ಪುಷ್ಪ ಸಿನಿಮಾಗೂ ತಿರುಪತಿಯ ಗಂಗಮ್ಮ ದೇವರಿಗೂ ಇದೆ ಲಿಂಕ್.. ಚಿತ್ರದ ಹಿಂದಿನ ಸ್ವಾರಸ್ಯಕರ ಕಥೆ..!

author-image
Bheemappa
Updated On
ಅಲ್ಲು ಅರ್ಜುನ್ ಅರೆಸ್ಟ್; ನಿನ್ನೆಯೂ ಪುಷ್ಪ -2 ಕಮಾಲ್.. 8 ದಿನದ ಕಲೆಕ್ಷನ್ ಎಷ್ಟು ಕೋಟಿ..?
Advertisment
  • ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾದ ಪೌರಾಣಿಕತೆ ಏನು ಹೇಳುತ್ತೆ?
  • ಅಲ್ಲು ಅರ್ಜುನ್ ಮಾಡಿದ ಪಾತ್ರ ಮಾತಂಗಿ ಗಂಗಮ್ಮ ದೇವಿ ವೇಷ
  • ಗಂಗಮ್ಮ 7 ದಿನ 7 ವೇಷ ಧರಿಸಿ ಯಾರನ್ನ ಹುಡುಕುತ್ತಿದ್ದಳು ಗೊತ್ತಾ?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ದಿ ರೂಲ್ ಮೂವಿ ವಿಶ್ವದ್ಯಾಂತ ಸಖತ್ ಸೌಂಡ್ ಮಾಡುತ್ತಿದೆ. ಅಲ್ಲು ಅರ್ಜುನ್ ಆ್ಯಕ್ಟಿಂಗ್​ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು ಸಿನಿಮಾದಲ್ಲಿ ಬರುವ ಆ 20 ನಿಮಿಷದ ದೃಶ್ಯಗಳು ಎಲ್ಲರ ಕಣ್ಮನ ಸೆಳೆಯುತ್ತವೆ. ಸೀರೆಯುಟ್ಟುಕೊಂಡು ನರ್ತಿಸುವ ಐಕಾನ್ ಸ್ಟಾರ್, ಪ್ರೇಕ್ಷಕರ ಎದೆ ನಡುಗಿಸುವಂತೆ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ಪಾತ್ರಕ್ಕೂ ತಿರುಪತಿ ಗಂಗಮ್ಮದೇವಿ ವಿಶ್ವರೂಪಕ್ಕೂ ಸಾಮ್ಯತೆ ಇದೆಯಾ? ಪುಷ್ಪ ಮೂವಿಗೂ ತಿರುಪತಿ ಗಂಗಮ್ಮ ಜಾತ್ರೆಗೂ ಸಂಬಂಧ ಇದೆ ಎನ್ನುತ್ತಿದೆ ಪೌರಾಣಿಕ ಕಥೆ.

ಪುಷ್ಪ ಸಿನಿಮಾ ಇಡೀ ವಿಶ್ವದ್ಯಾಂತ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಕಥೆ ಏನೇ ಹೇಳಲಿ ಆದರೆ ಪೌರಾಣಿಕ ಕಥೆಗಳ ಪ್ರಕಾರ ರುದ್ರ-ಆದಿ ಶಕ್ತಿಯ ರೂಪದಲ್ಲಿ ಮಾತಂಗಿ ಗಂಗಮ್ಮ ದೇವಿ, ದುಷ್ಟರ ಸಂಹಾರಕ್ಕಾಗಿ ವಿಶ್ವರೂಪ ತಾಳಿದ್ದಳು ಅಂತೆ. ಈ ಪಾತ್ರದಲ್ಲೇ ನಿರ್ದೇಶಕ ಸುಕುಮಾರ್ ಅವರು ಅಲ್ಲು ಅರ್ಜುನ್ ಅವರನ್ನು ಅತ್ಯದ್ಭುತವಾಗಿ ತೋರಿಸಿದ್ದಾರೆ. ಮುಖದಲ್ಲಿ ನೀಲಿ, ಕೆಂಪು ಬಣ್ಣ, ಹಣೆಯಲ್ಲಿ ಬಿಳಿ ಬೊಟ್ಟು, ನೀಲಿ ಸೀರೆ, ಹೂವಿನ ಹಾರ, ನಿಂಬೆಹಣ್ಣಿನ ಹಾರ, ಮೂಗುತಿ, ಓಲೆ, ಕಾಲಿಗೆ ಗೆಜ್ಜೆ ಧರಿಸಿಕೊಂಡು ಅಲ್ಲು ಅರ್ಜುನ್ ಅಕ್ಷರಶಃ ರೌದ್ರಾವಾತಾರ ತಾಳುತ್ತಾರೆ. ಥಿಯೇಟರ್​ಗಳಲ್ಲಿ ಈ ದ್ಯಶ್ಯಗಳನ್ನು ನೋಡಿದ ಪ್ರೇಕ್ಷಕರು ಫುಲ್ ಶಾಕ್ ಆಗುತ್ತಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್ ವಿರುದ್ಧ ಕೇಸ್ ದಾಖಲು.. ಐಕಾನ್ ಸ್ಟಾರ್ ಹೀಗೆ ಮಾಡಬಹುದಿತ್ತಾ?

publive-image

ಗಂಗಮ್ಮ ಜಾತ್ರೆ ಭರ್ಜರಿಯಾಗಿ ನಡೆಯುವುದು ಯಾವಾಗ?

ತಿರುಪತಿಯಲ್ಲಿ ಪ್ರತಿ ವರ್ಷ ಮೇನಲ್ಲಿ ಗಂಗಮ್ಮ ಜಾತ್ರೆ ಭರ್ಜರಿಯಾಗಿ ನಡೆಯುತ್ತದೆ. ಜಾತ್ರೆಗೆ 3 ರಾಜ್ಯಗಳಿಂದ ಭಕ್ತರ ದಂಡು ಹರಿದು ಬರುತ್ತದೆ. ಪುಷ್ಪ ಸಿನಿಮಾ ಚಿತ್ತೂರು ಜಿಲ್ಲೆಯ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದ್ದರಿಂದ, ತಿರುಪತಿ ಗಂಗಮ್ಮ ಜಾತ್ರೆಯ ಆಚಾರ- ವಿಚಾರಗಳನ್ನು, ಜಾತ್ರೆಯ ಕಥಾ ವಸ್ತುವನ್ನು ನಿರ್ದೇಶಕ ಸುಕುಮಾರ್ ಸಿನಿಮಾದಲ್ಲಿ ಬಿಂಬಿಸಿದ್ದಾರೆ.

ಪುಷ್ಪ ಸಿನಿಮಾ ರಕ್ತ ಚಂದನ ಮರದ ಕಥೆ ಆಗಿದ್ದರೂ ಇದರಲ್ಲಿ ಬರುವ ಅಲ್ಲು ಅರ್ಜುನ್ ಪಾತ್ರ ಗಂಗಮ್ಮ ದೇವಿಯ ಪೌರಾಣಿಕ ಕುರಿತು ಹೇಳುತ್ತದೆ. ಗಂಗಮ್ಮನ ಜಾತ್ರೆಗೆ ತಿರುಪತಿ ಬೆಟ್ಟದಷ್ಟು ಇತಿಹಾಸ ಇದೆ. ಮಹಿಳೆಯರ ಮೇಲೆ ಪಾಳೆಗಾರರು ಮಾಡಿದಂತ ಅಪರಾಧಗಳು ಬಿಚ್ಚಿಕೊಳ್ಳುತ್ತವೆ. ಇದರ ಅಸಲಿ ಕಥೆ ಏನೆಂಬುದು ಕೆದಕುತ್ತ ಹೋದರೆ..

ಇದನ್ನೂ ಓದಿ: ಅಲ್ಲು ಅರ್ಜುನ್​ಗೆ ಇಂಡಿಯಾದಲ್ಲೇ ಅತಿ ಹೆಚ್ಚು ಸಂಭಾವನೆ.. ಪುಷ್ಪ-2ಗೆ ಐಕಾನ್ ಸ್ಟಾರ್ ಪಡೆದ ದುಡ್ಡು ಎಷ್ಟು?

ಆಂಧ್ರ ಪ್ರದೇಶದ ರಾಯಲಸೀಮಾ ಜಿಲ್ಲೆಯಾದ್ಯಂತ ಸುಮಾರು 900 ವರ್ಷಗಳಿಗಿಂತ ತುಂಬಾ ಹಿಂದೆ ಪಾಳೆಗಾರರ ಆಳ್ವಿಕೆ ದೊಡ್ಡ ಮಟ್ಟದಲ್ಲಿತ್ತು. ಇತರರನ್ನು ಪ್ರಾಣಿಯಂತೆ ಕಾಣುತ್ತಿದ್ದ ಇವರು ಮಹಿಳೆಯರು ಎಂದರೆ ಎಳೆದುಕೊಂಡು ಹೋಗುವಂತ ಸ್ವಭಾವದವರು ಆಗಿದ್ದರು. ಈ ಪಾಳೆಗಾರರಲ್ಲಿ ಚಿತ್ತೂರು ಪಾಳೆಗಾರ ಮಹಾ ಕ್ರೂರತ್ವ ಹೊಂದಿದ ವ್ಯಕ್ತಿ ಆಗಿದ್ದನು. ಅದರಲ್ಲಿ ಆ ಪ್ರದೇಶದಲ್ಲಿ ಇರುವ ಮದುವೆ ಆಗದ ಯುವತಿಯರು ಮೊದಲ ರಾತ್ರಿ ಪಾಳೆಗಾರನ ಬಳಿಯೇ ಹೋಗಬೇಕಿತ್ತಂತೆ. ಇದಕ್ಕಾಗಿ ಜನರನ್ನು ಹಿಂಸಿಸುತ್ತಿದ್ದನು ಎಂದು ಇತಿಹಾಸ ಹೇಳುತ್ತದೆ.

publive-image

ಗಂಗಮ್ಮ ಮೇಲೆ ಕಣ್ಣಾಕಿದ್ದ ಪಾಳೆಗಾರ

ಇಂತಹ ದುಷ್ಟನನ್ನು ಸಂಹರಿಸಲು ಅಂದು ಸಾಕ್ಷತ್​​ ಗಂಗಮ್ಮ ದೇವಿ ಅವತಾರವೆತ್ತಿ ಧರೆಗೆ ಬರುತ್ತಾಳೆ ಎಂಬ ಪ್ರತೀತಿ ಇದೆ. ಸ್ತ್ರೀಯರ ರಕ್ಷಣೆಗಾಗಿ ತಿರುಪತಿಯಿಂದ 2 ಕಿ.ಮೀ ದೂರದ ಅವಿಲಾಲ ಗ್ರಾಮದಲ್ಲಿ ಗಂಗಮ್ಮ ಎಂಬ ಹೆಸರಲ್ಲಿ ದೇವಿ ಜನಿಸಿದ್ದರು ಎಂದು ಈಗಲೂ ಅಲ್ಲಿನ ಭಕ್ತರ ಬಲವಾದ ನಂಬಿಕೆ ಆಗಿದೆ. ಆಡುತ್ತ, ಕಲಿಯುತ್ತ ಗಂಗಮ್ಮ ವಯಸ್ಸಿಗೆ ಬರುತ್ತಾಳೆ.

ಆಗ ಚಿತ್ತೂರು ಪಾಳೆಗಾರ ಯೌವ್ವನಕ್ಕೆ ಬಂದಿದ್ದ ಗಂಗಮ್ಮ ಮೇಲೆ ಕಣ್ಣಾಕಿದ್ದನು. ಆದರೆ ಆ ಪಾಳೆಗಾರನಿಗೆ ಗಂಗಮ್ಮ ದೇವಿ ವಿಶ್ವರೂಪಿಯಾಗಿ ಕಾಣಿಸಿಕೊಂಡಳಂತೆ. ಇದರಿಂದ ಹೆದರಿಕೊಂಡ ಪಾಳೆಗಾರ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿ ತಿರುಪತಿಯ ಪ್ರದೇಶವೊಂದರಲ್ಲಿ ಹೋಗಿ ಮರದ ಬುಡದಲ್ಲಿ ಅಡಗಿಕೊಳ್ಳುತ್ತಾನೆ. ಪಾಳೆಗಾರನ ಹುಡುಕಲು ಗಂಗಮ್ಮ ದೇವಿ ಮೊದಲ ದಿನ ಬೈರಾಗಿ ಆಗಿ, 2ನೇ ದಿನ ಬಂಡ ಪಾತ್ರಧಾರಿಯಾಗಿ, 3ನೇ ದಿನ ಮತ್ತೊಂದು ವೇಷ ಧರಿಸುತ್ತಾಳೆ. ಈ ಮೂವರು ವೇಷ ಧರಿಸಿದರು ಪಾಳೆಗಾರ ಎಲ್ಲಿಯೂ ಸಿಗುವುದಿಲ್ಲ.

publive-image

ಪಾಳೆಗಾರ ಹೊರಕ್ಕೆ ಬಂದೇ ಬಿಟ್ಟ

ಹೀಗಾಗಿ 4ನೇ ದಿನ ದೊರೆ ವೇಷದಲ್ಲಿ ಊರು, ಅರಣ್ಯ ಪ್ರದೇಶ ತಿರುಗುತ್ತಾಳೆ. ಈ ವೇಳೆ ತನ್ನ ಸ್ವಾಮಿ ಬಂದನೆಂದು ಪಾಳೆಗಾರ ಹೊರಕ್ಕೆ ಬರುತ್ತಾನೆ. ಬಂದ ತಕ್ಷಣವೇ ರೌದ್ರಾವಾತಾರ ತಾಳುವ ಗಂಗಮ್ಮ ಕ್ಷಣದಲ್ಲೇ ಪಾಳೆಗಾರನನ್ನ ಮುಗಿಸಿ ರಕ್ತ-ಸಿಕ್ತವಾಗಿ ಅಬ್ಬರಿಸುತ್ತಾಳೆ. ಇದಾದ ಮೇಲೆ 5ನೇ ದಿನ ಮಾತಂಗಿ ವೇಷದಲ್ಲಿ ಪಾಳೆಗಾರನ ಹೆಂಡತಿ ಬಳಿಗೆ ಹೋಗಿ ಸಾಂತ್ವನ ಹೇಳುತ್ತಾಳೆ. 6ನೇ ದಿನ ಸುಣ್ಣದ ಮಡಕೆಗಳನ್ನು ಹಾರದ ರೀತಿ ಭಕ್ತರು ಧರಿಸುತ್ತಾರೆ. ಜಾತ್ರೆಯ 7ನೇ ದಿನದ ಅಂಗವಾಗಿ ವಿಶ್ವರೂಪದ ದರ್ಶನ ಇರುತ್ತದೆ.

ಇದನ್ನೇ ತಿರುಪತಿಯ ಸ್ಥಳೀಯರು ದುಷ್ಟನ ಸಂಹಾರ ದೇವಿ ಮಾಡಿದಳು ಎಂದು ಭಕ್ತರು ಹೇಳುತ್ತಾರೆ. ಮಹಿಳೆಯರ ಮಾನ-ಪ್ರಾಣ ಕಾಪಾಡಲು ದೇವಿಯೇ ಗಂಗಮ್ಮ ಆಗಿ ಧರೆಗೆ ಬಂದಿದ್ದಳು. ದುಷ್ಟನನ್ನು ಸಂಹಾರ ಮಾಡಿದ್ದಕ್ಕೆ ಕೃತಜ್ಞೆ ತಿಳಿಸಲು ಅಲ್ಲಿನ ಜನರು ಒಂದು ವಾರವಿಡೀ ದೇವಿಯ ಜಾತ್ರೆಯನ್ನು ಅದ್ಧೂರಿಯಾಗಿ ಮಾಡುತ್ತಾರೆ. ಬೇರೆ ಬೇರೆ ವೇಷಗಳನ್ನು ಧರಿಸಿಕೊಂಡು ಯುವಕರು, ಪುರುಷರು ನೃತ್ಯ ಮಾಡುತ್ತ ಊರೆಲ್ಲಾ ಸುತ್ತುತ್ತಾರೆ. ತಮ್ಮ ಕೋರಿಕೆಗಳನ್ನು ನೆರವೇರಿಸುವಂತೆ ಭಕ್ತರು, ಮಾತಂಗಿ ಪಾತ್ರದಲ್ಲಿ ಗಂಗಮ್ಮ ದೇವಾಲಯಕ್ಕೆ ಬಂದು ಹರಕೆ ತೀರಿಸುತ್ತಾರೆ. ರಾಜಕಾರಣಿಗಳು ಕೂಡ ಇದರಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗುತ್ತದೆ.

publive-image

ಗಂಗಮ್ಮ ದೇವಿಯ ಜಾತ್ರೆ ವಿಶೇಷತೆಗಳಿಂದ ಕೂಡಿದೆ 

ತೆಂಲಗಾಣದಲ್ಲಿ ಬೊನಾಲ್, ಸಮ್ಮಕ್ಕಸಾರಕ್ಕ, ಮೇಡಾರಂ ಜಾತ್ರೆ ರೀತಿಯೇ ತಿರುಪತಿಯ ತಾತಯ್ಯಗುಂಟ ಪ್ರದೇಶದಲ್ಲಿ ಗಂಗಮ್ಮ ದೇವಿಯ ದೇವಾಲಯ ಇದೆ. ಇಲ್ಲಿ ನಡೆಯುವ ಜಾತ್ರೆ ತುಂಬಾ ವಿಶೇಷತೆಗಳಿಂದ, ಭಕ್ತಿ, ಭಾವಗಳಿಂದ ಕೂಡಿದೆ. ಪ್ರತಿ ವರ್ಷ ವೆಂಕಟೇಶ್ವರ ಸ್ವಾಮಿ ಸಹೋದರಿ ಗಂಗಮ್ಮನಿಗೆ ಸೀರೆ ಕಳುಹಿಸುತ್ತಾರೆ ಎನ್ನಲಾಗುತ್ತದೆ. ಇದನ್ನ ಆಂಧ್ರ ಪ್ರದೇಶದಲ್ಲಿ ಆಚರಣೆ ಮಾಡುತ್ತಾರೆ.

ಪುಷ್ಪ ಸಿನಿಮಾದಲ್ಲಿ ನಿರ್ದೇಶಕ ಸುಕುಮಾರ್ ಅವರು ಈ ಪೌರಾಣಿಕ ಎಳೆಯನ್ನ ಇಟ್ಟುಕೊಂಡು ಅಲ್ಲು ಅರ್ಜುನ್ ಅವರನ್ನು ದೇವಿಯ ರೂಪದಲ್ಲಿ ತೋರಿಸುತ್ತಾರೆ. ಚಿತ್ರದ ಕ್ಲೈ ಮ್ಯಾಕ್ಸ್​​ನಲ್ಲಿ ಯುವತಿಯರ ಮೇಲೆ ಎರಗುವಂತ ದುಷ್ಟರನ್ನು ಅಲ್ಲು ಅರ್ಜುನ್ ದೇವಿಯ ರೂಪದಲ್ಲಿ ಎಲ್ಲರನ್ನೂ ಮುಗಿಸುತ್ತಾನೆ. ಇತಿಹಾಸದ ಅಧ್ಯಯನ ಮಾಡಿ ಇದನ್ನು ಸಿನಿಮಾದಲ್ಲಿ ಸುಕುಮಾರ್ ಅದ್ಭುತವಾಗಿ ತೋರಿಸಿದ್ದಾರೆ ಎಂದು ತಿಳಿದು ಬರುತ್ತದೆ. ಸದ್ಯ ಪುಷ್ಪ ಸಿನಿಮಾದ ಮೂಲಕ ಗಂಗಮ್ಮ ದೇವಿಯ ಪೌರಾಣಿಕ ಕಥೆಗಳು ಜನರಿಗೆ ತಿಳಿಯುತ್ತಿವೆ.

ವಿಶೇಷ ವರದಿ;ಭೀಮಪ್ಪ,ನ್ಯೂಸ್​ಫಸ್ಟ್, ಡಿಜಿಟಲ್ ಡೆಸ್ಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment