/newsfirstlive-kannada/media/post_attachments/wp-content/uploads/2025/01/Chhi-Chhi-Chhi-Re-Nani.jpg)
ಏನಿಲ್ಲ.. ಏನಿಲ್ಲ.. ಕರಿಮಣಿ ಮಾಲೀಕ ನೀನಲ್ಲ ಅನ್ನೋ ಹಾಡು ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೋಲ್ ಹಾಗೂ ರೀಲ್ಸ್ ಆಗಿತ್ತು. ಇದೀಗ ಚೀ ಚೀ ಚೀ ರೇ ನುನೇ ಚೀ.. ಎಂದ ಕೂಡಲೇ ನಕ್ಕು ಒತ್ತರಿಸಿಕೊಂಡು ಬರುತ್ತದೆ. ಹೀರೋ ಹೀಗೇ ಇರಬೇಕು ಅಂತೇನಿಲ್ಲ ಅನ್ನೋ ಹೊಸ ಗ್ರಾಮರ್, ಗ್ಲಾಮರ್ ಕೊಟ್ಟ ಖ್ಯಾತ ನಿರ್ದೇಶಕ ಕಂ ನಟ ಕಾಶೀನಾಥ್ ತರಹದ ಓರ್ವ ವ್ಯಕ್ತಿಯ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ಹುಡುಗಿಯೊಬ್ಬಳು ಅಳುತ್ತಾ ಇರೋ ದೃಶ್ಯದ ಜೊತೆ ಹೀರೋ ಒಬ್ಬ ಸಂಕಟ ಅನುಭವಿಸೋ ದೃಶ್ಯಗಳ ಅದೊಂದು ವಿಚಿತ್ರ ವಿಡಿಯೋ ಸಾಂಗ್ ನೋಡಿರ್ತೀರಿ. ಇದೇ ಹಾಡನ್ನ ಇವತ್ತು ಟ್ರೋಲರ್ಸ್ ಕಾಮಿಡಿ ಕಂಟೆಂಟ್ ಮಾಡಿ ಬಿಸಾಕಿದ್ದಾರೆ. ಅಸಲಿಗೆ ಈ ಹಾಡಿನ ಅರ್ಥವೇ ಬೇರೆ ಇದೆ.
ಇದನ್ನೂ ಓದಿ: BBK11: ವಿನ್ನರ್ ಹನುಮಂತುಗೆ ಇರೋದೇ 2 ಆಸೆ.. ಬಿಗ್ ಬಾಸ್‌ನಲ್ಲಿ ಗೆದ್ದ ಹಣ ಏನ್ ಮಾಡ್ತಾರೆ ಗೊತ್ತಾ?
ಒರಿಸ್ಸಾದ "ಅನಿಸುತ್ತಿದೆ ಯಾಕೋ ಇಂದು" ಹಾಡಿದು!
ಚೀ ಚೀ ಚೀ ರೇ ನುನೇ ಚೀ.. ಅನ್ನೋದು ಒರಿಸ್ಸಾ ಭಾಷೆಯ ಹಾಡು. ನಾನೀಗ ಅಳುತ್ತಿದ್ದೇನೆ ಅನ್ನೋ ಅರ್ಥದಿಂದ ಶುರುವಾಗೋ ಈ ಹಾಡು ಪಕ್ಕಾ ಪ್ಯಾಥೋ ಸಾಂಗು. ತೀರಾ ಒರಿಸ್ಸಾದಾಚೆಗೂ ಇದಕ್ಕೆ ಸಿಕ್ಕಿರೋ ಜನಪ್ರಿಯತೆ ಲೆಕ್ಕಾಚಾರದಲ್ಲಿ ಹೇಳೋದಾರೇ ಮುಂಗಾರು ಮಳೆಯ ಅನಿಸುತ್ತಿದೆ ಯಾಕೋ ಇಂದು ಅನ್ನೋ ಹಾಡಿಗೆ ಈ ಚೀ ಚೀ ಚೀ ರೇನುನೇ ಚೀ ಸಮ ಎನ್ನಬಹುದು. ಭರ್ತಿ 20 ವರ್ಷಗಳ ಹಿಂದೆ ಚಿತ್ರೀಕರಣಗೊಂಡ ಈ ಹಾಡು ಇದೀಗ ವೈರಲ್ ಆಗುತ್ತಿದೆ. ಪ್ರೇಮಿಗಳಿಬ್ಬರನ್ನ ಅಂತಸ್ತು ದೂರ ಮಾಡುತ್ತದೆ. ಹಣ ಸಂಪಾದಿಸಿಕೊಂಡು ಬಂದು ಪ್ರೇಯಸಿಯನ್ನು ಮದುವೆ ಆಗೋ ಕನಸು ಕಂಡಿದ್ದ ಪ್ರೇಮಿ ಸಾಧಿಸಿ ಬಂದಾಗ ದೊಡ್ಡ ಅಘಾತ ಕಾದಿರುತ್ತದೆ. ತನ್ನ ಪ್ರೇಯಸಿ ಅಷ್ಟೊತ್ತಿಗೆ ಮತ್ತೊಬ್ಬರ ಪತ್ನಿ ಆಗಿರ್ತಾಳೆ.. ಆ ದೃಶ್ಯ ನೋಡಿಯೇ ಈ ಹಾಡನ್ನು ಪ್ರೇಮಿ ಹಾಡುತ್ತಾನೆ.
ಕವನವೊಂದು ವಿಡಿಯೋ ಸಾಂಗ್ ಆಗಿದ್ದೇ ರೋಚಕ ಸಂಗತಿ
ಒರಿಸ್ಸಾದ ಸಂಬಾಲ್ಪುರದ ಪಿತಾಪಾಲಿ, ಜಮದರ್ಪಾಲಿ ಅನ್ನೋ ಎರಡು ಹಳ್ಳಿಗಳಲ್ಲಿ ಮಲ್ಲಿಗೆ ಒಂದೂರು ಸಂಪಿಗೆ ಒಂದೂರು ಅನ್ನೋ ರೀತಿಯಲ್ಲಿ ಚಿತ್ರೀಕರಿಸಲಾಗಿತ್ತು. ಬಿಭೂತಿ ಬಿಸ್ವಾಸ್, ಶೈಲಜಾ ಪಟೇಲ್ ಪ್ರೇಮಿಗಳಾಗಿ ನಟಿಸಿದ್ರು. ಇವತ್ತು ಈ ಇಬ್ಬರ ವಯಸ್ಸು 50ರ ಗಡಿ ದಾಟಿದೆ. ಸೀತಾರಾಮ್ ಅಗರವಾಲ್ ಅನ್ನೋ ಗಟ್ಟಿಗ ನಿರ್ಮಾಪಕ ಬಿಭೂತಿ ಬಿಸ್ವಾಸ್ ಬರೆದಿದ್ದ ಕವನ ಓದಿ ಪ್ರಭಾವಿತರಾಗಿದ್ರು. ಹೇಗಾದ್ರೂ ಮಾಡಿ ಈ ಕವನವನ್ನು ವಿಡಿಯೋ ಸಾಂಗ್ ಮಾಡಬೇಕು ಅಂತ ನಿರ್ಧರಿಸಿದ್ರು. ಹಾಗಾಗಿಯೇ ಈ ಹಾಡಿನ ಕವಿಯೇ ನಟ, ಗಾಯಕನೂ ಆಗಿದ್ದಾನೆ. ಮನಭಂಜನ್ ನಾಯಕ್ ಈ ಹಾಡನ್ನು ನಿರ್ದೇಶಿಸಿದ್ರು. 1995ರಲ್ಲೇ ಚಿತ್ರೀಕರಣಗೊಂಡರೂ ಸಹ ರಿಲೀಸ್ ಆಗಿದ್ದು 10 ವರ್ಷಗಳ ಬಳಿಕ ಅಂದ್ರೆ 2005ರಲ್ಲಿ. ಆದರೇ, ಈ ಹಾಡಿನೊಳಗಿನ ಸಾಹಿತ್ಯ, ಸಂಗೀತ ಹಾಗೂ ನಟನೆಯ ಜೀವಾಳ 20 ವರ್ಷ ಉರುಳಿದ ಮೇಲೂ ಜೀವಂತವಾಗಿದೆ. ಪ್ರೇಮಿಗಳ ನೋವಿನ ಕಾವ್ಯ ಇವತ್ತು ಟ್ರೋಲರ್ಸ್ ಕೈಗೆ ಸಿಕ್ಕಿ ಕಾಮಿಡಿ ಕಂಟೆಂಟ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ