/newsfirstlive-kannada/media/post_attachments/wp-content/uploads/2024/10/train3.jpg)
ಅಪ್ಪನೇ ಹಾಕಿದ್ದ ಮೆಹಂದಿ ಬಣ್ಣ ಕೆಂಪಾಗಿ ಕಾಣುತ್ತಿತ್ತು. ಬಿಳಿ ಡ್ರೆಸ್ ಹಾಕಿಕೊಂಡಿದ್ದ ಮಗಳೊಂದಿಗೆ ಅಪ್ಪ ರೈಲು ಹತ್ತಿದ್ದ. ಅಲ್ಲಿಂದಾಚೆಗೆ ಕೇವಲ 15 ನಿಮಿಷಗಳಲ್ಲಿ ಬಹುದೊಡ್ಡ ಸವಾಲು ಎದುರಾಯ್ತು. ಯಾರೂ ಊಹಿಸದ ರೀತಿಯಲ್ಲಿ ಮಗಳು ಪ್ರಮಾದಕ್ಕೆ ಗುರಿಯಾದಳು. ಮನಮಿಡಿಯುವ ಘಟನೆಗೆ ಪೊಲೀಸರು ಸಾಥ್ ನೀಡಿದ್ದರು.
ತುರ್ತು ಕಿಟಕಿಯಿಂದ ಜಾರಿ ಬಿದ್ದಳು ಮಗಳು
ಅಪ್ಪನ ಭುಜವೇರಿ ಕುಳಿತಿದ್ದ 8 ವರ್ಷದ ಮಗಳು ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ನಿದ್ದೆಗೆ ಜಾರಿದ ಮುದ್ದಿನ ಮಗಳನ್ನು ಮಲಗಿಸೋದಕ್ಕೆ ಅಪ್ಪ ತಡಕಾಡಿದ್ದ. ತುರ್ತು ಕಿಟಕಿ ಪಕ್ಕದಲ್ಲೇ ಮಗಳನ್ನು ಮಲಗಿಸಿ ಜೋಪಾನ ಮಾಡುತ್ತಿದ್ದ. ಮಂಪರುಗಣ್ಣಿನಲ್ಲೇ ಇದ್ದವನಿಗೆ ಶಾಕ್ ಕೊಟ್ಟಿದ್ದು ಮುಂದಿನ ನಿಲ್ದಾಣದಲ್ಲಿ ಹತ್ತಿಕೊಂಡ ಪ್ರಯಾಣಿಕರು. ಗಾಳಿ ಬರಲಿ ಅಂತ ತುರ್ತು ಕಿಟಕಿಯನ್ನು ಯಾರೋ ತೆಗೆದಿದ್ದಾರೆ. ಕೂಡಲೇ ಪಕ್ಕದಲ್ಲೇ ಮಲಗಿದ್ದ ಕಂದಮ್ಮ ಕಿಟಕಿಯಿಂದ ಜಾರಿ ಕೆಳಕ್ಕೆ ಬಿದ್ದಿದ್ದಾಳೆ.
ಕಣ್ಣೀರಿಡುತ್ತಲೇ ಪೊಲೀಸರ ಸಹಾಯ ಕೋರಿದ್ದ
ಉತ್ತರ ಪ್ರದೇಶದ ಲಲಿತ್ಪುರ ರೈಲು ನಿಲ್ದಾಣ ಕರುಣಾಜನಕ ಘಟನೆಗೆ ಸಾಕ್ಷಿಯಾಗಿದೆ. ಮಥುರಾದ ಅರವಿಂದ ತನ್ನ ಮಗಳು ಗೌರಿಯೊಂದಿಗೆ ಕುರುಕ್ಷೇತ್ರದಿಂದ ಮಥುರಕ್ಕೆ ವಾಪಾಸ್ ಆಗುತ್ತಿದ್ದರು. ಶುಕ್ರವಾರ ರಾತ್ರಿ ರೈಲಿನಲ್ಲಿ ಎಮರ್ಜೆನ್ಸಿ ವಿಂಡೋ ಬಳಿ ಮಲಗಿದ್ದ ಮಗಳು ಜಾರಿ ಬಿದ್ದ ಕೂಡಲೇ ಅಕ್ಷರಶಃ ಎದೆ ಝಲ್ ಅಂದಿತ್ತು. ರೈಲಿನ ಚೈನ್ ಹಿಡಿದು ಎಳೆದವರೇ ಬಿಕ್ಕಳಿಸಿ ಅಳೋದಕ್ಕೆ ಶುರು ಮಾಡಿದ್ದ. ಕೂಡಲೇ 112ಕ್ಕೆ ಕರೆ ಮಾಡಿ ಪೊಲೀಸರ ಸಹಾಯ ಕೋರಿದ್ದ. ಓಡೋಡಿ ಬಂದ ಪೊಲೀಸರು, ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಜೊತೆ ಸೇರಿ ಕಂದಮ್ಮನನ್ನ ರಕ್ಷಿಸೋ ಕಾರ್ಯಕ್ಕೆ ಮುಂದಾದರು.
ಇದನ್ನೂ ಓದಿ: ಅಮ್ಮನ ಹಾಲಿಗೆ ಅಳುತ್ತಿದ್ದ ನವಜಾತ ಶಿಶುವಿಗೆ ಹಸುವನ್ನೇ ಕೊಡಿಸಿದ ಜಡ್ಜ್; ತಪ್ಪದೇ ಈ ಸ್ಟೋರಿ ಓದಿ!
16 ಕಿ.ಮೀ ಓಡುತ್ತಲೇ ಮಗಳನ್ನ ಉಳಿಸಿಕೊಂಡ ಅಪ್ಪ
ಪೊಲೀಸರು ಮೂರು ಟೀಮ್ಗಳಾಗಿ ಕಂದಮ್ಮನನ್ನ ರಕ್ಷಿಸೋ ಕಾರ್ಯಾಚರಣೆ ಆರಂಭಿಸಿದ್ದರು. ಎರಡು ಟೀಮ್ ವಾಹನಗಳಲ್ಲಿ ಹುಡುಕಾಟ ನಡೆಸಿತ್ತು. ಮತ್ತೊಂದು ಟೀಮ್ ಟ್ರ್ಯಾಕ್ ಮೇಲೆ ಹುಡುಕೋದಕ್ಕೆ ಮುಂದಾಯ್ತು. ಅರವಿಂದ್ ಗಾಡಿ ಹತ್ತದೇ ಮಗಳನ್ನ ಉಳಿಸಿಕೊಳ್ಳಬೇಕು ಅಂತ ಒಂದೇ ಸಮನೇ ಓಡಿದ್ದರು. ಪೊಲೀಸರಿಗಿಂತಲೂ ಮುಂಚೆಯೇ ವಿರಾರಿ ಸ್ಟೇಷನ್ ಬಳಿಗೆ ಧಾವಿಸಿದ್ರು. ನಿರ್ಮಾನುಷ ಜಾಗದಲ್ಲಿ ಬೆಳಕೇ ಇಲ್ಲ. ಬರೀ ಬೇಲಿಯೇ ಇತ್ತು. ಅಲ್ಲೇ ತಡಕಾಡಿದವನಿಗೆ ಆಘಾತವಾಯ್ತು.
ಪೊದೆಯಲ್ಲಿದ್ದ ಮಗಳನ್ನು ಕಂಡು ಬಿಗಿದಪ್ಪಿಕೊಂಡ ಅಪ್ಪ!
ಪೊದೆಯೊಂದರಲ್ಲಿ ಗಾಯಗೊಂಡು ಬಿದ್ದಿದ್ದಳು ಕಂದಮ್ಮ. ಆ ದೃಶ್ಯ ಕಂಡು ಅಕ್ಷರಶಃ ಘಾಸಿಕೊಂಡಿದ್ದಾರೆ ಅರವಿಂದ್. ರೈಲಿನಿಂದ ಬಿದ್ದ ಗೌರಿ ಪ್ರಜ್ಞೆ ತಪ್ಪಿತ್ತು. ಹಾಗಾಗಿಯೇ ಕತ್ತಲಿನಲ್ಲಿ ಅಳದೇ ಸುಮ್ಮನೇ ಮಲಗಿದ್ದಳು. ಒಂದು ವೇಳೆ ತುಸು ಗಾಯವಾಗಿ ಮಗು ಎಚ್ಚರಿಕೆಯಿಂದಲೇ ಇದ್ದಿದ್ದರೆ ಆ ಕತ್ತಲು ಕಂಡು ಎಷ್ಟು ಚೀರಾಡುತ್ತಿತ್ತೋ? ಅಂತ ಹೇಳುತ್ತಲೇ ಅರವಿಂದ್ ಬಿಕ್ಕಳಿಸುತ್ತಿದ್ದಾರೆ. ಅರವಿಂದ್ ಹಿಂದೆಯೇ ಓಡೋಡಿ ಬಂದ ಪೊಲೀಸರು ಕೂಡಲೇ ಮಗುವನ್ನು ಲಲಿತ್ಪುರ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ, ಕಂದಮ್ಮ ಗೌರಿ ಚೇತರಿಸಿಕೊಂಡಿದ್ದಾಳೆ. ಮತ್ತೆ ಅಪ್ಪನ ಭುಜವೇರಿ ಕುಳಿತಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ