/newsfirstlive-kannada/media/post_attachments/wp-content/uploads/2025/06/RR_Air_India_crash_1.jpg)
ಏರ್ ಇಂಡಿಯಾ ವಿಮಾನ ದುರಂತಕ್ಕೆ ನಿಜವಾದ ಕಾರಣವೇನು.. 28 ಗಂಟೆಗಳ ಬಳಿಕ ಪತ್ತೆ ಆಯ್ತು ಬ್ಲ್ಯಾಕ್ ಬಾಕ್ಸ್. 787 ಡ್ರೀಮ್ ಲೈನರ್ ವಿಮಾನಗಳ ತಾಂತ್ರಿಕ ತಪಾಸಣೆ ಹೆಚ್ಚಿಸುವಂತೆ ಏರ್ ಇಂಡಿಯಾಗೆ DGCA ಆದೇಶ ನೀಡಿದೆ.
ಏರ್ ಇಂಡಿಯಾ ವಿಮಾನ ಪತನದ ಬಗ್ಗೆ ತನಿಖೆ ಚುರುಕು
ಜಸ್ಟ್ 32 ಸೆಕೆಂಡ್.. ಘನ ಘೋರ ದುರಂತವೇ ನಡೆದುಹೋಗಿದೆ. ಕನಸುಗಳ ಮೂಟೆ ಹೊತ್ತು ಪ್ರಯಾಣ ಹೊರಟವರ ಯಾನ.. ಘೋರ ಅಂತ್ಯ ಕಂಡಿದ್ದು, ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಜನವಸತಿ ಪ್ರದೇಶದಲ್ಲಿ ಅಪ್ಪಳಿಸಿದ ವಿಮಾನ ಮುಗಿಲೆತ್ತರಕ್ಕೆ ಹಬ್ಬಿದ ಬೆಂಕಿಗೆ ಸುಟ್ಟು ಭಸ್ಮವಾದರೂ ಒಬ್ಬರಲ್ಲ.. ಇಬ್ಬರಲ್ಲ.. 265 ಮಂದಿ.. ಇದರ ಬೆನ್ನಲ್ಲೇ ವಿಮಾನ ಪತನಕ್ಕೆ ಕಾರಣ ಏನು ಎಂಬುದರ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಪೈಲಟ್ ತಪ್ಪೋ? ತಾಂತ್ರಿಕ ದೋಷವೋ? ಇಂಜಿನ್ ವೈಫಲ್ಯವೇ? ಬಾಹ್ಯ ಕಾರಣಗಳಿಂದ ವಿಮಾನ ಪತನವಾಗಿದೆಯಾ ಎಂಬ ನಾನಾ ಪ್ರಶ್ನೆಗಳು ಕಾಡುತ್ತಿದ್ದು, ಏರ್ ಇಂಡಿಯಾ ವಿಮಾನ ದುರಂತದ ತನಿಖೆಗೆ ಚುರುಕುಗೊಂಡಿದೆ.
ಇದನ್ನೂ ಓದಿ: Flight Crash; ವಿಮಾನದಲ್ಲಿ ತಂದೆ, ತಾಯಿ ಜೊತೆ 4 ವರ್ಷದ ಕಂದಮ್ಮನ ಬದುಕು ಕೂಡ ಕೊನೆ!
ಏರ್ ಇಂಡಿಯಾ ವಿಮಾನ ದುರಂತಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳುವ ಕುತೂಹಲ ಇಡೀ ಜಗತ್ತಿಗೆ ಇದೆ. ಆ ಮಾಹಿತಿ ಇರುವ ಬ್ಲ್ಯಾಕ್‌ಬಾಕ್ಸ್ ವಿಮಾನ ಪತನವಾದ ವೈದ್ಯಕೀಯ ಹಾಸ್ಟೆಲ್ನ ಕಟ್ಟಡದ ಮೇಲೆ.. 28 ಗಂಟೆಗಳ ಬಳಿಕ ಪತ್ತೆ ಆಗಿದೆ. ಪತ್ತೆಯಾದ ಬ್ಲ್ಯಾಕ್‌ಬಾಕ್ಸ್‌ನಿಂದ ವಿಮಾನದ ಕೊನೆಯ ಕ್ಷಣಗಳ ಮಾಹಿತಿ ಲಭ್ಯವಾಗಲಿವೆ. ಆ ಒಂದು ನಿಮಿಷದಲ್ಲಿ ವಿಮಾನದೊಳಗಡೆ ಏನೆಲ್ಲಾ ಆಯ್ತು ಎಂಬುದನ್ನು ಬ್ಲ್ಯಾಕ್ ಬಾಕ್ಸ್ ತೆರೆದಿಡಲಿದೆ. ಹಾಗಾದ್ರೆ.. ಬ್ಲ್ಯಾಕ್ ಬಾಕ್ಸ್ ಅಂದ್ರೇನು? ಹೇಗೆ ಕೆಲಸ ಮಾಡುತ್ತೆ?
ಬ್ಲ್ಯಾಕ್ ಬಾಕ್ಸ್ ರಹಸ್ಯ!
- ಬ್ಲ್ಯಾಕ್ ಬಾಕ್ಸ್ ವಿಮಾನದಲ್ಲಿ ಬಳಸುವ ಒಂದು ಎಲೆಕ್ಟ್ರಾನಿಕ್ ಸಾಧನ
- ಯಾವುದೇ ವಿಮಾನ ಅಪಘಾತದ ತನಿಖೆಯಲ್ಲಿ ಪ್ರಮುಖ ಪಾತ್ರ
- ಇದನ್ನ ಫ್ಲೈಟ್ ಡೇಟಾ ರೆಕಾರ್ಡರ್ (FDR) ಎಂದು ಕರೆಯಲಾಗುತ್ತದೆ
- ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಅಂತಲೂ ಕರೆಯಲಾಗುತ್ತೆ
- ಫ್ಲೈಟ್ ಡೇಟಾ ರೆಕಾರ್ಡರ್ ವಿಮಾನದ ಎಂಜಿನ್ ವೇಗ, ಎತ್ತರ, ದಿಕ್ಕು,
- ಇಂಧನ ಮಟ್ಟ ಮತ್ತು ಇತರ ತಾಂತ್ರಿಕ ಮಾಹಿತಿಯನ್ನು ದಾಖಲಿಸುತ್ತೆ
- ಡೇಟಾವನ್ನು ಸಂಗ್ರಹಿಸಿ ಕ್ರ್ಯಾಶ್-ನಿರೋಧಕ ಮೆಮೊರಿಯಲ್ಲಿ ಸಂಗ್ರಹ
- ಸಾಮಾನ್ಯವಾಗಿ 25 ಗಂಟೆಗಳವರೆಗಿನ ಡೇಟಾವನ್ನು ದಾಖಲಿಸುತ್ತದೆ
- ಬ್ಲ್ಯಾಕ್ ಬಾಕ್ಸ್‌ಗಳನ್ನು ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ
- ಈ ಬ್ಲ್ಯಾಕ್ ಬಾಕ್ಸ್ 1,100 C ತಾಪಮಾನ ತಡೆಯುವ ಶಕ್ತಿ ಇದೆ
- 6,000 ಮೀಟರ್ ಆಳದ ಸಮುದ್ರದ ಒತ್ತಡ ತಡೆಯೋ ಶಕ್ತಿ ಇದೆ
- ಇದರಲ್ಲಿ ಡೇಟಾವನ್ನು ಪರಿಶೀಲಿಸಲು 10 ರಿಂದ 15 ದಿನ ಬೇಕು
ತಾಂತ್ರಿಕ ತಪಾಸಣೆ ಹೆಚ್ಚಿಸಿ.. ಏರ್ ಇಂಡಿಯಾಗೆ DGCA ಆದೇಶ
ಏರ್ ಇಂಡಿಯಾ 171 ವಿಮಾನ ಘೋರ ದುರಂತಕ್ಕೀಡಾದ ಬೆನ್ನಲ್ಲೇ ವಿಮಾನಯಾನ ಮೇಲ್ವಿಚಾರಣಾ ಸಂಸ್ಥೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಅಂದ್ರೆ ಡಿಜಿಸಿಎ ಎಚ್ಚೆತ್ತುಕೊಂಡಿದೆ. ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನಗಳ ಸುರಕ್ಷತಾ ತಪಾಸಣೆ ಹೆಚ್ಚಿಸುವಂತೆ ಏರ್ ಇಂಡಿಯಾಗೆ ನಿರ್ದೇಶನ ನೀಡಿದೆ. ಸದ್ಯ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯಲ್ಲಿ 26 ಬೋಯಿಂಗ್ 787 -8 ವಿಮಾನಗಳಿವೆ. ಹೀಗಾಗಿ ಜೂನ್ 15 ರಿಂದ ಜಾರಿಗೆ ಬರುವಂತೆ ಬೋಯಿಂಗ್ 787-8 ಮತ್ತು 787-9 ವಿಮಾನಗಳ ಸುರಕ್ಷತೆ ತಪಾಸಣೆ ನಡೆಸುವಂತೆ ಡಿಜಿಸಿಎ ಪತ್ರದಲ್ಲಿ ಸೂಚಿಸಿದೆ. ಇನ್ನು ಡಿಜಿಸಿಎ ಪ್ರಾಥಮಿಕ ತನಿಖೆಯಲ್ಲಿ ಏರ್ ಇಂಡಿಯಾ 171 ವಿಮಾನ ಪತನಕ್ಕೆ ಪಕ್ಷಿಗಳಾಗಲಿ, ಓವರ್ ಲೋಡ್ ಆಗಲಿ ಕಾರಣವಲ್ಲ ಎಂದು ತಿಳಿದು ಬಂದಿದ್ದು, ಇಂಜಿನ್ ವೈಫಲ್ಯದ ಬಗ್ಗೆ ತನಿಖೆಗೆ ಮುಂದುವರಿದಿದೆ.
ಇದನ್ನೂ ಓದಿ: ಅಹಮದಾಬಾದ್ ವಿಮಾನ ಅಪಘಾತದ ಬೆನ್ನಲ್ಲೇ ದೊಡ್ಡ ಆದೇಶ ಹೊರಡಿಸಿದ DGCA.. ಏನದು?
ಏರ್ ಇಂಡಿಯಾದ ಅಧ್ಯಕ್ಷ ಎನ್.ಚಂದ್ರಶೇಖರನ್ ಭರವಸೆ
ಏರ್ ಇಂಡಿಯಾ ವಿಮಾನ ದುರಂತದ ತನಿಖೆ ಚುರುಕುಗೊಂಡಿದ್ದು, ಈಗಾಗಲೇ ಭಾರತ, ಯುಕೆ ಮತ್ತು ಯುಎಸ್ ತನಿಖಾ ತಂಡಗಳು ಅಪಘಾತದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿವೆ. ಟಾಟಾ ಗ್ರೂಪ್ ಇತಿಹಾಸದ ಕರಾಳ ದಿನಗಳಲ್ಲಿ ಇದು ಸಹ ಒಂದು ಎಂದಿರುವ ಏರ್ ಇಂಡಿಯಾದ ಅಧ್ಯಕ್ಷ ಚಂದ್ರಶೇಖರನ್, ವಿಮಾನ ದುರಂತಕ್ಕೆ ಕಾರಣ ತಿಳಿಯಲು ಪಾರದರ್ಶಕ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ನೊಂದ ಕುಟುಂಬಗಳು ಮತ್ತು ಪೈಲಟ್ ಮತ್ತು ಸಿಬ್ಬಂದಿಗೆ ನಮ್ಮ ಸಂಸ್ಥೆ ಋಣಿಯಾಗಿದೆ. ಟಾಟಾ ಗ್ರೂಪ್ ಸಮಾಜದ ಬಗ್ಗೆ ತನ್ನ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಅವರು ಹೇಳಿದ್ದಾರೆ.
ಒಟ್ಟಾರೆ.. ಏರ್ ಇಂಡಿಯಾ 171 ವಿಮಾನ ದುರಂತ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ.. 265 ಜನರ ಸಾವಿಗೆ ಅಸಲಿ ಕಾರಣ ಏನು ಅನ್ನೋದು ಬ್ಲ್ಯಾಕ್ ಬಾಕ್ಸ್ ತಪಾಸಣೆಯಿಂದ ಬಹಿರಂಗವಾಗಬೇಕಿದೆ.
ಇದನ್ನೂ ಓದಿ: ವಿಮಾನ ದುರಂತದ ದಿನ ಈ ನ್ಯೂಸ್ ಪೇಪರ್ನಲ್ಲಿ ಸೇಮ್ ಟು ಸೇಮ್ ಜಾಹೀರಾತು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ