/newsfirstlive-kannada/media/post_attachments/wp-content/uploads/2025/01/Naxal-surrender.jpg)
ಬೆಂಗಳೂರು: ಶರಣಾದ 6 ಮಂದಿ ನಕ್ಸಲರಲ್ಲಿ ಪೈಕಿ ನಾಲ್ವರು ಕರ್ನಾಟಕದವರು. ಇನ್ನುಳಿದ ಇಬ್ಬರಲ್ಲಿ ಒಬ್ಬರು ತಮಿಳುನಾಡು ಮತ್ತೊಬ್ಬರು ಕೇರಳದವರು. ಇವರು ಮುಖ್ಯವಾಹಿನಿಗೆ ಮರಳಿದ್ದಾರೆ. ನಕ್ಸಲರ ಶರಣಾಗತಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಬಿಜೆಪಿ ಆಕ್ರೋಶ ಹೊರಹಾಕಿದೆ. ಇತ್ತ ನಕ್ಸಲರು ಮುಖ್ಯವಾಹಿನಿಗೆ ಬರಲು ಅವಕಾಶ ಕೊಟ್ಟಿದ್ದನ್ನ ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಆರು ಮಂದಿ ನಕ್ಸಲರು ಹಿನ್ನೆಲೆ ಏನು?
ರಾಜ್ಯದ ಮಲೆನಾಡಿನ ದಟ್ಟಡವಿಯಲ್ಲಿ ಹೋರಾಟ ನಡೆಸ್ತಿದ್ದ ನಕ್ಸಲರು ನಾಡಿಗೆ ಮರಳಿ ಸರ್ಕಾರಕ್ಕೆ ಶರಣಾಗಿದ್ದಾರೆ. ದಶಕಗಳಿಂದ ಸಂಘರ್ಷದ ಕೂಗು ಹಾಕಿದ್ದ ಕರ್ನಾಟಕದ ಮೂಲದ ನಾಲ್ವರು ಹಾಗೂ ತಮಿಳುನಾಡು, ಕೇರಳ ಮೂಲದ ಇಬ್ಬರು ಶರಣಾಗಿದ್ದಾರೆ. ಇನ್ನು ಕರ್ನಾಟಕದ ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ಬೆಳ್ತಂಗಡಿಯ ಕುಂತಲೂರು ಮೂಲದ ಸುಂದರಿ, ಮಾರಪ್ಪ ಅರೋಳಿ, ವಸಂತ, ಎನ್.ಜೀಶಾ ಶರಣಾಗತಿಯಾಗಿದ್ದಾರೆ.
ಮುಂಡಗಾರು ಲತಾ ಯಾರು?
ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದ ಲತಾ JCBM ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮೊಟಕುಗೊಳಿಸಿದ್ದು ನಕ್ಸಲ್ ಹೋರಾಟಕ್ಕೆ ಧುಮುಕಿ ಸಕ್ರಿಯಳಾಗಿದ್ದರು. ಕುದುರೆಮುಖ ವಿಮೋಚನಾ ಚಳವಳಿ ಮೂಲಕ ಎಂಟ್ರಿಯಾಗಿದ್ದ ಲತಾ ಗ್ರಾಮ ಪಂಚಾಯಿತಿ ಸದಸ್ಯೆ ಆಗಿದ್ದಳೆಂಬ ಮಾಹಿತಿ ಇದೆ. ಇನ್ನು ಲತಾ ವಿರುದ್ಧ 85 ಪ್ರಕರಣಗಳಿವೆ.
ಯಾರು ಈ ನಕ್ಸಲ್ ಸುಂದರಿ?
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಕುತ್ಲೂರು ಮೂಲದ ಸುಂದರಿಯ ಸಹೋದರ ಆನಂದ್ ಕೂಡ ನಕ್ಸಲ್ ಸದಸ್ಯನಾಗಿದ್ದ. ಸಹೋದರನ ಹಿಂದೆಯೇ ಸುಂದರಿ ಕೂಡ ನಕ್ಸಲ್ ಚಟುವಟಿಕೆಗೆ ಎಂಟ್ರಿ ಕೊಟ್ಟಿದ್ದರು. 2010ರಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಆನಂದ್ ಹತ್ಯೆಯಾಗಿದ್ದ, ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಆ್ಯಕ್ಟಿವ್ ಆಗಿದ್ದ ಸುಂದರಿ ವಿರುದ್ಧ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ 71 ಕೇಸ್‌ಗಳು ದಾಖಲಾಗಿವೆ.
ವನಜಾಕ್ಷಿ ಹಿನ್ನೆಲೆಯೇನು?
ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ನಕ್ಸಲ್ ವನಜಾಕ್ಷಿ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿ ಭೂಮಾಲೀಕರ ವಿರುದ್ಧ ಹೋರಾಟ ನಡೆಸಿದ್ದರು. ಉಳ್ಳವರ ವಿರುದ್ಧ ಆಕ್ರೋಶಗೊಂಡು ನಕ್ಸಲ್ ಚಳವಳಿಗೆ ಎಂಟ್ರಿ ಕೊಟ್ಟಿದ್ದರು. ಇನ್ನು ವನಜಾಕ್ಷಿ ವಿರುದ್ಧ ಸುಮಾರು 25 ಕೇಸ್‌ಗಳು ದಾಖಲಾಗಿವೆ.
ಮಾರಪ್ಪ ಅರೋಳಿ
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಆರೋಳಿ ಗ್ರಾಮದ ನಿವಾಸಿ ಮಾರಪ್ಪ ಅರೋಳಿ. ಇವರು ಪಿಯುಸಿವರೆಗೆ ವಿದ್ಯಾಭ್ಯಾಸ ನಡೆಸಿದ್ದು ತನ್ನ 18ನೇ ವಯಸ್ಸಿಗೆ ನಕ್ಸಲಿಸಂಗೆ ಎಂಟ್ರಿ ಕೊಟ್ಟಿದ್ದರು. ಸುಮಾರು 20 ವರ್ಷಗಳ ಕಾಲ ನಕ್ಸಲೈಟ್ ತಂಡದಲ್ಲಿದ್ದ ಮಾರೆಪ್ಪ ಆರೋಳಿ ವಿರುದ್ಧ ಉಡುಪಿ, ಮಂಗಳೂರಿನಲ್ಲಿ 50 ಕೇಸ್ಗಳಿವೆ.
ತಮಿಳುನಾಡು ಮೂಲದ ಕೆ. ವಸಂತ
ಕೆ.ವಸಂತ ಮೂಲತಃ ತಮಿಳುನಾಡಿನ ರಾಣಿಪೇಟ್ ನಿವಾಸಿಯಾಗಿದ್ದು ಕುದುರೆಮುಖ ಉದ್ಯಾನ ಉಳಿಸಿ ಹೋರಾಟದಲ್ಲಿ ಸಕ್ರಿಯನಾಗಿದ್ದ. ನಕ್ಸಲ್ ಕೆ.ವಸಂತ ವಿರುದ್ಧವೂ 9 ಪ್ರಕರಣಗಳು ದಾಖಲಾಗಿವೆ.
ಕೇರಳ ಮೂಲದ ಟಿ.ಎನ್ ಜಿಶಾ
ಕೇರಳ ಮೂಲದ ಟಿ.ಎನ್ ಜಿಶಾ ಕರ್ನಾಟಕದ ಕರಾವಳಿ ಭಾಗದ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಇವರ ವಿರುದ್ಧವೂ ಸುಮಾರು 18 ಕೇಸ್‌ಗಳು ದಾಖಲಾಗಿವೆ.
ಇನ್ನು ಶರಣಾದ ನಕ್ಸಲರು ಶಾಂತಿಗಾಗಿ ನಾಗರಿಕ ಸಮಿತಿಗೆ ಕೃತಘ್ನತೆ ಪತ್ರ ಬರೆದಿದ್ದು ತಾವೇ ಕೈಯಲ್ಲಿ ಪತ್ರ ಬರೆದು ಸಮಿತಿಗೆ ಕೊಟ್ಟಿದ್ದಾರೆ. 2025ರ ಕ್ರಾಂತಿಕಾರಿ ಶುಭಾಶಯಗಳು ಅಂತ ಉಲ್ಲೇಖಿಸಿದ್ದು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು, ನಿಮ್ಮೊಂದಿಗೆ ನಾವು, ಜನರಿಗಾಗಿ ಜೊತೆಗೂಡಿ ಹೋರಾಡೋಣ ಅಂತ ಬರೆದಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರಲ್ಲಿ 6 ಕೆಂಪು ಉಗ್ರರು ಶರಣಾಗತಿ.. ಸರ್ಕಾರದ ಮುಂದಿಟ್ಟಿರುವ 10 ಬೇಡಿಕೆಗಳು ಏನೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ