/newsfirstlive-kannada/media/post_attachments/wp-content/uploads/2025/01/ISRO_News.jpg)
ಬೆಂಗಳೂರು: ಬಾಹ್ಯಾಕಾಶ ಲೋಕದಲ್ಲಿ ಭಾರತದ ಹೆಮ್ಮೆಯ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ, ಇಸ್ರೋ ತನ್ನ ಮಹತ್ವಾಕಾಂಕ್ಷೆಯ 100ನೇ ಮಿಷನ್ ಭಾಗವಾಗಿ ಎನ್ವಿಎಸ್-2 ರಾಕೆಟ್ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ 6.23ಕ್ಕೆ GSLV-F15 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಮೋಡ ಕವಿದ ಆಕಾಶದಲ್ಲಿ ಸುಮಾರು 19 ನಿಮಿಷಗಳ ಕಾಲ ಪ್ರಯಾಣಿಸಿದ ನಂತರ, ರಾಕೆಟ್ ತನ್ನ ಪೇಲೋಡ್ ಬಯಸಿದ ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ ಯಶಸ್ವಿಯಾಗಿ ಬೇರ್ಪಡಿಸಿತು.
ಆಗಸ್ಟ್ 10, 1979 ರಂದು SLV ಉಡಾವಣೆ ಆದ್ಮೇಲೆ 46 ವರ್ಷಗಳ ಬಳಿಕ ಇಸ್ರೋ ಈ ಸಾಧನೆ ಮಾಡಿದೆ. ಇಸ್ರೋ ನೂತನ ಅಧ್ಯಕ್ಷ ವಿ.ನಾರಾಯಣನ್ ನೇತೃತ್ವದಲ್ಲಿ ಮೊದಲ ಮಿಷನ್ ಇದಾಗಿದ್ದು ಹೊಸ ವರ್ಷದಲ್ಲಿ ಇಸ್ರೋದ ಯಶಸ್ವಿ ಕಾರ್ಯಾಚರಣೆ ಕೂಡ ಆಗಿದೆ.
NVS-02 ಉಪಗ್ರಹ ಅಂದ್ರೆ ಏನು?
ಭಾರತದ ಸ್ವತಂತ್ರ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ NAVIC ಎಂಬುದು ಏಳು ಉಪಗ್ರಹಗಳ ಸಂಯೋಜನೆಯಾಗಿದೆ. NAVIC ವ್ಯವಸ್ಥೆಯ ಅಡಿಯಲ್ಲಿ ಅಭಿವೃದ್ಧಿಪಡಿಸಿದ ಉಪಗ್ರಹ ಇದಾಗಿದೆ. ಹೊಸಪೀಳಿಗೆಯ ನ್ಯಾವಿಗೇಷನ್ ಉಪಗ್ರಹಗಳಲ್ಲಿ ಎರಡನೆಯದಾಗಿರುವ ಉಪಗ್ರಹ ಸರಿಸುಮಾರು 2,250 ಕೆ.ಜಿ ತೂಕವನ್ನು ಹೊಂದಿದೆ. ಇನ್ನು ಭಾರತದ ಭೂಪ್ರದೇಶವನ್ನು ಮೀರಿ ಕಾರ್ಯಾಚರಣೆಯ ಸಾಮರ್ಥ್ಯ ಹೊಂದಿದೆ. 1,500 ಕಿ,.ಮೀ ದೂರದವರೆಗೆ ನ್ಯಾವಿಗೇಷನ್ ಸೇವೆ ಒದಗಿಸಲಿದೆ, ತುಲನಾತ್ಮಕವಾಗಿ ನಿಖರವಾದ ನ್ಯಾವಿಗೇಷನ್ ಸೇವೆ ಒದಗಿಸುತ್ತದೆ, ಮಿಲಿಟರಿ, ಸಾರಿಗೆ, ಕೃಷಿಯಲ್ಲಿ ನಾಗರಿಕ ಬಳಕೆಗೆ ಪ್ರಮುಖ ಸಾಧನವಾಗಿದೆ.
ಇನ್ನು ಇದೇ ವೇಳೆ ನೂರನೇ ಉಪಗ್ರಹ ಉಡಾವಣೆ ಯಶಸ್ವಿಯಾದ ಬಗ್ಗೆ ಇಸ್ರೋ ಅಧ್ಯಕ್ಷರು ಮಾಹಿತಿ ನೀಡಿದ್ದು ಸಂಭ್ರಮ ಹಂಚಿಕೊಂಡಿದ್ದಾರೆ. ಈ ವರ್ಷದ 2025ರ ಮೊದಲ ಉಡಾವಣೆ ಯಶಸ್ವಿಯಾಗಿ ನೆರವೇರಿರುವುದನ್ನು ಇಸ್ರೋದ ಬಾಹ್ಯಾಕಾಶ ನಿಲ್ದಾಣದಿಂದ ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. GSLV-F15 ಉಡಾವಣಾ ವಾಹನ ನ್ಯಾವಿಗೇಷನ್ ಉಪಗ್ರಹ NVS-02 ಅನ್ನು ಉದ್ದೇಶಿತ ಕಕ್ಷೆಯಲ್ಲಿ ನಿಖರವಾಗಿ ಕಳುಹಿಸಲಾಗಿದೆ ಎಂದರು ಇಸ್ರೋ ಅಧ್ಯಕ್ಷ ಡಾ.ವಿ ನಾರಾಯಣನ್.
ಈ ಹಿಂದೆ 2023ರಲ್ಲಿ 2ನೇ ತಲೆಮಾರಿನ NVS-01 ಉಪಗ್ರಹ ಯಶಸ್ವಿಯಾಗಿತ್ತು. NVS-02 ಕೂಡ ಇದರ ಮುಂದುವರಿದ ಭಾಗವಾಗಿದ್ದು ಭೂಕಕ್ಷೆಯ ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಕಾರ್ಯಾಚರಣೆ ನಡೆಸಲಿದೆ. ಒಟ್ಟಾರೆ, 100ನೇ ಹೆಜ್ಜೆಯನ್ನು ಯಶಸ್ವಿಗೊಳಿಸಿರುವ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ದೃಢ ಹೆಜ್ಜೆಗಳಿಗೆ ಸಾಕ್ಷಿ ಒದಗಿಸಿದೆ. ಅಲ್ಲದೇ ಭವಿಷ್ಯದ ಯೋಜನೆಗಳಿಗೂ ಹೊಸ ಚೈತನ್ಯ ತುಂಬಿದೆ.
ಇದನ್ನೂ ಓದಿ:ಕೊಹ್ಲಿ ಅಲ್ಲ; ಆರ್ಸಿಬಿ ಟೀಮ್ಗೆ ಈ ಸ್ಟಾರ್ ಪ್ಲೇಯರ್ ಕ್ಯಾಪ್ಟನ್; ಸ್ಫೋಟಕ ಮಾಹಿತಿ ಬಹಿರಂಗ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್