/newsfirstlive-kannada/media/post_attachments/wp-content/uploads/2023/08/CHEETA-1.jpg)
1952ರ ನಂತರ ಭಾರತದಲ್ಲಿ ಅಳಿವಿನಂಚಿನಲ್ಲಿರುವ ಚೀತಾ ಸಂತತಿಗಳ ಪುನರುಜ್ಜೀವನಗೊಳಿಸಲು ಬಹಳಷ್ಟು ಪ್ರಯತ್ನ ನಡೆದಿದೆ. ಆ ದಿಸೆಯಲ್ಲಿ ಯೋಜನೆಯ ಭಾಗವಾಗಿ ಭಾರತಕ್ಕೆ ಚೀತಾಗಳನ್ನು ತರಲಾಗಿತ್ತು. ಸದ್ಯ ಅವುಗಳನ್ನು ಮಧ್ಯಪ್ರದೇಶದ ಅಂತಾರಾಷ್ಟ್ರೀಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇರಿಸಲಾಗಿದ್ದು ಇಂದು ಅವುಗಳಲ್ಲಿ ಅಗ್ನಿ, ವಾಯು ಎಂಬ ಎರಡು ಚೀತಾಗಳನ್ನು ಕಾಡಿಗೆ ಬಿಡಲಾಗುತ್ತಿದೆ.
ಕುನೋ ಉದ್ಯಾನವನದಲ್ಲಿ 24 ಚೀತಾಗಳಿದ್ದು ಅವುಗಳಲ್ಲಿ ಅರ್ಧದಷ್ಟು ಮರಿಗಳಿವೆ. ಚೀತಾಗಳ ಸರಣಿ ಸಾವಿನ ಬಳಿಕ ಸದ್ಯ ಇಂದು ಬಿಡಲಾಗುತ್ತಿರುವ ಎರಡು ಗಂಡು ಚೀತಾಗಳ ಮೇಲೆ ಅಧಿಕಾರಿಗಳು ನಿಗಾ ಇಡಲಿದ್ದಾರೆ. ಇದರಿಂದ ಚೀತಾಗಳು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡರೆ ಹಂತ ಹಂತವಾಗಿ ಉಳಿದ ಚೀತಾಗಳನ್ನು ಬಿಡುವ ಯೋಜನೆ ಇದೆ.
ವನ್ಯಜೀವಿ ತಜ್ಞರ ಪ್ರಕಾರ ಚೀತಾಗೆ 1000 ಚದರ ಕಿಮೀ ವಿಸ್ತೀರ್ಣ ಅರಣ್ಯಪ್ರದೇಶ ಬೇಕು. ಕುನೋ ಅರಣ್ಯಪ್ರದೇಶವು 1200 ಚದರ ಕಿಮೀ ಇದ್ದು ಇದರಲ್ಲಿ 748 ಚದರ ಕಿಮೀ ಮುಖ್ಯ ವಲಯದಲ್ಲಿ ಮತ್ತು 487 ಚದರ ಕಿಮೀ ಬಫರ್ ಝೋನ್ನಲ್ಲಿದೆ. ಮಾರ್ಚ್ 1, 2023ರಂದು ಮೊದಲು ಪವನ್ ಮತ್ತು ಆಶಾ ಚೀತಾಗಳನ್ನು ಅರಣ್ಯಕ್ಕೆ ಬಿಡಲಾಗಿತ್ತು. ಕೆಲವು ದಿನಗಳ ನಂತರ ಗೌರವ್, ಶೌರ್ಯಗಳನ್ನು ಬಿಡಲಾಗಿತ್ತು.
ಈ ಸಮಯದಲ್ಲಿ ಚೀತಾಗಳು ರಾಜಸ್ಥಾನ, ಮಧ್ಯಪ್ರದೇಶದ ಇತರೆ ಜಿಲ್ಲೆಗಳಿಗೂ ಪ್ರವೇಶ ಮಾಡಿದ್ದವು. ಮತ್ತೆ ಅವುಗಳನ್ನು ಕುನೋ ಅರಣ್ಯಕ್ಕೆ ಕರೆತರಲಾಗಿತ್ತು. ಆ ನಂತರ ಚೀತಾಗಳ ಸರಣಿ ಸಾವಿನ ಬಳಿಕ ಅರಣ್ಯಕ್ಕೆ ಬಿಡುವ ನಿರ್ಧಾರವನ್ನು ತಾತ್ಕಾಲಿಕ ಮುಂದೂಡಲಾಗಿತ್ತು. ಚೀತಾಗಳನ್ನು ಒಂದು ಬಾರಿ ಅರಣ್ಯಕ್ಕೆ ಬಿಟ್ಟರೆ ಅವುಗಳ ಚಲನವಲನ, ಆಹಾರ, ಮೇಲ್ವಿಚಾರಣೆಯ ಜವಾಬ್ದಾರಿ ಅರಣ್ಯ ವಿಭಾಗದ್ದೇ ಆಗಿರುತ್ತದೆ.
ಇಂದು ಅರಣ್ಯಕ್ಕೆ ಬಿಡಲಾಗುತ್ತಿರುವ ಅಗ್ನಿ, ವಾಯು ಬಿಡುಗಡೆ ಒಂದು ದೊಡ್ಡ ಮೈಲಿಗಲ್ಲು ಆಗಿದ್ದರೂ ಯೋಜನೆಯು ಈ ಹಿಂದೆ ಬಿಡಲಾಗಿದ್ದ ಚಿರತೆಗಳ ಸಾವಿನ ಸವಾಲುಗಳನ್ನೂ ಎದುರಿಸಬೇಕಿದೆ. ಈ ಚೀತಾಗಳು 12 ವರ್ಷಗಳವರೆಗೆ ಬದುಕುತ್ತವೆ. ಈಗ ಅವುಗಳನ್ನು ಅರಣ್ಯ ಬಿಡದಿದ್ದರೆ ಅವು ವಯಸ್ಸಾಗುತ್ತವೆ, ಸಾಯುತ್ತವೆ ಅಂತಾರೆ ಚೀತಾ ಯೋಜನೆಯ ಪ್ರಧಾನ ವಿಜ್ಞಾನಿ ವನ್ಯಜೀವಿ ಜೀವ ಶಾಸ್ತ್ರಜ್ಞ ಡಾ.ಯದ್ವೇಂದ್ರದೇವ್ ವಿ ಝಾಲಾ.
ಚೀತಾಗಳನ್ನು ಕಾಡಿಗೆ ಬಿಡುವ ಮುನ್ನ ಪೂರ್ವ ಸಿದ್ಧತೆ ಪರಿಶೀಲಿಸಲು ಸ್ಟೀರಿಂಗ್ ಕಮಿಟಿ ರಚಿಸಲಾಗಿದೆ. ಅಧ್ಯಕ್ಷ ರಾಜೇಶ್ ಗೋಪಾಲ್ ನೇತೃತ್ವದ ಸಮಿತಿ ಡಿ.3ರಂದು ಕುನೋಗೆ ಭೇಟಿ ನೀಡಿ ಚೀತಾಗಳ ಬಿಡುಗಡೆಗೆ ಅಂತಿಮ ಸಿದ್ದತೆ ಪರಿಶೀಲಿಸಿದೆ.
ಇದನ್ನೂ ಓದಿ: ಆಫ್ರಿಕಾದ ಗಾಮಿನಿ ಚೀತಾ ಜನ್ಮ ನೀಡಿದ್ದು 5ಕ್ಕೆ ಅಲ್ಲ, 6 ಮರಿಗಳಿಗೆ.. ಇನ್ನೊಂದು ಮರಿ ಎಲ್ಲಿತ್ತು?
ಚೀತಾಗಳನ್ನು ಕಾಡಿಗೆ ಬಿಟ್ಟ ನಂತರ ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತದೆ. ಇಂದು ಅಗ್ನಿ, ವಾಯು ಚೀತಾಗಳನ್ನು ಕಾಡಿಗೆ ಬಿಡಲಾಗುತಿದ್ದು, ಪ್ರವಾಸಿಗರು ಅರಣ್ಯದಲ್ಲಿ ನೈಸರ್ಗಿಕವಾಗಿ ಚೀತಾಗಳನ್ನು ನೋಡುವ ಅವಕಾಶ ಪಡೆಯಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ