/newsfirstlive-kannada/media/post_attachments/wp-content/uploads/2024/05/vidya7.jpg)
ಮೈಸೂರು: ನಟಿ ಹಾಗೂ ಕಾಂಗ್ರೆಸ್ ಕಾರ್ಯಕರ್ತೆ ವಿದ್ಯಾ ಹತ್ಯೆ ರಹಸ್ಯ ಬಯಲಾಗಿದೆ. ಕೌಟುಂಬಿಕ ಕಲಹಕ್ಕೆ ಪತಿಯಿಂದಲೇ ಹತ್ಯೆ ನಡೆದಿದೆ ಎನ್ನಲಾಗಿದ್ದರೂ ನಿಖರ ಕಾರಣ ತಿಳಿದು ಬಂದಿರಲಿಲ್ಲ. ಇದೀಗ ಪೊಲೀಸರ ತನಿಖೆಯಲ್ಲಿ ಕೊಲೆಯ ಮರ್ಮ ಬಯಲಾಗಿದೆ. ಕೊಲೆಗೆ ಕಾರಣವಾಗಿದ್ದು ಮೊಬೈಲ್ ಕಿತ್ತಾಟ ಅನ್ನೋದು ದೃಢಪಟ್ಟಿದೆ.
ಮೊಬೈಲ್ಗಾಗಿ ಜಗಳ.. ಪತ್ನಿ ಕೊಲೆಯಲ್ಲಿ ಅಂತ್ಯ
ಮೈಸೂರು ಜಿಲ್ಲೆಯ ಬನ್ನೂರಿನ ತುರಗನೂರು ಗ್ರಾಮದಲ್ಲಿ 3 ದಿನಗಳ ನಡೆದಿದ್ದ ನಟಿ ವಿದ್ಯಾ ಭೀಕರ ಹತ್ಯೆ ರಹಸ್ಯ ಬಯಲಾಗಿದೆ. ವಿದ್ಯಾ ಪತಿಯೇ ಆಕೆಯನ್ನ ಭೀಕರವಾಗಿ ಹತ್ಯೆ ಮಾಡಿಬಿಟ್ಟಿದ್ದ. ಕೌಟುಂಬಿಕ ಕಲಹಕ್ಕೆ ಹತ್ಯೆ ನಡೆದಿದೆ ಅಂತ ಮೇಲ್ನೋಟಕ್ಕೆ ಕಂಡುಬಂದಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ಹತ್ಯೆ ರಹಸ್ಯವನ್ನು ಭೇದಿಸಿದ್ದಾರೆ.
ಮೊಬೈಲ್ ಕಿತ್ತುಕೊಂಡಿದ್ದೇ ನಟಿ ವಿದ್ಯಾ ಕೊಲೆಗೆ ಕಾರಣ ಆಗಿದೆ. ಜಗಳದ ನಡುವೆ ಮೊಬೈಲ್ನಲ್ಲಿ ದೃಶ್ಯವನ್ನು ರೆಕಾರ್ಡ್ ಮಾಡಿಕೊಳ್ತಿದ್ದ ಪತಿ ಕೈಯಿಂದ ಮೊಬೈಲ್ ಕಿತ್ತುಕೊಂಡಿದ್ದ ವಿದ್ಯಾ ಆವಾಜ್ ಹಾಕಿದ್ದಾರೆ. ಇದರಿಂದ ಸಿಟ್ಟಾಗಿದ್ದ ಪತಿ ನಂದೀಶ್ ಮೊಬೈಲ್ ಕೊಡುವಂತೆ ತಾಕೀತು ಮಾಡಿದ್ದ. ಬಳಿಕ ಕಬ್ಬಿಣದ ರಾಡ್ ತೆಗೆದು ಆಕೆಯ ತಲೆಗೆ ಹೊಡೆದಿದ್ದ, ತಲೆಗೆ ಬಲವಾಗಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು ಅಂತ ಪೊಲೀಸರ ವಿಚಾರಣೆಯಲ್ಲಿ ವಿದ್ಯಾ ಪತಿ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ: ಅಪಘಾತಕ್ಕೆ ಕ್ರೆಟಾ ಕಾರು ಪುಡಿಪುಡಿ.. 15 ನಿಮಿಷ ಲಾಕ್ ಆಗಿ ತಾಯಿ-ಮಗಳು ಕಿರುಚಾಡಿದ ಹೃದಯ ವಿದ್ರಾವಕ Video
ವಿದ್ಯಾ ಪತಿ ನಂದೀಶ್ಗೆ 14 ದಿನ ನ್ಯಾಯಾಂಗ ಬಂಧನ!
ಪತ್ನಿ ವಿದ್ಯಾ ಹತ್ಯೆ ಮಾಡಿದ್ದ ನಂದೀಶ್ಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ವಿದ್ಯಾ ಮೈಸೂರಿನ ಶ್ರೀರಾಂಪುರ ನಿವಾಸಿಯಾಗಿದ್ದು, ಬನ್ನೂರಿನ ತುರಗನೂರಿನ ನಂದೀಶ್ ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತೆಯಾಗಿದ್ದ ವಿದ್ಯಾ
ಇನ್ನು, ಮೃತ ವಿದ್ಯಾ ಕಾಂಗ್ರೆಸ್ ಪಕ್ಷದ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಇತ್ತೀಚೆಗೆ ಕಾಂಗ್ರೆಸ್ ನಾಯಕರು ವಿದ್ಯಾಗೆ ಮತ್ತೊಂದು ಗುರುತರ ಜವಾಬ್ದಾರಿ ನೀಡಲು ಮುಂದಾಗಿದ್ದರೆಂದು ತಿಳಿದುಬಂದಿದೆ. ಅಲ್ಲದೆ ವಿದ್ಯಾ ಕನ್ನಡದಲ್ಲಿ ಭಜರಂಗಿ, ಜೈಮಾರುತಿ 800, ಚಿರಂಜೀವಿ ಸರ್ಜಾ ಅಭಿನಯದ ಅಜಿತ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅದೇನೇ ಇರಲಿ, ಏನೇ ಜಗಳ ಆಗಿರಲಿ, ಕೂತು ಬಗೆಹರಿಸಿಕೊಳ್ಳಬಹುದಿತ್ತು. ಕೋಪದ ಕೈಗೆ ಬುದ್ದಿ ಕೊಟ್ಟ ಪರಿಣಾಮ ಒಂದು ಜೀವ ಬಲಿಯಾಗಿದೆ. ಒಂದು ಕ್ಷಣದ ಕೋಪ ನಂದೀಶ್ ಜೈಲುಕಂಬಿ ಎಣಿಸುವಂತಾಗಿದೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ ಇಬ್ಬರು ಮಕ್ಕಳು ಅನಾಥವಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ