/newsfirstlive-kannada/media/post_attachments/wp-content/uploads/2025/05/mng-rehaman.jpg)
ಮಂಗಳೂರು: ಕಡಲ ನಗರಿ ಮತ್ತೆ ಉದ್ವಿಘ್ನಗೊಂಡಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಬರ್ಬರ ಹತ್ಯೆಯಿಂದ ಬೂದಿ ಮುಚ್ಚಿದ ಕೆಂಡವಾಗಿದ್ದ ಕರಾವಳಿ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಅಬ್ದುಲ್ ರಹಿಮಾನ್ ಹತ್ಯೆ ಬೆನ್ನಲ್ಲೇ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಕರಾವಳಿಯ ಮುಸ್ಲಿಂ ಮುಖಂಡರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.
ಪೂರ್ವದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಹಿಮಾನ್ ಹತ್ಯೆ ಕೇಸ್ ಬಗ್ಗೆ ತನಿಖೆ ನಡೆಸಲು 5 ತಂಡ ರಚಿಸಿದ್ದಾರೆ ಎಸ್ಪಿ ಯತೀಶ್. ಗಾಯಗೊಂಡ ಕಲಂದರ್ ಶಾಫಿ ನೀಡಿದ ಮಾಹಿತಿ ಅನ್ವಯದ ಮೇಲೆ ತನಿಖೆ ಮುಂದುವರೆದಿದೆ. ಅಬ್ದುಲ್ ರಹೀಂ ಮೇಲೆ ದಾಳಿ ನಡೆಸಿದ್ದು ಒಟ್ಟು 6 ಜನರ ಗ್ಯಾಂಗ್. ಕೊಳ್ತಮಜಲಿನ ಬಾರಲ್ಲಿ ಮದ್ಯ ಸೇವಿಸಿ ದುಷ್ಕರ್ಮಿಗಳು ಬಂದಿದ್ದರು. ಸದ್ಯ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನ ಲಾಕ್ ಮಾಡಿರೋ ಪೊಲೀಸರು ಇನ್ನುಳಿದ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಈ ಆಟಗಾರನ ಕೈಯಲ್ಲಿದೆ RCB ಫೈನಲ್ ಭವಿಷ್ಯ.. ಇವತ್ತು ಸೆಂಟರ್ ಆಫ್ ಅಟ್ರಾಕ್ಷನ್ ಇವರೇ..!
ಒಂದು ಕಡೆ ತನ್ನ ಮಗನನ್ನು ಕೊಂದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಅಬ್ದುಲ್ ರಹಿಮಾನ್ ತಂದೆ ಆಗ್ರಹಿಸಿದ್ದಾರೆ. ಈ ಬಗ್ಗೆ ಕೊಳ್ತಮಜಲಿನ ಮನೆಯಲ್ಲಿ ಮಾತನಾಡಿದ ಅಬ್ದುಲ್ ಖಾದರ್, ಅನ್ಯಾಯವಾಗಿ ನನ್ನ ಮಗನ ಹತ್ಯೆ ಮಾಡಿದ್ದಾರೆ. ಯಾರು ಕೊಂದಿದ್ದಾರೋ ಅವರಿಗೆ ಸರಿಯಾದ ಶಿಕ್ಷೆ ಆಗಬೇಕು. ನಮ್ಮ ಮಗನೇ ಮನೆಗೆ ಆಧಾರವಾಗಿದ್ದ. ನನ್ನ ಮಗನ ಸಾವಿಗೆ ಪರಿಹಾರ ಕೊಡಬೇಕು ಅಂತ ಆಗ್ರಹಿಸಿದ್ದಾರೆ.
ಮತ್ತೊಂದು ಕಡೆ ಅಬ್ದುಲ್ ರಹಿಮಾನ್ ಹತ್ಯೆ ಬೆನ್ನಲ್ಲೇ ಮುಸ್ಲಿಂ ಮುಖಂಡರು ಕಾಂಗ್ರೆಸ್ಗೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಅಲ್ಪಸಂಖ್ಯಾತರ ಘಟಕಕ್ಕೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಅಶ್ರಫ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲದೇ ಮುಸ್ಲಿಂ ಮುಖಂಡರು ಬೇರೆ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಶ್ರಫ್, ಕೆಲದಿನಗಳ ಹಿಂದೆ ನಡೆದ ಗುಂಪು ಹಲ್ಲೆ ಹತ್ಯೆ ಮತ್ತು ಅಬ್ದುಲ್ ರಹೀಂ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇಲ್ಲಿ ಶಾಂತಿ ನೆಲೆಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಮುಸ್ಲಿಮರು ಇಲ್ಲಿ ಆತಂಕದಲ್ಲಿದ್ದಾರೆ. ಸದ್ಯದಲ್ಲೇ ಸಾಮೂಹಿಕ ರಾಜೀನಾಮೆಗೆ ನಿರ್ಧಾರ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಅಬ್ದುಲ್ ರಹಿಮಾನ್ನ ಬರ್ಬರ ಹತ್ಯೆ.. ಸದ್ಯ ಹೇಗಿದೆ ಮಂಗಳೂರು ಪರಿಸ್ಥಿತಿ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ