/newsfirstlive-kannada/media/post_attachments/wp-content/uploads/2025/04/Donald-trump-baby-Scheme.jpg)
ಡೊನಾಲ್ಡ್ ಟ್ರಂಪ್.. ಅಮೆರಿಕಾ ಅಧ್ಯಕ್ಷರಾಗಿ, ಗದ್ದುಗೆ ಏರಿದ್ದೆ ಏರಿದ್ದು, ಹಲವಾರು ಯೋಜನೆಗಳನ್ನ ಜಾರಿಗೆ ತಂದು, ಇಡೀ ಪ್ರಪಂಚದ ಗಮನ ಸೆಳೆಯುತ್ತಿದ್ದಾರೆ. ಅದರಲ್ಲಿ ಕೆಲವು ಯೋಜನೆಗಳು ಜನರಿಗೆ ಮೆಚ್ಚುವವು ಇವೆ. ವಿರೋಧವೂ ಇವೆ. ವಲಸಿಗರೆಲ್ಲಾ ಅಮೆರಿಕಾದ ಗಡಿದಾಟಬೇಕು ಎಂದಾಗ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅದೇ ವಿಚಾರದ ಅಡಿಯಲ್ಲಿ ಮತ್ತೊಂದು ಕೌತುಕ ಯೋಜನೆ ಹೊರ ಬಂದಿದೆ. ಅದೇ ಡೊನಾಲ್ಡ್ ಟ್ರಂಪ್ನ ‘ಬೇಬಿ ಬೋನಸ್’ ಯೋಜನೆ.
ಅಮೆರಿಕಾದಲ್ಲಿ ಜನಸಂಖ್ಯೆ ಕೊರತೆಯನ್ನ, ಬಹುಮಟ್ಟಿಗೆ ವಲಸಿಗರಿಂದಲೇ ಸರಿದೂಗಿಸಲಾಗುತ್ತಿದೆ. ಆದರೆ ದೊಡ್ಡಣ್ಣ ಟ್ರಂಪ್ ಆಡಳಿತಕ್ಕೆ ಈ ವಲಸಿಗರ ಮೇಲೆ ಒಲವಿಲ್ಲ.. ಗೇಟ್ಪಾಸ್ ಕೊಡ್ಬೇಕು ಅಂತ ವಿರೋಧಿಸಿ ಕೂತಿದೆ. ಬಟ್ ಅದಕ್ಕೂ ಮುನ್ನ, ದೊಡ್ಡಣ್ಣನಿಗೆ ತನ್ನ ರಾಷ್ಟ್ರದಲ್ಲಿ ಜನಸಂಖ್ಯೆಯನ್ನ ಹೆಚ್ಚು ಮಾಡುವ ಅನಿವಾರ್ಯತೆ ಇದೆ. ಹಾಗಾಗಿ ಅಲ್ಲಿನ ಹೊಸ ತಾಯಂದಿರಿಗೆ ಆಫರ್ ಒಂದನ್ನ ಕೊಟ್ಟಿದ್ದಾರೆ.
ಅಮೆರಿಕಾದಲ್ಲಿ ಈಗ ಹೊಸ ತಾಯಂದಿರಿಗೆ ಟ್ರಂಪ್ ಸರ್ಕಾರದಿಂದ, ಬೇಬಿ ಬೋನಸ್ ಹೆಸರಲ್ಲಿ 5,000 ಡಾಲರ್ ಸಿಗಲಿದೆ. ಅಂದರೆ ಭಾರತದ ರೂಪಾಯಿ ಪ್ರಕಾರ, 4 ಲಕ್ಷದ 25 ಸಾವಿರ ರೂಪಾಯಿಗಳು. ಮಕ್ಕಳನ್ನ ಸಾಕುವುದು ಕಷ್ಟ ಎಂದು ಮನೆಗೊಂದು ಮಗು ಸಾಕು ಅಂದುಕೊಂಡಿದ್ದವರಿಗೆ, ಹೆಚ್ಚೆಚ್ಚು ಮಕ್ಕಳನ್ನ ಮಾಡಿಕೊಳ್ಳಿ ಅಂತ ಟ್ರಂಪ್ ಕೊಡುತ್ತಿರೋ ಆಫರ್ ಇದು.
ಅಮೆರಿಕಾದಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿದೆ ಅನ್ನೋದನ್ನ ಗಂಭೀರವಾಗಿ ಪರಿಗಣಿಸಿದ ಟ್ರಂಪ್, ಮುಂದೆ ಇದು ಆರ್ಥಿಕ ಮತ್ತು ಸಾಮಾಜಿಕವಾಗಿ ಪರಿಣಾಮ ಬೀರಬಹುದು ಅನ್ನೋದನ್ನೂ ಮನವರಿಕೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅಮೆರಿಕನ್ನರು ಸೋಲೋ ಲೈಫೇ ಸೋ ಬೆಟರ್ ಅಂದುಕೊಳ್ಳದೇ, ಅವರೆಲ್ಲಾ ಮದುವೆಯಾಗಿ, ಹೆಚ್ಚು ಮಕ್ಕಳನ್ನ ಮಾಡಿಕೊಳ್ಳುವಂತೆ ಅವರನ್ನ ಪ್ರೇರೇಪಿಸಬೇಕು. ಬಂಜೆತನವನ್ನೂ ನಿವಾರಿಸಬೇಕು ಅನ್ನೋ ಚರ್ಚೆ ಶ್ವೇತಭವನದಲ್ಲಿ ನಡೆದಿದೆ ಎನ್ನಲಾಗಿದೆ.
ಮಹಿಳೆಯರ ತಾಯ್ತನಕ್ಕೆ ಅಡ್ಡಿಗಳನ್ನ ತೊಲಗಿಸಲಿದೆ ಟ್ರಂಪ್ ಸರ್ಕಾರ!?
ಶ್ವೇತಭವನದಲ್ಲಿ ಅಮೆರಿಕದಲ್ಲಿ ಜನಸಂಖ್ಯೆಯನ್ನ ಸುಧಾರಿಸುವ ಬಗ್ಗೆ ಕೆಲವು ಸಲಹೆಗಳನ್ನ ಪಡೆಯಲಾಗಿದೆ. ಇದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಷ್ಯಾದ ಮಹಿಳೆಯರು ಕನಿಷ್ಠ ಎಂಟು, ಇಲ್ಲಾ ಅದಕ್ಕಿಂತ ಹೆಚ್ಚು ಮಕ್ಕಳನ್ನ ಹೆರಬೇಕು ಅನ್ನೋ ಸಲಹೆಯನ್ನ ಹೋಲುವಂತಿದೆ. ಸಲಹೆ ಥೇಟ್ ಹಾಗೆ ಇದ್ದರೂ, ಟ್ರಂಪ್ ಯೋಚನೆ ಒಂದು ಕುಟುಂಬವನ್ನ ನಿರ್ಮಿಸಿ, ಕುಟುಂಬದಿಂದ ಸಮಾಜವನ್ನ, ಸಮಾಜದಿಂದ ದೇಶವನ್ನ ನಿರ್ಮಿಸುವ ದಿಕ್ಕಿನಲ್ಲಿದೆ.
ಇದನ್ನೂ ಓದಿ: ಶೂ ಸಾಕ್ಸ್ ಬಳಸುವವರೇ ಎಚ್ಚರ.. ಈ ಅಭ್ಯಾಸದ ವ್ಯಕ್ತಿಗೆ ಭಯಾನಕ ರೋಗ; ವೈದ್ಯರಿಗೆ ದೊಡ್ಡ ಶಾಕ್!
ಪುರುಷರು ಮಹಿಳೆಯರ ನಡುವೆ ಮದುವೆ ಅನ್ನೋ ಬಂಧಕ್ಕೆ ಒತ್ತು ಕೊಡಿಸಿ, ಮಕ್ಕಳನ್ನ ಮಾಡಿಕೊಳ್ಳುವುರಿಂದ ಬದುಕಿಗೆ ಸಾರ್ಥಕತೆ ಬರುತ್ತದೆ ಅನ್ನೋ ಮಹತ್ವ ತಿಳಿಸಲಾಗುತ್ತಿದೆ. ಅಷ್ಟೇಯಲ್ಲದೇ ಮಹಿಳೆಯರಿಗೆ ಮುಟ್ಟಿನ ಚಕ್ರದ ಬಗ್ಗೆ ಶಿಕ್ಷಣ, ಬಂಜೆತನಕ್ಕೆ ಚಿಕಿತ್ಸೆ, ಮಕ್ಕಳಿರುವವರಿಗೆ ಬೇಬಿ ಬೋನಸ್, ಇಲ್ಲದವರಿಗೆ ಮಕ್ಕಳಾಗುವ ಭಾಗ್ಯ ಕಲ್ಪಿಸಿ, ಅವರಿಗೂ ‘ಬೇಬಿ ಬೂಮ್’ ಅನ್ನೋ ಯೋಜನೆಯಿಂದ ಆರ್ಥಿಕವಾಗಿ ಟ್ರಂಪ್ ಸರ್ಕಾರ ನೆರವಾಗಲಿದೆ.
ಸದ್ಯಕ್ಕೆ ಅಮೆರಿಕದ ಜನನ ಪ್ರಮಾಣ ಎಷ್ಟಿದೆ? ಚಿಂತೆಗೆ ಕಾರಣವಾಗಿದ್ದೇನು?
ಮಹಾ ಅಭಿಯಾನದ ಅಡಿಯಲ್ಲಿ ಟ್ರಂಪ್ ಸರ್ಕಾರ ಕೆಲವು ವಿಚಾರಗಳನ್ನ ಮಂಡಿಸಿದೆ. ಈ ಸಮಯದಲ್ಲಿ, ಅಮೆರಿಕದಲ್ಲಿ ಪ್ರತಿ ಮಹಿಳೆಗೆ ಜನನ ಪ್ರಮಾಣ ಕಡಿಮೆ ಆಗಿದೆ ಅನ್ನೋ ಆಘಾತದ ಸುದ್ದಿ ತಿಳಿದು ಬಂದಿದೆ. ಇದರರ್ಥ ಅಮೆರಿಕಾದಲ್ಲಿ ಸಂತಾನೋತ್ಪತ್ತಿಯೇ ಆಗುತ್ತಿಲ್ಲ.. ಜನಸಂಖ್ಯೆ ಸಂಪೂರ್ಣವಾಗಿ ಕಡಿಮೆ ಆಗಿಬಿಟ್ಟಿದೆ ಅನ್ನೋದು ವರದಿಯಾಗಿದೆ.
ಟ್ರಂಪ್ ಆಡಳಿತ ಶುರುವಾದಗಿನಿಂದ ಹಲವಾರು ಕಾರ್ಯಕ್ರಮಗಳನ್ನ ಕೈಗೊಂಡ ಬೆನ್ನಲ್ಲೇ. ಜನಸಂಖ್ಯೆ ಏರಿಸುವುದರ ಮೇಲೆ ಗಮನಹರಿಸಲಾಗಿದೆ. ಮುಂದಿರುವ ಪ್ರಸ್ತಾವನೆಗಳಲ್ಲಿ, ಫುಲ್‌ಬ್ರೈಟ್ ಮತ್ತು ಪ್ರಸಿದ್ಧ ಫೆಲೋಶಿಪ್ ಪ್ರೊಗ್ರಾಮ್ನ ಅವಾರ್ಡ್ಗಳಲ್ಲಿ ಶೇ 30ರಷ್ಟು ವಿವಾಹಿತ ಅಥವಾ ಮಕ್ಕಳನ್ನ ಹೊಂದಿರುವ ಮಹಿಳೆಯರಿಗೆ ಮೀಸಲಿಡಬೇಕು ಅನ್ನೋ ಪ್ರಸ್ತಾವನೆ ಇದೆಯಂತೆ. ಇದೇ ವೇಳೆ ಪ್ರತಿ ಮಹಿಳೆಗೆ ಮಗುವಿನ ಹೆರಿಗೆಯ ನಂತರ $5,000 ಬೇಬಿ ಬೋನಸ್ ಕೊಡಬೇಕು ಅನ್ನೋ ಪ್ರಸ್ತಾವನೆಯೂ ಬಂದಿದೆ ಎನ್ನಲಾಗಿದೆ.
ಟ್ರಂಪ್ ಸರ್ಕಾರ ಮಹಿಳೆಯರಿಗೆ, ಋತುಚಕ್ರದ ಬಗ್ಗೆ ಜಾಗೃತಿ ಮೂಡಿಸುತ್ತಾ, ಅಂಡೋತ್ಪತ್ತಿ ಸಮಯ ಮತ್ತು ಗರ್ಭಧರಿಸಲು ನಿಖರವಾದ ಸಮಯ ಯಾವುದು ಎಂದು ತಿಳಿಸಿ, ಜೊತೆ ಜೊತೆಗೆ ಶಿಶುಪಾಲನೆ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸುತ್ತಾ ಜನಸಂಖ್ಯೆಗೆ ಹೊಸ ದಾರಿ ಮಾಡುತ್ತಿದೆ. ಈ ಯೋಜನೆಗಳನ್ನ ಸರ್ಕಾರ ಯಾವಗಿನಿಂದ ಜಾರಿಗೊಳಿಸುತ್ತೆ ಅನ್ನೋದು ಖಾತ್ರಿಯಾಗಿಲ್ಲ. ಆದರೇ ಒಂದಂತೂ ಸ್ಪಷ್ಟವಾಗಿದೆ ಅಮೆರಿಕಾ ಜನಸಂಖ್ಯೆ ಕೊರತೆಯಲ್ಲಿದೆ, ಇದರಿಂದ ಟ್ರಂಪ್ ಸರ್ಕಾರ ಚಿಂತೆಯಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ