/newsfirstlive-kannada/media/post_attachments/wp-content/uploads/2025/05/Murali-Naik5.jpg)
ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಶೆಲ್ ದಾಳಿಯಿಂದ ಭಾರತದ ಯುವ ಸೈನಿಕನೊಬ್ಬ ಪ್ರಾಣ ತ್ಯಾಗ ಮಾಡಿದ್ದಾರೆ. ಪಾಕಿಸ್ತಾನ ಗಡಿಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶಕ್ಕೆ ಸೇರಿದ ಕಲ್ಲಿಕೊಂಡ್ಲ ಗ್ರಾಮದ ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿರವರ ಏಕೈಕ ಪುತ್ರ ಯೋಧ ಮುರಳಿ ನಾಯಕ್ ಹುತಾತ್ಮರಾಗಿದ್ದಾರೆ. ಯೋಧರ ಮರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಗೋರಂಟ್ಲ ಮಂಡಲದ ಪುದಗುಂಡ್ಲಪಲ್ಲಿ ತಾಂಡಾದಲ್ಲಿ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಯಾರು ಈ ಮುರಳಿ ನಾಯಕ್?
25 ವಯಸ್ಸಿನ ಮುರಳಿ ನಾಯ್ಕ್ ಅವರು ಡಿಸೆಂಬರ್ 2022ರಲ್ಲಿ ಸೇನೆಗೆ ಸೇರಿದ್ದರು. ಮತ್ತು AV (OPR) ಟ್ರೇಡ್ ಅಡಿಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಮೂಲತಃ ಆಂಧ್ರಪ್ರದೇಶ ಸತ್ಯಸಾಯಿ ಜಿಲ್ಲೆಯ ಬುಡಕಟ್ಟು ಹಳ್ಳಿಯೊಂದರ ಬಡ ಕುಟುಂಬದಲ್ಲಿ ಜನಿಸಿದವರು. ಮುರಳಿ ನಾಯಕ್ ಅವರು ಬಡತನದ ಹಿನ್ನೆಲೆಯಿಂದ ಬಂದವರು. ಇವರ ತಾಯಿ ಎಂ. ಜ್ಯೋತಿಬಾಯಿ ಮತ್ತು ತಂದೆ ಎಂ. ಶ್ರೀರಾಮ್ ನಾಯ್ಕ್ ಅವರು ದಿನಗೂಲಿ ಕಾರ್ಮಿಕರಾಗಿದ್ದಾರೆ. ಇಂತಹ ಕುಟುಂಬದಿಂದ ಬಂದ ಮುರಳಿ ನಾಯಕ್ 25 ವಯಸ್ಸಿನಲ್ಲಿಯೇ ಸೇನೆಗೆ ಸೇರಿದರು. ಅವರ ತ್ಯಾಗ ಗ್ರಾಮಕ್ಕೆ ಅಪಾರ ಹೆಮ್ಮೆ ಮತ್ತು ಆಳವಾದ ದುಃಖ ಉಂಟು ಮಾಡಿದೆ.
ಇದನ್ನೂ ಓದಿ: ‘ಭಾರತದ ರಫೇಲ್ ಹೊಡೆದು ಉರುಳಿಸಿದ್ದೇವೆ’- ಪಾಕ್ ಪ್ರಧಾನಿ ಹೇಳಿದ 4 ಸುಳ್ಳುಗಳು ಇಲ್ಲಿವೆ!
ಮುರಳಿ ನಾಯಕ್ ಹುತಾತ್ಮರಾದ ವಿಚಾರ ತಿಳಿಯುತ್ತಿದ್ದಂತೆ ಅವರ ಮನೆಗೆ ಆಂಧ್ರ ಪ್ರದೇಶ ಸಮಾಜ ಕಲ್ಯಾಣ ಸಚಿವೆ ಸುಮಿತ್ರಮ್ಮ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಇದೇ ವೇಳೆ ಸಚಿವೆ ಕೂಡ ದುಃಖತಪ್ತರಾದ್ದರು. ಸದ್ಯ ಆಂಧ್ರಪ್ರದೇಶ ಸಚಿವೆ ಸವಿತಮ್ಮ ಹಾಗೂ ಡಿಸಿ, ಎಸ್ಪಿ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಇನ್ನೂ, ಹುತಾತ್ಮ ಯೋಧ ಮುರಳಿ ನಾಯಕ್ ಅವರ ಪಾರ್ಥಿವ ಶರೀರ ನೋಡಲು ನಿವಾಸದ ಹತ್ತಿರ ಜನಸಾಗರವೇ ಹರಿದು ಬರುತ್ತಿದೆ.
ಅಲ್ಲದೇ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹಾಗೂ ಸಚಿವ ನಾರಾ ಲೋಕೇಶ್ ಕೂಡ ಅಂತಿಮ ದರ್ಶನಕ್ಕೆ ಬರಲಿದ್ದಾರೆ. ಅಂತಿಮ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದ್ದು, ಹೀಗಾಗಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಮಿಲಿಟರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ ಜರುಗಲಿದೆ. ಈಗ ಮುರಳಿ ನಾಯಕ್ ಅಮರ್ ರಹೇ ಅಂತ ಘೋಷಣೆಗಳು ಮೊಳಗುತ್ತಿವೆ. ಈಗ ಕಳ್ಳಿತಾಂಡ ಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ