/newsfirstlive-kannada/media/post_attachments/wp-content/uploads/2024/05/GT_FIRE.jpg)
ವೀಕೆಂಡ್ ಅಂತಾ ಫ್ಯಾಮಿಲಿ ಜೊತೆಗೆ ಎಂಜಾಯ್ ಮಾಡಲು ಬಂದಿದ್ದ ಹಲವು ಕುಟುಂಬಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ತಮ್ಮವರನ್ನ ಕಳೆದುಕೊಂಡ ಕುಟುಬಂಗಳು ಕೊರಗುತ್ತಿವೆ. ವೀಕೆಂಡ್ ಎಂಜಾಯ್ಮೆಂಟ್ ಅಂತಿದ್ದ ಜನ ಈ ಘಟನೆಯಿಂದ ಹೊರ ಹೋಗಲು ಭಯ ಪಡ್ತಿದ್ದಾರೆ.
ಗುಜರಾತ್ನಲ್ಲಿ ನಿನ್ನೆ ಯಾವುದೇ ಐಪಿಎಲ್ ಮ್ಯಾಚ್ ಕೂಡ ಇಲ್ಲ. ಮನೆನಲ್ಲಿದ್ದು ಏನ್ ಮಾಡೋಣ ಫ್ಯಾಮಿಲಿ ಜೊತೆ ಹೊರಗೆ ಹೋಗೋಣ ಅಂತಾ ಹೆಂಡ್ತಿ, ಮಕ್ಕಳನ್ನ ಕರ್ಕೊಂಡು ಗುಜರಾತ್‌ನ ರಾಜ್‌ಕೋಟ್‌ನಲ್ಲಿರೋ ಗೇಮಿಂಗ್ ಝೋನ್‌ಗೆ ಆಗಮಿಸಿದ್ರು. ಇದ್ದಕ್ಕಿದ್ದಂತೆ ಅದೇನ್ ಆಯ್ತೋ ಏನೋ ದಿಢೀರ್ ಅಂತ ಸ್ಫೋಟಿಸಿದೆ. ಭಾರೀ ಅಗ್ನಿ ದುರಂತ ಸಂಭವಿಸಿದೆ. ಮುಗಿಲೆತ್ತರಕ್ಕೆ ಹೊಗೆ ಆವರಿಸಿದ್ದನ್ನ ಕಂಡ ಸುತ್ತ ಮುತ್ತಲಿನ ಜನರು ಅದೇನ್ ಆಯ್ತು ಅಂತಾ ಗಾಬರಿಯಿಂದ ಸ್ಥಳಕ್ಕೆ ಓಡೋಡಿ ಬಂದಿದ್ರು. ಅಷ್ಟರಲ್ಲಿ ಧಗಧಗಿಸ್ತಿದ್ದ ಬೆಂಕಿ ಭಯಹುಟ್ಟಿಸಿತ್ತು.
ಅಗ್ನಿ ದುರಂತದಲ್ಲಿ ಸುಮಾರು 27ಕ್ಕೂ ಹೆಚ್ಚು ಮಂದಿ ಸಾವು
ಗುಜರಾತ್‌ನ ರಾಜ್‌ಕೋಟ್‌ನ ಗೇಮಿಂಗ್ ಜೋನ್‌ನಲ್ಲಿ ಮಧ್ಯಾಹ್ನದ ವೇಳೆ ಟಿಆರ್‌ಪಿ ಗೇಮಿಂಗ್ ವಲಯದಲ್ಲಿ ಎಸಿ ಸ್ಫೊಟದಿಂದ ಬೆಂಕಿ ಕಾಣಿಸಿಕೊಂಡಿದೆ. ಎಸಿ ಸ್ಫೋಟದಿಂದ ಭಾರೀ ಅಗ್ನಿ ದುರಂತ ಸಂಭವಿಸಿದೆ. ಅವಘಡದಲ್ಲಿ 9 ಮಕ್ಕಳು ಸೇರಿದಂತೆ ಕನಿಷ್ಠ 27ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. 65ಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ದುರಂತದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ. ಆದ್ರೆ ಆಸ್ಪತ್ರೆಯ ಹೊರಗೆ ಮಾತ್ರ ಕುಟುಂಬಸ್ಥರ ನರಳಾಟ.. ಗೋಳಾಟ.. ಮುಗಿಲು ಮುಟ್ಟಿದೆ.
ಇದನ್ನೂ ಓದಿ: IPL ಆಯ್ತು.. T20 ವಿಶ್ವಕಪ್ಗಾಗಿ ನ್ಯೂಯಾರ್ಕ್ ವಿಮಾನ ಹತ್ತಿದ ರೋಹಿತ್ ಬಾಯ್ಸ್
ಕೆಲವರು ಅಗ್ನಿ ಅವಘಡವನ್ನ ಮೊಬೈಲ್ನಲ್ಲಿ ಸೆರೆ ಹಿಡಿಯುವುದರಲ್ಲಿ ಬ್ಯುಸಿ ಇದ್ರೆ, ಕೆಲವರು ಬಾಯಿ ಬಿಟ್ಕೊಂಡು ಏನ್ ಆಗಿದೆ ಅಂತ ನೋಡ್ತಾ ನಿಂತಿದ್ರು. ಇನ್ನೂ ಸಮಯ ಪ್ರಜ್ಞೆ ಇದ್ದವರು ಕೂಡಲೇ ಅಗ್ನಿಶಾಮಕ ದಳಕ್ಕೆ, ಮಾಹಿತಿ ನೀಡಿದ್ರು. ಇನ್ನೂ ಮಾಹಿತಿ ಸಿಕ್ತಾ ಇದ್ದಂತೆ ಥಟ್ ಅಂತಾ ಪೊಲೀಸರು, ಫೈಯರ್ ಇಂಜಿನ್, ಌಂಬುಲೆನ್ಸ್ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ಶುರು ಮಾಡಿದ್ರು. ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲಿಗೆ 9 ಮಕ್ಕಳು ಸೇರಿದಂತೆ ಸುಮಾರು 27ಕ್ಕೂ ಹೆಚ್ಚು ಮಂದಿ ಸುಟ್ಟು ಕರಕಲಾಗಿ ಹೋಗಿದ್ರು.
ಇದನ್ನೂ ಓದಿ: T20 ವಿಶ್ವಕಪ್; ರೋಹಿತ್ ಜೊತೆ ಪ್ಲೈಟ್ನಲ್ಲಿ ವಿರಾಟ್ ಕೊಹ್ಲಿ ಹೋಗಲಿಲ್ಲ, ಯಾಕೆ?
ಗೇಮಿಂಗ್ ಝೋನ್ ಮಾಲೀಕ ಸೇರಿ ಮೂವರು ಅರೆಸ್ಟ್
ಇನ್ನೂ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ಕಂಪನಿಯ ಮಾಲೀಕರು, ನಿರ್ದೇಶಕರು, ನಿರ್ವಹಣಾ ಸಿಬ್ಬಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಮಾಲೀಕರು ಮತ್ತು ವ್ಯವಸ್ಥಾಪಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ವಿಷಯ ತಿಳಿದು ಪ್ರಧಾನಿ ಮೋದಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಘೋಷಿಸಿದ್ದಾರೆ.
27 ಜೀವಗಳು ಸಂತಸದ ಸಮಯದಲ್ಲಿ ನಡೆದ ಅವಘಡದಿಂದ ಸುಟ್ಟು ಕರಕಲಾಗಿದೆ. ದುರಂತದ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಈ ಅವಘಡಕ್ಕೆ ಕಾರಣ ಮಾಲೀಕರು ನಿಲಕ್ಷ್ಯವೋ, ಇಲ್ಲ ಸಿಬ್ಬಂದಿಯ ಬೇಜವಾಬ್ದಾರಿಯೋ ತನಿಖೆಯಲ್ಲಿ ತಿಳಿಯಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ