ಹುಲಿ ಉಗುರು ಪ್ರಕರಣಕ್ಕೆ ಧರ್ಮದ ಬಣ್ಣ ಬಳಿದ ಅರವಿಂದ್​ ಬೆಲ್ಲದ್​.. ವಿಜುಗೌಡ ಪುತ್ರನಿಗೆ ಶಾಕ್​, ಹೆಬ್ಬಾಳ್ಕರ್​ ಮಗ ಕೂಲ್​

author-image
AS Harshith
Updated On
ಹುಲಿ ಉಗುರು ಪ್ರಕರಣಕ್ಕೆ ಧರ್ಮದ ಬಣ್ಣ ಬಳಿದ ಅರವಿಂದ್​ ಬೆಲ್ಲದ್​.. ವಿಜುಗೌಡ ಪುತ್ರನಿಗೆ ಶಾಕ್​, ಹೆಬ್ಬಾಳ್ಕರ್​ ಮಗ ಕೂಲ್​
Advertisment
  • ಹುಲಿ ಉಗುರು ವಿವಾದದಲ್ಲಿ ಹಿಂದೂಗಳು ಟಾರ್ಗೆಟ್
  • ಬೆಲ್ಲದ್​ ಧರ್ಮಾಸ್ತ್ರಕ್ಕೆ ಸಿಕ್ತು ಅರ್ಚಕರ ಪ್ರಕರಣ
  • ಧರ್ಮಾಸ್ತ್ರದ ಜೊತೆಗೆ ರಾಜಕೀಯ ತಾರತಮ್ಯದ ಆರೋಪ

ಹುಲಿ ಉಗುರು ಪೆಂಡೆಂಡ್ ಪತ್ತೆ ಪ್ರಕರಣ ವ್ಯಾಪಕ ತಿರುವು ಪಡೆಯುತ್ತಿದೆ. ಹುಲಿ ಉಗುರು ಪ್ರಕರಣಕ್ಕೆ ಧರ್ಮದ ಟಚ್ ಸಿಕ್ಕಿದೆ. ಜೊತೆಗೆ ರಾಜಕೀಯ ಲೇಪವೂ ಬಳಿದುಕೊಂಡಿದೆ. ಶಾಸಕ ಬೆಲ್ಲದ್​​ ಸಿಡಿಸಿದ ಬಾಂಬ್​​​ಗೆ ಚಿಕ್ಕಮಗಳೂರಿನಲ್ಲಿ ಉತ್ತರ ಸಿಕ್ಕಿದೆ. ಇಬ್ಬರು ಅರ್ಚಕರು, ಸೆರೆಮನೆಗೆ ತೆರಳಿದ್ದಾರೆ. ಇತ್ತ, ವರ್ತೂರು ಸಂತೋಷ್​​ಗೆ ಜೈಲಾ, ಬೇಲಾ ಅನ್ನೋದು ಇವತ್ತು ಕೋರ್ಟ್​​​ ತೀರ್ಪು ನೀಡಲಿದೆ.

ಹುಲಿ ಉಗುರು ಪರಚುತ್ತಿದೆ. ಶೋಕಿಗಾಗಿ ಕತ್ತಲ್ಲಿ ಹಾಕಿದ್ದ ಉಗುರು, ಈಗ ಉರುಳಾಗ್ತಿದೆ.. ಬಿಗ್​​​ಬಾಸ್​​ನ ಸ್ಪರ್ಧಿ ವರ್ತೂರು ಸಂತೋಷ್​ನಿಂದ ಆರಂಭವಾದ ವ್ಯಾಘ್ರ ಘರ್ಜನೆ, ಎಲ್ಲೆಲ್ಲೂ ವ್ಯಾಪಿಸ್ತಿದೆ. ಸೆಲೆಬ್ರಿಟಿಗಳಿಂದ ಹಿಡಿದು ಜ್ಯೋತಿಷಿಗಳು, ಅರ್ಚಕರು, ರಾಜಕಾರಣಿಗಳ ಪುತ್ರರು ಸೇರಿ ಸ್ವತಃ ಸರ್ಕಾರಿ ಅಧಿಕಾರಿಗಳಿಗು ಈ ಕಂಠಹಾರ ಕಂಟಕ ತಂದಿಟ್ಟಿದೆ. ಈ ನಡುವೆ ಹುಲಿ ಉಗುರಿಗೂ ಕಲರ್​​​ ಕಲರ್​​​ ನೇಲ್​ ಪಾಲಿಷ್​​ ಅಂಟಿದೆ. ಇದಕ್ಕೂ ರಾಜಕೀಯ, ಧರ್ಮದ ಬಣ್ಣ ಬಳಿದಿದೆ.

ಬಿಜೆಪಿಯ ಶಾಸಕ ಅರವಿಂದ ಬೆಲ್ಲದ್ ಹೊಸ ಬಾಂಬ್​​

ಹುಲಿ ಉಗುರು ಪ್ರಕರಣಕ್ಕೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಧರ್ಮದ ಬಣ್ಣ ಬಳಿದಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಬೆಲ್ಲದ್, ಹುಲಿ ಉಗುರಿನ ಲಾಕೆಟ್ ಧರಿಸಿದ ಆರೋಪದಲ್ಲಿ ಹಲವರ ಮನೆ ಮೇಲೆ ರೇಡ್​​ ಮಾಡಲಾಗಿದೆ. ಪೆಂಡೆಂಟ್​​​​ ಪ್ರಕರಣದಲ್ಲಿ ಹಿಂದೂಗಳನ್ನ ಟಾರ್ಗೆಟ್ ಮಾಡಲಾಗ್ತಿದೆ ಅಂತ ಆರೋಪಿಸಿದ್ದಾರೆ.

publive-image

ಕಾನೂನಿನಲ್ಲಿ ಎಲ್ಲರಿಗೂ ಸಮಾನವಾಗಿಯೇ ಕ್ರಮ ತಗೋಬೇಕು, ಮುಸ್ಲಿಂ ದರ್ಗಾಗಳಲ್ಲಿ ನವಿಲುಗರಿ ಬಳಕೆ ಮಾಡ್ತಾರೆ. ಇದು ಕೂಡಾ ಕಾನೂನಿಗೆ ವಿರುದ್ಧ. ದರ್ಗಾಗಳ ಮೇಲೂ ಕ್ರಮ ಕೈಗೊಳ್ಳಲಿ. ಮುಸ್ಲಿಂ ಮೌಲ್ವಿಗಳ ವಿರುದ್ಧ ಕೇಸ್ ಹಾಕಿ, 7 ವರ್ಷಗಳ ಜೈಲು ಶಿಕ್ಷೆ ಕೊಡಿಸಿ, ನಿಮ್ಮ ಅರಣ್ಯ ರಕ್ಷಣೆ ಕಾಳಜಿ ಎಷ್ಟಿದೆ ಅಂತಾ ಗೊತ್ತಾಗಲಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಹಿಂದೂ ಧರ್ಮ ಟಾರ್ಗೆಟ್ ಮಾಡಿ ಕೇಸ್ ಹಾಕಬಾರದು ಅಂತ ಹೊಸ ವಾದ ಮಂಡಿಸಿದ್ದಾರೆ. ಅಲ್ಲದೆ, ಬರ ವಿದ್ಯುತ್ ಸಮಸ್ಯೆ ಇರುವುದರಿಂದ ಗಮನ ಬೇರೆಡೆ ಸೆಳೆಯಲು ಹುಲಿ ಉಗುರು ಪ್ರಕರಣ ಮುನ್ನೆಲೆಗೆ ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

 ಹುಲಿ ಉಗುರು ಧರಿಸಿದ್ದ ಅರ್ಚಕರಿಬ್ಬಗೆ ಜೈಲು!

ಹೌದು ಶಾಸಕ ಬೆಲ್ಲದ್​ ಅಂಟಿಸಿದ ಧರ್ಮದ ಬಣ್ಣಕ್ಕೆ ಚಿಕ್ಕಮಗಳೂರಿನಲ್ಲಿ ಸಾಕ್ಷ್ಯ ಸಿಕ್ಕಂತಾಗಿದೆ.. ಬಾಳೆಹೊನ್ನೂರಿನ ಖಾಂಡ್ಯ ಮಾರ್ಕಂಡೇಶ್ವರ ದೇಗುಲದ ಅರ್ಚಕರಿಗೂ ಜೈಲು ಪಾಲಾಗಿದ್ದಾರೆ.. ಹುಲಿ ಉಗುರು ಧರಿಸಿದ್ದ ಇಬ್ಬರು ಅರ್ಚಕರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 72 ವರ್ಷದ ಇಳಿ ವಯಸ್ಸಿನ ಕೃಷ್ಣಾನಂದ ಹೊಳ್ಳ ಮತ್ತು ನಾಗೇಂದ್ರ ಜೋಯಿಸಾಗೆ, ಕಂಬಿ ಎಣಿಸುವಂತಾಗಿದೆ.

ವಿಜುಗೌಡ ಪುತ್ರನಿಗೆ ಶಾಕ್​​​, ಹೆಬ್ಬಾಳ್ಕರ್​​ ಪುತ್ರ ಫುಲ್​​​ ಕೂಲ್​​

ಹುಲಿ ಉಗುರು ಪ್ರಕರಣದಲ್ಲಿ ರಾಜಕೀಯದ ಬಾಣವೂ ನಾಟಿಸಿದೆ. ಇಲ್ಲಿ ಬಿಜೆಪಿ ನಾಯಕರೇ ಶಿಕಾರಿ ಆಗ್ತಿದ್ದಾರೆ ಅನ್ನೋ ಚರ್ಚೆಯೊಂದು ಹಬ್ಬಿದೆ. ಇದಕ್ಕೆ ಕಾರಣ ಎರಡು ಪ್ರಕರಣಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆದುಕೊಂಡ ರೀತಿ.

ವಿಜುಗೌಡ ಪಾಟೀಲ್​​​ ನಿವಾಸ ಪರಿಶೀಲನೆ

ವಿಜಯಪುರ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್​ ಪುತ್ರ ಶಾಶ್ವತಗೌಡ ಪಾಟೀಲ್​ಗೆ ಹುಲಿ ಉಗುರು ಕೇಸ್​​ ಸುತ್ತಿಕೊಂಡಿದೆ. ವಿಜುಗೌಡ ಪಾಟೀಲ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಏಳು ವರ್ಷಗಳ ಹಿಂದೆ ಹಾಕಿಕೊಂಡಿದ್ದ ಪೆಂಡೆಂಟ್​​​ ತನಿಖೆ ನಡೆದಿದೆ.

ಹೆಬ್ಬಾಳ್ಕರ್​​​ ಡೋರ್​​​ ಬೆಲ್​​​ ಬಾರಿಸಲು ಹಿಂದೇಟು

ಇತ್ತ, ಸರ್ಕಾರದ ಭಾಗವಾಗದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಳ್​ನ ಕೊರಳಲ್ಲಿದ್ದ ಹುಲಿ ಉಗುರು ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.. ಸೆಲೆಬ್ರಿಟಿಗಳು, ಜ್ಯೋತಿಷಿಗಳ ಮನೆ ಪ್ರದಕ್ಷಿಣೆ ಹಾಕಿದ ಅರಣ್ಯ ಇಲಾಖೆ, ಹೆಬ್ಬಾಳ್ಕರ್​​​ ಹೆಬ್ಬಾಗಿಲಿನ ಬೆಲ್​​ ಬಾರಿಸುವ ಸಾಹಸ ಮಾಡಿಲ್ಲ.. ಇದು ರಾಜಕೀಯ ಅಂತ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ.

publive-image

ವರ್ತೂರು ಸಂತೋಷ್​​ ಪಾಲಿಗೆ ಶುಭ ತರುತ್ತಾ ಶುಕ್ರವಾರ!?

ಇನ್ನು, ಬಿಗ್‌ಬಾಸ್‌ ಸ್ಪರ್ಧಿ ವರ್ತೂರ್ ಸಂತೋಷ್​ ಪಾಲಿಗೆ ಇವತ್ತು ಡಿ ಡೇ.. ಜೈಲಾ ಬೇಲಾ ಅನ್ನೋ ಪ್ರಶ್ನೆಗೆ ಉತ್ತರ ಸಿಗುವ ದಿನ. ಹೌದು, ಸಂತೋಷ್​​​ ಜಾಮೀನು ಅರ್ಜಿ ತೀರ್ಪು ಇವತ್ತಿಗೆ ಕಾಯ್ದಿರಿಸಲಾಗಿದೆ. ವರ್ತೂರ್ ಸಂತೋಷ್ ಜಾಮೀನು ಅರ್ಜಿ ವಾದ-ಪ್ರತಿವಾದ ಆಲಿಸಿದ ಬೆಂಗಳೂರಿನ ACJM ಕೋರ್ಟ್‌, ತನ್ನ ಆದೇಶ ಪ್ರಕಟಿಸಲಿದೆ. ನೋಟಿಸ್​​​ ಕೊಟ್ಟು ವಿಚಾರಣೆ ನಡೆಸುವ ಬದಲು ಏಕಾಏಕಿ ಬಂಧಿಸಿದ್ದು ಸರಿಯಲ್ಲ ಅಂತ ಸಂತೋಷ್​​ ಪರ ವಕೀಲರು ವಾದಿಸಿದ್ದಾರೆ.

ಒಟ್ಟಾರೆ, ಇಲ್ಲಿವರೆಗೆ ಹುಲಿ ಘರ್ಜನೆಗೆ ಬೆಚ್ಚಿಬೀಳ್ತಿದ್ದ ಜನ, ಈಗ ಅದರ ಉಗುರಿಗೂ ಭಯ ಪಡುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment