/newsfirstlive-kannada/media/post_attachments/wp-content/uploads/2024/11/justiceforsandhya2.jpg)
ಜೇನದನಿಯ ಸಂಧ್ಯಾ ಸಾವು ನಿಜಕ್ಕೂ ದಾರುಣ. ಸದ್ಯ, ಪತಿ ಬಿಚ್ಚಿಟ್ಟ ಸಂಗತಿಗಳು ಅಳಿಸುತ್ತಿವೆ. ಸೋದರ ಶೇಖರ್ ಮಾತುಗಳಲ್ಲಿ ಕಣ್ಣೀರು ತುಂಬಿದೆ. ಇನ್ನು, ಕೊಂದ ಆರೋಪಿ ಧನುಷ್ ಸತ್ಯ ಬಾಯ್ಬಿಟ್ಟಿದ್ದಾನೆ. ದುಡ್ಡಿನ ದೌಲತ್ತಿನಲ್ಲಿ ಅವನಪ್ಪ ಏನೆಲ್ಲಾ ಮಾಡಿದ ಗೊತ್ತಾ? ಪೊಲೀಸರ ಒಂದೊಂದು ನಡೆ ಸಾರ್ವಜನಿಕರನ್ನು ರೊಚ್ಚಿಗೆಬ್ಬಿಸುತ್ತಿದೆ. ಅದರಲ್ಲೂ ಐದು ಅನುಮಾನಗಳು ಸಂಧ್ಯಾಗೆ ನ್ಯಾಯ ಸಿಗೋದು ಡೌಟ್ ಎನ್ನುತ್ತಿವೆ. ಸಂಧ್ಯಾ ಸಾವಿನ ಬಳಿಕ ಏನೇನಾಯ್ತು?
ಕಡಲನು ಕಾಣ ಹೊರಟ ಮುಗಿಲಂತೆ ಸಂಧ್ಯಾ ಕೊರಗಿ ಕರಗಿದ್ದಾರೆ. ಅಮ್ಮನ ಜೋ ಲಾಲಿಯ ಜೋಗುಳದಂಥಾ ಧ್ವನಿ ಮಸಣ ಸೇರಿದೆ. ಎಲ್ಲರನ್ನ ನಕ್ಕು ಸಂತೈಸುತ್ತಿದ್ದ ಹಸನ್ಮುಖಿ ದಾರುಣ ಅಂತ್ಯ ಕಂಡಿದ್ದಾರೆ. ಬದುಕು ಕೊಡುವ ಕಷ್ಟವನ್ನೂ ಸುಖವೆಂದೇ ಸ್ವೀಕರಿಸುತ್ತಿದ್ದ ಸಂಧ್ಯಾ ನಮ್ಮೊಂದಿಗಿಲ್ಲ. ಆದರೇ, ಪತ್ನಿ ಬಗ್ಗೆ ಶಿವಕುಮಾರ್ ಆಡ್ತಿರೋ ಮಾತುಗಳು ಅಕ್ಷರಶಃ ಅಳಿಸುತ್ತಿವೆ.
ಕಾಶಿ ಯಾತ್ರೆಯ ಕನಸು ಕಂಡ ಸಂಧ್ಯಾ ದಾರುಣ ಅಂತ್ಯ!
ಇದೇ ಡಿಸೆಂಬರ್ 4ಕ್ಕೆ ಸಂಧ್ಯಾ ಶಿವಕುಮಾರ್ ಮದುವೆ ಆಗಿ 4 ವರ್ಷ ಆಗ್ತಿತ್ತು. ತಮ್ಮ 4ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಸಂಧ್ಯಾ ಪ್ಲಾನ್ ಮಾಡಿದ್ರು. ದಂಪತಿ ಕಾಶಿ ಯಾತ್ರೆ ಕೈಗೊಳ್ಳೋದಕ್ಕೆ ಟಿಕೆಟ್ ಕೂಡ ಬುಕ್ ಮಾಡಿದ್ರು. ಆದರೇ, ವಿಧಿ ಎಂಥಾ ಸ್ಥಿತಿ ತಂದಿದೆ ಎಂದರೇ, ಮಂಗಳ ಸೂತ್ರ ಕಟ್ಟಿ, ಸಪ್ತಪದಿ ತುಳಿದ ಪತಿಯೇ ಇದೀಗ ಹೆಂಡತಿಯ ಅಸ್ಥಿ ಹಿಡಿದು ಗಂಗಾ ತೀರಕ್ಕೆ ಹೋಗಬೇಕಾಗಿದೆ. ಇದೇ ಕಾರಣಕ್ಕೇ ನೋಡಿ, ಶಿವಕುಮಾರ್ ಈ ಸಂಕಟವನ್ನೂ ಹೇಳಿಕೊಳ್ಳೋಕೆ ಆಗದೇ ವಿಲವಿಲ ಒದ್ದಾಡುತ್ತಿದ್ದಾರೆ.
"ಅಮ್ಮನೇ ಆಗಿದ್ದ ಅಕ್ಕನೂ ಇನ್ನಿಲ್ಲ" ಸೋದರ ಶೇಖರ್ ಕಣ್ಣೀರು!
ಅಕ್ಕ ಎಲ್ಲವೂ ಆಗಿದ್ದಳು. ಅಮ್ಮ ಇಲ್ಲದ ಕೊರಗನ್ನು ನೀಗಿಸಿದ್ದಳು. ಇದೀಗ ಅಮ್ಮನೂ ಇಲ್ಲ. ಅಕ್ಕನೂ ಇಲ್ಲ. ಇಬ್ಬರೂ ಇಲ್ಲವಾಯ್ತು. ಇನ್ನು ಮುಂದೆ ನನ್ನ ಕಷ್ಟ ಯಾರ ಹತ್ತಿರ ಹೇಳಿಕೊಳ್ಳಲಿ. ಇಂಥದ್ದೊಂದು ಮಾತನ್ನು ಹೇಳುತ್ತಲೇ ಸಂಧ್ಯಾ ಸೋದರ ಶೇಖರ್ ಗೋಳಾಡುತ್ತಿದ್ದಾರೆ. ಬಾಲ್ಯದಲ್ಲೇ ಅಪ್ಪನನ್ನ ಕಳೆದುಕೊಂಡಿದ್ದ ಸಂಧ್ಯಾ, ಶೇಖರ್ ಅಮ್ಮನನ್ನೂ ಕಳೆದುಕೊಂಡಿದ್ರು. ಅಪ್ಪ ಅಮ್ಮ ಇಲ್ಲದ ಹೊತ್ತಿನಲ್ಲಿ ಅಪ್ಪನಾಗಿ, ಅಮ್ಮನಾಗಿ ತಿದ್ದಿ ತೀಡಿ ಬೈಯದೇ ಬುದ್ದಿ ಹೇಳಿದ್ದು ಇದೇ ಸಂಧ್ಯಾ. ಹಾಗಾಗಿಯೇ ಅಮ್ಮನೇ ಆಗಿದ್ದ ಅಕ್ಕನೂ ನನ್ನ ಪಾಲಿಗೆ ಇಲ್ಲವಾಯ್ತು ಅಂತ ಶೇಖರ್ ಕಣ್ಣೀರಿಡುತ್ತಿದ್ದಾರೆ.
ಅವನ್ಯಾರೋ ಶೋಕಿಗೆ ಕುಡಿದು ಗುದ್ದಿ ಬಿಟ್ಟ. ಆದರೇ ನಾವು ನಮ್ಮ ಅಕ್ಕನನ್ನ ಕಳೆದುಕೊಂಡಿದ್ದೀವಿ. ನಿದ್ದೆ ಮಾಡೋಕೆ ಆಗ್ತಿಲ್ಲ. ಕಣ್ಣು ಮುಚ್ಚಿದ್ರೆ ಅಕ್ಕನ ಫೋಟೋ ಕಣ್ಮುಂದೆ ಬರುತ್ತದೆ. ಹೀಗೆ ಹೇಳುತ್ತಲೇ ಶೇಖರ್ ಉಮ್ಮಳಿಸಿಕೊಂಡು ಬರುವ ದುಃಖವನ್ನು ತಡೆಯುತ್ತಾರೆ. ಇದೆಲ್ಲವೂ ಸಂಧ್ಯಾ ಅನ್ನೋ ಜೇನದನಿ ಬೆಳದಿಂಗಳ ಬಾಲೆ ಅನ್ಯಾಯವಾಗಿ ಮಸಣ ಸೇರಿದ್ರಲ್ಲ. ಹೀಗಂತ ಶ್ರದ್ಧಾಂಜಲಿ ಅರ್ಪಿಸುತ್ತಿರೋ ಜನರು ಮನದ ಮಮ್ಮಲ ಮರುಕ. ನ್ಯಾಯ ಎಲ್ಲಿದೆ ಅಂತ ಕೇಳ್ತಿರೋ ಜನರ ಆರ್ತನಾದ. ಯಾಕಂದ್ರೆ, ಪೊಲೀಸರು ಇಲ್ಲಿ ಅಕ್ಷರಶಃ ಆರೋಪಿ ಜೊತೆ ನಿಂತು ರಾಜಾರೋಷವಾಗಿ ವರ್ತಿಸಿರೋದು ಕಾಣ್ತಿದೆ. ಇನ್ನು, ದುಡ್ಡಿನ ದೌಲತ್ತಿನಲ್ಲಿ ಧನುಷ್ ಮಾಡಿದ್ದೇನು? ಹೇಳಿದ್ದೇನು? ಅನ್ನೋ ವಿಚಾರಗಳು ಸಹ ಇದೀಗ ಬಹುದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿವೆ.
ಪಾಪಪ್ರಜ್ಞೆಯೂ ಇಲ್ಲದವನ ಬೆನ್ನಿಗೆ ನಿಂತುಬಿಟ್ರು ಪೊಲೀಸ್ರು!
ವಿದ್ಯೆ ಕಲಿಸದ ಗುರು. ಬುದ್ಧಿ ಹೇಳದ ತಂದೆ, ಬಿದ್ದಿರಲು ಬಂದು ನೋಡದ ತಾಯಿ ಈ ಮೂವರು ಶುದ್ಧ ವೈರಿಗಳು ಸರ್ವಜ್ಞ ಅಂತ ತ್ರಿಪದಿ ಬ್ರಹ್ಮ ಸರ್ವಜ್ಞ ಹೇಳಿದ್ದಾರೆ. ಸಂಧ್ಯಾ ಪಾಲಿಗೆ ಯಮನೇ ಆದ ಧನುಷ್ಗೆ ಪಾಪ ಪ್ರಜ್ಞೆಯೇ ಇಲ್ಲ. ಪೊಲೀಸರ ಎದುರು ಹೌದು ತಾನು ಕುಡಿದಿದ್ದೆ ಅನ್ನೋ ಮಾತನ್ನು ಹೇಳಿಕೊಂಡಿದ್ದಾನೆ. ಯಶವಂತಪುರದ ಮಾಲ್ಗೆ ಸ್ನೇಹಿತರೊಂದಿಗೆ ಹೋಗಿದ್ದಾಗಿ, ಇದೇ ವೇಳೆಯೇ ಕುಡಿದುಕೊಂಡು ಜ್ಞಾನಭಾರತಿ ಕಡೆ ಹೋಗುತ್ತಿದ್ವಿ ಅಂತಲೂ ಧನುಷ್ ತಪ್ಪೊಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಗೆ ಖುದ್ದು ಆರೋಪಿಯೇ ಕುಡಿದಿದ್ದ ಎಂದು ಹೇಳಿಕೆ ನೀಡಿದ್ದಾನೆ. ಆದರೆ, ಸಂಧ್ಯಾ ಅಪಘಾತ ಪ್ರಕರಣವನ್ನ ಮುಚ್ಚಿ ಹಾಕೋದಕ್ಕೆ ಪೊಲೀಸರು ಪ್ರತೀ ಹಂತದಲ್ಲೂ ಯತ್ನಿಸಿರುವುದು ತಿಳಿದು ಬರುತ್ತಿದೆ.
ದುಡ್ಡಿನ ದೌಲತ್ತಿನಲ್ಲೇ ಕೇಸ್ ಮುಚ್ಚಿಸಲು ಧನುಷ್ ಅಪ್ಪನ ಎಂಟ್ರಿ!
ಸಂಧ್ಯಾ ಅತ್ಯಂತ ನಿರ್ದಯವಾಗಿ ಸತ್ತಿದ್ದಾರೆ. ಪೊಲೀಸರಿಗೂ ಗೊತ್ತಿದೆ. ವೈದ್ಯಾಧಿಕಾರಿಗಳು ಹೇಳಿದ ಮಾತು ಬೆಚ್ಚಿಬೀಳಿಸುತ್ತಿದೆ. ಆದಾಗ್ಯೂ, ಮಗ ಧನುಷ್ನನ್ನ ಉಳಿಸಿಕೊಳ್ಳೋದಕ್ಕೆ ಆಸ್ಪತ್ರೆಗೇ ಬಂದಿದ್ರು ಎಲ್.ವಿ ಟ್ರಾವೆಲ್ಸ್ ಮಾಲೀಕ ಪರಮಶಿವಯ್ಯ. ಇದೇ ವೇಳೆಯೇ ಪೊಲೀಸರು ಅಕ್ಷರಶಃ ದಳ್ಳಾಳಿ ರೀತಿ ವ್ಯವಹರಿಸಿದ್ರು. ಹೀಗಂತ ನಾವು ಹೇಳ್ತಿಲ್ಲ ಬದಲಿಗೆ ಠಾಣೆಯಲ್ಲೇ ಇದ್ದ ಸಂಧ್ಯಾ ಸಂಬಂಧಿ ಸುನೀಲ್ ಕುಮಾರ್ ಹೇಳ್ತಿದ್ದಾರೆ. ಏನ್ರೀ, 6 ತಿಂಗಳು ಒಳಗಿದ್ದು ಜಾಮೀನಿನ ಮೇಲೆ ಬರ್ತಾನೆ. ಇದಕ್ಕೆಲ್ಲಾ ಕೇಸು, ಕೋರ್ಟ್ ಬೇಡ. ಒಪ್ಪಿಕೊಂಡು ಒಂದು ಅಡ್ಜಸ್ಟ್ಮೆಂಟ್ ಬನ್ನಿ ಅಂತ ಯೂನಿಫಾರ್ಮ್ ತೊಟ್ಟ ಪೊಲೀಸರೇ ಹೇಳ್ತಾರೆ ಅಂದ್ರೆ ನ್ಯಾಯ ಎಲ್ಲಿದೆ? ಸ್ವಾಮಿ.
ಖುದ್ದು ಪೊಲೀಸರೇ ಅಡ್ಜಸ್ಟ್ ಮಾಡಿಕೊಳ್ಳಿ ಅಂದ್ಬಿಟ್ರೆ, ನ್ಯಾಯ ಸಿಗುತ್ತಾ? ಪೊಲೀಸ್ ವ್ಯವಸ್ಥೆ ಸಂಧ್ಯಾ ಪ್ರಕರಣದಲ್ಲಿ ನಡೆದುಕೊಂಡ ರೀತಿ ನಾಚಿಕೆಗೇಡಿತನದಿಂದ ಕೂಡಿದೆ. ಅದರಲ್ಲೂ ಆ್ಯಕ್ಸಿಡೆಂಟ್ ಸ್ಫಾಟ್ನಲ್ಲಿದ್ದ ಟ್ರಾಫಿಕ್ ಪೊಲೀಸ್ ಸಹ ಸಿವಿಲ್ ಪೊಲೀಸರನ್ನ ಮೀರಿಸೋ ರೀತಿ ಸ್ಟೇಷನ್ಗೆ ನಡಿ ಅಂತ ಧಮ್ಕಿ ಹಾಕ್ತಿದ್ರು. ನ್ಯಾಯ ಕೊಡಿ ಸ್ವಾಮಿ ಅಂದ್ರೆ ಒದ್ದು ಒಳಗೆ ಹಾಕ್ತೀವಿ ಅಂತ ಹೆದರಿಸುತ್ತಿದ್ದರು ಅಂತ ಇದೇ ಸಂಧ್ಯಾ ಸಂಬಂಧಿ ಸುನೀಲ್ ಕುಮಾರ್ ಹೇಳುತ್ತಿದ್ದಾರೆ. ಧನುಷ್ ಅನ್ನೋ ಅವಿವೇಕಿ ತನ್ನ ಶೋಕಿಗೆ ಕುಡಿದು ಮಾಡಿದ ತಪ್ಪಿಗೆ ಸಂಧ್ಯಾ ಸಾವನ್ನಪ್ಪಿದ್ದಾರೆ. ಆದರೇ, ಪೊಲೀಸರು ಸಂಧ್ಯಾ ಸಾವಿನ ಬಳಿಕವೂ ಆಕೆಯನ್ನು ಆತ್ಮಕ್ಕೆ ಘಾಸಿಗೊಳಿಸುವ ಕೆಲಸ ಮಾಡಿದ್ದಾರೆ. ಪೊಲೀಸರ ಒಂದೊಂದು ನಡೆಗಳೂ ಸಂಧ್ಯಾಗೆ ನ್ಯಾಯ ಸಿಗೋದು ಡೌಟ್ ಅನ್ನೋದನ್ನ ಹೇಳುತ್ತಿವೆ.
ಆರಂಭದಲ್ಲೇ ಬಚಾವ್ ಮಾಡೋ ಯತ್ನ!
ಅಪಘಾತ ಸ್ಥಳದಲ್ಲೇ ಪೊಲೀಸರು ಸತ್ತ ಸಂಧ್ಯಾ ಬಗ್ಗೆ ಸಣ್ಣದೊಂದು ಅನುಕಂಪವನ್ನೂ ತೋರಲಿಲ್ಲ. ಬದಲಿಗೆ ಆಕೆಯನ್ನು ದಾರುಣವಾಗಿ ಕಾರು ಹರಿಸಿ ಕೊಂದ ಆರೋಪಿಯನ್ನು ಬಚಾವ್ ಮಾಡೋದಕ್ಕೆ ಓಡಾಡಿದ್ರು. ಅದರಲ್ಲೂ ಇದೊಬ್ಬ ಪೊಲೀಸ್ ಯೂನಿಫಾರ್ಮ್ ಹಾಕಿಕೊಳ್ಳೋಕೆ ಲಾಯಕ್ ಇದ್ದಾರಾ? ಅನ್ನೋ ಪ್ರಶ್ನೆ ಮೂಡಿಸೋ ಮಟ್ಟಿಗೆ ನೊಂದ ಕುಟುಂಬದವರ ಮೇಲೆಯೇ ತಪರಾಕಿ ಹಾಕಿದ್ರು. ಪೊಲೀಸ್ ಇಲಾಖೆಯಲ್ಲಿ ಇಂಥಾ ಕೊಳಕು ಅಧಿಕಾರಿಗಳು ಇರ್ತಾರೆ ಅಂತ ಜನ ಮಾತಾಡೋ ಮಟ್ಟಿಗೆ ಅಸಹ್ಯವಾಗಿ ವರ್ತಿಸಿದ್ರು. ಸ್ಫಾಟಲ್ಲಷ್ಟೇ ಅಲ್ಲ, ಠಾಣೆಯಲ್ಲೂ ಪೊಲೀಸರು ಧನುಷ್ ಅಪ್ಪನ ಪ್ರಭಾವಕ್ಕೆ ಒಳಗಾದ್ರಾ ಅನ್ನೋ ಅನುಮಾನ ಮೂಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಆರೋಪಿ ಫೋಟೋ ತೆಗೆಯುವಂತಿಲ್ಲ. ಅದು ದೊಡ್ಡ ಅಫೆನ್ಸ್ ಅಂತೆಲ್ಲ ನ್ಯಾಯ ಕೊಡಿಸಬೇಕಿದ್ದ ಪೊಲೀಸರೇ ಅನ್ಯಾಯದ ಪಾಠ ಮಾಡಿದ್ರು. ಅಲ್ಲಿದ್ದ ಜನರೇ ಬಂದು ಹೀನಾಮಾನವಾಗಿ ಬೈದ ಮೇಲೆ ಪೊಲೀಸರು ಜಾಗ್ರತರಾದರೇ ವಿನಃ ಸಂಧ್ಯಾ ಸಾವಿಗೆ ನ್ಯಾಯ ಕೊಡಿಸೋ ಮನಸ್ಸಂತೂ ಅವರಲ್ಲಿ ಈ ಕ್ಷಣಕ್ಕೂ ಇಲ್ಲ ಅಂತಿದ್ದಾರೆ ಸಂಧ್ಯಾ ಕುಟುಂಬಸ್ಥರು. ಹೀಗೆ ಸಂಧ್ಯಾ ಆ್ಯಕ್ಸಿಡೆಂಟ್ ಪ್ರಕರಣದಲ್ಲಿ ಪೊಲೀಸರ ಇನ್ನೂ 4 ನಿಗೂಢ ನಡೆಗಳು ಆಕೆಗೆ ನ್ಯಾಯ ಸಿಗೋದು ಡೌಟ್ ಅಂತಲೇ ಹೇಳುವಂತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ