/newsfirstlive-kannada/media/post_attachments/wp-content/uploads/2025/07/KB-Ganapathy.jpg)
ಮೈಸೂರು: ಹಿರಿಯ ಪತ್ರಕರ್ತ, ಸಂಪಾದಕ ಕೆ.ಬಿ.ಗಣಪತಿ (85) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆ.ಬಿ.ಗಣಪತಿ ಅವರು ಸ್ಟಾರ್ ಆಫ್ ಮೈಸೂರು ಹಾಗೂ ಮೈಸೂರು ಮಿತ್ರ ಪತ್ರಿಕೆ ಸಂಪಾದಕರಾಗಿದ್ದರು.
ಕೆ.ಸಿ.ಲೇಔಟ್ನಲ್ಲಿ ವಾಸವಿದ್ದ ಕೆ.ಬಿ.ಗಣಪತಿ ಅವರಿಗೆ ಹಠಾತ್ ಹೃದಯಾಘಾತ ಆಗಿತ್ತು. ಕೂಡಲೇ ಅವರನ್ನು ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಕೆ.ಬಿ.ಗಣಪತಿ ಕಳೆದ 50 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು. ಕೆ.ಬಿ.ಗಣಪತಿ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸಂತಾಪ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೈಲಿನಲ್ಲಿ ಭಾರೀ ಅನಾಹುತ.. ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಟ್ರೈನು.. VIDEO
ಹಿರಿಯ ಪತ್ರಿಕೋದ್ಯಮಿ ಕೆ.ಬಿ. ಗಣಪತಿ ಅವರು ಮೂಲತಃ ಕೊಡಗಿನವರು. ತಮ್ಮ ವರದಿಗಾರಿಕೆ, ಅಂಕಣಗಳ ಮೂಲಕ ಗಮನ ಸೆಳೆದಿದ್ದರು. ಗಣಪತಿ ಸದಾ ಸುದ್ದಿ ಮನೆಯಲ್ಲಿ ಕ್ರಿಯಾಶೀಲವಾಗಿದ್ದವರು. ಇನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದರು.
‘ಲೈಫ್ ಅಂಡ್ ಟೈಮ್ಸ್ʼ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಗಳ ಸಂಸ್ಥಾಪಕ-ಸಂಪಾದಕರಾದ ಅವರು ಬಾಂಬೆಯಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪಡೆದಿದ್ದರು. 1961- 1965ರವರೆಗೆ ಬೆಂಗಳೂರಿನಲ್ಲಿ ವಕೀಲರಾಗಿ, 1970ರಲ್ಲಿ ಪೂನಾದಲ್ಲಿ ಜಾಹೀರಾತು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಮೈಸೂರು ಕೇಂದ್ರ ಭಾರತೀಯ ವಿದ್ಯಾಭವನದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
1978ರಲ್ಲಿ ಅವರು ಮೈಸೂರಿನಲ್ಲಿ ಎರಡು ಪತ್ರಿಕೆಗಳನ್ನು ಸ್ಥಾಪಿಸಿ ಪ್ರಕಟಿಸಿದರು. ಒಂದು ಇಂಗ್ಲಿಷ್‌ನಲ್ಲಿ ‘ಸ್ಟಾರ್ ಆಫ್ ಮೈಸೂರು’ ಮತ್ತು ಇನ್ನೊಂದು ಕನ್ನಡದಲ್ಲಿ ‘ಮೈಸೂರು ಮಿತ್ರ’. ಅಂದಿನಿಂದ ಅವರು ಎರಡೂ ಪತ್ರಿಕೆಗಳ ಸಂಪಾದಕ ಮತ್ತು ಪ್ರಕಾಶಕರಾಗಿದ್ದರು. 1993 ಮತ್ತು 1995ರ ನಡುವೆ ಕರ್ನಾಟಕ ಪತ್ರಿಕಾ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದರು. 2001ರಲ್ಲಿ ಅವರಿಗೆ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರೂ ಆಗಿದ್ದರು. ವ್ಯಾಪಕವಾಗಿ ಪ್ರಯಾಣಿಸಿರುವ ಅವರು, ಆಗ್ನೇಯ ಏಷ್ಯಾ, ಅಮೆರಿಕ, ಇಸ್ರೇಲ್, ಈಜಿಪ್ಟ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಗಳಿಗೆ ಭೇಟಿ ನೀಡಿದ್ದಾರೆ. ಆರು ವರ್ಷಗಳ ಕಾಲ ಅವರು ಕಾವೇರಿ ಕಾಲೇಜಿನ ಉಪಾಧ್ಯಕ್ಷರಾಗಿದ್ದರು.
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. 1992ರಲ್ಲಿ ಕನ್ನಡದಲ್ಲಿ ‘ಆದರ್ಶವಾದಿʼ ಎಂಬ ಕಾದಂಬರಿಯನ್ನು ಬರೆದರು. ಮುಂದಿನ ವರ್ಷ (1993) ಇಂಗ್ಲಿಷ್‌ನಲ್ಲಿ ‘ಅಮೇರಿಕಾ - ಆನ್ ಏರಿಯಾ ಆಫ್ ಲೈಟ್ʼ ಎಂಬ ಪ್ರವಾಸ ಕಥನ ಬರೆದರು. 1994ರಲ್ಲಿ ಇಂಗ್ಲಿಷ್‌ನಲ್ಲಿ ‘ದಿ ಕ್ರಾಸ್ ಅಂಡ್ ದಿ ಕೂರ್ಗ್ಸ್ʼ ಎಂಬ ಮತ್ತೊಂದು ಕಾದಂಬರಿಯನ್ನು ಬರೆದರು. ಇದನ್ನು ನಂತರ ಕನ್ನಡದಲ್ಲಿಯೂ ಬರೆದರು. 2003ರಲ್ಲಿ ‘ಅಬ್ರಕಾಡಬ್ರಾʼ ಎಂಬ ಆಯ್ದ ಅಂಕಣಗಳ ಸಂಗ್ರಹ ಪ್ರಕಟಿಸಿದರು. 2009ರಲ್ಲಿ, ಅವರು ‘ಗಾಂಧೀಸ್ ಎಪಿಸ್ಟಲ್ ಟು ಒಬಾಮಾʼ ಎಂಬ ಇಂಗ್ಲಿಷ್ ಕೃತಿ ಬರೆದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ