/newsfirstlive-kannada/media/post_attachments/wp-content/uploads/2025/01/SHIVANNA_GEETHA-1.jpg)
ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಎಲ್ಲ ಯಶಸ್ವಿಯಾಗಿದ್ದು ವೈದ್ಯರಿಂದ ಎಲ್ಲ ಟೆಸ್ಟ್​ಗಳು ನೆಗೆಟಿವ್ ಆಗಿ ಬಂದಿವೆ. ಶಸ್ತ್ರಚಿಕಿತ್ಸೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಶಿವರಾಜ್​ ಕುಮಾರ್ ಅವರು ಆರೋಗ್ಯವಾಗಿದ್ದು ಈ ಬಗ್ಗೆ ಸ್ವತಃ ತಾವೇ ಮಾತನಾಡಿದ್ದಾರೆ.
ಟೆನ್ಷನ್ ಜಾಸ್ತಿ ಆಗಿತ್ತು..
ಅಮೆರಿಕದಿಂದ ಶಿವರಾಜ್​ಕುಮಾರ್ ಅವರು ಮಾತನಾಡಿದ್ದು, ಕನ್ನಡಿಗರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಮಾತನಾಡಬೇಕಾದರೆ ನನಗೆ ಭಯವಾಗುತ್ತದೆ. ಏಕೆಂದರೆ ಮಾತನಾಡುವಾಗ ಭಾವುಕನಾಗಿ ಬಿಡುತ್ತೇನೆ ಎಂದು ಅನಿಸುತ್ತೆ. ಅಮೆರಿಕಕ್ಕೆ ಹೊರಡುವ ಸಮಯದಲ್ಲಿ ಟೆನ್ಷನ್ ಜಾಸ್ತಿ ಆಗಿತ್ತು. ಆದರೆ ಇಲ್ಲಿಗೆ ಬಂದ ಮೇಲೆ ಎಲ್ಲರೂ ನನ್ನನ್ನು ಮಗು ರೀತಿ ನೋಡಿಕೊಂಡಿದ್ದಾರೆ. ಅವರಿಗೆಲ್ಲಾ ಧನ್ಯವಾದಗಳು ಎಂದು ಹೇಳಿದ್ದಾರೆ.
ಎಲ್ಲರೂ ನನಗೆ ಕಿಡ್ನಿ ಟ್ರಾನ್ಸ್​ಪ್ಲಾಂಟ್ ಆಗಿದೆ ಅನ್ಕೊಂಡಿದ್ದಾರೆ. ಆದರೆ ದೇಹದ ಒಳಗಿನ ಯರೋನರಿ ಬ್ಲಾಡರ್ ತೆಗೆದು ಹೊಸ ಬ್ಲಾಡರ್ ಹಾಕಿದ್ದಾರೆ. ಯಾರು ಬೇರೆ ಏನೋ ತಿಳಿದುಕೊಳ್ಳುವುದು ಬೇಡ. ನಾವು ಡಿಟೇಲ್​ ಆಗಿ ಹೇಳುವುದಕ್ಕೆ ಹೋದರೆ ಎಲ್ಲರು ಗಾಬರಿ ಆಗಿಬಿಡುತ್ತಾರೆ. ಗಾಬರಿ ಏನಿದ್ದರೂ ನಮಗೆ ಇರಲಿ, ನಿಮಗೆ ಒಳ್ಳೆಯ ಮಾಹಿತಿ ಕೊಡಬೇಕು ಅಷ್ಟೇ. ಎಲ್ಲದರಲ್ಲೂ ನೀವು ಜೊತೆಗಿದ್ದೀರಿ ಎನ್ನುವುದೇ ನಮಗೆ ದೊಡ್ಡ ಶಕ್ತಿ ಎಂದು ಹೇಳಿದ್ದಾರೆ.
ವೈದ್ಯರು ಮೊದಲು ಒಂದು ತಿಂಗಳು ಅಥವಾ ಸ್ಪಲ್ಪ ದಿನ ಎಲ್ಲನೂ ಪಾಲನೆ ಮಾಡಿ. ಆ ಮೇಲೆ ಬೇಕಾದರೆ ನೀವು ಮೊದಲಿನಂತೆ ಏನು ಬೇಕಾದರೂ ಮಾಡಿ ಎಂದಿದ್ದಾರೆ. ಐ ವಿಲ್​ ಬಿ ಬ್ಯಾಕ್. ಶಿವಣ್ಣ ಮೊದಲು ಹೇಗಿದ್ದನೋ ಅದಕ್ಕಿಂತ ಡಬಲ್ ಪವರ್ ಇದ್ದೇ ಇರುತ್ತೆ. ಡ್ಯಾನ್ಸ್​, ಫೈಟ್, ಲುಕ್​ ಎಲ್ಲನೂ ಮತ್ತೆ ನೀವು ನೋಡುತ್ತೀರಾ. ನಿಮ್ಮ ಆಶೀರ್ವಾದ ಇರುವವರೆಗೂ ನಾನು ಖಂಡಿತಾ ಇದ್ದೆ ಇರುತ್ತೇನೆ.
ಇದೇ ವೇಳೆ ಅಭಿಮಾನಿ ದೇವರುಗಳಿಗೆ, ಕೋ ಆರ್ಟಿಸ್ಟ್​, ಸ್ನೇಹಿತರಿಗೆ, ಸಂಬಂಧಿಕರಿಗೆ, ತಮ್ಮ ಆರೋಗ್ಯಕ್ಕೆ ಪ್ರಾರ್ಥನೆ ಮಾಡಿದವರಿಗೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ, ಅಮೆರಿಕದಲ್ಲಿ ತಮ್ಮನ್ನು ನೋಡಿಕೊಂಡ ಡಾಕ್ಟರ್ಸ್​, ಮಗಳು, ಹೆಂಡತಿ, ಸಂಬಂಧಿಗಳು, ಎಲ್ಲರಿಗೂ ಫ್ಲೈಯಿಂಗ್ ಕಿಸ್ ಕೊಟ್ಟು ಲವ್ ಯು ಆಲ್, ಹ್ಯಾಪಿ ನ್ಯೂ ಇಯರ್ ಎಂದು ಶಿವಣ್ಣ ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ