8ನೇ ವೇತನ ಆಯೋಗದ ಬೇಸಿಕ್ ಸಂಬಳ 51,000 ಅಲ್ಲ, 30 ಸಾವಿರ ರೂಪಾಯಿಗೆ ಏರಿಕೆ..!

author-image
Ganesh
Updated On
8ನೇ ವೇತನ ಆಯೋಗದ ಬೇಸಿಕ್ ಸಂಬಳ 51,000 ಅಲ್ಲ, 30 ಸಾವಿರ ರೂಪಾಯಿಗೆ ಏರಿಕೆ..!
Advertisment
  • 2026ರ ಅಂತ್ಯದಿಂದ ಜಾರಿ ಆಗುವ ನಿರೀಕ್ಷೆ ಇದೆ
  • ಶೇ. 183 ರಷ್ಟು ಏರಿಕೆ ಮಾಡಲಾಗುತ್ತೆ ಎಂದು ವದಂತಿ
  • ದುಪ್ಪಟ್ಟು ಸಂಬಳ ಏರಿಕೆ ಕನಸು ಕಂಡಿದ್ದವರಿಗೆ ಶಾಕ್

ದೇಶದಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ವೇತನ ಆಯೋಗದಲ್ಲಿ (8th Pay Commission) ತಮ್ಮ ಬೇಸಿಕ್ ಸಂಬಳದ ಭಾರಿ ಏರಿಕೆಯ ನಿರೀಕ್ಷೆಯಲ್ಲಿದ್ದಾರೆ. ಅಂಥವರಿಗೆ ನಿರಾಶೆ ಕಾದಿದೆ. 8ನೇ ವೇತನ ಆಯೋಗದಲ್ಲಿ ಬೇಸಿಕ್ ಸಂಬಳವನ್ನು ತಿಂಗಳಿಗೆ 18 ಸಾವಿರ ರೂಪಾಯಿಯಿಂದ 51 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗುತ್ತೆ. ಶೇಕಡಾ 183 ರಷ್ಟು ಏರಿಕೆ ಮಾಡಲಾಗುತ್ತೆ ಎಂದು ವದಂತಿ ಹಬ್ಬಿತ್ತು.

ಕಾದಿದೆ ನಿರಾಸೆ

ಆ ಮಟ್ಟಿಗೆ ಬೇಸಿಕ್ ಸಂಬಳದ ಏರಿಕೆಯಾಗಲ್ಲ. ಕೇಂದ್ರ ಸರ್ಕಾರಿ ನೌಕರರ ಬೇಸಿಕ್ ಸಂಬಳವು 30 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ. ಕೋಟಕ್ ಇನ್ಸಿಟಿಟ್ಯೂಷನಲ್ ಈಕ್ವಿಟೀಸ್ (Kotak Institutional Equities) ಈ ಬಗ್ಗೆ ವಿಶ್ಲೇಷಣೆ ಮಾಡಿದ್ದು, ಬೇಸಿಕ್ ಸಂಬಳವು 30 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ ಎಂದಿದೆ. ಇದು ಸಂಬಳದ ಭಾರಿ ಏರಿಕೆಯ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಭಾರಿ ನಿರಾಶೆಯ ವಿಷಯ.

ಇದನ್ನೂ ಓದಿ: ಕೆಲ್ಸದಿಂದ ವಜಾ, ಬೆಳಗಾವಿ ಯುವಕ ಆತ್ಮ*ಹತ್ಯೆ; ಬಿಲ್ಡಿಂಗ್​ ಮೇಲಿಂದ ಹಾರಿದ ಮತ್ತೊಬ್ಬ! 2 ಪ್ರತ್ಯೇಕ ದುರಂತ ಅಂತ್ಯ

ಫಿಟ್​​ಮೆಂಟ್ (Fitment) ಅಂಶವನ್ನು ಪರಿಗಣಿಸಿ ಈಗಿನ ಸಂಬಳವನ್ನು 8ನೇ ವೇತನ ಆಯೋಗದಲ್ಲಿ ಎಷ್ಟು ಆಗಬಹುದೆಂದು ಅಂದಾಜು ಮಾಡಲಾಗಿದೆ. 7ನೇ ವೇತನ ಆಯೋಗದಲ್ಲಿ ಫಿಟಮೆಂಟ್ ಅಂಶವು 2.57 ರಷ್ಟು ಇತ್ತು. ಇದರ ಆಧಾರದಲ್ಲಿ 8ನೇ ವೇತನ ಆಯೋಗದಲ್ಲಿ ಫಿಟ್​​​ಮೆಂಟ್ ಅಂಶವು 1.8 ರಷ್ಟು ಆಗುವ ನಿರೀಕ್ಷೆ ಇದೆ. ಇದರಿಂದಾಗಿ ಬೇಸಿಕ್ ಸಂಬಳವು 18 ಸಾವಿರ ರೂಪಾಯಿಯಿಂದ 30 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ. ಕೆಲವೆಡೆ ಹೇಳಿರುವಂತೆ 51 ಸಾವಿರ ರೂಪಾಯಿಗೆ ಏರಿಕೆಯಾಗಲ್ಲ.

ಯಾವಾಗ ಜಾರಿ ಆಗಲಿದೆ..? 

8ನೇ ವೇತನ ಆಯೋಗದ ಏರಿಕೆಯು ತಕ್ಷಣವೇ ಆಗಲ್ಲ. 2025ರ ಜನವರಿಯಲ್ಲಿ 8ನೇ ವೇತನ ಆಯೋಗವನ್ನು ಘೋಷಿಸಲಾಗಿದೆ. ಹೊಸ ವೇತನ ಆಯೋಗದ ಟರ್ಮ್ ಆಫ್ ರೆಫೆರೆನ್ಸ್ ಇನ್ನೂ ಅಂತಿಮಗೊಂಡಿಲ್ಲ. 8ನೇ ವೇತನ ಆಯೋಗದ ಅಧ್ಯಕ್ಷರು, ಸದಸ್ಯರು ಕೂಡ ನೇಮಕಗೊಂಡಿಲ್ಲ. ಅಧ್ಯಕ್ಷರು, ಸದಸ್ಯರ ನೇಮಕವಾದ ಬಳಿಕ 8ನೇ ವೇತನ ಆಯೋಗವು ತನ್ನ ವರದಿ, ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು 18 ತಿಂಗಳ ಸಮಯ ಅವಕಾಶ ತೆಗೆದುಕೊಳ್ಳುತ್ತೆ. ಬಳಿಕ ಕೇಂದ್ರ ಸರ್ಕಾರವು ಆ ವರದಿ, ಶಿಫಾರಸ್ಸಿಗೆ ಒಪ್ಪಿಗೆ ನೀಡಿ ಜಾರಿಗೊಳಿಸಲು 3 ರಿಂದ 9 ತಿಂಗಳ ಸಮಯ ತೆಗೆದುಕೊಳ್ಳಬಹುದು. ಕೇಂದ್ರ ಸರ್ಕಾರಿ ನೌಕರರಿಗೆ 2026ರ ಅಂತ್ಯ ಅಥವಾ 2027ರ ಪ್ರಾರಂಭವರೆಗೂ ಸಂಬಳ ಏರಿಕೆ, ಪರಿಷ್ಕರಣೆ ಆಗಲ್ಲ.

ಕೇಂದ್ರ ಸರ್ಕಾರಿ ನೌಕರರಿಗೆ ಕಡಿಮೆ ಪ್ರಮಾಣದಲ್ಲಿ ಸಂಬಳ ಏರಿಕೆ ಮಾಡಿದರೂ ಕೇಂದ್ರ ಸರ್ಕಾರದ ಬೊಕ್ಕಸದಿಂದ 2.4 ಲಕ್ಷ ಕೋಟಿ ರೂಪಾಯಿಯಿಂದ 3.2 ಲಕ್ಷ ಕೋಟಿ ರೂಪಾಯಿ ಖರ್ಚಾಗಲಿದೆ. ಇದರ ಸಿಂಹಪಾಲು ಗ್ರೇಡ್ ಸಿ ಉದ್ಯೋಗಿಗಳ ಪಾಲಾಗಲಿದೆ. ಗ್ರೇಡ್ ಸಿ ಉದ್ಯೋಗಿಗಳೇ ಕೇಂದ್ರ ಸರ್ಕಾರದ ನೌಕರರ ಪೈಕಿ ಶೇ.90 ರಷ್ಟು ಇದ್ದಾರೆ.

ಇದನ್ನೂ ಓದಿ: ಹೆಣ್ಮಕ್ಕಳಿಗೆ ಅಶ್ಲೀಲ ಮೆಸೇಜ್‌ ವಿರುದ್ಧ ಶಿವಣ್ಣ ಆಕ್ರೋಶ.. ರಮ್ಯಾ ಪರ ನಿಂತು ಏನಂದ್ರು ಹ್ಯಾಟ್ರಿಕ್ ಹೀರೋ..?

publive-image

ಹೊಸ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿ ಕೇಂದ್ರ ಸರ್ಕಾರಿ ನೌಕರರ ಸಂಬಳ ಏರಿಕೆ ಮಾಡಿದಾಗಲೆಲ್ಲಾ ದೇಶದ ಆಟೋ ಮೊಬೈಲ್, ಗ್ರಾಹಕ ಗೂಡ್ಸ್​ಗಳು, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಚೇತರಿಕೆ ಸಿಕ್ಕಿದೆ. ಈ ಬಾರಿಯೂ ಈ ವಲಯಗಳಿಗೆ ಚೇತರಿಕೆ ಸಿಗುವ ನಿರೀಕ್ಷೆ ಇದೆ. ಸಂಬಳ ಪರಿಷ್ಕರಣೆಯಿಂದ ಹೆಚ್ಚುವರಿಯಾಗಿ 1 ಲಕ್ಷ ಕೋಟಿ ರೂಪಾಯಿಯಿಂದ 1.5 ಲಕ್ಷ ಕೋಟಿ ರೂಪಾಯಿ ಉಳಿತಾಯ ಆಗಲಿದೆ. ಈ ಉಳಿತಾಯದ ಹಣವನ್ನು ಕೇಂದ್ರ ಸರ್ಕಾರಿ ನೌಕರರು ಸ್ಟಾಕ್ ಮಾರ್ಕೆಟ್, ಬ್ಯಾಂಕ್ ಠೇವಣಿ, ಭೂಮಿ ಖರೀದಿಗೆ ಬಳಕೆ ಮಾಡುವರು. ಹೀಗಾಗಿ ಈ ಕ್ಷೇತ್ರಗಳಿಗೆ ಭರ್ಜರಿಯಾಗಿ ಹಣ ಹರಿದು ಬರಲಿದೆ.

8ನೇ ವೇತನ ಆಯೋಗಕ್ಕೆ ಗ್ರೌಂಡ್ ವರ್ಕ್ ಆರಂಭವಾಗಿದೆ ಎಂದು ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಪಾರ್ಲಿಮೆಂಟ್​ಗೆ ತಿಳಿಸಿದ್ದಾರೆ. ಈಗಾಗಲೇ ಹಣಕಾಸು ಇಲಾಖೆಯು ಡಿಫೆನ್ಸ್, ಗೃಹ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳಿಂದ 8ನೇ ವೇತನ ಆಯೋಗದಿಂದ ಸಂಬಳ ಪರಿಷ್ಕರಣೆ ಬಗ್ಗೆ ಮಾಹಿತಿ ಕೇಳಿದೆ.

ಇದನ್ನೂ ಓದಿ: ಮೊದಲು ಜಡೇಜಾ, ಸುಂದರ್ ಶತಕಕ್ಕೆ ಅಡ್ಡಗಾಲು.. ಆಮೇಲೆ ಹ್ಯಾಂಡ್​ಶೇಕ್ ಮಾಡದೇ ಸ್ಟೋಕ್ ಕಿರಿಕ್..!

ದೇಶದಲ್ಲಿ ಹೆಚ್ಚಾಗುತ್ತಿರುವ ಹಣದುಬ್ಬರ, ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಪರಿಗಣಿಸಿ ಕೇಂದ್ರ ಸರ್ಕಾರವು 10 ವರ್ಷಗಳಿಗೊಮ್ಮೆ ವೇತನ ಆಯೋಗಗಳ ಮೂಲಕ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಣೆ ಮಾಡುತ್ತದೆ. 7ನೇ ವೇತನ ಆಯೋಗವು 2016 ರಿಂದ ದೇಶದಲ್ಲಿ ಜಾರಿಗೆ ಬಂದಿದೆ. ಹೀಗಾಗಿ 8ನೇ ವೇತನ ಆಯೋಗದ ಶಿಫಾರಸು 2026 ರ ಅಂತ್ಯದಿಂದ ಜಾರಿಯಾಗುವ ನಿರೀಕ್ಷೆ ಇದೆ.

ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment