/newsfirstlive-kannada/media/post_attachments/wp-content/uploads/2025/06/BNG_AKSHAY_EYE.jpg)
ಬೆಂಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ಅಕ್ಷಯ್ ಅವರು ಇಬ್ಬರ ಬದುಕಿಗೆ ಬೆಳಕಾಗಿದ್ದಾರೆ. ಜೂನ್ 15 ರಂದು ಮರದ ಕೊಂಬೆ ಬಿದ್ದು ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಷಯ್ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಆದರೆ ಅವರ ಕುಟುಂಬಸ್ಥರು ಅಕ್ಷಯ್ನ ಎರಡು ಕಣ್ಣುಗಳನ್ನು ದಾನ ಮಾಡಿದ್ದಾರೆ.
ಮರದ ಕೊಂಬೆ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಅಕ್ಷಯ್ ಕೊನೆಯುಸಿರೆಳೆದಿದ್ದಾರೆ. ಅವರ ಎರಡು ಕಣ್ಣುಗಳನ್ನು ಕಿಮ್ಸ್ ಆಸ್ಪತ್ರೆಯಲ್ಲಿ ದಾನ ಮಾಡಲಾಗಿದೆ. ಸದ್ಯ ಅಕ್ಷಯ್ ಮಣ್ಣಾಗುವ ಮೊದಲೇ ಇಬ್ಬರ ಬದುಕಿಗೆ ಕಣ್ಣಾಗಿದ್ದು ಈ ಮೂಲಕ ಸಾವಿನಲ್ಲೂ ಅಕ್ಷಯ್ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ. ಮರದ ಕೊಂಬೆ ತಲೆ ಮೇಲೆ ಬಲವಾಗಿ ಬಿದ್ದಿದ್ದರಿಂದ ಅಕ್ಷಯ್ ಮೆದುಳು ನಿಷ್ಕ್ರಿಯಗೊಂಡಿತ್ತು. ಇದರಿಂದ ಚೇತರಿಕೆ ಕಾಣದೇ ಅವರು ನಿಧನರಾಗಿದ್ದಾರೆ.
ಅಕ್ಷಯ್ ಮೂಲತಃ ಬನಶಂಕರಿಯ ಕತ್ರಿಗುಪ್ಪೆಯ ಶ್ರೀನಗರದ ನಿವಾಸಿ. ರಾಜಾಜಿನಗರದ ಖಾಸಗಿ ಕಂಪನಿವೊಂದರಲ್ಲಿ ಹೆಚ್.ಆರ್. ಕೆಲಸ ಮಾಡ್ತಿದ್ದ. ಇಡೀ ಕುಟುಂಬದ ಆಧಾರ ಸ್ತಂಭವಾಗಿದ್ದ. ತಾನೇ ದುಡಿದು ಇಡೀ ಕುಟುಂವನ್ನ ಸಾಕ್ತಿದ್ದ. ಆದ್ರೆ ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣಿರು ಹಾಕುತ್ತಿದ್ದಾರೆ.
ಇದನ್ನೂ ಓದಿ:ಬೈಕ್ ಸವಾರನ ಮೇಲೆ ಮರ ಬಿದ್ದು ಬ್ರೈನ್ ಡೆಡ್.. ಅಕ್ಷಯ್ ಕುಟುಂಬದ ದುರಂತ ಕಥೆಗಳ ಕರುಣಾಜನಕ
ಘಟನೆಯ ಹಿನ್ನೆಲೆ
ಜೂನ್ 15 ಭಾನುವಾರ ಅಕ್ಷಯ್ ಅಪ್ಪನಿಗೆ ಮಟನ್ ಇಷ್ಟ ಅನ್ನೋ ಕಾರಣಕ್ಕೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಟನ್ ತರಲು ಹೋಗಿ ವಾಪಸ್ ಬರುತ್ತಿದ್ದಾಗ ಬನಶಂಕರಿಯ ಶ್ರೀನಿವಾಸ ನಗರದ ಬ್ರಹ್ಮ ಚೈತನ್ಯ ಮಂದಿರದ ಬಳಿ ಒಣಗಿದ ಮರದ ಕೊಂಬೆ ಮುರಿದು ಅಕ್ಷಯ್ ತಲೆ ಮೇಲೆ ಬಿದ್ದಿದೆ. ಪರಿಣಾಮ ಪ್ರಜ್ಜೆ ತಪ್ಪಿದ್ದ ಅವರನ್ನು ಕೂಡಲೇ ಸ್ಥಳೀಯ ಪ್ರಶಾಂತ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ತಲೆ ಭಾಗಕ್ಕೆ ಗಂಭೀರ ಗಾಯವಾದ ಕಾರಣ, ತಲೆಯಲ್ಲಿ ರಕ್ತ ಹರಿಯುತ್ತಿರೋದು ನಿಲ್ಲದಿದ್ದಕ್ಕೆ ತ್ಯಾಗರಾಜನಗರದ ಪ್ರಶಾಂತ್ ಆಸ್ಪತ್ರೆಯಿಂದ ಜಯನಗರದ 3ನೇ ಬ್ಲಾಕ್ನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಅಕ್ಷಯ್ ಇಂದು ಮಧ್ಯಾಹ್ನ 1 ಗಂಟೆಗೆ ಉಸಿರು ನಿಲ್ಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ