/newsfirstlive-kannada/media/post_attachments/wp-content/uploads/2024/12/Allu-arjun-3.jpg)
ಹೈದರಾಬಾದ್: ಪುಷ್ಪ 2 ಮೂವಿಯ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತ ಉಂಟಾಗಿ ಓರ್ವ ಮಹಿಳೆ ಪ್ರಾಣ ಬಿಟ್ಟಿದ್ದಳು. ಈ ಘಟನೆಗೆ ಸಂಬಂಧಪಟ್ಟಂತೆ ಇದೀಗ ಹೈದರಾಬಾದ್ನ ಚಿಕ್ಕಡಪಲ್ಲಿ ಪೊಲೀಸರು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಾರೆ.
ಪೊಲೀಸರು ಬಂಧಿಸಲೆಂದು ಅಲ್ಲು ಅರ್ಜುನ್ ಅವರ ನಿವಾಸಕ್ಕೆ ಬಂದಾಗ ಅವರ ಕುಟುಂಬಸ್ಥರು ಎಲ್ಲರೂ ಸೇರಿದ್ದರು. ಅಲ್ಲು ಅರ್ಜುನ್ ಅವರ ತಂದೆ, ಪತ್ನಿ ಹಾಗೂ ಸಹೋದರ ಸೇರಿದಂತೆ ಇನ್ನಿತರರು ಸ್ಥಳದಲ್ಲಿ ಇದ್ದರು. ಈ ವೇಳೆ ತಮ್ಮ ಕಾರಿನಲ್ಲಿ ಬರಬಹುದು ಎಂದು ಅಲ್ಲು ಅರ್ಜುನ್ ಅವರು ಮನವಿ ಮಾಡಿದರು. ಆದರೆ ಪೊಲೀಸರು ಅದಕ್ಕೆ ಸಮ್ಮತಿಸದೇ ಪೊಲೀಸ್ ಕಾರಿನಲ್ಲೇ ಬರಬೇಕೆಂದು ಹೇಳಿದರು. ಹೀಗಾಗಿ ಅಲ್ಲು ಅರ್ಜುನ್ ಅವರು ಪೊಲೀಸ್ ಕಾರಿನಲ್ಲೇ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಹೋಗಿದ್ದಾರೆ.
ಏನಿದು ಪ್ರಕರಣ..?
ಡಿಸೆಂಬರ್ 4 ರಂದು ಪುಷ್ಪ-2 ಪ್ರೀಮಿಯರ್ ಶೋ ಇತ್ತು. ಅಂತೆಯೇ ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ಅಭಿಮಾನಿಗಳ ಜೊತೆ ಚಿತ್ರ ವೀಕ್ಷಣೆಗೆ ಅಲ್ಲು ಅರ್ಜುನ್ ಬಂದಿದ್ದರು. ಆದರೆ ಈ ಬಗ್ಗೆ ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಅಲ್ಲು ಅರ್ಜುನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಆಗ ಕಾಲ್ತುಳಿತ ಸಂಭವಿಸಿ ರೇವತಿ ಎಂಬ ಮಹಿಳೆ ಪ್ರಾಣ ಕಳೆದುಕೊಂಡಿದ್ದರು. ಈ ಸಂಬಂಧ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಬಂಧನ ಭೀತಿ ಇದ್ದಿದ್ದರಿಂದ ಹೈದರಾಬಾದ್ ಕೋರ್ಟ್ಗೆ ನಟ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಅಲ್ಲು ಅರ್ಜುನ್ ಅರೆಸ್ಟ್; ಐಕಾನ್ ಸ್ಟಾರ್ ವಿರುದ್ಧದ ಇರುವ ಆರೋಪಗಳು ಏನು..?
ಅಲ್ಲು ಅರ್ಜುನ್ ಆಗಮನದ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಅಲ್ಲು ಅರ್ಜುನ್ ತಮ್ಮ ಖಾಸಗಿ ಭದ್ರತೆಯೊಂದಿಗೆ ಥಿಯೇಟರ್ ಆವರಣವನ್ನ ಪ್ರವೇಶಿಸುತ್ತಿದ್ದಂತೆ ಕಾಲ್ತುಳಿತ ಸಂಭವಿಸಿದೆ. ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ತಳ್ಳಾಟದಿಂದ ನೂಕು ನುಗ್ಗಲು ಇನ್ನಷ್ಟು ಉಲ್ಬಣವಾಗಿದೆ ಎಂಬ ಆರೋಪ ಇದೆ.
BNS ಕಾಯಿದೆಯ U/s 105 ಮತ್ತು 118(1) ಹಾಗೂ r/w 3(5)ರಡಿ ಪ್ರಕರಣ ದಾಖಲಾಗಿದೆ. ನಟ ಅಲ್ಲು ಅರ್ಜುನ್.. ಸಂಧ್ಯಾ ಥಿಯೇಟರ್ ಮ್ಯಾನೇಜ್ಮೆಂಟ್.. ಅಲ್ಲು ಅರ್ಜುನ್ ಅವರ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ನೂಕುನುಗ್ಗಲು ಘಟನೆಗೆ ಥಿಯೇಟರ್ ಆಡಳಿತವೇ ಹೊಣೆ ಎಂಬ ಆರೋಪ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ