/newsfirstlive-kannada/media/post_attachments/wp-content/uploads/2025/05/Anuradha-Tiwari.jpg)
ಮದುವೆ ಆಗಬೇಕು ಅನ್ನೋ ಯುವಕರಿಗೆ ಕನ್ಯೆಯೇ ಸಿಗದ ಕಾಲವಿದು. ಮದುವೆ ಮೇಲಿನ ಅನುರಾಗದಲ್ಲಿ ಹುಡುಗರು, ಮದುವೆ ಆಗಲು ಹುಡುಗಿಯರನ್ನ ಹುಡುಕಿ, ಹುಡುಕಿ ಸುಸ್ತಾಗಿದ್ದಾರೆ. ಆದರೆ ಈ ಅನುರಾಧ ಮ್ಯಾರೇಜ್ ಸ್ಟೋರಿ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.
ಈ ಮಹಿಳೆಯ ಹೆಸರು ಅನುರಾಧ ಪಾಸ್ವಾನ್. ವಯಸ್ಸು 23. ಈಕೆ ಕೇವಲ 7 ತಿಂಗಳಿಗೆ ಬರೋಬ್ಬರಿ 25 ಯುವಕರನ್ನ ಮದುವೆಯಾಗಿದ್ದಾಳೆ. 25 ಮದುವೆ ಆಗಿರೋದು ಒಂದು ಅಚ್ಚರಿಯಾದ್ರೆ ಆ 25 ಯುವಕರಿಗೂ ಪಂಗನಾಮ ಹಾಕಿ ಎಸ್ಕೇಪ್ ಆಗಿರೋದು ಮತ್ತೊಂದು ಶಾಕಿಂಗ್ ಸಂಗತಿಯಾಗಿದೆ.
ಮದುವೆಯಾದ ಮರುದಿನವೇ ಪರಾರಿ!
ಮದುವೆಯಾಗಲು ಹುಡುಗಿಯರನ್ನ ಹುಡುಕುವ ಕುಗ್ರಾಮಗಳ ನತದೃಷ್ಟ ತರುಣ ಯುವಕರೇ ಈ ಲೇಡಿ ಗ್ಯಾಂಗ್‌ನ ಟಾರ್ಗೆಟ್. ಮದುವೆ ಆಗುತ್ತಿದ್ದಂತೆ ಚಿನ್ನ, ಚಿನ್ನಾಭರಣ, ದುಡ್ಡು, ಮೊಬೈಲ್ ಹೀಗೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ದೋಚಿಕೊಂಡು ಹೋಗುತ್ತಿದ್ದರು. ಈ ಕಿಲಾಡಿ ಅನುರಾಧ ಹಿಂದೆ ಮ್ಯಾರೇಜ್ ಬ್ರೋಕರ್, ಏಜೆಂಟ್‌ಗಳ ದೊಡ್ಡ ದಂಡೇ ಇದೆ.
ಅನುರಾಧ ಸಿಕ್ಕಿಬಿದ್ದಿದ್ದು ಹೇಗೆ?
ಮಧ್ಯಪ್ರದೇಶ, ರಾಜಸ್ಥಾನ ಹೀಗೆ ಹಲವು ರಾಜ್ಯದಲ್ಲಿ ಅನುರಾಧ ಮದುವೆ ಮಾಡಿಕೊಂಡು ಪರಾರಿಯಾಗಿದ್ದರು. ರಾಜಸ್ಥಾನದ ಸವಾಯಿ ಮಾಧೋಪುರ್ ನಿವಾಸಿ ವಿಷ್ಣು ಶರ್ಮಾ ಎಂಬುವವರು ಹೀಗೆ ಮೋಸ ಹೋಗಿದ್ದರು. ಅನುರಾಧರನ್ನ ಮದುವೆಯಾಗಲು ಮದುವೆ ಏಜೆಂಟ್ ಸುನೀತಾ ಮತ್ತು ಪಪ್ಪು ಮೀನಾ ಅವರಿಗೆ 2 ಲಕ್ಷ ರೂಪಾಯಿ ಹಣ ಕೊಟ್ಟಿದ್ದರು. ಏಜೆಂಟ್‌ಗಳು ಅನುರಾಧರನ್ನ ಪರಿಚಯಿಸಿ ಕೋರ್ಟ್‌ನಲ್ಲಿ ಏಪ್ರಿಲ್ 20ರಂದು ಕಾನೂನು ಪ್ರಕಾರವೇ ಅಧಿಕೃತವಾಗಿ ಮದುವೆ ಮಾಡಿಸಿದ್ದಾರೆ.
ಕೆಲವೇ ದಿನಗಳಲ್ಲಿ ವಿಷ್ಣು ಶರ್ಮಾ ಮನೆಯಲ್ಲಿದ್ದ ಚಿನ್ನಾಭರಣ, ಬೆಲೆಬಾಳುವ ವಸ್ತುಗಳೊಂದಿಗೆ ಅನುರಾಧ ನಾಪತ್ತೆಯಾಗಿದ್ದರು. ವಿಷ್ಣುಶರ್ಮಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅನುರಾಧ ಪಾಸ್ವಾನ್ ಮೋಸದ ಮದುವೆ ಬಗ್ಗೆ ಕಂಪ್ಲೇಟ್ ದಾಖಲಾದ ಮೇಲೆ ಪೊಲೀಸ್ ಅಧಿಕಾರಿಗಳು ಅಖಾಡಕ್ಕೆ ಇಳಿದಿದ್ದರು.
ಇದನ್ನೂ ಓದಿ: ಪಾಕ್ಗೆ ಹೋಗಿ ಬಂದ್ಮೇಲೆ ಈ ಕಿಲಾಡಿ ಲೇಡಿ ಬರೆದಿದ್ದೇನು ಗೊತ್ತಾ..? ಜ್ಯೋತಿ ಡೈರಿ ರಹಸ್ಯ ರಿವೀಲ್..!
ಕಳೆದ ಮೇ 19ರಂದು ರಾಜಸ್ಥಾನದ ಪೊಲೀಸ್ ಅಧಿಕಾರಿಯೊಬ್ಬರು ವರನ ವೇಷದಲ್ಲಿ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ. ವಧುದಕ್ಷಿಣೆ ನೀಡುವ ಆಸೆ ತೋರಿಸಿ ಈ ಕಿಲಾಡಿ ಗ್ಯಾಂಗ್‌ನ ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ರೋಚಕ ಕಾರ್ಯಾಚರಣೆಯನ್ನೇ ಮಾಡಿದ್ದಾರೆ. ಜಸ್ಟ್ 7 ತಿಂಗಳಲ್ಲಿ 25 ಮದುವೆಯಾದ 23 ವರ್ಷದ ಅನುರಾಧ ಮ್ಯಾರೇಜ್ ಸ್ಟೋರಿ ಯಾವ ಬಾಲಿವುಡ್ ಸಿನಿಮಾ ಸ್ಟೋರಿಗಿಂತಲೂ ಕಮ್ಮಿಯಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ