/newsfirstlive-kannada/media/post_attachments/wp-content/uploads/2025/06/BBMP_AKSHAY.jpg)
ಬೆಂಗಳೂರು: ಬನಶಂಕರಿಯ 2ನೇ ಹಂತದ ಶ್ರೀನಿವಾಸ ನಗರದಲ್ಲಿ ಮರದ ಕೊಂಬೆ ಬಿದ್ದು ಬೈಕ್ ಸವಾರ ಅಕ್ಷಯ್ ಗಂಭೀರವಾಗಿ ಗಾಯಗೊಂಡು ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಇದಕ್ಕೆ ಸಂಬಂಧಿಸಿದಂತೆ 4 ಲಕ್ಷ ರೂಪಾಯಿ ಆಸ್ಪತ್ರೆಯ ಬಿಲ್ ಅನ್ನು ಬಿಬಿಎಂಪಿ ಅಧಿಕಾರಿಗಳು ಪಾವತಿ ಮಾಡಿದ್ದಾರೆ.
ಖಾಸಗಿ ಕಂಪನಿಯ ಉದ್ಯೋಗಿ ಆಗಿದ್ದ ಅಕ್ಷಯ್ (29) ಮೇಲೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಘಟನೆಯನ್ನು ಜೂ.15 ರಂದು ನ್ಯೂಸ್ ಫಸ್ಟ್ ಎಕ್ಸ್ಕ್ಲೂಸಿವ್ ವರದಿ ಪ್ರಕಟಿಸಿತ್ತು. ಗಾಯಾಳು ಕಡೆಯವರು ಆಸ್ಪತ್ರೆಯ ಖರ್ಚು ಪಾವತಿ ಮಾಡದ ಪರಿಸ್ಥಿತಿಯಲ್ಲಿದ್ದರು. ಈ ವೇಳೆ ಬಿಬಿಎಂಪಿಯ ನಡೆಯ ಬಗ್ಗೆ ನ್ಯೂಸ್ ಫಸ್ಟ್ನಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು.
ಇದನ್ನೂ ಓದಿ: ADGP ಜಯರಾಂ ಬಂಧನಕ್ಕೆ ಟ್ವಿಸ್ಟ್.. ಹೈಕೋರ್ಟ್ ಆದೇಶವೇ ಶಾಕಿಂಗ್ ಎಂದ ಸುಪ್ರೀಂ ಕೋರ್ಟ್..!
ಆಸ್ಪತ್ರೆಗೆ ನೀಡಬೇಕಾದ ಹಣವನ್ನು ಬಿಬಿಎಂಪಿ ಪಾವತಿ ಮಾಡದ ಕುರಿತು ಸತತವಾಗಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಇಂದು ಬೆಳಗ್ಗೆ ಕೂಡ ಅಕ್ಷಯ್ ಸಹೋದರ ಬೆನಕರಾಜ್ ಅವರು ಅಳಲು ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ಬಿಬಿಎಂಪಿ ಕೊನೆಗೂ ಆಸ್ಪತ್ರೆಯ ಬಿಲ್ ಪಾವತಿ ಮಾಡಿದೆ. ಒಟ್ಟು 4,06,000 (ನಾಲ್ಕು ಲಕ್ಷದ ಆರು ಸಾವಿರ) ರೂಪಾಯಿ ಬಿಲ್ ಪಾವತಿ ಮಾಡಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಪೊಲೊ ಆಸ್ಪತ್ರೆಯಲ್ಲಿ ಹಣ ಪಾವತಿಸಲಾಗಿದೆ.
ಘಟನೆ ಹಿನ್ನೆಲೆ
ಅಕ್ಷಯ್ ಬೈಕ್ನಲ್ಲಿ ಹೋಗುವಾಗ ಶ್ರೀನಿವಾಸ ನಗರದ ಬ್ರಹ್ಮ ಚೈತನ್ಯ ಮಂದಿರದ ಬಳಿ ಒಣಗಿದ ಮರದ ಕೊಂಬೆ ಅಕ್ಷಯ್ ಮೇಲೆ ಬಿದ್ದಿತ್ತು. ಇದರಿಂದ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು.
ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ ಅವರನ್ನು ಅಪೊಲೊ ಆಸ್ಪತ್ರೆಗೆ ದಾಖಲು ಮಾಡಿದ್ದರು. ಇವರ ಚಿಕಿತ್ಸಾ ವೆಚ್ಚ 4 ಲಕ್ಷ ರೂಪಾಯಿಗಳು ಆಗಿದ್ದವು. ಇವರ ತಂದೆ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಖರ್ಚು ಹಾಗೂ ತಂದೆಯ ಚಿಕಿತ್ಸೆ ಎಲ್ಲ ಅಕ್ಷಯ್ ನೋಡಿಕೊಳ್ಳುತ್ತಿದ್ದರು. ಆದರೆ ಈಗ ಅಕ್ಷಯ್ ಅವರೇ ಆಸ್ಪತ್ರೆ ಪಾಲಾಗಿದ್ದರಿಂದ ಮನೆಯಲ್ಲಿ ಇನ್ನಷ್ಟು ಸಂಕಷ್ಟ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ