/newsfirstlive-kannada/media/post_attachments/wp-content/uploads/2024/10/Darshan-release-bellary-Jail.jpg)
ಬೆಂಗಳೂರು: ಇದು ನಿರೀಕ್ಷಿತ. ಇದೊಂಥರ ಸುಟ್ಟ ಗಾಯ ಇದ್ದಂತೆ. ಅದೆಷ್ಟೇ ಮುಲಾಮು ಹಚ್ಚಿದ್ರೂ ಗಾಯದ ಗುರುತು ಮಾತ್ರ ಮಾಯವಾಗ್ತಿಲ್ಲ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಹೈಕೋರ್ಟ್ ಬಚಾವ್ ಮಾಡಿದ್ರೂ ನಟ ದರ್ಶನ್ ಅಂಡ್ ಗ್ಯಾಂಗ್ ಸಂಕಷ್ಟ ತಪ್ಪದಂತಾಗಿದೆ. ಏಳು ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಕೋರಿ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಸದ್ಯ ಅರ್ಜಿ ವಿಚಾರಣೆ ನಿಗದಿಯಾಗಲಿದ್ದು ದಾಸನಿಗೆ ಟೆನ್ಶನ್ ಹೆಚ್ಚಿಸಿದೆ.
ಪಟ್ಟಣಗೆರೆ ಶೆಡ್ನಲ್ಲಿ ನೆತ್ತರು ಹರಿಸಿದ್ದ ಕೇಸ್ ನೆತ್ತಿ ಮೇಲೆ ಮೋಡ ಕವಿದ ವಾತಾವರಣ ಸೃಷ್ಟಿಸಿದೆ. ಗುಡುಗು-ಸಿಡಿಲಿನ ಮಳೆ ಬರುವ ಲಕ್ಷಣ ಕಾಣಿಸ್ತಿದೆ. ಪಾಪಿಗಳು ಸಮುದ್ರಕ್ಕೆ ಹೋದ್ರೂ ಕರ್ಮ ರಿಟರ್ನ್ಸ್ ಎನ್ನುವಂತಾಗಿದೆ. ಇಂಟೆರಿಮ್ ಬೇಲ್, ರೆಗ್ಯೂಲರ್ ಬೇಲ್ ಒಳಗೆ ಮರ್ಜ್ ಆಗಿ ವರ್ಷಾಂತ್ಯಕ್ಕೆ ಬಂಧಮುಕ್ತರಾಗಿದ್ದ ಕಾಟೇರ ಅಂಡ್ ಪಟಾಲಂಗೆ ಕೇಸ್ ಮತ್ತೆ ಸಮಸ್ಯೆ ಎದುರಾಗಿದೆ.
ಜಾಮೀನು ಪಡೆದಿದ್ರೂ ಡಿಗ್ಯಾಂಗ್ಗೆ ತಪ್ಪದ ಸಂಕಷ್ಟ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಸೇರಿ ಒಟ್ಟು 7 ಆರೋಪಿಗಳಿಗೆ ಹೈಕೋರ್ಟ್ ಕಳೆದ ಡಿಸೆಂಬರ್ 13ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. 185 ದಿನಗಳ ಬಳಿಕ ಸೆರೆವಾಸದಿಂದ ಮುಕ್ತಿ ಪಡೆದಿದ್ದ ನಟ ದರ್ಶನ್ಗೆ ಸರ್ಕಾರ ಶಾಕ್ ಕೊಟ್ಟಿದೆ. ಹೈಕೋರ್ಟ್ ನೀಡಿರುವ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಜಾಮೀನು ರದ್ದು ಮಾಡಲು ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ಮನವಿ ಮಾಡಿದೆ. ಸದ್ಯಅರ್ಜಿ ವಿಚಾರಣೆಗೆ ಸಮಯ ನಿಗದಿಯಾಗಲಿದೆ. ಎ1 ಪವಿತ್ರಾಗೌಡ, ಎ2 ದರ್ಶನ್, ಎ6 ಜಗದೀಶ್, ಎ7 ಅನುಕುಮಾರ್, ಎ11 ನಾಗರಾಜ್, ಎ12 ಎಂ.ಲಕ್ಷ್ಮಣ್ ಹಾಗೋ ಎ 14 ಪ್ರದೂಶ್ಗೆ ಮತ್ತೆ ಸಂಕಷ್ಟ ಎದುರಾಗಿದೆ.
‘ಜಾಮೀನು ರದ್ದು ಮಾಡಿ’ ಎಂದು ಸುಪ್ರೀಂಕೋರ್ಟ್ ಮೊರೆ
ಹೈಕೋರ್ಟ್ ನೀಡಿದ್ದ ಜಾಮೀನು ಅವಸರದಿಂದ ಕೂಡಿದಂತಿದೆ, ಯಾಕಂದ್ರೆ ಖ್ಯಾತ ನಟ ದರ್ಶನ್ ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ, ಸೆಷನ್ಸ್ ಕೋರ್ಟ್ನಲ್ಲಿ ಕೇಸ್ ಚಾರ್ಜ್ ಫ್ರೇಮ್ ಹಂತಕ್ಕೆ ಬಂದಿಲ್ಲ, ಇನ್ನು 7 ಮಂದಿಗೆ ಜಾಮೀನು ನೀಡಿರುವ ಬಗ್ಗೆ ಹೈಕೋರ್ಟ್ ಸಮರ್ಥನೆ ನೀಡಿಲ್ಲ, ಮ್ಯಾಜಿಸ್ಟ್ರೇಟ್ ಮುಂದೆ ಸಾಕ್ಷ್ಯಗಳು ನೀಡಿದ್ದ ಹೇಳಿಕೆಗಳನ್ನ ಪರಿಗಣಿಸಿಲ್ಲ, ನಟ ದರ್ಶನ್ಗೆ 6 ವಾರಗಳು ಮಧ್ಯಂತರ ಬೇಲ್ ನೀಡಿದ್ದಾಗಲೂ ಶಸ್ತ್ರಚಿಕಿತ್ಸೆ ಮಾಡಿಸಿಲ್ಲ, ನಟ ದರ್ಶನ್ & ಗ್ಯಾಂಗ್ ಹೈಕೋರ್ಟ್ ಜಾಮೀನಿಗೆ ಅರ್ಹರಾಗಿಲ್ಲ, ಕೇಸ್ನಲ್ಲಿ ಪ್ರಬಲ ಸಾಕ್ಷಿಗಳಿದ್ದರೂ ಪರಿಗಣಿಸಲು ಕೋರ್ಟ್ ವಿಫಲವಾಗಿದೆ. ಹೀಗಾಗಿ ಹೈಕೋರ್ಟ್ ಜಾಮೀನು ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡುತ್ತೇವೆ ಎಂದಿದ್ದಾರೆ ಸುಪ್ರೀಂಕೋರ್ಟ್ ವಕೀಲರು.
ಇನ್ನು ಕೇಸ್ನಲ್ಲಿ ಟೆಕ್ನಿಕಲ್ ಹಾಗೂ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಲು ಹೈಕೋರ್ಟ್ ವಿಫಲವಾಗಿದೆ. ಹೀಗಾಗಿ ಮಧ್ಯಂತರ ಪರಿಹಾರವಾಗಿ ಏಕಪಕ್ಷೀಯ ಆದೇಶ ನೀಡಬೇಕು ಅಂತ ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ಅರ್ಜಿಯಲ್ಲಿ ಕೋರಲಾಗಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದ್ರೆ ಮತ್ತೆ ನಟ ದರ್ಶನ್ ಅಂಡ್ ಗ್ಯಾಂಗ್ ಮತ್ತೆ ಜೈಲು ಸೇರಬೇಕಾಗುತ್ತೆ, ಅದೇನೇ ಇರಲಿ, ಹುಟ್ಟು ಚಾಳಿ ಘಟ್ಟ ಹತ್ತಿದರೂ ಬಿಡದು ಎಂಬಂತೆ ನಟ ದರ್ಶನ್ ಅಂಡ್ ಗ್ಯಾಂಗ್ಗೆ ಬೆನ್ನಿಗಂಟಿದ ಕಳಂಕ ಕಂಟಕವಾಗಿ ಕಾಡ್ತಿರೋದಂತೂ ಸುಳ್ಳಲ್ಲ.
ಇದನ್ನೂ ಓದಿ:ದಿಢೀರ್ ಕೋರ್ಟ್ನಲ್ಲಿ ಕಾಣಿಸಿಕೊಂಡ ಸ್ಯಾಂಡಲ್ವುಡ್ ನಟಿ ರಮ್ಯಾ; ಏನಿದು ಕೇಸ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ