/newsfirstlive-kannada/media/post_attachments/wp-content/uploads/2024/10/amazon-rainforest-drought-3.jpg)
ಭೂಮಿಯ ಆಮ್ಲಜನಕದಲ್ಲಿ ಶೇ.20 ರಷ್ಟು ಆಮ್ಲಜನಕ ಅಮೆಜಾನ್ ಕಾಡಿನಿಂದಲೇ ಸಿಗುತ್ತದೆ. ಜಗತ್ತಿನ ಅತಿದೊಡ್ಡ ಉಷ್ಣ ವಲಯದ ಮಳೆಕಾಡು 5.5 ಮಿಲಿಯನ್ ಚದರ ಕಿಲೋ ಮೀಟರ್ನಷ್ಟು ಹರಡಿದೆ.
ದಕ್ಷಿಣ ಅಮೆರಿಕದಲ್ಲಿರುವ ಅಮೆಜಾನ್ ಅರಣ್ಯಪ್ರದೇಶ 40 ಸಾವಿರ ಸಸ್ಯ ಪ್ರಭೇದ, 1300 ಪಕ್ಷ ಪ್ರಭೇದ, 2200 ಜಾತಿಯ ವಿವಿಧ ಮೀನುಗಳು, 427 ವಿಧದ ಸಸ್ತಿನಿಗಳು, 430 ಜಾತಿಯ ಉಭಯಚರ, 380 ಸರೀಸೃಪ, 2.5 ಮಿಲಿಯನ್ ವಿವಿಧ ರೀತಿಯ ಕೀಟಗಳನ್ನು ಒಳಗೊಂಡಿದೆ. ಇಡೀ ಜಗತ್ತಿನಲ್ಲಿರುವ ಜೀವಿಗಳಲ್ಲಿ ಶೇ.10ರಷ್ಟು ಜೀವಿಗಳಿಗೆ ಆಶ್ರಯಧಾತ ಎನಿಸಿದೆ. ಇಡೀ ವಿಶ್ವದಲ್ಲಿ ಬಳಸುವ ಔಷಧದ ನಾಲ್ಕರಲ್ಲಿ ಒಂದು ಭಾಗ ಇದೇ ಅಮೆಜಾನ್ ಅರಣ್ಯದ ವಸ್ತುಗಳಿಂದಲೇ ಸಿದ್ಧವಾಗುತ್ತದೆ.
ಜಗತ್ತಿನ 9 ದೇಶಗಳಲ್ಲಿ ಅಮೆಜಾನ್ ಅರಣ್ಯಪ್ರದೇಶ ವ್ಯಾಪಿಸಿದೆ. ಬ್ರೆಜಿಲ್ನಲ್ಲಿಯೇ ಶೇ.60ರಷ್ಟು ಭಾಗ ಅರಣ್ಯ ಹೊಂದಿರುವ ಇಂತಹ ಬೃಹತ್ ಭೂಲೋಕದ ಶ್ವಾಸಕೋಶಕ್ಕೆ ಇದೀಗ ಆಪತ್ತು ಎದುರಾಗಿದೆ.
ಸರಾಸರಿಗಿಂತ ಕಡಿಮೆ ಮಳೆ, ನಿಯಂತ್ರಿಸಲಾಗದ ಕಾಡ್ಗಿಚ್ಚು, ಹವಾಮಾನ ಬದಲಾವಣೆ, ಸತತ ಬರಗಾಲದಿಂದ ತತ್ತರಿಸಿರುವ ಬ್ರೆಜಿಲ್ನ ಮನೌಸ್ ನಲ್ಲಿರುವ ನದಿಯ ಬಂದರು 122 ವರ್ಷಗಳಷ್ಟು ಕೆಳಮಟ್ಟಕ್ಕೆ ತಲುಪಿದೆ. ಇದರಿಂದಾಗಿ ಜಲಮಾರ್ಗವೂ ಕಿರಿದಾಗಿದ್ದು, ಧಾನ್ಯ ರಫ್ತು, ಅಗತ್ಯ ವಸ್ತುಗಳ ಪೂರೈಕೆ ಮೇಲೂ ಪರಿಣಾಮ ಬೀರಿದೆ.
ಇದನ್ನೂ ಓದಿ: VIDEO: ಟೈಟಾನಿಕ್ ರೀತಿಯಲ್ಲೇ ಮತ್ತೊಂದು ಹಡಗು ದುರಂತ; 78 ಮಂದಿ ದಾರುಣ ಸಾವು
ಅಮೆಜಾನಸ್ ರಾಜ್ಯದ 62 ಪುರಸಭೆಗಳು ಭೀಕರ ಬರದಿಂದ ತುರ್ತು ಪರಿಸ್ಥಿತಿಯಲ್ಲಿದ್ದು ಅರ್ಧ ಮಿಲಿಯನ್ಗೂ ಹೆಚ್ಚು ಜನ ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ನದಿಯ ನೀರಿನ ಮಟ್ಟ ಇನ್ನೂ ಒಂದು ವಾರ ಅಥವಾ ಎರಡು ವಾರಗಳವರೆಗೆ ಕುಸಿಯುವ ಸಾಧ್ಯತೆ ಇದೆ ಅಂತ ಅಲ್ಲಿನ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆಜಾನ್ ನದಿಯ ಶೇ.10ರಷ್ಟು ನೀರು ಹರಿಯುವ ಮನೌಸ್ನ ಅಮೆಜಾನ್ ನದಿಯ ಉಪನದಿಯಾಗಿರುವ ರಿಯೋ ನಿಗ್ರೂ ನದಿ ಬಂದರು ಸಾಮಾನ್ಯವಾಗಿ 22 ಮೀಟರ್ ಎತ್ತರಕ್ಕೆ ತುಂಬಿ ಹರಿಯುತ್ತಿತ್ತು. ಇದೀಗ 12.66 ಮೀಟರ್ಗಳಿಗೆ ಕುಸಿದಿದೆ. ಇದರಿಂದ 1902ರ ಬಳಿಕ ಮತ್ತೆ ನದಿ ನೀರಿನ ಮಟ್ಟದಲ್ಲಿ ಕುಸಿತ ಕಂಡು ಬಂದಿದೆ. ಮನೌಸ್ ಪ್ರದೇಶ 122 ವರ್ಷಗಳಲ್ಲಿಯೇ ತೀವ್ರವಾದ ಬರ ಎದುರಿಸುತ್ತಿದೆ. ಅಮೆಜಾನ್ನ ಮತ್ತೊಂದು ಉಪನದಿ ಮಡೈರಾದಲ್ಲಿ ನೀರಿನ ಕುಸಿತದಿಂದ ಧಾನ್ಯ ಸಾಗಾಟ ನಿಲ್ಲಿಸಲಾಗಿದೆ. ಅಷ್ಟೇ ಅಲ್ಲ ಬ್ರೆಜಿಲ್ನ ಮುಖ್ಯ ವಿದ್ಯುತ್ ಮೂಲವಾದ ಜಲವಿದ್ಯುತ್ ಸ್ಥಾವರಗಳು ಬಂದ್ ಆಗುವ ಸ್ಥಿತಿಗೆ ತಲುಪಿವೆ.
ಭೀಕರ ಬೆಂಕಿ, ಸತತ ಬರಗಾಲ!
ಭೂಲೋಕದ ಶ್ವಾಸಕೋಶ ಅಮೆಜಾನ್ ಪ್ರದೇಶಕ್ಕೆ ಇಂತಹ ಸ್ಥಿತಿಗೆ ಹಲವು ಕಾರಣಗಳಿವೆ. ಸತತ ಬರಗಾಲ, ಜೊತೆಗೆ ನಿಯಂತ್ರಿಸಲಾಗದ ಬೆಂಕಿಯಿಂದ ಅಮೆಜಾನ್ ಪ್ರದೇಶ ತತ್ತರಿಸಿ ಹೋಗಿದೆ. ಕಳೆದ 14 ವರ್ಷಗಳಿಂದ ಅಮೆಜಾನ್ ಜಲಾನಯನ ಪ್ರದೇಶ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಅಗ್ನಿಗೆ ಆಹುತಿಯಾಗುತ್ತಿದೆ. ಬ್ರೆಜಿಲ್ನ ಶೇ.80ರಷ್ಟು ಅರಣ್ಯ ಪ್ರದೇಶ ಕಾಡ್ಗಿಚ್ಚಿನ ಹೊಗೆಯಿಂದ ಆವೃತವಾಗಿದೆ. ಬೆಂಕಿಯಿಂದಾಗಿ ಬೊಲಿಮಿಯಾ ರಾಷ್ಟ್ರೀಯ ವಿಪತ್ತು ಘೋಷಿಸಿದೆ.
ಬ್ರೆಜಿಲ್ನ ಹಲವು ಪ್ರದೇಶಗಳು ಕಳೆದೊಂದು ವಾರಗಳಿಂದ ಮಾಲಿನ್ಯದಿಂದ ಉಸಿರುಗಟ್ಟಿ ಹೋಗಿವೆ. ಅರ್ಜೆಂಟೀನಾ, ಬ್ರೆಜಿಲ್, ಬೊಲಿವಿಯಾ, ಕೊಲಂಬಿಯಾ, ಈಕ್ವೆಡಾರ್, ಪರಾಗ್ವೆ ಮತ್ತು ಪೆರುಗಳಲ್ಲಿ ಲಕ್ಷಾಂತರ ಹೆಕ್ಟೇರ್ ಅರಣ್ಯ ಮತ್ತು ಕೃಷಿ ಭೂಮಿ ಸುಟ್ಟು ಹೋಗಿದೆ.
ಕಳೆದ 160 ದಿನಗಳಿಂದ ಮಳೆಯೇ ಕಾರಣ ಬ್ರೆಜಿಲ್ನ ರಾಜಧಾನಿ ಬ್ರೆಸಿಲಿಯಾದಲ್ಲಿನ ದೊಡ್ಡ ಆಸ್ಪತ್ರೆಗಳಲ್ಲಿ, ಇತ್ತೀಚಿನ ದಿನಗಳಲ್ಲಿ ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದ ರೋಗಿಗಳ ಸಂಖ್ಯೆ ಸಾಮಾನ್ಯಕ್ಕಿಂತ 20 ಪಟ್ಟು ಹೆಚ್ಚಾಗಿ ಹೋಗಿದೆ.
ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಅಮೆಜಾನ್ ಅರಣ್ಯಪ್ರದೇಶದ ನದಿಗಳಲ್ಲಿ ನೀರಿನ ಮಟ್ಟ ಏರಿಕೆ, ಇಳಿಕೆ ಸಹಜವಾದರೂ ಇತ್ತೀಚಿನ ಪರಿಸ್ಥಿತಿ ಆತಂಕ ಹುಟ್ಟಿಸಿದೆ ಅಂತಾರೆ ತಜ್ಞರು. ಇಂತಹ ಸ್ಥಿತಿಗೆ ಅತಿಯಾದ ಮಾನವನ ಚಟುವಟಿಕೆಯೇ ಕಾರಣ ಅಂತಾರೆ ತಜ್ಞರು. ಅಮೆಜಾನ್ ಪ್ರದೇಶವು ಮತ್ತೆ ತನ್ನ ಮೊದಲಿನ ಸ್ಥಿತಿಗೆ ಬರಲು 2026ರವರೆಗೆ ಕಾಯಬೇಕು. ಆದರೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.
ವಿಶೇಷ ವರದಿ: ವಿಶ್ವನಾಥ್ ಜಿ. (ಸೀನಿಯರ್ ಕಾಪಿ ಎಡಿಟರ್)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ