/newsfirstlive-kannada/media/post_attachments/wp-content/uploads/2025/06/balu4.jpg)
ಹಳ್ಳಿ ಪ್ರತಿಭೆ, ತಕ್ಷಣವೇ ಹಾಡನ್ನು ರೆಡಿ ಮಾಡಿ ಹಾಡೋ ಅದ್ಭುತ ಗಾಯಕ ಅಂದ್ರೆ ಅದು ಬಾಳು ಬೆಳಗುಂದಿ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕತ್ರಿಕೊಪ್ಪ ಎಂಬ ಸಣ್ಣ ಹಳ್ಳಿಯ ಪ್ರತಿಭಾವಂತ ಯುವಕ. ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾನೆ. ಆದ್ರೆ, ಮೊನ್ನೆ ನಡೆದ ಸರಿಗಮಪ ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಬಾಳು ಬೆಳಗುಂದಿ ಬಿಕ್ಕಿ ಬಿಕ್ಕಿ ಕಣ್ಣೀರು ಇಟ್ಟಿದ್ದಾರೆ.
ಹೌದು, ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಬಾಳು ಬೆಳಗುಂದಿ ಶ್ರೀ ಆಂಜನೇಯ ಪ್ರಸನ್ನ ಆಂಜನೇಯ ಹಾಡನ್ನು ಹಾಡಿದ್ದಾರೆ. ಈ ಹಾಡು ಮುಕ್ತಾಯವಾಗಿ ನಿರೂಪಕಿ ಅನುಶ್ರೀ ವೇದಿಕೆ ಮೇಲೆ ಬರುತ್ತಿದ್ದಂತೆ ಬಾಳು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ. ಎಷ್ಟೇ ಸಮಾಧಾನ ಮಾಡಿದ್ರೂ ಬಾಳು ಅಳೋದನ್ನು ನಿಲ್ಲಿಸಲಿಲ್ಲ. ಆಗ ಗಾಯಕ ವಿಜಯ್ ಪ್ರಕಾಶ್ ಅವರು ಬಾಳು, ಇಲ್ಲಿಯವರೆಗೂ ನೀನು ಇಷ್ಟೋಂದು ಅಳೋದನ್ನು ನಾನು ನೋಡೇ ಇಲ್ಲ.. ಏನಾಯ್ತು ಹೇಳು ಅಂತ ಕೇಳಿದ್ದಾರೆ.
ಇದನ್ನೂ ಓದಿ: ಇಂದಿನಿಂದ 4 ದಿನ ರಾಜ್ಯದಲ್ಲಿ ಭಾರೀ ಮಳೆ.. ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್!
ಆಗ ಮಾತಾಡಿದ ಬಾಳು, ಒಂದಿಷ್ಟು ದಿನದಿಂದ ನಾನು ನೋಡುತ್ತಿದ್ದೇನೆ. ಇವನಿಗೆ ಸಂಗೀತ ಗೊತ್ತಿಲ್ಲ, ಒಂದು ಸ್ವರ ಹಾಡೋಕೆ ಬರೋದಿಲ್ಲ, ಇವನ್ಯಾಕೆ ಫಿನಾಲೆಗೆ ಬರಬೇಕು? ಇವನನ್ನು ಯಾಕೆ ಇಲ್ಲಿ ತನಕ ಕರ್ಕೊಂಡು ಬರಬೇಕು ಅಂತ ಕೆಲವರು ಮಾತನಾಡ್ತಾ ಇದ್ರು. ಮನಸ್ಸಿಗೆ ಬಹಳ ನೋವು ಆಗೋ ಥರ ಮಾತನಾಡ್ತಿದ್ರು. ಆ ಸಂದರ್ಭದಲ್ಲಿ ಹೇಮಂತ್ ಸರ್ ನನಗೆ ಸ್ವರಗಳನ್ನು ಹಾಕಿಕೊಟ್ರು. ಎಲ್ಲಿ ಆ ಸ್ವರಗಳಿಗೆ ನನ್ನಿಂದ ಮೋಸ ಆಗುತ್ತೇನೋ ಅಂತ ಗಿಲ್ಟ್ ಕಾಡಿತು ಎಂದು ಎಲ್ಲರ ಮುಂದೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.
ಆಗ ವಿಜಯ್ ಪ್ರಕಾಶ್ ಅವರು ಮಾತಾಡಿ, ಸ್ವರಗಳನ್ನು ಹಾಡಿದ್ರೆ ಮಾತ್ರ ಸಂಗೀತಗಾರ ಅನ್ನೋದೆಲ್ಲಾ ಇಲ್ಲಪ್ಪ. ಸಂಗೀತ ಅನ್ನೋದು ಬಹಳ ಪವಿತ್ರವಾದದ್ದು ಎಂಬುದು ನಮ್ಮ ಭಾವನೆ. ಸ್ವರ, ಶ್ರುತಿ, ಲಯ, ಶಾಸ್ತ್ರ ಇವೆಲ್ಲವೂ ಸಂಗೀತಕ್ಕೆ ಪೂರಕವಾಗಿವೆ. ಇದನ್ನೆಲ್ಲಾ ಕಲಿತು ನಾವು ಇನ್ನಷ್ಟು ಬೆಳೆಯಬಹುದು. ಸ್ವರಗಳನ್ನು ಹಾಡಿದ ಮಾತ್ರಕ್ಕೆ ದೊಡ್ಡ ಸಂಗೀತಗಾರ ಅನ್ನೋದೇನೂ ಇಲ್ಲ. 500 ಜನ ನಿನ್ನ ಬಗ್ಗೆ ಕೆಟ್ಟದಾಗಿ ಹೇಳಿರಬಹುದು. ಆದರೆ ಹೊರಗಡೆ 10 ಲಕ್ಷ ಜನ ನಿನ್ನ ಹಾಡುಗಳನ್ನು ಕೇಳುವುದಕ್ಕೆ ಕಾಯ್ತಾ ಇದ್ದಾರೆ. ಜೀವನದಲ್ಲಿ ನಮ್ಮನ್ನು ಹೊಗಳುವವರು, ತೆಗಳುವವರು ಇದ್ದೇ ಇರ್ತಾರೆ. ಹಾಂಗಂತ ನಾವು ನಿಲ್ಲೋದಕ್ಕೆ ಆಗತ್ತಾ ಎಂದಿದ್ದಾರೆ.
ಭಗವಂತ ನಿನಗೆ ಕೊಟ್ಟ ಶಕ್ತಿಯನ್ನು ನೀವು ಉಪಯೋಗಿಸಿಕೊಂಡಿದ್ದೀಯಾ. ಬಾಳು ಬೆಳಗುಂದಿ ನೀನು ದೊಡ್ಡ ಸ್ಪೂರ್ತಿ. ನಿನ್ನ ನೋಡಿ ಸಾವಿರ ಜನ ನಾನು ನಿನ್ನಂತೆ ಸರಿಗಮಪಗೆ ಹೋಗಬೇಕು ಎಂದು ಆಸೆ ಪಡ್ತಾರೆ. ನೀನು ಅತ್ತುಬಿಟ್ಟರೆ ಅವರೆಲ್ಲರೂ ಸುಸ್ತಾಗಿ ಬಿಡ್ತಾರೆ. ನೀನು ಕಲಿಯುವುದಕ್ಕೆ ಪ್ರಾರಂಭಿಸಿದ್ದೀಯಾ.. ಚೆನ್ನಾಗಿ ಕಲಿ, 2 ವರ್ಷ ಬಿಟ್ಟು ನೀನು ಸ್ವರಗಳನ್ನು ಹಾಡು, ಹೀಗೆ ಮಾತನಾಡುವವರನ್ನೆಲ್ಲಾ ಸೈಲೆಂಟ್ ಮಾಡಿಸು ಅಂತ ಹೇಳುವುದಕ್ಕೆ ಇಷ್ಟಪಡ್ತಿನಿ ಅಂತ ಧೈರ್ಯ ತುಂಬಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ