/newsfirstlive-kannada/media/post_attachments/wp-content/uploads/2024/12/TN_7_PEOPLE_1.jpg)
ಚೆನ್ನೈ: ಮನೆಯ ಮೇಲೆ ಬೆಟ್ಟದ ಬಂಡೆಯೊಂದು ಉರುಳಿ ಬಿದ್ದ ಪರಿಣಾಮ ಐವರು ಮಕ್ಕಳು ಸೇರಿದಂತೆ 7 ಮಂದಿ ಪ್ರಾಣ ಬಿಟ್ಟಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಸ್ಥಾನದ ಬಳಿ ಈ ಘೋರ ಘಟನೆ ನಡೆದಿದೆ.
ಮನೆಯ ಮಾಲೀಕ ಆರ್ ರಾಜುಕುಮಾರ್ (32), ಪತ್ನಿ ಆರ್ ಮೀನಾ (26) ಇವರ ಮಕ್ಕಳಾದ ಗೌತಮ್ (9), ಇನಿಯಾ (7), ಇವರ ಸಂಬಂಧಿಕರು ಎಸ್ ಮಹಾ (12), ವಿನೋದಿನಿ (14), ಎಸ್ ರಮ್ಯಾ (12) ಶಾಶ್ವತವಾಗಿ ಕಣ್ಣು ಮುಚ್ಚಿದ್ದಾರೆ.
ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಸ್ಥಾನದ ಬಳಿ ಇರುವ ಮನೆಯೊಂದರ ಮೇಲೆ ಭಾನುವಾರ ತಡರಾತ್ರಿ ದೊಡ್ಡ ಬಂಡೆ ಉರುಳಿ ಬಿದ್ದಿತ್ತು. ಹೀಗಾಗಿ ಮನೆಯವರು ಇದರಲ್ಲಿ ಸಿಲುಕಿದ್ದಾರೆ ಎಂದು ಸ್ಥಳೀಯರು, ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಅದರಂತೆ ಜೆಸಿಬಿ ತೆಗೆದುಕೊಂಡು ಬಂದು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದಾಗ ಒಳಗೆ ಕುಟುಂಬದ ಸದಸ್ಯರೆಲ್ಲರೂ ಜೀವ ಬಿಟ್ಟಿರುವುದು ತಿಳಿದು ಬಂದಿದೆ.
ಇದನ್ನೂ ಓದಿ:Fengal Cyclone; ಬೆಟ್ಟದಿಂದ ಮನೆಗಳ ಮೇಲೆ ಉರುಳಿದ ಬೃಹತ್ ಬಂಡೆಗಳು.. ಮಕ್ಕಳು ಸಿಲುಕಿರುವ ಶಂಕೆ
ಅರುಣಾಚಲ ಬೆಟ್ಟದ ಹಿಂಬದಿಯಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತದ ವೇಳೆ ಬಂಡೆ ಅವರ ಮನೆಯ ಮೇಲೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಇನ್ನು ಈ ಘಟನೆ ತಿಳಿದು ತಮಿಳುನಾಡು ಸಿಎಂ ಸ್ಟಾಲಿನ್ ಅವರು ದುಃಖಿತರಾಗಿದ್ದಾರೆ. ಸರ್ಕಾರದ ವತಿಯಿಂದ ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಫೆಂಗಲ್ ಸೈಕ್ಲೋನ್ ರಣಾರ್ಭಟಿಸುತ್ತಿದೆ. ಇದರ ಪರಿಣಾಮ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ಹಲವು ಹಳ್ಳಿಗಳು ಜಲಾವೃತವಾಗಿವೆ. ವರುಣನ ಆರ್ಭಟಕ್ಕೆ ರಸ್ತೆಗಳು ಯಾವುದೆಂದು ಗುರುತಿಸುವುದಕ್ಕೂ ಆಗುತ್ತಿಲ್ಲ. ಹೀಗಾಗಿ ವಾಹನ ಸವಾರರಿಗೆ ತೊಂದರೆ ಆಗಿದೆ. ವಿಲ್ಲುಪುರಂ, ಕಲ್ಲಕುರಿಚಿ ಮತ್ತು ತಿರುವಣ್ಣಾಮಲೈ ಜಿಲ್ಲೆಗಳಲ್ಲಿ 1,29,000 ಹೆಕ್ಟರ್‌ಗೂ ಅಧಿಕ ಬೆಳೆಗಳು ಜಲಾವೃತವಾಗಿವೆ. ರಾಜ್ಯದಲ್ಲಿ ಆಗಿರುವ ಹಾನಿಯ ಬಗ್ಗೆ ಸಿಎಂ ಎಂ.ಕೆ ಸ್ಟಾಲಿನ್ ಅವರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ