/newsfirstlive-kannada/media/post_attachments/wp-content/uploads/2024/12/Gujarat-Girl-Mistery-Love.jpg)
ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ.. ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟಂಗೆ ಕತ್ತಿಗೆ. ಈ ಹಾಡಿನ ಸಾಲು ಈ ಹುಡುಗಿ ಬಾಳಲ್ಲಿ ಅಕ್ಷರಶಃ ನಿಜವಾಗಿದೆ. ಓ ಗೆಳೆಯ ದಯವಿಟ್ಟು ನನ್ನ ಕ್ಷಮಿಸು ಬಿಡು. ನೀನು ಮದುವೆಯಾಗಿ ಸಂತೋಷವಾಗಿ ಇರು ಅನ್ನೋ ಮೆಸೇಜ್ ಮಾಡಿದ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ.
ಈಕೆಯ ಹೆಸರು ರಾಧಾ ಠಾಕೋರ್. 27 ವರ್ಷ ವಯಸ್ಸು. ಗುಜರಾತ್‌ನ ಬನಾಸ್ಕಂತ ಜಿಲ್ಲೆಯಲ್ಲಿ ತನ್ನ ತಂಗಿ ಜೊತೆ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ರಾತ್ರಿ ಮನೆಯವರ ಜೊತೆ ಊಟ ಮಾಡಿ ರೂಮ್‌ಗೆ ಹೋದವಳು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾಳೆ. ರಾಧಾ ಮೊಬೈಲ್ ಚೆಕ್ ಮಾಡಿದ ಮನೆಯವರು ಬೆಚ್ಚಿ ಬಿದ್ದಿದ್ದಾರೆ.
ಕೆಲ ವರ್ಷಗಳ ಹಿಂದೆ ರಾಧಾ ಠಾಕೋರ್ ಗಂಡನಿಂದ ಬೇರೆಯಾಗಿ ತಂಗಿ ಅಲ್ಕಾ ಠಾಕೋರ್ ಮನೆಗೆ ಬಂದಿದ್ದಳು. ಅಲ್ಕಾ ಠಾಕೋರ್ ಬನಾಸ್ಕಂತ ಜಿಲ್ಲೆಯ ಪಾಲಂಪುರ್‌ನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು.
ಕ್ಷಮಿಸಿಬಿಡು ಇನಿಯನೇ,
ಕಾರಣ ಹೇಳದೆಯೇ ದುಃಖದ ರೊಟ್ಟಿಗೆ ಕೈ ಹಾಕಿದ್ದೀನಿ. ಕಣ್ಣೀರಿಟ್ಟರೆ ನಾನು ಖಾಲಿ ಆಗ್ತೀನಿ. ನಗುತ್ತಿದ್ದರೆ ನಿನ್ನೆದೆಯಲ್ಲಿ ಅರಳುತ್ತಲೇ ಇರ್ತೀನಿ. ಅಂದುಕೊಂಡಂತೆಯೇ ಜೀವನ ಆಸ್ವಾದಿಸು, ಅದುವೇ ನಿಜವಾದ ಪ್ರೇಮ. ತಪ್ಪದೇ ಮದುವೆ ಆಗಬೇಕು. ನಿನಗೆ ಕಾರಣವನ್ನೇ ಹೇಳದೇ ಹೋಗ್ತಿದ್ದೀನಿ ಅಂತ ಅಂದ್ಕೋಬೇಡ. ನೆನಪುಗಳ ಜಾತ್ರೆಯಲ್ಲಿ ಅನಾಥನಾಗಬೇಡ. ಹೂ ಕನಸ ಜೋಕಾಲಿಯಲ್ಲಿ ಜೀಕುತ್ತಾ ನಗುನಗುತ್ತಿರು. ಕೈ ಜೋಡಿಸಿ ಕ್ಷಮೆ ಕೇಳ್ತೀನಿ. ನಿನ್ನ ಸಂತಸದ ಕ್ಷಣಗಳಷ್ಟೇ ನನ್ನ ಆತ್ಮಕ್ಕೆ ಶಾಂತಿ ನೀಡುತ್ತವೆ. ನಿನ್ನ ಬಿಟ್ಟು ಎಲ್ಲವೂ, ಎಲ್ಲರೂ ನನ್ನನ್ನ ಸೋಲಿಸಿದ್ದಾರೆ. ಗೆಲ್ಲೋಕಾಗುತ್ತೆ ಅನ್ನೋ ನಂಬಿಕೆ ನನ್ನಲ್ಲಿ ಉಳಿದಿಲ್ಲ. ದಯಮಾಡಿ ಕ್ಷಮಿಸಿಬಿಡು.
- ಇಂತಿ ನಿನ್ನ ಪ್ರೀತಿಯ ರಾಧಾ
ಇದನ್ನೂ ಓದಿ: ಜೈಲಿನಿಂದ ರಿಲೀಸಾದ ಕೂಡಲೇ ದರ್ಶನ್ ಹೆಸರಲ್ಲಿ ಅರ್ಚನೆ; ಕುಲದೇವರ ಬಳಿ ಪವಿತ್ರಾ ಕೇಳಿಕೊಂಡಿದ್ದು ಇಷ್ಟು!
ಒಲ್ಲದ ಮದುವೆ, ಮೊದಲ ಪ್ರೀತಿ ಸತ್ತಿರಲಿಲ್ಲ!
ರಾಧಾ ಠಾಕೂರ್. 27 ವರ್ಷ ಪ್ರಾಯದ ಚೆಂದದ ಹುಡುಗಿ. ಒಲ್ಲದ ಮನಸಿನಿಂದಲೇ ಮದುವೆ ಆಗಿದ್ಳು. ಪೋಷಕರ ಒತ್ತಾಯಕ್ಕೆ ವಾರವೂ ಸಂಸಾರ ಮಾಡಲಿಲ್ಲ. ವಿಚ್ಛೇದನ ತೆಗೆದುಕೊಂಡು ತಂಗಿಯೊಂದಿಗೆ ಪ್ರತ್ಯೇಕವಾಗಿ ವಾಸವಿದ್ದಳು. ಆದರೆ ಬದುಕಿನ ಮೊದಲ ಪ್ರೇಮ ಸತ್ತಿರಲಿಲ್ಲ. ಅದು ಜೀವಂತವಾಗಿಯೇ ಇತ್ತು. ಆ ಪ್ರೇಮಿ ಕೂಡ ರಾಧಾಗಾಗಿಯೇ ಕಾಯುತ್ತಿದ್ದ. ಆರು ವರ್ಷಗಳು ಉರುಳಿದ್ರೂ ಮೊದಲ ಪ್ರೀತಿ ಹೊಸ ಆಯಾಮ ಪಡೆದುಕೊಳ್ಳುತ್ತದೆ ಅನ್ನೋ ಖುಷಿಯಲ್ಲಿದ್ದಳು. ಆದರೆ, ವಿಧಿ ರಾಧಾಳಿಂದ ಕೊನೆಯ ಪ್ರೇಮ ಪತ್ರ ಬರೆಸಿದೆ. ಭಾನುವಾರ ರಾತ್ರಿ ರಾಧಾ ಠಾಕೂರ್ ಕೊನೆಯ ಪ್ರೇಮ ಪತ್ರ ಬರೆದು ಕ್ಷಮೆ ಕೇಳಿ ಕಣ್ಮುಚ್ಚಿದ್ದಾಳೆ.
ಪೊಲೀಸರನ್ನು ಕಂಗೆಡಿಸುತ್ತಿದೆ ಆ ಆಡಿಯೋ!
ಗುಜರಾತ್ ರಾಜ್ಯದಲ್ಲಿ ಇದೀಗ ಇದೇ ಮಿಸ್ಟರಿ ಲವ್ ಸ್ಟೋರಿ ಸಂಚಲನ ಸೃಷ್ಟಿಸುತ್ತಿದೆ. ಪಾಲನಪುರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ರಾಧಾ ಠಾಕೂರ್ ನಿಗೂಢವಾಗಿ ಉಸಿರು ಚೆಲ್ಲಿದ್ದಾಳೆ. ತಂಗಿಯೊಂದಿಗೆ ರಾತ್ರಿ ಊಟ ಮಾಡಿ ಮಲಗಿದವಳು ಚಿರನಿದ್ರೆಗೆ ಜಾರಿದ್ದಾಳೆ. ತೀರಾ ಅಕ್ಕನ ಮೊಬೈಲ್ ಚೆಕ್ ಮಾಡಿ ನೋಡಿದಾಗ ಅನಾಮಿಕ ಪ್ರೇಮಿಯೊಂದಿಗೆ ಮಾತಾಡಿದ ಆಡಿಯೋಗಳಷ್ಟೇ ಪ್ರೀತಿಯ ಸಾಕ್ಷಿ ನುಡಿಯುತ್ತಿವೆ. ಪಾಲನಪುರ ಪೊಲೀಸರು ಇದೀಗ ಅಜ್ಞಾತ ಪ್ರೇಮಿ ಹುಡುಕಲು ಮುಂದಾಗಿದ್ದಾರೆ. ಸೋದರಿ ಅಲ್ಕಾ ಠಾಕೋರ್ ದೂರು ನೀಡಿದ್ದು ಪೊಲೀಸರು ಪ್ರೇಮ ಪತ್ರ ಹಾಗೂ ಪ್ರೇಮ ಸಂಭಾಷಣೆ ಇಟ್ಕೊಂಡು ಅಜ್ಞಾತ ಪ್ರೇಮಿಯ ಹುಡುಕಾಟ ಆರಂಭಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ