/newsfirstlive-kannada/media/post_attachments/wp-content/uploads/2025/06/Flight-black-box.jpg)
ಗುಜುರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು.
ಇದನ್ನೂ ಓದಿ:ನಿಮಗಿದು ಗೊತ್ತೇ.. BLACK BOX ಎಂದರೇನು? ಹೇಗೆ ಕಾರ್ಯನಿರ್ವಹಿಸುತ್ತೆ? ವಿಮಾನದಲ್ಲಿ ಎಲ್ಲಿಡಲಾಗುತ್ತೆ?
ಟೇಕ್ಆಫ್ ಆಗಿ ಕೆಲವೇ ಕೆಲವು ನಿಮಿಷಗಳಲ್ಲಿ ಬಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲ್ಗೆ ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆದಿದೆ. ಪರಿಣಾಮ ಕಟ್ಟಡ ಧ್ವಂಸವಾಗಿದೆ. ಇದ್ರಿಂದಾಗಿ ಹಾಸ್ಟೆಲ್ನ ಡೈನಿಂಗ್ ಹಾಲ್ನಲ್ಲಿ ಕುಳಿತು ಊಟ ಮಾಡ್ತಿದ್ದ ವಿದ್ಯಾರ್ಥಿಗಳ ಪೈಕಿ 24 ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಪವಾಡ ಸದೃಶರಾಗಿ ಬದುಕುಳಿದಿದ್ದಾರೆ.
ಈ ವಿಮಾನ ಅಪಘಾತಕ್ಕೆ ಕಾರಣಗಳೇನು ಎಂಬುದನ್ನು ಕಂಡುಹಿಡಿಯಲು ತಜ್ಞರು ಬ್ಲ್ಯಾಕ್ ಬಾಕ್ಸ್ ಶೋಧ ಹಾಗೂ ವಿಶ್ಲೇಷಣೆ ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ವಿಮಾನ ಅಪಘಾತ ತನಿಖಾ ಬ್ಯೂರೋ ಈಗಾಗಲೇ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ನಿಗದಿಪಡಿಸಿದ ಅಂತರರಾಷ್ಟ್ರೀಯ ಪ್ರೋಟೋಕಾಲ್ಗಳಿಗೆ ಅನುಗುಣವಾಗಿ ತನಿಖೆಯನ್ನು ಪ್ರಾರಂಭಿಸಿದೆ.
ಇನ್ನೂ, ಏರ್ ಇಂಡಿಯಾ ವಿಮಾನ ಪತನಕ್ಕೆ ಕಾರಣಗಳೇನು ಎಂಬುದನ್ನು ಕಲೆ ಹಾಕಲಾಗುತ್ತಿದೆ. ಅಪಘಾತಕ್ಕೆ ಮೊದಲು ವಿಮಾನದಲ್ಲಿ ಏನೆಲ್ಲಾ ಆಯ್ತು ಎಂದು ಬ್ಲ್ಯಾಕ್ ಬಾಕ್ಸ್ ಮೂಲಕ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈಗಾಗಲೇ ಡಿಜಿಸಿಎ ಅಪಘಾತ ಬ್ಯೂರೋ ಅಧಿಕಾರಿಗಳು ಒಂದು ಬ್ಲಾಕ್ ಬಾಕ್ಸ್ ಹಾಗೂ ಆಡಿಯೋ ರೆಕಾರ್ಡಿಂಗ್ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಮೂರನೇ ದಿನವಾದ ಇಂದು ಕೂಡ ವಿಮಾನದ ಮತ್ತೊಂದು ಬ್ಲಾಕ್ ಬಾಕ್ಸ್ಗಾಗಿ ಶೋಧ ಮುಂದುವರೆದಿದೆ. ಅದರಲ್ಲಿ ಮುಖ್ಯವಾಗಿ ಪೈಲಟ್ಗಳ ಸಂಭಾಷಣೆ, ವಿಮಾನದ ಎತ್ತರದ ಹಾರಾಟದ ವಿವರ, ತಾಂತ್ರಿಕ ದೋಷ ಸೇರಿ ಅನೇಕ ಮಾಹಿತಿ ಬ್ಲಾಕ್ ಬಾಕ್ಸ್ನಿಂದ ಮಾಹಿತಿ ಲಭ್ಯವಾಗುತ್ತದೆ.
2020ರ ಕೇರಳದ ಕೋಯಿಕ್ಕೋಡ್ ಏರ್ ಪೋರ್ಟ್ನಲ್ಲಿ ವಿಮಾನ ರನ್ ವೇಯಿಂದ ಸ್ಕೀಡ್ ಆಗಿ ಅಪಘಾತವಾಗಿತ್ತು. ಆ ಅಪಘಾತಕ್ಕೆ ಪೈಲಟ್ ಮಾಡಿದ ಯಡವಟ್ಟು ಕಾರಣ ಎಂಬುದು ಬ್ಲಾಕ್ ಬಾಕ್ಸ್ ಪರಿಶೀಲನೆಯಿಂದ ಬಹಿರಂಗವಾಗಿತ್ತು. ಹೀಗಾಗಿ ಮೊನ್ನೆ ನಡೆದ ಏರ್ ಇಂಡಿಯಾ ದುರಂತಕ್ಕೂ ಮುನ್ನ ಪೈಲಟ್ ಯಡವಟ್ಟು ಆಯ್ತಾ? ತಾಂತ್ರಿಕ ದೋಷ ಉಂಟಾಯ್ತಾ? ಅಥವಾ ಹಕ್ಕಿ ಡಿಕ್ಕಿ, ಇಂಜಿನ್ ವೈಫಲ್ಯ ಹೀಗೆ ಮುಂತಾದ ಮಾಹಿತಿಗಳು ಬ್ಲಾಕ್ ಬಾಕ್ಸ್ ಪರಿಶೀಲನೆಯಿಂದ ಸಿಗುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ