/newsfirstlive-kannada/media/post_attachments/wp-content/uploads/2025/05/kalaburagi-soldiers-returns-army-1.jpg)
ಕಲಬುರಗಿ: ಭಾರತ, ಪಾಕ್ ಸಂಘರ್ಷದ ಹಿನ್ನೆಲೆಯಲ್ಲಿ ಗಡಿಯಲ್ಲಿ ವಾತಾವರಣ ಇನ್ನೂ ತಿಳಿಯಾಗಿಲ್ಲ. ಪಾಕಿಸ್ತಾನದ ಕದನ ವಿರಾಮ ಉಲ್ಲಂಘಿಸಿದ ಮೇಲೆ ಭಾರತೀಯ ಸೇನೆ ರಜೆಯಲ್ಲಿದ್ದ ಸೈನಿಕರನ್ನ ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ಬುಲಾವ್ ನೀಡಿದೆ. ದೇಶಾದ್ಯಂತ ರಜೆಯಲ್ಲಿದ್ದ ಯೋಧರು ಗಡಿ ಕಾಯುವ ಸೇವೆಗೆ ಮರಳುತ್ತಿದ್ದಾರೆ.
ತಂಗಿಯ ಮದುವೆ, ತಾಯಿಗೆ ಅನಾರೋಗ್ಯ ಹೀಗೆ ನಾನಾ ಕಾರಣಗಳಿಂದ ರಜೆಯಲ್ಲಿದ್ದ ವೀರಯೋಧರು ಬಹಳ ಹೆಮ್ಮೆಯಿಂದಲೇ ತಮ್ಮ ಕರ್ತವ್ಯಕ್ಕೆ ತೆರಳುತ್ತಿದ್ದಾರೆ. ಆದರೆ ಗಡಿ ಸಂಘರ್ಷದ ಸಮಯದಲ್ಲಿ ಸೈನಿಕರನ್ನು ಕಳುಹಿಸುವಾಗ ಕುಟುಂಬಸ್ಥರು ಭಾವುಕರಾಗುತ್ತಿದ್ದಾರೆ.
ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಮತ್ತೆ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಈ ಸಂದರ್ಭದಲ್ಲಿ ಹೆಂಡತಿ ಡೆಲಿವರಿಗಾಗಿ ರಜೆ ಮೇಲೆ ಬಂದಿದ್ದ ಕಲಬುರಗಿ ಮೂಲದ CRPF ಯೋಧ ಹಣಮಂತರಾಯ್ ಔಸೆ ಅವರು ವಾಪಸ್ ಸೇವೆಗೆ ತೆರಳುತ್ತಿದ್ದಾರೆ.
ವಾರದ ಹಿಂದಷ್ಟೇ ಹಣಮಂತರಾಯ್ ಅವರ ಪತ್ನಿಗೆ ಗಂಡು ಮಗು ಜನನವಾಗಿದೆ. ರಜೆ ಅವಧಿಯಲ್ಲಿ ಕೇವಲ 15 ದಿನ ಕಳೆದಿದೆ. ಭಾರತೀಯ ಸೇನೆ ತುರ್ತು ಸೇವೆಗೆ ಆಗಮಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ದೇಶ ಸೇವೆಗೆ ಯೋಧ ಮರಳಿದ್ದಾರೆ.
ನನಗೆ ಮಗು, ಮನೆ, ಕುಟುಂಬಕ್ಕಿಂತ ದೇಶ ಮುಖ್ಯ. ನಾನು ಸೇನೆಗೆ ಸೇರುವ ಮುನ್ನ ನನಗೆ ಇದೇ ವೇದವಾಕ್ಯ. ಹಾಗಾಗಿ ದೇಶ ಸೇವೆಗಾಗಿ ತೆರಳುತ್ತಿದ್ದೇನೆ ಎಂದು ಯೋಧ ಹಣಮಂತರಾಯ್ ಹೇಳಿದ್ದಾರೆ.
ಇದನ್ನೂ ಓದಿ: ಮುರಳಿ ನಾಯಕ್ ಅಮರ್ ರಹೇ.. ಭಾವಪೂರ್ಣ ವಿದಾಯ; ಪವನ್ ಕಲ್ಯಾಣ್, ಗಣ್ಯರಿಂದ ಅಂತಿಮ ನಮನ
ಹಣಮಂತರಾಯ್ ಅವರ ಪತ್ನಿ ಸ್ನೇಹಾ ಕೂಡ ನನ್ನ ಗಂಡ ನಮಗೆ ಈ ಸ್ಥಿತಿ ಬಿಟ್ಟು ಹೋಗುತ್ತಿರುವ ಬಗ್ಗೆ ಬೇಜಾರಿಲ್ಲ. ನನಗೆ ನನ್ನ ಗಂಡನ ಬಗ್ಗೆ ಹೆಮ್ಮೆ ಇದೆ ಎನ್ನುತ್ತಾರೆ. ಹೆಂಡತಿ, ನವಜಾತ ಗಂಡು ಮಗು ಜೊತೆ ಕಾಲ ಕಳೆಯಬೇಕೆಂದಿದ್ದ ಯೋಧರಿಗೆ ಸೇನೆಯಿಂದ ಬುಲಾವ್ ಬಂದಿದೆ.
ಹಣಮಂತರಾಯ್ ಔಸೆ ಅವರು ವಾರದ ಹಿಂದಷ್ಟೇ ಜನಿಸಿದ ಮಗು ಹಾಗು ಇನ್ನಿಬ್ಬರು ಮಕ್ಕಳಿಗೆ ಸಿಹಿ ಮುತ್ತು ಕೊಟ್ಟು ಜಮ್ಮುವಿಗೆ ತೆರಳಿದ್ದಾರೆ. ಬಾಣಂತಿ ಪತ್ನಿ ಸ್ನೇಹಾ ಅವರು ಪತಿಗೆ ಭಾರವಾದ ಮನಸ್ಸಿನೊಂದಿಗೆ ನಗುತ್ತಲೇ ಕಳುಹಿಸಿಕೊಟ್ಟಿದ್ದಾರೆ. ಕಾಶ್ಮೀರಕ್ಕೆ ತೆರಳಿದ ಯೋಧನಿಗೆ ಸ್ನೇಹಿತರ ಬಳಗ ಸತ್ಕರಿಸಿ ಶುಭ ಹಾರೈಸಿ ಕಳುಹಿಸಿಕೊಟ್ಟಿದೆ.
ಹೆಂಡತಿ, 1 ವಾರದ ಮಗು ಬಿಟ್ಟು ಹೋಗುವ ಭಾವುಕ ಕ್ಷಣ ಒಂದು ಕಡೆಯಾದ್ರೆ ಯೋಧ ಹಣಮಂತರಾಯ್ ಔಸೆ ಸ್ನೇಹಿತರು ಇಡೀ ಕುಟುಂಬವನ್ನ ಸನ್ಮಾನಿಸಿ ಯೋಧನ ಸೇವೆಗೆ ಒಂದು ಸಲಾಂ ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ