/newsfirstlive-kannada/media/post_attachments/wp-content/uploads/2025/06/Art-of-Living-Permaculture-Training-2.jpg)
ಬೆಂಗಳೂರಿನ ಈ ಆಶ್ರಮವು, ಬರಡಾದ ಬುಡಕಟ್ಟು ಜನಾಂಗದ ಭೂಮಿಯಿಂದ ಹಿಡಿದು ತಾರಸಿ ತೋಟಗಳವರೆಗೆ ಸಾವಿರಾರು ಜನರಿಗೆ ತಮ್ಮದೇ ಆಹಾರವನ್ನು ಬೆಳೆಸಿಕೊಳ್ಳುವ ತರಬೇತಿಯನ್ನು ನೀಡುತ್ತಿದೆ.
ಶಕ್ತಿ ನಾರಾಯಣ್ ರವರಿಗೆ ಆ ಕ್ಷಣ ಸ್ಪಷ್ಟವಾಗಿ ನೆನಪಿದೆ. ಮೈಕ್ರೋಫೈನಾನ್ಸ್ ನ ಬಗ್ಗೆ ಒಂದು ತೀವ್ರ ಪ್ರಶ್ನೆ ಯನ್ನು ಹೊಂದಿದ್ದ ಓರ್ವ ಕಳಕಳಿಯ ವಿದ್ಯಾರ್ಥಿಯಾಗಿ ನಿಂತಿದ್ದರು. ಈಗಾಗಲೇ ಸಾವು ಬದುಕಿನ ಅಂಚಿನಲ್ಲಿ ತೊಳಲಾಡುತ್ತಿರುವ ರೈತರಿಂದ 30% ದಿಂದ 60% ದವರೆಗೆ ಬಡ್ಡಿಯನ್ನು ತೆಗೆದುಕೊಳ್ಳುವುದು ಎಲ್ಲಿಯ ನ್ಯಾಯ?" ಒಂದು ಕ್ಷಣಕ್ಕೆ ಇಡೀ ಕೋಣೆಯಲ್ಲಿ ಮೌನವು ಆವರಿಸಿತು.
ತನಗೆ ಬೇಕಾದ ಉತ್ತರವು ಸಿಗದೆ ಇದ್ದುದರಿಂದ, ಪ್ರತಿಷ್ಠಿತ ಉನ್ನತ ಪದವಿಯನ್ನೂ, ಅದು ನೀಡುವ ಭರವಸೆಯನ್ನೂ ತೊರೆದು, ಆಂಧ್ರಪ್ರದೇಶ ಮತ್ತು ಒಡಿಶಾದ ಗಡಿಯಲ್ಲಿರುವ ರಾಜಮಂಡ್ರಿಯಿಂದ 200 ಕಿ.ಮೀ. ದೂರವಿರುವ ದಟ್ಟ ಕಾಡಿನತ್ತ ಹೋಗುವ, ಜೀವನವನ್ನೇ ಪರಿವರ್ತಿಸುವಂತಹ ಒಂದು ನಿರ್ಧಾರವನ್ನು ಶಕ್ತಿ ತೆಗೆದುಕೊಂಡರು. ದನಿಯಿಲ್ಲದ ಬುಡಕಟ್ಟು ರೈತರಿಗೆ ದನಿಯಾಗುವ ನಿರ್ಧಾರವನ್ನು ತೆಗೆದುಕೊಂಡರು.
ಆದರೆ ಇದರ ಬಗ್ಗೆ ಅನುರಕ್ತಿ ಮಾತ್ರ ಸಾಲದಾಗಿತ್ತು. ಭಾರತೀಯ ಕೃಷಿಯ ಬಗ್ಗೆ ಪ್ರಾಯೋಗಿಕ ಅನುಭವ ಮತ್ತು ಆಳವಾದ ತಿಳಿವಳಿಕೆಯೂ ಬೇಕಿತ್ತು. ಆಗ ಅವರು ನೈಸಗಿಕ ಕೃಷಿ ಮತ್ತು ಪರ್ಮಾಕಲ್ಚರ್ ಗಳ ಬಗ್ಗೆ ತಿಳಿಯಲು ಯತ್ನಿಸಿದರು. ಇದು ಸುಲಭದ ಕೆಲಸವಾಗಿರಲಿಲ್ಲ ಮತ್ತು ಬುಡಕಟ್ಟು ರೈತರಿಗೆ ತುರ್ತು ಸಹಾಯ ದೊರಕಬೇಕಿತ್ತು.
2023ರ ಬೇಸಿಗೆಯಲ್ಲಿ, ಅವರ ಭವಿಷ್ಯದ ದಿಕ್ಕನ್ನು ಬದಲಾಯಿಸುವಂತಹ ಒಂದು ವಾರದ ತರಬೇತಿಯನ್ನು ಪಡೆದರು. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ, "ದಿ ಮ್ಯಾನ್ ಇನ್ ದಿ ಬಸ್" ಎಂದೇ ಪ್ರಸಿದ್ಧಿಯನ್ನು ಪಡೆದ ಶ್ರೀ ಬಿನಯ್ ಕುಮಾರ್ ಸಿಂಗ್ ರವರಿಂದ ತರಬೇತಿಯನ್ನು ಪಡೆದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಬಿನಯ್ ಕುಮಾರ್ ರವರು ಪರ್ಮಾಕಲ್ಚರ್ ತಜ್ಞರಾಗಿದ್ದಾರೆ. ಸಾವಿರಾರು ಮಂದಿ ಈ ಪರ್ಮಾಕಲ್ಚರ್ ತರಬೇತಿ ಪಡೆದಿದ್ದಾರೆ.
ಸ್ಥಳೀಯ ಜೈವಿಕ ವೈವಿಧ್ಯತೆಯ ಸಂರಕ್ಷಣೆ, ಸ್ಥಳೀಯ ಬೀಜಗಳ ಸಂರಕ್ಷಣೆ, ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಮತ್ತು ಮನೆಯಲ್ಲಿ ಅಥವಾ ತೋಟದಲ್ಲೇ ಸಿಗುವ ತ್ಯಾಜ್ಯ ಪದಾರ್ಥಗಳನ್ನು ಬಳಸಿ ಕೃಷಿಗೆ ಬೇಕಾದ ಉತ್ಪನ್ನಗಳನ್ನು ತಯಾರಿಸುವುದು, ನೈಸರ್ಗಿಕ ಕೃಷಿಯ ಪ್ರಾಚೀನ ಹಾಗೂ ವೈದಿಕ ಪದ್ಧತಿಗಳನ್ನು ಅನುಸರಿಸಿ ಆಹಾರವನ್ನು ಬೆಳೆಯುವುದನ್ನು ಶಕ್ತಿಯವರು ಕಲಿತರು. ಪ್ರಕೃತಿಯ ಬುದ್ಧಿವಂತಿಕೆಯನ್ನು ಬಳಸಿಕೊಂಡು ಬೆಳೆ ಹೆಚ್ಚಿಸುವುದು ಹೇಗೆಂಬುದನ್ನು, ಕನಿಷ್ಠ ಹಸ್ತಕ್ಷೇಪದೊಂದಿಗೆ ಹಲವಾರು ತರಕಾರಿ, ಹಣ್ಣುಗಳನ್ನು ಬಂಜರು ಭೂಮಿಯಲ್ಲೂ ಬೆಳೆಯಬಹುದೆಂಬುದನ್ನು ಅವರು ಅರಿತುಕೊಂಡರು. "ಪರ್ಮಾಕಲ್ಚರ್ ಪ್ರಕೃತಿಯೊಡನೆ ಸಾಮರಸ್ಯಮಯವಾಗಿ ಕೆಲಸ ಮಾಡುತ್ತದೆಂದು ತಿಳಿದುಕೊಂಡೆ. ಇದೇ ತತ್ವಗಳಿಂದಾಗಿ ಜೀವನವು ಅರಳುತ್ತದೆ ಮತ್ತು ಇವುಗಳನ್ನು ದೊಡ್ಡ ಹೊಲದಲ್ಲೂ ಅಥವಾ ಪುಟ್ಟ ತಾರಸಿ ತೋಟದಲ್ಲೂ ಬಳಸಬಹುದು ಎಂದು ತಿಳಿದುಕೊಂಡೆ ಎನ್ನುತ್ತಾರೆ ಶಕ್ತಿ.
ಇಂದು, ಶಕ್ತಿಯವರು ಸುಮಾರು 500 ಆದಿವಾಸಿ ಕುಟುಂಬಗಳೊಂದಿಗೆ 200 ಎಕರೆ ಜಮೀನಿನಲ್ಲಿ ಕೃಷಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಪ್ರಕೃತಿ ಹಾಗೂ ಪ್ರಾಕೃತಿಕ ತತ್ವಗಳೊಂದಿಗೆ ಸರಿದೂಗುವ ಅವರ ಪಾರಂಪರಿಕ ಕೃಷಿ ಪದ್ಧತಿಯನ್ನೂ ಸಂರಕ್ಷಿಸುತ್ತಿದ್ದಾರೆ. ಬೀಜಗಳ ಬ್ಯಾಂಕ್ ಅನ್ನು ಸೃಷ್ಟಿ ಮಾಡಿ, ಆ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿರುವಂತಹ ಬೀಜಗಳನ್ನು ಸಂರಕ್ಷಿಸಿದ್ದಾರೆ. ರೈತರು ಕೊಳವೆ ಬಾವಿ ಬದಲು ಮಳೆಯ ನೀರನ್ನು ಸಂಗ್ರಹಿಸಲು ಜಾಗೃತಿ ಮೂಡಿಸಿದ್ದಾರೆ.
ಓರ್ವ ಬುಡಕಟ್ಟು ರೈತರು, "ಎಲ್ಲರೂ ನಮ್ಮಿಂದ ಏನನ್ನಾದರೂ ಪಡೆಯಲು ಮತ್ತು ನಮ್ಮ ಭೂಮಿಯ ದುರ್ಬಳಕೆ ಮಾಡಲು ಬರುತ್ತಾರೆ. ಆದರೆ ಶಕ್ತಿಯವರು ನಮ್ಮ ಜೀವನದಲ್ಲಿ ಆರ್ಥಿಕ ಬಲವನ್ನು ಹೆಚ್ಚಿಸಿ, ದೈಹಿಕ ಒಳಿತನ್ನೂ ಉಂಟುಮಾಡಿದ್ದಾರೆ. ಕೃಷಿ ಮಾಡುವ ವೆಚ್ಚವನ್ನು ಕಡಿಮೆ ಮಾಡಿದ್ದಾರೆ. ನಮಗೆ ಕಳೆದೇ ಹೋಯಿತು ಎಂದು ಅಂದುಕೊಂಡಿದ್ದ ಭೂಮಿಯ ಭಾಗದಲ್ಲೂ ಈಗ ಕೃಷಿ ಮಾಡುತ್ತಿದ್ದೇವೆ" ಎನ್ನುತ್ತಾರೆ.
ಬಂಡೆಗಳು ಹಸಿರಾದವು!
ಗುರುದೇವ್ ಶ್ರೀ ಶ್ರೀ ರವಿ ಶಂಕರರು, "ನೈಸರ್ಗಿಕ ಕೃಷಿಯೆಂದರೆ ಪ್ರಕೃತಿಯನ್ನು ಗೌರವಿಸುವುದು, ಅದರ ಲಯವನ್ನು ಅರ್ಥ ಮಾಡಿಕೊಂಡು, ಅದರೊಡನೆ ಸಾಮರಸ್ಯದಿಂದ ಕೆಲಸ ಮಾಡುವುದು. ನಾವು ಪ್ರಕೃತಿಯ ಬಗ್ಗೆ ಅಕ್ಕರೆಯನ್ನು ತೋರಿದರೆ, ಪ್ರಕೃತಿಯೂ ನಮ್ಮನ್ನು ಮರಳಿ ಪೋಷಿಸುತ್ತದೆ" ಎನ್ನುತ್ತಾರೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ನೈಸರ್ಗಿಕ ಕೃಷಿಯಲ್ಲಿ ನಡೆಸುತ್ತಿರುವ ವ್ಯಾಪಕವಾದ ಕೆಲಸಕ್ಕೆ ಗುರುದೇವರೇ ಸ್ಫೂರ್ತಿ. ಅವರ ಮಾರ್ಗದರ್ಶನದಲ್ಲಿ 30 ಲಕ್ಷಕ್ಕೂ ಹೆಚ್ಚು ರೈತರು ನೈಸರ್ಗಿಕ ಕೃಷಿಗೆ ಪ್ರೇರಿತರಾಗಿದ್ದಾರೆ.
ಬಿನಯ್ ಕುಮಾರ್ ಸಿಂಗ್ ರಂತಹ ತರಬೇತಿದಾರರು ಗುರುದೇವರ ಮಾರ್ಗದರ್ಶನ ಮತ್ತು ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಆಶ್ರಮದ ಪರಿಸರವನ್ನು, ಪ್ರಕೃತಿಯೊಂದಿಗೆ ಸಾಮರಸ್ಯತೆಯಿಂದಿರಲು ಸಾಧ್ಯವಾಗುವಂತಹ ಅದ್ಭುತ ಮಾದರಿಯಾಗಿ ಪರಿವರ್ತನೆ ಮಾಡಿದ್ದಾರೆ.
ಪರ್ಮಾಕಲ್ಚರ್ ನಿಂದ ಬೆಳೆದ ತರಕಾರಿಗಳನ್ನು ಮತ್ತು ಹಣ್ಣುಗಳನ್ನು, ISO ನಿಂದ ಪ್ರಮಾಣಿತವಾದ ಅನ್ನಪೂರ್ಣ ಅಡುಗೆ ಮನೆಯಲ್ಲಿ, ಸಾವಿರಾರು ಸಾಧಕರಿಗೆ ಪ್ರಸಾದದ ರೂಪವಾಗಿ ನೀಡಲಾಗುತ್ತದೆ. ಬಿನಯ್ ರವರು, "ಪರ್ಮಾಕಲ್ಚರ್ ನಮಗೆ ಹೆಚ್ಚು ಗಮನಿಸುವುದನ್ನು ಮತ್ತು ನಾವು ನಡುವೆ ಬರುವುದನ್ನು ಕಡಿಮೆ ಮಾಡುವುದನ್ನು ಹೇಳಿಕೊಡುತ್ತದೆ. ಚೇತರಿಸುವುದು ಮತ್ತು ಹಸನಾಗಿ ಬೆಳೆಯುವುದು ಹೇಗೆಂಬುದು ಪ್ರಕೃತಿಗೆ ತಿಳಿದಿದೆ. ಇದು ಕೇವಲ ಆಹಾರವನ್ನು ಬೆಳೆಯುವ ಬಗ್ಗೆ ಮಾತ್ರವಲ್ಲ; ಇದು ಜ್ಞಾನವನ್ನು, ಸಹನೆಯನ್ನು ಮತ್ತು ಪ್ರಕೃತಿಯ ಬಗ್ಗೆ ಒಲವನ್ನು ಬೆಳೆಸಿಕೊಳ್ಳುವುದರ ಬಗ್ಗೆ ಆಗಿದೆ" ಎನ್ನುತ್ತಾರೆ.
ಕೃಷಿ ಭೂಮಿಯನ್ನು ದಾಟಿ ಮನೆಯ ಮೇಲ್ಛಾವಣಿವರೆಗೆ
ರಾಜಮಂಡ್ರಿಯ ಬುಡಕಟ್ಟು ತೋಟಕ್ಕಿಂತಲೂ ಬಲು ದೂರದಲ್ಲಿ, ಕೊಲ್ಕೊತ್ತಾದ ಗೃಹಿಣಿಯಾದ ನಿಶಾ ಅಗರ್ವಾಲ್ ರವರ ಟೆರೇಸ್ ಗಾರ್ಡನ್ ಇದೆ. ಅವರು ಆಶ್ರಮದಲ್ಲಿ ಪರ್ಮಾಕಲ್ಚರ್ ತರಬೇತಿಯನ್ನು ಪಡೆದು, ಇದುವರೆಗೂ 20,000 ಕಿಲೋ ತ್ಯಾಜ್ಯವನ್ನು ಕಂಪೋಸ್ಟ್ ಆಗಿ ಪರಿವರ್ತನೆ ಮಾಡಿದ್ದಾರೆ.
2017 ರಲ್ಲಿ ಅವರು ಆಶ್ರಮದ ಪರ್ಮಾಕಲ್ಚರ್ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ತ್ಯಾಜ್ಯವನ್ನು ಬಿಸಾಡದೆ ಅದಕ್ಕೂ ಗೌರವವನ್ನು ನೀಡುತ್ತಿರುವುದನ್ನು ಕಂಡರು. ಅಲ್ಲೇ ಮಣ್ಣನ್ನು ತಯಾರಿಸಲಾಗುತ್ತಿತ್ತು. ಬೀಜಗಳನ್ನು ಕೊಳ್ಳುವ ಬದಲಿಗೆ ಅವುಗಳನ್ನು ಸಂರಕ್ಷಿಸಲಾಗುತ್ತಿತ್ತು, ಅವುಗಳನ್ನು ಹಂಚಿಕೊಳ್ಳಲಾಗುತ್ತಿತ್ತು ಮತ್ತು ಅವು ಮರುಜೀವವನ್ನು ಪಡೆಯುತ್ತಿದ್ದವು. ಬಿನಯ್ ಭಯ್ಯರವರಿಂದ ನಿಶಾರವರು ಮಣ್ಙಿನ ಪುನರುಜ್ಜೀವನ ಮಾಡುವುದನ್ನು, ಮಳೆನೀರಿನ ಕೊಯ್ಲು ಮಾಡುವುದನ್ನು, ಸುಸ್ಥಿರವಾದ ಆಹಾರ ಪದ್ಧತಿಗಳನ್ನು ಸೃಷ್ಟಿ ಮಾಡುವುದನ್ನು ಕಲಿತರು. ಅವರ ಮನೆಯ 3000 ಚದರಡಿಯ ತಾರಸಿ ತೋಟವು ಈಗ ಸಮೃದ್ಧ ಸಸ್ಯಕಾಶಿಯಾಗಿದ್ದು, ಅಲ್ಲಿ 300 ರೀತಿಯ ಹಣ್ಣುಗಳು, ಸೌತೇಕಾಯಿ, ಗೆಣಸು, ಹೀರೇಕಾಯಿ, ಪಾಲಾಕು, ಕೆಂಪು ಬೆಂಡೇಕಾಯಿ, ಬಿಳಿ ಬದನೆಕಾಯಿ, ಬಿಳಿ ಹಾಗಲಕಾಯಿ, ಇತ್ಯಾದಿ ತರಕಾರಿಗಳು ಬೆಳೆಯುತ್ತವೆ. ಹಣ್ಣುಗಳಲ್ಲಿ ಸೀತಾಫಲ, ಸೀಬೆ ಹಣ್ಣು, ಸಪೋಟ, ಕರಬೂಜ ಹಣ್ಣು ಮತ್ತು ಹಸಿರಿನಲ್ಲಿ ಕೊತ್ತಂಬರಿ ಸೊಪ್ಪು, ತುಳಸಿ, ಸೆಲೆರಿ ಎಲೆಗಳು, ಪಾರ್ಸ್ಲೆ, ಇಟಾಲಿಯನ್ ಥೈಮ್ ಅನ್ನೂ ಅವರು ಬೆಳೆಯುತ್ತಾರೆ.
ಆರ್ಟ್ ಆಫ್ ಲಿವಿಂಗ್‌ನ ಪರ್ಮಾಕಲ್ಚರ್ ತರಬೇತಿಯು ಇತರ ತರಬೇತಿಗಳಿಗಿಂತಲೂ ವಿಶಿಷ್ಟವಾಗಿದೆ. ಕಾರಣವೇನೆಂದರೆ ಅದು ಕೇವಲ ಬರಡು ಕಲ್ಲಿನ ಮೇಲೆ ಆಹಾರವನ್ನು ಬೆಳೆಯುವ ಬಗೆ ಅಲ್ಲ. ಪ್ರಕೃತಿ ಮತ್ತು ಅದರ ಬುದ್ಧಿವಂತಿಕೆಯ ಮೇಲಿನ ಗೌರವ ಭಾವವನ್ನು ಪೋಷಿಸುವುದರ ಬಗ್ಗೆಯಾಗಿದೆ. ಪರ್ಮಾಕಲ್ಚರ್ ಸ್ಥಳಕ್ಕೆ ಭೇಟಿ ನೀಡುವವರೆಲ್ಲರೂ, ಇದೊಂದು ಅದ್ಭುತ ಎಂದೇ ಹೇಳುತ್ತಾರೆ. ಆದರೆ ಇದು ಮಾಯಾಜಾಲವಲ್ಲ. ಇದನ್ನು ಮಾಡುವ ನಿಖರವಾದ ವಿಧಾನವಿದೆ. ಅದನ್ನು ಆರ್ಟ್ ಆಫ್ ಲಿವಿಂಗ್‌ನ ಪರ್ಮಾಕಲ್ಚರ್ ತರಬೇತಿಯಲ್ಲಿ ತಿಳಿಯಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ