಂಗವಾದ ಮಾತು ಹಾಗೂ ನಾವು ನಮ್ಮ ಪ್ರತಿಕ್ರಿಯೆಯ ಬಗ್ಗೆ ಸ್ಪಷ್ಟತೆ ಇರಬೇಕು. ಇಲ್ಲವಾದಲ್ಲಿ ಉಗುರಿನಿಂದ ಹೋಗುವುದಕ್ಕೆ ಕೊಡಲಿ ಹಿಡಿದು ನಿಂತಂತೆ ಆಗುತ್ತದೆ. ಅದಕ್ಕೆ ಆ ಒಂದು ವಿಷಮ ಗಳಿಗೆ ವೇಳೆ ನಾವು ಆದಷ್ಟು ಸೌಮ್ಯವಾಗಿ ಹಾಗೂ ಮೌನವಾಗಿ ಇದ್ದಷ್ಟು ಒಳ್ಳೆಯದು. ಆ ಒಂದು ಸನ್ನಿವೇಶ ದಾಟಿದ ಮೇಲೆ ಮತ್ತದೇ ಹಳೆಯ ಬಾಂಧವ್ಯ ಚಿಗುರು ಒಡೆಯುತ್ತದೆ. ಆದ್ರೆ ಒಂದು ನೆನಪಿರಲಿ, ನಿಮ್ಮ ಸಂಗಾತಿಯೊಂದಿಗೆ ವಾಗ್ವಾದಕ್ಕೆ ಬಿದ್ದಾಗ ಪ್ರಮುಖವಾಗಿ ಈ ಏಳು ಮಾತುಗಳನ್ನು ಅಪ್ಪಿತಪ್ಪಿಯೂ ಆಡಬೇಡಿ.
1 ನಾನು ಇದಕ್ಕೆಲ್ಲಾ ಕೇರ್ ಮಾಡಲ್ಲ
ಐ ಡೋಂಟ್ ಕೇರ್, ಜಗಳದಲ್ಲಿ ಈ ಒಂದು ಮಾತನ್ನು ಯಾವತ್ತೂ ಆಡಬೇಡಿ. ಏರುಧ್ವನಿಯಲ್ಲಿ ಕುಹಕವಾಗಿ ನೀವು ಹೀಗೆ ಮಾತನಾಡಿದ್ದೇ ಆದಲ್ಲಿ, ನಿಮ್ಮ ಸಂಗಾತಿಯ ಆತ್ಮಗೌರವಕ್ಕೆ ನೀವು ನೇರವಾಗಿ ಹೊಡೆದ ರೀತಿ ಇರುತ್ತದೆ. ಒಂದು ವೇಳೆ ನಿಮ್ಮ ಸಂಗಾತಿಯ ಮಾತಿಗೆ ನಿಮ್ಮ ಸಮ್ಮತಿ ಇಲ್ಲದಿದ್ದರೂ ಕೂಡ ಈ ರೀತಿಯ ಮಾತುಗಳು ಬೇಡ. ಅದಕ್ಕೆ ಒಂದು ಉತ್ತಮ ಪ್ರತಿಕ್ರಿಯೆಯನ್ನು ನೀಡಿ. ತಿಳಿಸಿ ಹೇಳುವ ಪ್ರಯತ್ನವನ್ನು ಮಾಡಿ. ಆದರೆ ನಾನು ಇದಕ್ಕೆಲ್ಲಾ ಕೇರ್ ಮಾಡುವವನೇ ಅಲ್ಲ ಎಂಬ ಮಾತುಗಳನ್ನು ಆಡಬೇಡಿ.
2 ತಪ್ಪು ನಿನ್ನದೇ, ಇದು ಪ್ರತಿಬಾರಿಯೂ ಇರುತ್ತೆ
ತಪ್ಪು ಮಾಡೋದು ಸಹಜ ಅಂತ ಗಾದೆಯೇ ಇದೆ. ತಪ್ಪುಗಳು ಒಂದೊಂದು ಬಾರಿ ಅನಿರೀಕ್ಷಿತವಾಗಿ ನಡೆದು ಹೋಗುತ್ತವೆ. ಆಗ ಸಂಗಾತಿಗೆ ನೀವು ನಿನ್ನದೇ ತಪ್ಪು, ನನ್ನದೂ ಏನಿಲ್ಲ, ಪ್ರತಿಬಾರಿ ನೀ ಹೀಗೆಯೇ ಮಾಡ್ತಿಯಾ ಎನ್ನುವ ಮಾತುಗಳನ್ನು ಆಡಬೇಡಿ. ಒಂದು ಆರೋಗ್ಯಕರ ಸಂಬಂಧನ್ನು ಹಾಳುಗಡೆಡುವುವ ಎರಡನೇ ಹೆಜ್ಜೆ ಇದಾಗಬಹುದು.
3 ನಾನು ನಿನಗೆ ಮೊದಲೇ ಹೇಳಿದ್ದೆ
ಏನೇ ಸಮಸ್ಯೆ ಬಂದಾಗಲೂ ನಾನು ನಿನಗೆ ಮೊದಲೇ ಹೇಳಿದ್ದೆ ಹೀಗಾಗುತ್ತೆ ಅಂತ ನೀನು ಕೇಳಲಿಲ್ಲ ಅನ್ನೊದಕ್ಕಿಂತ. ಇಬ್ಬರು ಜೊತೆಗೆಯಾಗಿ ಕುಳಿತುಕೊಂಡು ಸಮಸ್ಯೆಯ ಪರಿಹಾರವನ್ನು ಕಂಡು ಹಿಡಿಯಬೇಕು. ಮುಂದಿನ ಬಾರಿ ಹೀಗಾಗದಂತೆ ನೋಡಿಕೊಳ್ಳೊಣ ಅಂತ ಒಂದು ನಿರ್ಧಾರಕ್ಕೆ ಬರಬೇಕು. ಪ್ರತಿ ಬಾರಿ ನಾನೇ ಸರಿ ಎಂದು ಗೆದ್ದು ಬೀಗುವ ಅಹಮಿಕೆ ಬೇಡ. ನಿನಗೆ ಮೊದಲೆ ಹೇಳಿದ್ದೇ, ನೀನು ಅರ್ಥ ಮಾಡಿಕೊಳ್ಳಲಿಲ್ಲ ಅನ್ನೊದಕ್ಕಿಂತ. ಸೌಮ್ಯವಾಗಿ ಪರಿಸ್ಥಿತಿಯನ್ನು ವಿವರಿಸಿ ಹೀಗೆ ಮಾಡುವುದಕ್ಕಿಂತ ಹೀಗೆ ಮಾಡಿದ್ದರೆ ಸರಿ ಇರುತ್ತಿತ್ತು ಎಂದು ಮನವರಿಕೆ ಮಾಡಿಕೊಡಿ.
4 ನೀನು ದೊಡ್ಡ ಅವಿವೇಕಿ
ವಿಷಮ ಗಳಿಗೆಯಲ್ಲಿ ಸಭ್ಯವಲ್ಲದ ಭಾಷೆ ಬಳಸೋದು ಉರಿಯುವ ಬೆಂಕಿಗೆ ತುಪ್ಪವನ್ನೇ ಸುರಿದಂತೆ. ಮನಸಲ್ಲಿ ಮತ್ತಷ್ಟು ದ್ವೇಷ ಭಾವನೆಯನ್ನು ಸೃಷ್ಟಿ ಮಾಡುತ್ತವೆ ಹೀಗಾಗಿ ನೀನು ಅವಿವೇಕಿ, ಬುದ್ಧಿಯೆಂಬೋದೇ ನಿನ್ನಲ್ಲಿ ಇಲ್ಲ. ಎಂಬ ಮಾತುಗಳು ಸಂಗಾತಿಯನ್ನು ಅತೀವವಾಗಿ ನೋವುಂಟು ಮಡುತ್ತವೆ. ಅದರ ಬದಲು ಸನ್ನಿವೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸೌಮ್ಯ ಭಾಷೆಯಲ್ಲಿ ಸೌಮ್ಯ ರೀತಿಯಲ್ಲಿ ಮಾತನಾಡುವುದು ಉತ್ತಮ
5 ಆ ಡಿ ಶಬ್ದವನ್ನು ಎಂದಿಗೂ ಬಳಸಬೇಡಿ
ಡಿವೋರ್ಸ್, ಈ ಒಂದು ಶಬ್ದ ದಾಂಪತ್ಯದಲ್ಲಿ ಒಂದು ಬಾರಿ ಬಂದರೆ ಮುಗಿತು ಅಲ್ಲಿಗೆ ಸಂಗಾತಿಯಲ್ಲೊಂದು ಅಭದ್ರತೆಯ ಭಾವ, ಕಳೆದುಕೊಳ್ಳುವ ಭಯ ಮೂಡಿ ಬಿಡುತ್ತದೆ. ಪ್ರತಿ ಜಗಳದಲ್ಲೂ ವಿಚ್ಛೇದನದ ಬಗ್ಗೆ ಮಾತು ಎತ್ತಬೇಡಿ. ಇಂತಹ ಮಾತುಗಳು ಸಂಬಂಧವನ್ನು ಕೆಲವೇ ಕ್ಷಣಗಳಲ್ಲಿ ಎರಡು ಹೋಳು ಮಾಡಿ ಹಾಕುತ್ತದೆ. ಸಂಬಂಧದ ಮೇಲೆ ಒಂದು ಭರವಸೆಯೇ ಹೊರಟು ಹೋಗುತ್ತದೆ. ಪದೇ ಪದೇ ಡಿವೋರ್ಸ್ ಎನ್ನುವ ಶಬ್ದ ಬಳಕೆಯಿಂದ ಸಂಗಾತಿಗೆ ಬೇರೆಯದ್ದೇ ಆದ ಇಲ್ಲಸಲ್ಲದ ವಿಚಾರಗಳು ಬರಲು ಹಾಗೂ ಸಂಬಂಧದ ಬಗ್ಗೆ ಒಂದು ಅಭದ್ರತೆ ಮೂಡಲು ಶುರುವಾಗುತ್ತದೆ.
6 ನಿಮ್ಮ ಸಂಗಾತಿಯನ್ನು ಮಾಜಿ ಪ್ರೇಯಸಿಯೊಂದಿಗೆ ಹೋಲಿಸಬೇಡಿ
ಎಲ್ಲರೂ ಮಾಡುವ ಅತಿದೊಡ್ಡ ತಪ್ಪು. ನೀನು ಅವಳ ಗುಣದ ಒಂದಂಶವನ್ನೂ ಹೊಂದಿಲ್ಲ. ಅವಳ ಗುಣದಲ್ಲಿ ಒಂದು ಪಾಲು ಕೂಡ ನಾನು ನಿನ್ನಲ್ಲಿ ಕಂಡಿಲ್ಲ ಎಂದು ಮಾಜಿ ಪ್ರೇಯಸಿಯೊಂದಿಗೆ ನಿಮ್ಮ ಪತ್ನಿಯನ್ನು ಹೋಲಿಸುವುದು ಅತಿದೊಡ್ಡ ತಪ್ಪು. ಇವು ಸಂಬಂಧಗಳಲ್ಲಿ ವಿಪರೀತ ಬಿರುಕುಗಳನ್ನು ಸೃಷ್ಟಿ ಮಾಡುತ್ತವೆ.
7 ನಾನು ಎಂದಿಗೂ ನಿನ್ನನ್ನು ಪ್ರೀತಿಸಲೇ ಇಲ್ಲ
ಐ ಲವ್ ಯೂ, ಈ ಒಂದು ಶಬ್ದ ಪದೇ ಪದೇ ಹೇಳುವುದರಿಂದ ದಾಂಪತ್ಯದ ಬೆಸುಗೆ ಮತ್ತಷ್ಟು ಗಟ್ಟಿಯಾಗಿ ಬೆಸೆದುಕೊಳ್ಳುತ್ತದೆ. ಸಂಗಾತಿಯಲ್ಲಿ ಒಂದು ಭದ್ರತೆಯ ಭಾವ, ನಿರಾಳತೆಯನ್ನು ಸೃಷ್ಟಿಸುತ್ತದೆ. ಅದು ಬಿಟ್ಟು, ಪ್ರತಿಬಾರಿ ಜಗಳವಾದಾಗ ನಾನು ನಿನ್ನನ್ನೂ ಯಾವುತ್ತೂ ಪ್ರೀತಿಸಿಲ್ಲ ಎಂಬುದು ನಿಮ್ಮ ಸಂಬಂಧದ ಒಂದೊಂದು ಹೆಜ್ಜೆಯನ್ನೂ ಕೂಡ ಪ್ರಶ್ನೆಯನ್ನು ಮೂಡಿಸುತ್ತದೆ. ಹೀಗಾಗಿ ಈ ಏಳು ತಪ್ಪಗಳನ್ನು ನೀವು ಮಾಡಲೇಬೇಡಿ. ಸಂಬಂಧಗಳನ್ನು ಸರಿಯಾಗಿ ನಿರ್ವಹಿಸಲು ನಮಗೊಂದು ಸಹಜವಾದ ಸಹನೆ ಬೇಕಾಗುತ್ತದೆ. ಆ ಸಹನೆ ನಿಮ್ಮದಾದದಲ್ಲಿ ಸುಖವಾದ ದಾಂಪತ್ಯವೂ ನಿಮ್ಮದಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ