/newsfirstlive-kannada/media/post_attachments/wp-content/uploads/2024/10/LADDU-MUTTYA-2-1.jpg)
ಗಂಜಿ ಇಟ್ಟ ಗರಿಗರಿ ಖಾದಿ ಬಟ್ಟೆ. ಹಣೆಯಲ್ಲಿ ಭಂಡಾರ. ಕುರ್ಚಿ ಮೇಲೇ ಕಾಣುವ ವಿಶೇಷ ಚೇತನ ಲಡ್ಡು ಮುತ್ಯಾ ಅಲ್ಲ. ಬರೀ ಫ್ಯಾನ್ ನಿಲ್ಲಿಸಿ ಧೂಳಿನ ತಿಲಕ ಇಡುವುದು ಪವಾಡವೂ ಅಲ್ಲ. ಹೀಗಂತ ನಾವು ಹೇಳುತ್ತಿಲ್ಲ. ಅಸಲಿ ಲಡ್ಡು ಮುತ್ಯಾನ ಭಕ್ತರೇ ಆಕ್ರೋಶದ ಮಾತಾಡುತ್ತಿದ್ದಾರೆ. ನಮ್ಮ ಲಡ್ಡು ಮುತ್ಯಾನಿಗೆ ಅಪಮಾನ ಮಾಡೋದು ಬೇಡ. ಲಡ್ಡು ಮುತ್ಯಾ ಹೆಸರಿನಲ್ಲಿ ಮೋಸ ಮಾಡೋರ ಬಗ್ಗೆ ಎಚ್ಚರವಿರಲಿ ಅಂತ ಹೇಳುತ್ತಿದ್ದಾರೆ.
ಇದನ್ನೂ ಓದಿ:ಫ್ಯಾನ್ ತಿರುಗಿಸುವ ಲಡ್ಡು ಮುತ್ಯಾ ಯಾರು ಗೊತ್ತಾ? ಅನುಕರಣೆಯ ಹೆಸರಲ್ಲಿ ಅಸಲಿ ಪವಾಡ ಪುರಷನಿಗೆ ಅವಮಾನ?
ಸದ್ಯ ತಾನೇ ಲಡ್ಡು ಮುತ್ಯಾ ಸಂಚಾರಿ ದೇವರ ಅಂತ ಹೇಳಿಕೊಂಡು ಓಡಾಡ್ತಿರೋ ವ್ಯಕ್ತಿ ವಿರುದ್ಧ ಬಾಗಲಕೋಟೆಯ ಸೀಮಿಕೇರಿಯ ಮೂಲ ಲಡ್ಡುಮುತ್ಯಾ ಭಕ್ತರು ಆಕ್ರೋಶದ ಮಾತುಗಳನ್ನಾಡುತ್ತಿದ್ದಾರೆ. ಸೀಮಿಕೇರಿಯ ಮೂಲ ಲಡ್ಡುಮುತ್ಯಾಗೂ ಫ್ಯಾನ್ ಇಂಡಿಯಾ ಮುತ್ಯಾಗೂ ಯಾವುದೇ ಸಂಬಂಧವಿಲ್ಲ ಅಂತಾ ಮಠದ ಆಡಳಿತ ಮಂಡಳಿಯವ್ರು ಹೇಳುತ್ತಿದ್ದಾರೆ. ನಮ್ಮ ಮಠದಿಂದ ಬೇರೆ ಎಲ್ಲೂ ಯಾವುದೇ ಶಾಖಾ ಮಠವಿಲ್ಲ ಅಂತಾ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇತರೆ ಮಠದಿಂದ ಯಾವ ಸ್ವಾಮೀಜಿಗಳನ್ನೂ ನೇಮಕ ಮಾಡಿಲ್ಲ ಎಂದು ಸೀಮಿಕೇರಿಯ ಲಡ್ಡು ಮುತ್ಯಾ ಮಠದ ಸಿಬ್ಬಂದಿ ಹೇಳುತ್ತಿದ್ದಾರೆ.
ಇದನ್ನೂ ಓದಿ:ವಿಶ್ವವಿಖ್ಯಾತ ದಸರಾಗೆ ಸಂಭ್ರಮದ ಚಾಲನೆ.. ಕೆಂಪು ಸೀರೆ, ಹೂವುಗಳಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿ
ಗೋಣಿ ಚೀಲದ ಗುರುವೇ ನಿಜ ಪವಾಡ ಪುರುಷ ಲಡ್ಡು ಮುತ್ಯಾ!
ಮೂರ್ತಿ ರೂಪದಲ್ಲಿ ಪೂಜಿಸಲ್ಪಡುತ್ತಿರುವ ಪವಾಡ ಪುರುಷನೇ ಅಸಲಿ ಲಡ್ಡು ಮುತ್ಯಾ. ಈತನ ಬಳಿ ಬಂದು ಬೇಡಿಕೊಂಡವರಿಗೆ ಇಲ್ಲ ಎಂದ ಉದಾಹರಣೆ ಕಾಣಲ್ಲ ಎಂಬುದು ಭಕ್ತರ ನಂಬಿಕೆ. ಇದು ಬಾಗಲಕೋಟೆ ತಾಲೂಕಿನ ಸೀಮಿಕೇರಿ ಬಳಿ ಲಡ್ಡು ಮುತ್ಯಾನ ನೈಜ ಮಠವಿದೆ. ಲಡ್ಡು ಮುತ್ಯಾ ಅವರು 1993ರ ಆಗಸ್ಟ್ 2ರಂದು ಲಿಂಗೈಕ್ಯರಾದರು. ಇವರು ತಲೆಗೆ ಮೈಗೆ ಗೋಣಿ ಚೀಲದ ತಟ್ಟು ಸುತ್ತಿಕೊಳ್ತಿದ್ದರು. ತಟ್ಟಿಗೆ ಲಡ್ ಅಂತ ಕೂಡ ಇವರನ್ನು ಕರೆಯಲಾಗುತ್ತಿತ್ತು. ಈ ಕಾರಣಕ್ಕೆ ಲಡ್ಡು ಮುತ್ಯಾ ಎಂಬ ಹೆಸರು ಬಂತು. ಲಡ್ಡು ಮುತ್ಯಾ ಅವರ ಮೂಲ ಹೆಸರು ಮಲ್ಲಯ್ಯ. 1970-1990ರ ದಶಕದಲ್ಲಿ ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಲಡ್ಡು ಮುತ್ಯಾ ಅವರನ್ನು ಪವಾಡ ಪುರುಷ ಎಂದು ಪೂಜಿಸುತ್ತಿದ್ದಾರೆ.
ಮಹಾ ಬರದ ಮಧ್ಯೆಯೇ ತೊಟ್ಟಿದ್ದ ತಟ್ಟು ಎಸೆದು ಮಳೆ ತರಿಸಿದ್ರು!
ಸಾಕಷ್ಟು ಪವಾಡಗಳನ್ನು ಮಾಡಿದ್ದಾರೆ ಅಸಲಿ ಲಡ್ಡು ಮುತ್ಯಾ. ತಮ್ಮ ಮೈಮೇಲಿದ್ದ ಗೋಣಿ ಚೀಲದ ತುಂಡಿನಿಂದಲೇ ಪವಾಡಗಳನ್ನು ಮಾಡುತ್ತಿದ್ದರು. ಒಂದು ಅರ್ಥದಲ್ಲಿ ಈ ಭಾಗದ ಜನಕ್ಕೆ ಅಸಲಿ ಭವಿಷ್ಯಕಾರರೂ ಲಡ್ಡು ಮುತ್ಯಾನೇ ಆಗಿದ್ರು. ಇವರು ಆಡಿದ ಮಾತುಗಳು ನಿಜವಾಗ್ತಿದ್ದವು. ಅವರು ಯಾವ ಅಂಗಡಿಗೆ ಬಂದು ಹೋಗ್ತಾರೆ ಅವರಿಗೆ ಭಾರಿ ಲಾಭವಾಗ್ತಿತ್ತು. ಅವರ ಭಾಗ್ಯದ ಬಾಗಿಲು ತೆರೆಯುತ್ತಿತ್ತು. ಅವರು ಯಾರ ಮನೆಗೆ ಕಾಲಿಡ್ತಾರೆ ಅವರಿಗೆ ಅದೃಷ್ಟ ದೇವತೆ ಒಲಿಯುತ್ತಿದ್ದಳು. ಅವರ ಕುಟುಂಬ ಅಭಿವೃದ್ಧಿ ಆಗ್ತಿತ್ತು ಎಂಬ ನಂಬಿಕೆ ಇತ್ತು. ಹಾಗಾಗಿಯೇ ಲಕ್ಷಾಂತರ ಭಕ್ತರು ಇವತ್ತಿಗೂ ಅಸಲಿ ಲಡ್ಡು ಮುತ್ಯಾನಿಗೆ ಭಯ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ವಾಸ್ತವ ಹೀಗಿರುವಾಗ ವಿಶೇಷ ಚೇತನ ವ್ಯಕ್ತಿಯನ್ನು ಸಂಚಾರಿ ದೇವರ ಲಡ್ಡು ಮುತ್ಯಾರ ಎನ್ನುತ್ತಿರೋದು ಸಾಕಷ್ಟು ಅಭಾಸವಾಗುತ್ತಿದೆ. ಅಸಲಿ ಲಡ್ಡು ಮುತ್ಯಾ ಭಕ್ತರ ಕೋಪಕ್ಕೂ ತುತ್ತಾಗುತ್ತಿದೆ ವಿಶೇಷ ಚೇತನ ವ್ಯಕ್ತಿಯ ರೀಲ್ ವಿಡಿಯೋಗಳು.
ಪವಾಡ ಪುರುಷನ ಹೆಸರಲ್ಲಿ ಮೋಸ ಮಾಡ್ತಿದ್ದಾರಾ ವಿಶೇಷ ಚೇತನ?
ಸದ್ಯ, ಮೂಲ ಲಡ್ಡು ಮುತ್ಯಾನ ಭಕ್ತರು ಇಂಥದ್ದೊಂದು ಆರೋಪ ಮಾಡುತ್ತಿದ್ದಾರೆ. ತಿರುಗೋ ಫ್ಯಾನ್ ನಿಲ್ಲಿಸೋದು ಪವಾಡವಂತೂ ಅಲ್ಲ. ಆದರೆ, ವಿಶೇಷ ಚೇತನ ವ್ಯಕ್ತಿ ವಯಸ್ಸಾದವರಂತೆ ಕಂಡರೂ ಮಕ್ಕಳಂತೆ ವರ್ತಿಸುತ್ತಾರೆ. ಅವರ ತೊದಲ ಮಾತು ನಿಜವಾಗಿವೆಯಂತೆ. ಹಾಗಾಗಿಯೇ ಈ ವಿಶೇಷ ಚೇತನ ವ್ಯಕ್ತಿಯ ಬಗ್ಗೆಯೂ ಒಂದಷ್ಟು ಜನಕ್ಕೆ ನಂಬಿಕೆ ಇದೆ. ಆದರೆ, ಮೂಲ ಲಡ್ಡು ಮುತ್ಯಾನ ಹೆಸರಲ್ಲಿ ವಿಶೇಷ ಚೇತನ ವ್ಯಕ್ತಿ ಮೋಸ ಮಾಡುತ್ತಿದ್ದಾರಾ? ಅಥವಾ ಈ ವಿಶೇಷ ಚೇತನ ವ್ಯಕ್ತಿಯನ್ನ ಮುಂದಿಟ್ಟುಕೊಂಡು ಯಾರಾದ್ರೂ ಜನರನ್ನ ಮರಳು ಮಾಡುತ್ತಿದ್ದಾರಾ? ಇಂಥದ್ದೊಂದು ಅನುಮಾನ ಕೂಡ ಎದ್ದಿದೆ. ಭಕ್ತರೇ ಕೊಟ್ಟಿದ್ದಾರೆ ಎನ್ನಲಾದ ಲಕ್ಷಾಂತರ ಬೆಲೆಯ ಕಾರಿನಲ್ಲಿ ಓಡಾಡೋ ವಿಶೇಷ ಚೇತನ ಎಲ್ಲಿ? ಗೋಣಿ ಚೀಲವನ್ನೇ ತೊಟ್ಟು ಪವಾಡ ಮಾಡುತ್ತಿದ್ದ ಲಡ್ಡು ಮುತ್ಯಾ ಎಲ್ಲಿ? ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಈ ಮಧ್ಯೆ ಲಕ್ಷಾಂತರ ಭಕ್ತರ ಅಸಲಿ ಲಡ್ಡು ಮುತ್ಯಾನನ್ನ ರೀಲ್ಸ್ ಮೂಲಕ ಅಪಮಾನ ಮಾಡ್ತಿರೋದು ಎಷ್ಟು ಸರಿ? ಅನ್ನೋ ಪ್ರಶ್ನೆಯೂ ಕಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ