/newsfirstlive-kannada/media/post_attachments/wp-content/uploads/2024/10/Arjuna-Elephant-1.jpg)
ಇಂದು ವಿಜಯದಶಮಿ ಸಂಭ್ರಮ. ಕ್ಯಾಪ್ಟನ್ ಅಭಿಮನ್ಯು ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ದಸರಾದಲ್ಲಿ ಹೆಜ್ಜೆ ಹಾಕಲಿದ್ದಾನೆ. 5ನೇ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿಯನ್ನು ಹೊತ್ತು ದಸರಾ ಸುತ್ತಲಿದ್ದಾನೆ. ಆದರೆ 750 ಕೆ.ಜಿ ಅಂಬಾರಿಯನ್ನು ಹೊರಲು ಅಭಿಮನ್ಯುವಿಗೆ ಧೈರ್ಯ ತುಂಬಿದ್ದು ಯಾರು ಗೊತ್ತಾ? ಅದುವೇ ಅರ್ಜುನ.
ಇಂದು ಅರ್ಜುನ ನಮ್ಮೊಂದಿಗಿಲ್ಲ. ಕಳೆರ ವರ್ಷ ಕಾಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅರ್ಜುನ ಸಾವನ್ನಪ್ಪಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಅರ್ಜುನ ನೆನಪು ಮಾತ್ರ ಮಾಸದೆ ಹಾಗೆಯೇ ಉಳಿದಿದೆ. ದಸರಾದಲ್ಲಿ ಅರ್ಜುನ ಹೆಜ್ಜೆಯನ್ನು ಕಂಡವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಇಂದು ಅಂಬಾರಿ ಹೊರುವ ಅಭಿಮನ್ಯು ಸಹ ಅರ್ಜುನನಿಂದ ಹಲವು ವಿಚಾರಗಳನ್ನು ಕಲಿತ್ತಿದ್ದಾನೆ. ಆತ ಜೊತೆಗಿದ್ದಾಗ ಅಭಿಮನ್ಯುಗೆ ಹೇಳಿಕೊಟ್ಟ ಧೈರ್ಯದ ಪಾಠವೇ ಇಂದು ನಾಡಹಬ್ಬವನ್ನು ಸಂಭ್ರಮ ಮತ್ತು ಸುಸೂತ್ರದಿಂದ ಕೂಡಿದಂತೆ ಮಾಡಿದೆ. ಆದರೆ ಅರ್ಜುನನ್ನು ಇಂದು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ.
ಅರ್ಜುನನ ಹಿನ್ನೆಲೆ ಹೀಗಿದೆ
1960ರಲ್ಲಿ ಜನಿಸಿದ್ದ ಅರ್ಜುನನಿಗೆ 63 ವರ್ಷ ವಯಸ್ಸಾಗಿತ್ತು. 1968ರಲ್ಲಿ ಕಾಕನಕೋಟೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರ್ಜುನನ್ನು ಸೆರೆ ಹಿಡಿಯಲಾಗಿತ್ತು. ಮಾವುತರು ಅರ್ಜುನನ್ನು ಚೆನ್ನಾಗಿ ಪಳಗಿಸಿದ ನಂತರ 1990ರಲ್ಲಿ ಅರ್ಜುನನ್ನು ಮೈಸೂರಿನ ದಸರಾ ಉತ್ಸವದ ಶಿಬಿರಕ್ಕೆ ಕರೆತರಲಾಗಿತ್ತು. ಆನೆ ದ್ರೋಣ, ಬಲರಾಮನ ಬಳಿಕ ಅರ್ಜುನನೇ ಚಿನ್ನದ ಅಂಬಾರಿಯನ್ನು ಹೊತ್ತು ದಸರಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದ. ಅರ್ಜುನ 6040 ಕೆಜಿ ತೂಕ ಹೊಂದಿದ್ದು, 2.95 ಮೀಟರ್ ಉದ್ದ ಇದ್ದ. ಕ್ಯಾಪ್ಟನ್ ಅರ್ಜುನ ಸತತ 22 ವರ್ಷದಿಂದ ವಿಶ್ವವಿಖ್ಯಾತ ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ.
ಅರ್ಜುನನ ವೀರಮರಣ!
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಇಂದು ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆದಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ನಾಲ್ಕು ಸಾಕಾನೆಗಳೊಂದಿಗೆ ಕಾಡಾನೆಗಳ ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ. ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಕೊನೆಗೆ ಒಂಟಿಸಲಗದ ಜೊತೆ ಸಾಕಾನೆ ಅರ್ಜುನ ಒಂಟಿಯಾಗಿ ಕಾಳಗಕ್ಕಿಳಿದಿದ್ದ. ಈ ಮದಗಜಗಳ ಕಾಳಗದಲ್ಲಿ ವೀರಾವೇಷದಲ್ಲಿ ಹೋರಾಡಿದ ಅರ್ಜುನ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ