/newsfirstlive-kannada/media/post_attachments/wp-content/uploads/2025/04/BNG_KARAGA_1.jpg)
ರಾಜಧಾನಿಗೆ ರಾಜ ಕಳೆ ಕೊಡುವ ಬೆಂಗಳೂರು ಕರಗಕ್ಕೆ ಹಲವು ವರ್ಷಗಳ ಇತಿಹಾಸ ಇದೆ. ಬೆಂಗಳೂರು ಕರಗಕ್ಕೆ 8 ಶತಮಾನಗಳ ಇತಿಹಾಸ ಇರೋದು ಗಮನಾರ್ಹ. ಕರಗ ಅನ್ನೋ ಮಾತಿಗೆ 'ಕುಂಭ' ಎನ್ನುವ ಅರ್ಥ ಇದೆ. ಕರಗದ ಒಂದೊಂದು ಅಕ್ಷರ ಒಂದೊಂದು ಸಂಕೇತ ಹೊಂದಿವೆ ಎನ್ನಲಾಗುತ್ತಿದೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು ಹೀಗೆ ವಿವರಣೆ ಕೊಡಲಾಗಿದೆ.
ಈ ಕರಗ ಆದಿ ಶಕ್ತಿ ಸ್ವರೂಪಿಣಿಯಾದ ದ್ರೌಪದಿ ಆರಾಧನೆಗಾಗಿ ಮಾಡುವ ಹಬ್ಬ. ಈ ಆಚರಣೆಗೆ ಒಂದು ಪುರಾಣ ಕತೆ ಕೂಡ ಇದೆ. ಆ ಕಥೆ ಏನು ಅನ್ನೋದು ವಿವರ ಇಲ್ಲಿದೆ. ಕುರುಕ್ಷೇತ್ರ ಸಮರದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುತ್ತಾರೆ. ಅದೇ ಸ್ವರ್ಗಾರೋಹಣ ಸಂದರ್ಭದಲ್ಲಿ ದ್ರೌಪದಿ ಮೂರ್ಛೆ ತಪ್ಪಿ ಬಿದ್ದಳಂತೆ. ದ್ರೌಪದಿ ಮೂರ್ಛೆ ತಪ್ಪಿ ಬಿದ್ದದ್ದು ಅರಿಯದೆ ಪಾಂಡವರು ಮುಂದೆ ಸಾಗಿಬಿಡ್ತಾರೆ. ಆಕೆ ಎಚ್ಚರವಾಗಿ ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದನಂತೆ.
ಎದ್ದು ನೋಡಿದ ದ್ರೌಪದಿಗೆ ತಿಮಿರಾಸುರ ರಕ್ಕಸ ವಿಕೃತನಾಗಿ ಕಾಣುತ್ತಾನೆ. ಆಗ ಆದಿಶಕ್ತಿಯ ರೂಪವನ್ನು ತೋರುತ್ತಾಳೆ. ರಾಕ್ಷಸ ತಿಮರಾಸುರನನ್ನು ಸದೆ ಬಡಿಯಲು ರಕ್ಷಕರನ್ನು ಆಕೆ ಸೃಷ್ಟಿಸುತ್ತಾಳೆ. ತಲೆಯಿಂದ ಯಜಮಾನ, ಹಣೆಯಿಂದ ಗಣಾಚಾರಿ, ಕಿವಿಗಳಿಂದ ಗೌಡರು, ಬಾಯಿಯಿಂದ ಗಂಟೆ ಪೂಜಾರಿ, ಹೆಗಲಿನಿಂದ ವೀರಕುಮಾರರ ಸೃಷ್ಟಿಸುತ್ತಾಳೆ.
ಇದನ್ನೂ ಓದಿ:ಒಂದು ಗುಬ್ಬಚ್ಚಿಯ ರಕ್ಷಿಸಲು ಜಿಲ್ಲಾಧಿಕಾರಿ, ಜಡ್ಜ್ ಎಂಟ್ರಿ ಕೊಡಬೇಕಾಯ್ತು.. ಮನಮಿಡಿಯುವ ಸ್ಟೋರಿ!
ಹೀಗೆ ಹುಟ್ಟಿದ ಇವರೆಲ್ಲರೂ ಸೇರಿ ಆ ರಕ್ಕಸನ ಎದುರು ಹೋರಾಡಿ ಗೆಲ್ಲುತ್ತಾರೆ. ಜನ್ಮ ನೀಡಿದ ದ್ರೌಪದಿ ಕೈಲಾಸಕ್ಕೆ ಹೋಗುವುದು ಮಕ್ಕಳಲ್ಲಿ ದುಗುಡ ಉಂಟು ಮಾಡುತ್ತೆ. ತೆರಳದಂತೆ ದ್ರೌಪದಿಯನ್ನು ಬೇಡಿಕೊಳ್ಳುವಂತೆ ಕೃಷ್ಣನು ಸಲಹೆ ಮಾಡುತ್ತಾನೆ. ಕತ್ತಿಯಿಂದ ಎದೆಗೆ ತಿವಿದುಕೊಳ್ಳುತ್ತಾ ಬೇಡಿ ಕೊಳ್ಳುವ ವೀರಕುಮಾರರು.. ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು ಎಂದು ಅಲವತ್ತುಕೊಳ್ಳುತ್ತಾರೆ.
ದ್ರೌಪದಿ ಮರುಕವಾಗಿ ಪ್ರತಿ ವರ್ಷವೂ 3 ದಿನ ಭೂಮಿಗೆ ಬರುವುದಾಗಿ ಮಾತು ನೀಡುತ್ತಾಳೆ. ಮಕ್ಕಳೊಂದಿಗೆ ಇರುವ ಮಾತು ನೀಡುತ್ತಾಳೆ. ಆ ಮೂರು ದಿನಗಳೇ ಕರಗ ಹಬ್ಬದ ದಿನಗಳು ಅನ್ನೋ ನಂಬಿಕೆ ಇದೆ. ಈಗಲೂ ವೀರಕುಮಾರರು ಕತ್ತಿ ಹಿಡಿದು ತಾಯಿಯನ್ನ ಬೇಡಿಕೊಳ್ಳುತ್ತಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ