/newsfirstlive-kannada/media/post_attachments/wp-content/uploads/2024/11/Car-Accident-Sandhya-Husband.jpg)
ಬೆಂಗಳೂರು: ಬೆಂಜ್ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ ಸಂಧ್ಯಾ ಸಾವು ಅತ್ಯಂತ ಘೋರ ಘಟನೆ. ಕುಡಿದು ಐಷಾರಾಮಿ ಕಾರು ಚಲಾಯಿಸಿದ ಭೀಕರ ಅಪಘಾತ ಎಂತಹವರ ಎದೆಯು ಝಲ್ ಅನ್ನುವಂತೆ ಮಾಡಿದೆ. ಸಂಧ್ಯಾ ಅವರನ್ನ ಬಲಿ ಪಡೆದ ಆರೋಪಿಗಳು ಪೊಲೀಸರ ವಶದಲ್ಲಿದ್ರೆ, ತಾನಾಯ್ತು ತಮ್ಮ ಪಾಡಾಯ್ತು ಎನ್ನುತ್ತಿದ್ದ ಸಂಧ್ಯಾ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಸಂಧ್ಯಾ ಪತಿ ಶಿವಕುಮಾರ್ ಅವರು ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದಾರೆ. ಬೆಂಜ್ ಕಾರು ಚಾಲಕನ ನಿರ್ಲಕ್ಷ್ಯದಿಂದ ಈ ದುರಂತ ಆಗಿದೆ. ಮದುವೆಯಾಗಿ ಮುಂದಿನ ಡಿಸೆಂಬರ್ 4ಕ್ಕೆ ಮೂರು ವರ್ಷ ಕಂಪ್ಲೀಟ್ ಆಗುತ್ತಿತ್ತು. ಜೀವನದಲ್ಲಿ ತುಂಬಾ ಪ್ಲಾನ್ ಮಾಡಿಕೊಂಡಿದ್ದೇವು. ಈ ರೀತಿ ಆಗುತ್ತೆ ಅಂತ ನಾನು ಊಹಿಸಿರಲಿಲ್ಲ ಎಂದು ದಿಕ್ಕೇ ತೋಚದ ಸ್ಥಿತಿಗೆ ತಲುಪಿದ್ದಾರೆ.
ಬಸವೇಶ್ವರ ನಗರ ಠಾಣೆಯ ಪೊಲೀಸರು ಮನೆಗೆ ಬಂದು ನಿಮ್ಮ ಕಡೆಯವರು ಯಾರೋ ಸೀರಿಯಸ್ ಆಗಿದ್ದಾರೆ ಅಂತ ಹೇಳಿದ್ರು. ನಾವು ಕೂಡಲೇ ಬಿಜಿಎಸ್ ಆಸ್ಪತ್ರೆಗೆ ಹೋಗಿ ನೋಡಿದಾಗ ಸಂಧ್ಯಾ ಸಾವನ್ನಪ್ಪಿರುವ ವಿಷಯ ಗೊತ್ತಾಯಿತು.
ಇದನ್ನೂ ಓದಿ: ನನಗೆ ತಾಯಿ ಇಲ್ಲ, ಅಕ್ಕನೇ ಎಲ್ಲಾ.. ದುಡ್ಡು ಬೇಡ, ಸಂಧ್ಯಾ ಬೇಕು; ಮೃತ ಟೆಕ್ಕಿ ತಮ್ಮನ ಕಣ್ಣೀರು
ಆಸ್ಪತ್ರೆಗೆ ಬಂದ ನಾವು ಫಸ್ಟ್ ಡಾಕ್ಟರ್‌ಗೆ ಏನಾಯ್ತು ಅಂತ ಕೇಳಿದ್ವಿ. ಮೈಯಲ್ಲಿ ಕೆಲವೊಂದು ಮೂಳೆ ಬಿಟ್ರೆ ಉಳಿದ ಎಲ್ಲಾ ಪುಡಿ, ಪುಡಿಯಾಗಿದೆ. ಆ ರೀತಿ ಕಾರು ಡಿಕ್ಕಿ ಹೊಡೆದಿದೆ ಎಂದರು. ಆಮೇಲೆ ನಾವು ಪೊಲೀಸರ ಬಳಿ ಏನಾಯ್ತು ಅಂತ ಕೇಳಿದ್ವಿ. ರೋಡ್ ಪಾಸ್ ಮಾಡುವಾಗ ಜೋರಾಗಿ ಬಂದ ಕಾರು ಡಿಕ್ಕಿಯಾಗಿದೆ. 3-4 ಪಲ್ಟಿಯಾಗಿ ಸಂಧ್ಯಾ ಬಿದ್ದಿದ್ದಾರೆ ಎಂದು ಹೇಳಿದರು.
ಆಮೇಲೆ ಪೋಸ್ಟ್ ಮಾರ್ಟಂಗೆ ಅಂತ ಬಾಡಿ ತೆಗೆದುಕೊಂಡು ಹೋದರು. ಪೊಲೀಸ್ ಠಾಣೆಗೆ ಹೋದಾಗ ಆರೋಪಿಗಳನ್ನ ಅರೆಸ್ಟ್ ಮಾಡಿರೋದು ಗೊತ್ತಾಯ್ತು. 21 ವರ್ಷದ ಹುಡುಗ. ತುಂಬಾ ಚೆನ್ನಾಗಿ ಕುಡಿದು ಬೆಂಜ್ ಕಾರು ಓಡಿಸಿದ್ದಾನೆ. ಸಂಧ್ಯಾಗೆ ಗುದ್ದಿ ಆಮೇಲೆ ದ್ವಿಚಕ್ರ ವಾಹನಕ್ಕೂ ಡಿಕ್ಕಿ ಹೊಡೆಿದಿದ್ದಾನೆ. ಅಲ್ಲಿಂದ ತಪ್ಪಿಸಿಕೊಳ್ಳಲು ಡಿವೈಡರ್‌ಗೆ ಗುದ್ದಿದ್ದಾನೆ. ಸಿಗ್ನಲ್‌ನಲ್ಲಿ ಜನರು ಕಾರು ಚಾಲಕನನ್ನ ಹಿಡಿದು ಅವರೇ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾರಿನಲ್ಲಿದ್ದವರನ್ನ ಅರೆಸ್ಟ್ ಮಾಡಿ ಪೊಲೀಸರು ಟೆಸ್ಟ್ ಮಾಡಿದ್ದಾರೆ. ರಕ್ತದ ಸ್ಯಾಂಪಲ್ ಕೂಡ ತೆಗೆದುಕೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಏನಾಗಿದೆ ಅಂತ ಗೊತ್ತಾಗುತ್ತೆ. ಅದನ್ನ ನೋಡೋಕೆ ನಾವು ಎದುರು ನೋಡುತ್ತಾ ಇದ್ದೇವೆ. 3-4 ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸ್ಪಷ್ಟವಾಗಿ ಸಿಕ್ಕಿಲ್ಲ. ಹೀಗಾಗಿ ಬೇರೆ ಸಿಸಿಟಿವಿ ವಿಡಿಯೋಗಳ ಹುಡುಕಾಟ ನಡೆದಿದೆ. ಸಂಧ್ಯಾ ಏನು ತಪ್ಪು ಮಾಡಿಲ್ಲ. ನಮಗೆ ನ್ಯಾಯ ಸಿಗಲೇ ಬೇಕು. ಪೊಲೀಸರು ನಮ್ಮ ಪರವಾಗಿ ಇದ್ದಾರೆ ಅನ್ನೋ ನಂಬಿಕೆ ಇದೆ ಎಂದು ಸಂಧ್ಯಾ ಪತಿ ಶಿವಕುಮಾರ್ ಹೇಳಿದ್ದಾರೆ.
ಸಂಧ್ಯಾ ಮಲ್ಟಿ ಟ್ಯಾಲೆಂಟೆಡ್ ಆಗಿದ್ದಳು. ಹಾಡುವುದು, ಚಿತ್ರಕಲೆ ಕರಗತವಾಗಿತ್ತು. ಎಲ್ಲದರಲ್ಲೂ ಸೈ ಅನಿಸಿಕೊಂಡಂತಹ ಹುಡುಗಿ. ಸಂಧ್ಯಾ ಸಾವಿನ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ ಎಂದು ಶಿವಕುಮಾರ್ ಭಾವುಕ ಮಾತುಗಳನ್ನಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ