/newsfirstlive-kannada/media/post_attachments/wp-content/uploads/2025/01/saif_ali_khan.jpg)
ಬಾಂಬೆ: ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ಅವರ ಭವ್ಯ ಬಂಗಲೆಗೆ ನುಗ್ಗಿದ್ದ ದುಷ್ಕರ್ಮಿಯೊಬ್ಬ ಮನೆಯವರ ಮೇಲೆ ಚಾಕುವಿನಿಂದ ಅಟ್ಯಾಕ್ ಮಾಡಿದ್ದಾನೆ. ಮುಂಬೈನ ಬಾಂದ್ರಾದಲ್ಲಿನ ನಿವಾಸಕ್ಕೆ ನುಗ್ಗಿದ್ದ ದುರುಳ ಮೊದಲು ಮನೆ ಕೆಲಸಗಾರರ ಮೇಲೆ ದಾಳಿ ಮಾಡಿ ಬಳಿಕ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಭೀಕರವಾಗಿ ಹಲ್ಲೆ ಮಾಡಿದ್ದನು. ಸದ್ಯ ಘಟನೆಯಲ್ಲಿ ಗಾಯಗೊಂಡವರಲ್ಲಿ ಒಬ್ಬರು ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಸೈಫ್ ಅಲಿ ಖಾನ್ ಅವರ ಭವ್ಯ ಬಂಗಲೆಯಲ್ಲಿ ನರ್ಸ್ ಆಗಿರುವ 56 ವರ್ಷ ವಯಸ್ಸಿನ ಎಲಿಯಮಾ ಫಿಲಿಪ್ ಅವರು ಭಯಾನಕ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಧ್ಯೆರಾತ್ರಿ 2 ಗಂಟೆ ಸುಮಾರಿಗೆ 30 ವರ್ಷದ ಆಸುಪಾಸಿನ ದುಷ್ಕರ್ಮಿಯು ನೋಡಲು ಸಣ್ಣಗೆ ಇದ್ದು ತಲೆಗೆ ಟೋಪಿ ಧರಿಸಿ ಮನೆಗೆ ನುಗ್ಗಿದ್ದನು. ಅವನು ನೇರ ನಟನ 4 ವರ್ಷದ ಮಗ ಜೆ (Jeh) ರೂಮ್ಗೆ ಬಂದ. ಕೈಯಲ್ಲಿ ಚಾಕು ಸೇರಿ ಹರಿತವಾದ ವಸ್ತು ಹಿಡಿದು 1 ಕೋಟಿ ರೂಪಾಯಿ ಕೊಡು, ತಕ್ಷಣ ಈಗಲೇ ಹಣ ಕೊಡು ಎಂದು ನನ್ನನ್ನು ಕೇಳುತ್ತಿದ್ದನು ಎಂದು ಹೇಳಿದ್ದಾರೆ.
ಇದರಿಂದ ಗಾಬರಿಗೊಂಡ ನಾನು ಮಗುವನ್ನು ಎತ್ತಿಕೊಳ್ಳಲು ಹೋದಾಗ ವಿರೋಧ ವ್ಯಕ್ತಪಡಿಸಿದ ಆರೋಪಿ ಚಾಕುವಿನಿಂದ ಅಟ್ಯಾಕ್ ಮಾಡಿದ. ಹೀಗಾಗಿ ನನ್ನ ಮಣಿಕಟ್ಟು ಹಾಗೂ ಕೈಗಳಿಗೆ ಗಾಯಗಳು ಆದವು. ನಾವು ಕೂಗಿಕೊಳ್ಳುವುದು ಕೇಳಿ, ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಇಬ್ಬರು ಓಡೋಡಿ ಬಂದರು. ತಕ್ಷಣ ದುಷ್ಕರ್ಮಿಯಿಂದ ಕುಟುಂಬವನ್ನು ರಕ್ಷಿಸಲು ಸೈಫ್ ಅಲಿಖಾನ್ ಪ್ರಯತ್ನ ಮಾಡಿದ್ದಾರೆ. ಆದರೆ ಆರೋಪಿ ಬಲವಾಗಿ ಪ್ರತಿರೋಧ ತೋರಿ ನಟನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ಹೇಳಿದರು.
ಇದನ್ನೂ ಓದಿ:ಸೈಫ್ ಅಲಿ ಖಾನ್ಗೆ ಚೂರಿ ಇರಿತ.. ಆರೋಪಿ ಬಗ್ಗೆ ಪೊಲೀಸರಿಂದ ಬಿಗ್ ಅಪ್ಡೇಟ್ಸ್
ದುಷ್ಕರ್ಮಿಯ ಹಲ್ಲೆಯಿಂದ ಗಂಭೀರವಾಗಿ ಸೈಫ್ ಅಲಿಖಾನ್ ಗಾಯಗೊಂಡಿದ್ದಾರೆ. ಅವರ ಕುತ್ತಿಗೆ, ಭುಜ, ಬೆನ್ನು ಮತ್ತು ಮಣಿಕಟ್ಟಿನ ಮೇಲೆ ದೊಡ್ಡ ಗಾಯಗಳಾಗಿವೆ. ಈ ವೇಳೆ ರಕ್ಷಣೆಗೆ ಮಧ್ಯಪ್ರವೇಶಿಸಲು ಯತ್ನಿಸಿದ ಮತ್ತೊಬ್ಬ ಸಿಬ್ಬಂದಿ ಗೀತಾ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊರಗಿನಿಂದ ಇನ್ನಷ್ಟು ಸಿಬ್ಬಂದಿ ಬರುತ್ತಿದ್ದಂತೆ ದುಷ್ಕರ್ಮಿಯು ಓಡಿ ಹೋದನು ಎಂದು ಪೊಲೀಸರ ಮುಂದೆ ಹೇಳಿದ್ದಾರೆ.
ಸದ್ಯ ಘಟನೆಯಲ್ಲಿ ಗಾಯಗೊಂಡವರೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಎಲ್ಲರ ಆರೋಗ್ಯವು ಸ್ಥಿರವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. ಬಾಂದ್ರಾ ನಗರದ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಶಂಕಿತನು ಸುಮಾರು 5.5 ಅಡಿ ಎತ್ತರ ಇರಬಹುದು. ಘಟನೆಯ ಸಮಯದಲ್ಲಿ ಕಪ್ಪು ಬಟ್ಟೆ ಮತ್ತು ಕ್ಯಾಪ್ ಧರಿಸಿದ್ದರು ಎಂದು ಸಬ್ ಇನ್ಸ್‌ಪೆಕ್ಟರ್ ಸೂರಜ್ ಇರಕ್ತೆ ಅವರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ