/newsfirstlive-kannada/media/post_attachments/wp-content/uploads/2024/11/Bhagalkote-Hair-Dryer-Blast.jpg)
ಬಾಗಲಕೋಟೆ: ಅಕ್ರಮ ಸಂಬಂಧದ ಅನಾಚಾರಕ್ಕೆ ಈ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿತ್ತು ಅನ್ನೋದು ಇಳಕಲ್ ಪೊಲೀಸರಿಗೆ ಗೊತ್ತಾಗಿತ್ತು. ತನಿಖೆಗೆ ಅಂತ ಬಸಮ್ಮ ಮತ್ತು ಶಶಿಕಲಾ ಇಬ್ಬರ ಮೊಬೈಲ್ನ್ನ ಪೊಲೀಸರು ವಶಕ್ಕೆ ತೆಗೆದುಕೊಂಡಿರ್ತಾರೆ. ಆಗ ಹೇರ್ ಡ್ರೈಯರ್ ಬ್ಲಾಸ್ಟ್ನಲ್ಲಿ ಬೆರಳು ಕಳ್ಕೊಂಡಿದ್ದ ಬಸಮ್ಮಳ ವಾಟ್ಸಾಪ್ನಲ್ಲಿ ಅದೊಂದು ಸುಳಿವು ಪೊಲೀಸರಿಗೆ ಸಿಕ್ಕಿತ್ತು.
ಸಿದ್ದಪ್ಪ: ನನ್ನ ಜೊತೆ ಯಾಕೆ ಮಾತು ಬಿಟ್ಟಿದ್ದಿಯಾ, ಕೈ ಮುಗಿತೀನಿ ಹೇಳು ಪ್ಲೀಸ್!
ನನ್ನ ಜೊತೆ ಯಾಕೆ ಮಾತು ಬಿಟ್ಟಿದ್ದೀಯಾ.. ಯೆಸ್ ಇದೊಂದು ವಾಯ್ಸ್ ಮೆಸೇಜ್ ಹೇರ್ ಡ್ರೈಯರ್ ಬ್ಲಾಸ್ಟ್ ಕೇಸ್ಗೆ ದೊಡ್ಡ ತಿರುವು ಕೊಟ್ಟಿತ್ತು. ಬ್ಲಾಸ್ಟ್ನಲ್ಲಿ ಗಾಯಗೊಂಡಿದ್ದ ಬಸಮ್ಮಳ ಮೊಬೈಲ್ಗೆ ಸಿದ್ದಪ್ಪ ಎಂಬಾತ ಮೆಸೇಜ್ ಕಳಿಸಿದ್ದ. ಆದ್ರೆ ಈ ವೇಳೆ ಪೊಲೀಸರು ಇಲ್ಲೊಂದು ಜಾಣ ನಡೆ ಇಡ್ತಾರೆ. ಈ ಮೆಸೇಜ್‌ಗಳ ಬಗ್ಗೆ ಬಸಮ್ಮಳಿಗೆ ಕೇಳೋದಿಲ್ಲ. ಆಕೆ ಗೆಳತಿ ಶಶಿಕಲಾಗೆ ಸಿದ್ದಪ್ಪನ ಕುಲ ಗೋತ್ರದ ಬಗ್ಗೆ ವಿಚಾರಿಸಿದ್ದಾರೆ. ಆಗಲೇ ನೋಡಿ, ಸಿದ್ದಪ್ಪನಿಗೂ ಮತ್ತು ಬಸಮ್ಮಳಿಗೂ ಒಂದು ಬಲವಾದ ನಂಟಿದೆ ಅನ್ನೋದು ಬಯಲಾಗೋದು.
ಬಸಮ್ಮ ಮತ್ತು ಸಿದಪ್ಪನ್ನ ಮಧ್ಯೆ ನಡೀತಿತ್ತು ಕುಚ್ ಕುಚ್ !
ಸಿದ್ದಪ್ಪನ ಸಿಡಿಆರ್ನಲ್ಲಿ ಹೇರ್ ಡ್ರೈಯರ್ ಬ್ಲಾಸ್ಟ್ ರಹಸ್ಯ!
ಇದೊಂದು ತರಹ ಸಿನಿಮಾ ಕತೆಯನ್ನ ಮೀರಿಸುವಂತ ಕಹಾನಿ.. ಪ್ಲಾನ್ ಮಾಡಿದ್ದು ಪ್ರಿಯಕರನೇ ಆದರೂ, ಬಲಿಪಶುವಾಗಿದ್ದು ಪ್ರೇಯಸಿ. ಟಾರ್ಗೆಟ್ ಇದ್ದಿದ್ದೇ ಬೇರೇ. ಅಸಲಿಗೆ ಈ ಬಸಮ್ಮ ಮತ್ತು ಸಿದ್ದಪ್ಪ ಒಂದೇ ಊರಿನವರು. ಕುಷ್ಟಗಿ ತಾಲೂಕಿನ ಪುರ್ತಗೇರಿಯಲ್ಲಿದ್ದ ಬಸಮ್ಮ ಮತ್ತು ಸಿದ್ದಪ್ಪ ಒಬ್ಬರನ್ನೊಬ್ಬರನ್ನ ಪ್ರೀತಿ ಮಾಡ್ತಿರ್ತಾರೆ. ಆದ್ರೆ ಎಲ್ಲರ ಪ್ರೀತಿಯಲ್ಲಿ ಆಗುವಂತೆ ಇವರ ಪ್ರೀತಿಗೂ ಪೋಷಕರ ವಿರೋಧವಿತ್ತು. ಇದಾದ ಮೇಲೆ ಬಸಮ್ಮಳನ್ನ ಬಾಗಲಕೋಟೆಯ ರಕ್ಕಸಗಿ ಗ್ರಾಮದ ಪಾಪಣ್ಣ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿರ್ತಾರೆ. ದುರಂತ ಏನಂದ್ರೆ, 2017 ರಲ್ಲಿ ಬಸಮ್ಮಳ ಗಂಡ ಪಾಪಣ್ಣ ಸಾವನ್ನಪ್ಪಿದ್ದ. ಈ ಟೈಮ್ನಲ್ಲಿ ಹಳೆ ಪ್ರೀತಿ ಮತ್ತೆ ಚಿಗರೊಡೆದಿತ್ತು.
ಇದನ್ನೂ ಓದಿ: ಹೇರ್ ಡ್ರೈಯರ್ ಸ್ಫೋಟ ಆಗಿದ್ದು ಹೇಗೆ? ಬಸಮ್ಮಳ ವಾಟ್ಸ್‌ಆ್ಯಪ್‌ನಲ್ಲೇ ಪೊಲೀಸರಿಗೆ ಮಹತ್ವದ ಸುಳಿವು!
ಮಿಲಿಟರಿ ಕ್ಯಾಂಪ್ನಲ್ಲಿ ಸಿಕ್ಕಿದ್ದ ಮಾಜಿ ಪ್ರಿಯಕರ
ಮತ್ತೆ ಅರಳಿತ್ತು ಪ್ರೀತಿ! ಶುರುವಾಗಿತ್ತು ಲವ್ವಿ ಡವ್ವಿ
ಪಾಪಣ್ಣ ಜೊತೆ ಮದುವೆಯಾದ್ಮೆಲೆ ಬಸಮ್ಮ ಗಂಡನ ಜೊತೆ ಚೆನ್ನಾಗಿಯೇ ಇದ್ಳು. ಹಳೆ ಪ್ರೀತಿ ಮರೆತು ಸಂಸಾರ ಮಾಡ್ಕೊಂಡಿದ್ಳು. ಆದ್ರೆ ಯಾವಾಗ ಗಂಡ ಸಾವನ್ನಪ್ಪಿದ್ನೋ ಬಸಮ್ಮ ಏಕಾಂಗಿಯಾಗಿದ್ಳು. ಒಂಟಿ ಒಂಟಿಯಾಗಿದೆ ಮನಸ್ಸು ಅಂತಿದ್ದ ಬಸಮ್ಮಳಿಗೆ ಐದು ವರ್ಷಗಳ ಹಿಂದೆ ಮತ್ತೆ ಹಳೆ ಪ್ರಿಯಕರ ಸಿದ್ದಪ್ಪ ಸಿಕ್ಕಿದ್ದ.
ಬಾಗಲಕೋಟೆಯ ಮಿಲಿಟರಿ ಕ್ಯಾಂಪ್ನಲ್ಲಿ ಇವರಿಬ್ಬರ ಪುನರ್ ಮಿಲನ್ ಆಗಿತ್ತು. ಜಂಟಿ ಜೀವಕ್ಕಾಗಿ ಹಾತೋರೆಯುತ್ತಿದ್ದ ಬಸಮ್ಮಳಿಗೆ ಹಳೆ ಪ್ರೇಮಿ ಮತ್ತೆ ಪ್ರೀತಿಯ ಆಸರೆ ನೀಡಿದ್ದ. ಹಾಗಾಗಿ ಈ ಸಿದ್ದಪ್ಪ ಪದೇ ಪದೇ ಬಸಮ್ಮ ವಾಸವಿದ್ದ ಮನೆಗೆ ಬಂದು ಹೋಗ್ತಿದ್ದ. ಒಂದೊಮ್ಮೆ ಮಿಲಿಟರಿ ಕ್ಯಾಂಪ್ಗೆ ಹೋದಾಗ ತನ್ನ ಗೆಳತಿ ಶಶಿಕಲಾಗೂ ಸಿದ್ದಪ್ಪನನ್ನ ಬಸಮ್ಮ ಪರಿಚಯ ಮಾಡಿಸಿದ್ಳು. ಸಿದ್ದಪ್ಪ ಮತ್ತು ತಾನೂ ಪ್ರೀತಿ ಮಾಡ್ತಿರುವ ವಿಚಾರ ಹೇಳಿಕೊಂಡಿದ್ಳು. ಆಗ್ಲೇ ನೋಡಿ ಇವರ ಲವ್ ಸ್ಟೋರಿಗೆ ವಿಘ್ನ ಎದುರಾಗಿತ್ತು.
ಪ್ರೀತಿ ಗೀತಿ ಬೇಡ ಅಂದಿದ್ಳು ಗೆಳತಿ ಶಶಿಕಲಾ
ಗೆಳತಿ ಮಾತು ಕೇಳಿ ಪ್ರಿಯಕರನಿಂದ ಬಸಮ್ಮ ದೂರ
ಬಸಮ್ಮಳಿಗೆ ಮದುವೆಯಾಗಿತ್ತು. ಗಂಡನಿಲ್ಲದಿದ್ರೂ ಮುದ್ದಾದ ಹೆಣ್ಣು ಮಗು ಇತ್ತು. ಹೀಗಿರುವಾಗ ಬಸಮ್ಮ ಮತ್ತೆ ಹಳೆ ಪ್ರೇಮಿಯ ಸಂಗ ಬಯಸಿದ್ಳು. ಈ ವಿಚಾರ ಗೆಳತಿ ಶಶಿಕಲಾಗೆ ಬಿಲ್ಕುಲ್ ಇಷ್ಟ ಇರಲಿಲ್ಲ. ಇನ್ನೂ ಇಂಟರ್ಸ್ಟಿಂಗ್ ಏನಂದ್ರೆ ಈ ಶಶಿಕಲಾ ಗಂಡ ಕೂಡ ಸಾವನ್ನಪ್ಪಿದ್ದ. ಹೀಗಾಗಿ ಸಿದ್ದಪ್ಪನಿಂದ ದೂರ ಇರುವಂತೆ ಹೇಳಿದ್ದಳು. ಸಿದ್ದಪ್ಪ ಬಸಮ್ಮಳ ಮನೆಗೆ ಬಂದಾಗ್ಲೂ ಬೈದು ಕಳಿಸಿದ್ದಳು. ವಿಚಾರ ದೊಡ್ಡದಾದ್ರೆ ಮರ್ಯಾದೆ ಹೋಗುತ್ತೆ ಅನ್ನೋ ಕಾರಣಕ್ಕೆ ಬಸಮ್ಮ ಸಿದ್ದಪ್ಪನಿಂದ ಅಂತರ ಕಾಯ್ದುಕೊಂಡು ಅವೈಡ್ ಮಾಡೋದಕ್ಕೆ ಶುರು ಮಾಡಿದ್ದಳು. ಅಲ್ಲಿಂದ ಸಿದ್ದಪ್ಪ ಮತ್ತು ಬಸಮ್ಮಳ ಪ್ರೀತಿಗೆ ಮತ್ತೆ ಬ್ರೇಕ್ ಬಿದ್ದಿತ್ತು.
ಶಶಿಕಲಾ ಮೇಲೆ ಸಿದ್ದಪ್ಪನ ದ್ವೇಷ! ಹತ್ಯೆಗೆ ರೂಪಿಸಿದ್ದ ಸ್ಕೆಚ್!
ಯಾವಾಗ ಬಸಮ್ಮ ಶಶಿಕಲಾ ಮಾತು ಕೇಳಿ ಸಿದ್ದಪ್ಪನನ್ನ ದೂರ ಮಾಡಿದ್ಳೋ ಸಿದ್ದಪ್ಪ ಶಶಿಕಲಾ ವಿರುದ್ಧ ಕತ್ತಿ ಮಸೆಯೋಕೆ ಶುರು ಮಾಡಿದ್ದ. ಶಶಿಕಲಾಳಿಂದ ತಮ್ಮ ಪ್ರಿಯತಮೆ ಬಸಮ್ಮ ಬಿಟ್ಟೋಗಿದ್ದು ಅಂತ ಆಕೆ ಕತೆಯನ್ನೇ ಮುಗಿಸೋಕೆ ಪ್ಲಾನ್ ಮಾಡಿದ್ದ. ಆಗ ಸಿದ್ದಪ್ಪನ ತಲೆಗೆ ಬಂದಿದ್ದು ಈ ಹೇರ್ ಡ್ರೈಯರ್ ಬ್ಲಾಸ್ಟ್
ನಿಮಗೆ ಸಿದ್ದಪ್ಪ ಹೇರ್ ಡ್ರೈಯರ್ ಬ್ಲಾಸ್ಟ್ ಮಾಡೋ ಸ್ಕೆಚ್ ಯಾಕೆ ಹಾಕ್ದ ಅಂತ ಪ್ರಶ್ನೆ ಮೂಡಬಹುದು.. ಅದಕ್ಕೆ ಉತ್ತರ ಏನಂದ್ರೆ ಬಸಮ್ಮಳ ಗೆಳತಿ ಶಶಿಕಲಾ ಹೇರ್ ಡ್ರೈಯರ್ ಬಳಸ್ತಿದ್ಳು. ಇದನ್ನ ಸಿದ್ದಪ್ಪ ಬಸಮ್ಮಳ ಮನೆಗೆ ಬಂದು ಹೋಗುವಾಗ ನೋಡಿದ್ದ. ಹಾಗಾಗಿ ಹೇರ್ ಡ್ರೈಯರ್ ಬ್ಲಾಸ್ಟ್ ಮಾಡಿ ಶಶಿಕಲಾಳ ಕತೆ ಮುಗಿಸಬೇಕು ಅಂತ ಮಾಸ್ಟರ್ ಪ್ಲಾನ್ ಮಾಡಿದ್ದ. ಈ ಸಿದ್ದಪ್ಪ ಪ್ಲಾನ್ ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಯಾಕಂದ್ರೆ ಅಷ್ಟು ನಾಜೂಕಾಗಿ ಸಿದ್ದಪ್ಪ ಹೇರ್ ಡ್ರೈಯರ್ ಬ್ಲಾಸ್ಟ್ ಮಾಡೋದಕ್ಕೆ ಸಂಚು ರೂಪಿಸಿದ್ದ.
ಹೇರ್ ಸ್ಟೈಟ್‌ನರ್ ಪ್ಲಾನ್ ಫೇಲ್! ಹೇರ್ ಡ್ರೈಯರ್ ಪ್ಲಾನ್ ಸಕ್ಸಸ್!
ಮೊದಲು ಹೇರ್ ಸ್ಟೈಟ್‌ನರ್ ಬಳಸಿ ಕೊಲೆ ಮಾಡೋದಕ್ಕೆ ಸಂಚು ಮಾಡಿದ್ದ. ಆದ್ರೆ ಅದ್ಯಾಕೋ ಆ ಪ್ಲಾನ್ ವರ್ಕೌಟ್ ಆಗಿರಲಿಲ್ಲ. ಆಗ ಹೇರ್ ಡ್ರೈಯರ್ ಸ್ಫೋಟ ಮಾಡ್ಬೇಕು ಅಂತ ಸ್ಕೆಚ್ ರೂಪಿಸಿದ್ದ. ಅದ್ರಂತೆ ಕಳೆದ ನವೆಂಬರ್ 10 ರಂದು ಇಳಕಲ್ನಲ್ಲಿರುವ ದೇವಗಿರಿ ಎಲೆಕ್ಟ್ರಾನಿಕ್ಸ್ನಲ್ಲಿ ಸಿದ್ದಪ್ಪ ಹೇರ್ ಡ್ರೈಯರ್ ಖರೀದಿ ಮಾಡಿರ್ತಾನೆ. ಮನೆಗೆ ತೆಗೆದುಕೊಂಡು ಹೋದ್ರೆ, ಡೌಟ್ ಬರುತ್ತೆ ಅಂತಾ ಅದನ್ನ ಹೊಲದಲ್ಲೇ ಇಟ್ಟಿರ್ತಾನೆ. ಇದಾದ ಮೇಲೆ ಹೇರ್ ಡ್ರೈಯರ್ ಸ್ಫೋಟ ಮಾಡೋದೇಗೆ ಅಂತ ಗೂಗಲ್ನಲ್ಲೂ ಸರ್ಚ್ ಮಾಡ್ತಾನೆ. ಎಲ್ಲ ಮಾಹಿತಿ ಸಿಕ್ಮೇಲೆ ಪ್ಲಾನ್ ಎಕ್ಸಿಕ್ಯೂಟ್ ಮಾಡ್ತಾನೆ.
ಡಾಲ್ಫೀನ್ ಇಂಟನಾಶ್ಯನಲ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿದ್ದ ಸಿದ್ದಪ್ಪ, ಕಳೆದ 16 ವರ್ಷಗಳಿಂದ ಕ್ವಾರಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ಡೆಟೊನ್ರೇಟರ್ ಬಳಕೆ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿ ಮಾಹಿತಿ ಪಡೆದುಕೊಂಡಿದ್ದ. ಇದಾದ ಮೇಲೆ ಡ್ರೈಯರ್ ನಲ್ಲಿ ಡೆಟೋನೇಟರ್ ಜೋಡಿಸಿ ಬ್ಲಾಸ್ಟ್ ಮಾಡ್ಬೇಕು ಅಂತ ಸ್ಕೆಚ್ ಹಾಕ್ತಾನೆ. ಅದ್ರಂತೆ ಹೊಲದಲ್ಲಿ ಬ್ಲಾಸ್ಟ್ ಬಗ್ಗೆ ಟೆಸ್ಟ್ ಕೂಡ ಮಾಡಿರ್ತಾನೆ. ಹೇರ್ ಡ್ರೈಯರ್ನಲ್ಲಿ ಡಿಟೋನೆಟರ್ ಇಟ್ಟು ಪರೀಕ್ಷೆ ಮಾಡಿರ್ತಾನೆ. ಎಲ್ಲಾ ಓಕೆ ಅಂತನಿಸಿದಾಗ ನವೆಂಬರ್ 13 ರಂದು ಬಾಗಲಕೋಟೆಗೆ ಬಂದು ಡಿಟಿಡಿಸಿಯಲ್ಲಿ ಶಶಿಕಲಾ ಹೆಸರಿಗೆ ಡಿಟೋನೆಟರ್ ಇಟ್ಟಿದ್ದ ಹೇರ್ ಡ್ರೈಯರ್ನ್ನ ಪಾರ್ಸೆಲ್ ಮಾಡ್ತಾನೆ. ಬಳಿಕ ಪ್ರಮ್ ಅಡ್ರೆಸ್ನಲ್ಲಿ ವಿಶಾಖಪಟ್ಟಣಂನ ವಿಳಾಸ ಹಾಕಿ ಕೊರಿಯರ್ ಕಳಿಸಿಕೊಡ್ತಾನೆ. ಶಶಿಕಲಾ ಹೆಸರಿಗೆ ಬಂದಿದ್ದ ಪಾರ್ಸೆಲ್ ಬಸಮ್ಮ ಪಡೆದಿದ್ಳು
ಕರ್ಮ ರಿಟರ್ನ್ಸ್ ಅಂತ ಇದಕ್ಕೆ ಹೇಳ್ತಾರೋ ಏನೋ. ಯಾಕಂದ್ರೆ ಶಶಿಕಲಾಳ ಜೀವ ತೆಗಿಬೇಕು ಅಂತ ಸಿದ್ದಪ್ಪ ಹೇರ್ ಡ್ರೈಯರ್ ಕಳಿಸಿದ್ದ. ತಾನೊಂದು ಬಗೆದರೆ ದೈವವೊಂದು ಬಗೆಯುತ್ತೆ ಅನ್ನೋ ಹಾಗೆ ಶಶಿಕಲಾ ಹೆಸರಿಗೆ ಬಂದಿದ್ದ ಹೇರ್ ಡ್ರೈಯರ್ನ್ನ ಸಿದ್ದಪ್ಪನ ಪ್ರೇಯಸಿ ಬಸಮ್ಮ ಡೆಲಿವರಿ ತೆಗೆದುಕೊಂಡಿದ್ದಳು. ಡೆಲಿವರಿಗೆ ತೆಗೆದುಕೊಂಡು ಸುಮ್ನೆ ಇದ್ದಿದ್ರೆ ಇವತ್ತು ಈ ಫಜೀತಿ ಆಗ್ತಿರಲಿಲ್ಲ. ಇರಲಾರದೇ ಇರುವೆ ಬಿಟ್ಕೊಂಡ್ರ ಅನ್ನೋ ಹಾಗೆ ಅದನ್ನ ಟೆಸ್ಟ್ ಮಾಡೋಕೆ ಅಂತ ಹೋಗಿದ್ದಾಳೆ. ಆದ್ರೆ ಆಕೆ ಪ್ರಿಯಕರನೇ ಇದನ್ನ ಕಳಿಸಿದ್ದು ಅನ್ನೋದ ಬಸಮ್ಮಳಿಗೂ ಗೊತ್ತಿಲ್ಲ. ಆನ್ ಮಾಡಿದ್ದೇ ತಡ ಡಿಟೋನೆಟರ್ ಇದ್ದ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿದೆ. ಸೆಕೆಂಡ್ಗಳಲ್ಲೇ ಬಸಮ್ಮಳ ಬೆರಳುಗಳು ಕತ್ತರಿಸಿ ನೆಲದ ಮೇಲೆ ಬಿದ್ದಿವೆ. ಮನೆಯಲೆಲ್ಲ ರಕ್ತ ಚೆಲ್ಲಿ ಈಗ ಬಸಮ್ಮ ಆಸ್ಪತ್ರೆಯಲ್ಲಿ ನರಳಾಟ ಅನುಭವಿಸ್ತಿದ್ದಾಳೆ.
ಇಲ್ಲಿ ಇಂಟರ್ಸ್ಟಿಂಗ್ ವಿಚಾರ ಏನಂದ್ರೆ ಘಟನೆ ನಡೆದ್ಮೆಲೂ ಸಿದ್ದಪ್ಪ ಆಸ್ಪತ್ರೆಗೆ ಬಂದು ಬಸಮ್ಮಳ ಆರೋಗ್ಯ ವಿಚಾರಿಸಿಕೊಂಡು ಹೋಗಿರ್ತಾನೆ. ಆದ್ರೆ ಆಗ್ಲೂ ಕೂಡ ಸಿದ್ದಪ್ಪ ಹೇರ್ ಡ್ರೈಯರ್ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಯಾವಾಗ ಬಸಮ್ಮಳ ವಾಟ್ಸಪ್ನಲ್ಲಿ ಸಿದ್ದಪ್ಪನ ವಾಯ್ಸ್ ಮೆಸೆಜ್ ಸಿಕ್ತೋ ಆಗ ಹೇರ್ ಡ್ರೈಯರ್ ಸ್ಫೋಟದ ರಹಸ್ಯ ರಿವೀಲ್ ಆಗಿದೆ.
ಏನೋ ಮಾಡಲೋ ಹೋಗಿ ಇನ್ನೇನೋ ಮಾಡಿದೆ ಅಂತ.. ಈಗ ಸಿದ್ದಪ್ಪನ ಪರಿಸ್ಥಿತಿಗೂ ಹಿಂಗೆ ಆಗಿದೆ. ಶಶಿಕಲಾಗೆ ಸ್ಕೆಚ್ ಹಾಕಿದ್ದ ಆದ್ರೆ ತನ್ನ ಪ್ರೇಯಸಿಯೇ ಬಲಿ ಪಶು ಆಗ್ತಾಳೆ ಅಂತ ಸಿದ್ದಪ್ಪ ಅಂದುಕೊಂಡಿರಲಿಲ್ಲ. ಈಗ ಮಾಡಿದ ಕೆಲಸಕ್ಕೆ ಇಷ್ಟ ಪಟ್ಟವಳು ಆಸ್ಪತ್ರೆಯಲ್ಲಿ ನರಳಾಡ್ತಿದ್ರೆ, ಮಾಸ್ಟರ್ ಮೈಂಡ್ ಸಿದ್ದಪ್ಪ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸ್ತಿದ್ದಾನೆ. ಆದ್ರೀಗ ಇವರ ಪಲ್ಲಂಗದಾಟದ ಮಧ್ಯೆ ಆ ಮಗುವಿನ ಭವಿಷ್ಯದ ಪ್ರಶ್ನೆ ಏನು ಅನ್ನೋದೇ ಈಗ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ