/newsfirstlive-kannada/media/post_attachments/wp-content/uploads/2025/07/sanjay-dut1.jpg)
ಈಗಿನ ಕಾಲದಲ್ಲಿ ಯಾರೂ ಕೂಡ ಮತ್ತೊಬ್ಬರಿಗೆ 5, 10 ಸಾವಿರ ರೂಪಾಯಿ ಹಣವನ್ನು ಫ್ರೀಯಾಗಿ ಕೊಡಲ್ಲ. ಸಾಲ ಕೊಟ್ಟರೂ, ವಾಪಸ್ ಕೇಳೇ ಕೇಳುತ್ತಾರೆ. ಅಂಥದ್ದರಲ್ಲಿ ನಿಮ್ಮ ಹೆಸರಿಗೆ ಬರೋಬ್ಬರಿ 72 ಕೋಟಿ ರೂಪಾಯಿ ಆಸ್ತಿ ಅನಾಮತ್ತಾಗಿ ಬಂದರೇ ನೀವು ಏನು ಮಾಡಬಹುದು. ಈ ಹಣದಲ್ಲಿ ಬೇರೆ ಯಾರೇ ಆಗಿದ್ದರೂ, ಜೀವನ ಪೂರ್ತಿ ಮಜಾ ಮಾಡುತ್ತಾರೆ. ದಿಢೀರ್ ಶ್ರೀಮಂತಿಕೆ ಬಂದರೇ, ಮಧ್ಯೆ ರಾತ್ರಿಯಲ್ಲೂ ಕೊಡೆ ಹಿಡಿಯುವ ಜನರು ಸಮಾಜದಲ್ಲಿ ಇದ್ದಾರೆ. ಆದರೆ, ನಟ ಸಂಜಯ್ ದತ್ ಕೆಟಗರಿಗಳಿಗೆ ಸೇರಿದವರಲ್ಲ. ತಮ್ಮ ಹೆಸರಿಗೆ ಬಂದ ಬರೋಬ್ಬರಿ 72 ಕೋಟಿ ರೂಪಾಯಿ ಆಸ್ತಿಪಾಸ್ತಿ, ಹಣವನ್ನು ನೀಡಿದವರ ಕುಟುಂಬಕ್ಕೆ ವಾಪಸ್ ಕೊಟ್ಟಿದ್ದಾರೆ. ಈ ಮೂಲಕ ಬಾಲಿವುಡ್ ನಟ ಸಂಜಯ್ ದತ್ ದೊಡ್ಡತನ ಮೆರೆದಿದ್ದಾರೆ. ಈ ವಿಷಯವನ್ನು ಈಗ ನಟ ಸಂಜಯ್ ದತ್ ಅವರೇ ಬಹಿರಂಗಪಡಿಸಿದ್ದಾರೆ. ತಮ್ಮ ಜೀವನದಲ್ಲಿ ನಡೆದ ನಂಬಲಅಸಾಧ್ಯ ಘಟನೆಯನ್ನು ಸಂಜಯ್ ದತ್ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಮಹಿಳೆಯರಿಗಾಗಿ ಸರ್ಕಾರದ ಯೋಜನೆ.. ಆದ್ರೆ ಕೋಟಿ ಕೋಟಿ ಹಣ ನುಂಗಿದ ರಾಜ್ಯದ ಪುರುಷರು!
ಕರ್ಲಿ ಟೇಲ್ಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿರುವ ನಟ ಸಂಜಯ್ ದತ್, ನಿಮ್ಮ ಅಭಿಮಾನಿಯೊಬ್ಬರು ನಿಮಗೆ 72 ಕೋಟಿ ರೂಪಾಯಿ ಆಸ್ತಿಪಾಸ್ತಿ, ಹಣ ನೀಡಿದ್ದು ನಿಜವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಜಯ್ ದತ್, ಆ ಘಟನೆ ನಡೆದಿದ್ದು ನಿಜ ಎಂದು ಖಚಿತಪಡಿಸಿದ್ದಾರೆ. ಜೊತೆಗೆ ನಾನು ಅದನ್ನು ಅವರ ಕುಟುಂಬಕ್ಕೆ ವಾಪಸ್ ನೀಡಿದೆ ಎಂದು ಕೂಡ ಹೇಳಿದ್ದಾರೆ. 2018ರಲ್ಲಿ ಸಂಜಯ್ ದತ್ ಅಭಿಮಾನಿ ನಿಶಾ ಪಾಟೀಲ್ ಅವರು ತಮ್ಮ ಎಲ್ಲ ಸಂಪತ್ತು ಅನ್ನು ನಟ ಸಂಜಯ್ ದತ್ ಅವರಿಗೆ ನೀಡಿದ್ದರು. ಈ ಅನಿರೀಕ್ಷಿತ ಘಟನೆ ಸಂಜಯ್ ದತ್ ಅವರನ್ನು ಅಶ್ಚರ್ಯಚಕಿತರನ್ನಾಗಿಸಿತು. ನಿಶಾ ಪಾಟೀಲ್ ಅವರು ಬರೋಬ್ಬರಿ 72 ಕೋಟಿ ಸಂಪತ್ತಿನ ಮಾಲಕಿಯಾಗಿದ್ದರು. ಎಲ್ಲ 72 ಕೋಟಿ ರೂಪಾಯಿ ಸಂಪತ್ತು ಅನ್ನು ಸಂಜಯ್ ದತ್ ಅವರಿಗೆ ಅವರ ಮೇಲಿನ ಅಭಿಮಾನದ ಕಾರಣಕ್ಕೆ ನೀಡಿದ್ದರು. 62 ವರ್ಷ ವಯಸ್ಸಿನ ನಿಶಾ ಪಾಟೀಲ್ ಮುಂಬೈನಲ್ಲಿ ಗೃಹಿಣಿಯಾಗಿದ್ದರು. ನಿಶಾ ಪಾಟೀಲ್, ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದರು.
ತಮ್ಮ ಸಾವಿನ ಬಳಿಕ ತಮ್ಮೆಲ್ಲಾ ಆಸ್ತಿಯನ್ನು ಬಾಲಿವುಡ್ ನಟ ಸಂಜಯ್ ದತ್ ಅವರ ಹೆಸರಿಗೆ ವರ್ಗಾಯಿಸಬೇಕು ಎಂದು ತಮ್ಮ ಬ್ಯಾಂಕ್ ಹಾಗೂ ವಕೀಲರಿಗೆ ನಿಶಾ ಪಾಟೀಲ್ ಹೇಳಿದ್ದರು. ಹೀಗಾಗಿ ನಿಶಾ ಪಾಟೀಲ್ ಅವರ 72 ಕೋಟಿ ರೂಪಾಯಿ ಆಸ್ತಿ ಸಂಜಯ್ ದತ್ ಹೆಸರಿಗೆ ಬಂದಿತ್ತು. ಆದರೆ, ಬಳಿಕ ಸಂಜಯ್ ದತ್ ಆ ಎಲ್ಲ 72 ಕೋಟಿ ರೂಪಾಯಿ ಆಸ್ತಿಪಾಸ್ತಿ, ಹಣವನ್ನು ತಾವೇ ಇಟ್ಟುಕೊಂಡು ಅನುಭವಿಸಲಿಲ್ಲ. ತಮ್ಮ ಮಕ್ಕಳಿಗೂ ಕೊಡಲಿಲ್ಲ. ಬದಲಿಗೆ ನಿಶಾ ಪಾಟೀಲ್ ಕುಟುಂಬಸ್ಥರಿಗೆ ವಾಪಸ್ ಕೊಟ್ಟು ಬಿಟ್ಟಿದ್ದಾರೆ. ನಾನು ಅದನ್ನು ಅವರ ಕುಟುಂಬಸ್ಥರಿಗೆ ವಾಪಸ್ ನೀಡಿದೆ ಎಂದು ನಟ ಸಂಜಯ್ ದತ್ ಈಗ ಹೇಳಿದ್ದಾರೆ.
1981ರಲ್ಲಿ ರಾಕಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಈ ನಟ, ಹಿಂದಿ ಚಿತ್ರರಂಗದಲ್ಲಿ ವಿವಾದಾತ್ಮಕವಾಗಿದ್ದರೂ ಸಹ ಯಶಸ್ವಿ ವೃತ್ತಿಜೀವನವನ್ನು ಅನುಭವಿಸಿದ್ದಾರೆ. ವಿಧಾತ, ನಾಮ್, ಸಾಜನ್, ಖಲ್ ನಾಯಕ್ ಮತ್ತು ವಾಸ್ತವ್ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿ, ಬಾಲಿವುಡ್‌ನ ಅತ್ಯಂತ ವರ್ಚಸ್ವಿ ನಟರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆದಾಗ್ಯೂ ನಟ ಸಂಜಯ ದತ್ ಅನೇಕ ವಿವಾದಗಳಲ್ಲಿ ಸಿಲುಕಿಕೊಂಡಿದ್ದರು. 1993 ರ ಮುಂಬೈ ಸ್ಫೋಟಗಳಿಗೆ ಸಂಬಂಧಿಸಿದ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಸಂಜಯ್ ದತ್ ಅವರನ್ನು ಟಾಡಾ ಕಾಯಿದೆ ಅಡಿಯಲ್ಲಿ ಬಂಧಿಸಲಾಯಿತು. ಅಂತಿಮವಾಗಿ ಟಾಡಾ ಅಡಿಯಲ್ಲಿ ಖುಲಾಸೆಗೊಂಡರೂ, ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಅವರನ್ನು ಅಪರಾಧಿ ಎಂದು ಘೋಷಿಸಲಾಯಿತು. ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಹಲವಾರು ಪೆರೋಲ್‌ಗಳ ನಂತರ ಸಂಜಯ್ ದತ್ ಅವರು 2016ರಲ್ಲಿ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ