/newsfirstlive-kannada/media/post_attachments/wp-content/uploads/2025/06/Air-India7.jpg)
ಜೂನ್ 12 ರಂದು ಗುಜರಾತ್‌ನ ಅಹಮದಾಬಾದ್​ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ (Air India Flight) ದುರಂತದ ತನಿಖೆ ನಡೆಸುತ್ತಿರುವ ತನಿಖಾ ತಂಡ ಈಗ ಪೈಲಟ್​ಗಳ ಮಾನಸಿಕ ಸ್ಥಿತಿ, ವೈದ್ಯಕೀಯ ವರದಿಗಳ ಮೇಲೆ ಕಣ್ಣಿಟ್ಟಿದೆ. ವಿಮಾನದ ಕ್ಯಾಪ್ಟನ್ ಆಗಿದ್ದ ಸುಮಿತ್ ಸಬರವಾಲ್, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರಾ ಎಂಬ ಅನುಮಾನ ವ್ಯಕ್ತವಾಗಿದೆ.
ಹೀಗಾಗಿ ಸುಮಿತ್ ಸಬರವಾಲ್, ಮಾನಸಿಕ ಆರೋಗ್ಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕ್ಯಾಪ್ಟನ್ ಸುಮಿತ್ ಸಬರವಾಲ್ ಅವರಿಗೆ 56 ವರ್ಷ ವಯಸ್ಸಾಗಿತ್ತು. 15 ಸಾವಿರ ಗಂಟೆಗಳ ಕಾಲ ವಿಮಾನವನ್ನು ಚಲಾಯಿಸಿದ ಅನುಭವ ಹೊಂದಿದ್ದರು. ಕೆಲವೇ ತಿಂಗಳುಗಳಲ್ಲಿ ಸೇವೆಯಿಂದ ನಿವೃತ್ತರಾಗಲು ಕೂಡ ಬಯಸಿದ್ದರು. 2022 ರಲ್ಲಿ ಸುಮಿತ್ ಸಬರವಾಲ್ ತಾಯಿ ನಿಧನರಾಗಿದ್ದರು. ಹೀಗಾಗಿ ನಿವೃತ್ತಿ ಪಡೆದು, ತಂದೆಯನ್ನು ನೋಡಿಕೊಳ್ಳಲು ಸುಮಿತ್ ಸಬರವಾಲ್ ಬಯಸಿದ್ದರು. ಸುಮಿತ್ ಸಬರವಾಲ್ ಅವರ ಕ್ಲಾಸ್ 1 ಮೆಡಿಕಲ್ ಪರೀಕ್ಷೆಯು ಕಳೆದ ವರ್ಷದ ಸೆಪ್ಟೆಂಬರ್ 5 ರಂದು ನಡೆದಿತ್ತು.
ಇದರ ದಾಖಲೆಗಳನ್ನು ಈಗಾಗಲೇ ವಿಮಾನ ಪತನದ ತನಿಖೆ ನಡೆಸುತ್ತಿರುವ ಅಧಿಕಾರಿಗಳ ತಂಡಕ್ಕೆ ನೀಡಲಾಗಿದೆ. ವಿಮಾನದ ತಾಂತ್ರಿಕ ದೋಷಗಳಿಗಿಂತ ಹೆಚ್ಚಾಗಿ ಈಗ ಪೈಲಟ್​ಗಳ ಕ್ರಮದ ಬಗ್ಗೆ ಗಮನ ಕೇಂದ್ರೀಕರಿಸಿ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಪೈಲಟ್ ಅಸೋಸಿಯೇಷನ್ ಆಫ್ ಇಂಡಿಯಾ, ತನಿಖಾ ವರದಿಯ ಧ್ವನಿ ಹಾಗೂ ದಿಕ್ಕು ಸರಿಯಿಲ್ಲ ಎಂದು ತಿರಸ್ಕರಿಸಿದೆ.
ಭಾರತದ ಪ್ರಮುಖ ಏವಿಯೇಷನ್ ತಜ್ಞರಾದ ಮೋಹನ್ ರಂಗನಾಥನ್ ಅವರು ಹೇಳುವ ಪ್ರಕಾರ, ಏರ್ ಇಂಡಿಯಾದ ಬಹಳಷ್ಟು ಪೈಲಟ್​ಗಳು, ಕ್ಯಾಪ್ಟನ್ ಸುಮಿತ್ ಸಬರವಾಲ್, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಮಾನಸಿಕ ಆರೋಗ್ಯದ ಸಮಸ್ಯೆ ಇತ್ತು ಎಂದು ನನಗೆ ಹೇಳಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಲ್ಲಿ ವಿಮಾನ ಹಾರಾಟದಿಂದ ರಜೆ ಪಡೆದಿದ್ದರು. ಅದಕ್ಕಾಗಿ ವೈದ್ಯಕೀಯ ರಜೆಯನ್ನು ಪಡೆದಿದ್ದರು ಎಂದು ಹೇಳಿದ್ದಾರೆ.
ಸುಮಿತ್ ಸಬರವಾಲ್ ಅವರು ತಾಯಿ ತೀರಿಕೊಂಡ ಬಳಿಕ ನೊಂದಿದ್ದರು. ಇದಕ್ಕಾಗಿ ರಜೆ ಪಡೆದಿದ್ದರು ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. ಕ್ಯಾಪ್ಟನ್ ಸುಮಿತ್ ಸಬರವಾಲ್ ಅವರನ್ನು ಏರ್ ಇಂಡಿಯಾ ಕಂಪನಿಯ ವೈದ್ಯರು ಪರೀಕ್ಷಿಸಿ, ವೈದ್ಯಕೀಯ ವರದಿ ನೀಡಬೇಕಾಗಿತ್ತು. ವೈದ್ಯರು ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿರಬೇಕು ಎಂದು ಮೋಹನ್ ರಂಗನಾಥನ್ ಹೇಳಿದ್ದಾರೆ.
ಇದನ್ನೂ ಓದಿ: RCB ಕಾಲ್ತುಳಿತ ದುರಂತಕ್ಕೆ ಕಾರಣ ಕೊಟ್ಟ ಸರ್ಕಾರ; ಹೈಕೋರ್ಟ್​ಗೆ ತನಿಖಾ ವರದಿ ಸಲ್ಲಿಕೆ..! ಅದರಲ್ಲಿ ಏನಿದೆ..?
ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ ವೆಸ್ಟಿಗೇಷನ್ ಬ್ಯೂರೋ ಬಿಡುಗಡೆ ಮಾಡಿದ ಪ್ರಾಥಮಿಕ ವರದಿಯಲ್ಲಿ ವಿಮಾನದ ಇಂಧನ ಸ್ವಿಚ್​ಗಳನ್ನ ಆಫ್ ಮಾಡಲಾಗಿತ್ತು. ಇದರಿಂದಾಗಿ ವಿಮಾನದ ಇಂಜಿನ್​ಗೆ ಇಂಧನ ಪೂರೈಕೆಯಾಗಿಲ್ಲ ಎಂದು ವರದಿ ನೀಡಿದೆ. ಕಾಕ್ ಪೀಟ್​ನಲ್ಲಿ ಒಬ್ಬ ಪೈಲಟ್, ಮತ್ತೊಬ್ಬ ಪೈಲಟ್​ಗೆ ನೀವು ಏಕೆ ಇಂಧನ ಕಂಟ್ರೋಲ್ ಮಾಡುವ ಸ್ವಿಚ್​​ಗಳನ್ನು ಕಟ್ ಆಫ್ ಮಾಡಿದ್ದು ಎಂದು ಕೇಳಿದ್ದಾರೆ. ಮತ್ತೊಬ್ಬ ಪೈಲಟ್, ನಾನು ಹಾಗೇ ಮಾಡಿಲ್ಲ ಎಂದಿದ್ದಾರೆ. ಯಾವ ಪೈಲಟ್ ಕೇಳಿದ್ದರು, ಯಾರು ಹಾಗೆ ಮಾಡಿಲ್ಲ ಎಂದು ಹೇಳಿದ್ದರು ಎಂಬುದು ಸ್ಪಷ್ಟವಾಗಿಲ್ಲ.
ಸುಮಿತ್ ಸಬರವಾಲ್, 1994 ರಲ್ಲಿ ಏರ್ ಇಂಡಿಯಾಗೆ ಪೈಲಟ್ ಆಗಿ ಸೇರಿದ್ದರು. ತಾಯಿ ನಿಧನದ ಬಳಿಕ ತಂದೆಯ ಬಗ್ಗೆ ಕೇರ್ ತೆಗೆದುಕೊಳ್ಳಲು ದೆಹಲಿಯಿಂದ ಮುಂಬೈಗೆ ಶಿಫ್ಟ್ ಆಗಿದ್ದರು. ಕುಟುಂಬಕ್ಕೆ ಪೂರ್ಣ ಸಮಯ ನೀಡಲು ಏರ್ ಲೈನ್ಸ್ ನ ಉದ್ಯೋಗ ತ್ಯಜಿಸಲು ಕೂಡ ಮುಂದಾಗಿದ್ದರು. ಈ ಬಗ್ಗೆ ತನ್ನ ತಂದೆಗೂ ತಿಳಿಸಿದ್ದರು. ಪೈಲಟ್ ಉದ್ಯೋಗ ಬಿಟ್ಟು ಬಂದು ನಿಮ್ಮನ್ನು ನೋಡಿಕೊಳ್ಳುತ್ತೇನೆ, ನಿಮ್ಮ ಜೊತೆ ಇರುತ್ತೇನೆ ಎಂದು ತಂದೆಗೆ ಸುಮಿತ್ ಸಬರವಾಲ್ ಹೇಳಿದ್ದರಂತೆ.
ಮುಂಬೈನ ಪೋವಾಯಿಯಲ್ಲಿ ಅಕ್ಕಪಕ್ಕದ ಜನರು ಹೇಳುವಂತೆ ಸುಮಿತ್ ಸಬರವಾಲ್ ಒಳ್ಳೆಯ ವ್ಯಕ್ತಿ. ತಂದೆಯನ್ನು ಸಂಜೆ ವೇಳೆ ವಾಕಿಂಗ್ ಗೆ ಕರೆದುಕೊಂಡು ಹೋಗುತ್ತಿದ್ದರು. ತಂದೆಯನ್ನು ಪ್ರೀತಿ ಮಾಡುವ ಮಗನಾಗಿದ್ದರು. ತಂದೆಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗುವ ಚಾನ್ಸ್ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ತಂದೆಯನ್ನು ಫ್ರೆಶ್ ಗಾಳಿಗಾಗಿ ಮನೆಯಿಂದ ಹೊರಗೆ ವಾಕಿಂಗ್​ಗೆ ಕರೆದೊಯ್ಯುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ.
ಇದನ್ನೂ ಓದಿ: ಇಂದೋರ್ ದೇಶದ No.1 ಸ್ವಚ್ಛ ನಗರ.. ಮೈಸೂರಿಗೆ ಎಷ್ಟನೇ ಸ್ಥಾನ..?
ಸುಮಿತ್ ಸಬರವಾಲ್ ಅವರ ಮಾಜಿ ಸಹೋದ್ಯೋಗಿ ನೀಲ್ ಪೈಸ್ ಹೇಳುವ ಪ್ರಕಾರ, ಸುಮಿತ್ ಸಬರವಾಲ್, ಜಂಟಲ್ ಮ್ಯಾನ್. ಸುಮಿತ್ ಬೇಗನೇ ನಿವೃತ್ತಿ ತೆಗೆದುಕೊಳ್ಳಲು ಆಲೋಚಿಸಿದ್ದರು. ತಂದೆಗೆ 90 ವರ್ಷ ವಯಸ್ಸಾಗಿತ್ತು.
2022 ರಲ್ಲಿ ಸುಮಿತ್ ತಾಯಿ ತೀರಿಕೊಂಡಾಗ ರಜೆ ಪಡೆದಿದ್ದರು. ತನಿಖೆಯ ಭಾಗವಾಗಿ ಅವರ ಮೆಡಿಕಲ್ ದಾಖಲೆಗಳನ್ನು ತನಿಖಾ ತಂಡಕ್ಕೆ ನೀಡಲಾಗಿದೆ. ಪ್ರಾಥಮಿಕ ವರದಿಗಳಲ್ಲಿ ಅಂಥ ವಿಶೇಷಗಳಿಲ್ಲ ಎಂದು ಟಾಟಾ ಗ್ರೂಪ್ ಅಧಿಕಾರಿಗಳು ಹೇಳಿದ್ದಾರೆ.
ಇಬ್ಬರು ಪೈಲಟ್​ಗಳು ಕ್ಲಾಸ್ 1 ಮೆಡಿಕಲ್ ಪರೀಕ್ಷೆಯಲ್ಲಿ ಇಬ್ಬರು ಉತೀರ್ಣರಾಗಿದ್ದರು. ಈ ಪರೀಕ್ಷೆಯಲ್ಲೇ ಪೈಲಟ್​ಗಳ ಮಾನಸಿಕ ಸ್ಥಿತಿಗತಿ, ದೈಹಿಕ ಸಾಮರ್ಥ್ಯದ ಪರೀಕ್ಷೆಯನ್ನು ಮಾಡಲಾಗುತ್ತೆ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ