/newsfirstlive-kannada/media/post_attachments/wp-content/uploads/2025/01/CHILDREN-MISSING.jpg)
ಯಾವುದೋ ಬೇಜಾರು, ಪ್ರೀತಿಯ ಕೊರತೆ, ಮನೆಯಲ್ಲಿ ಪೋಷಕರು ಪದೇ ಪದೇ ತೆಗಳುವಿಕೆ, ಹೀಯಾಳಿಸುವಿಕೆ ಇವು ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರುತ್ತವೆ ಎನ್ನುವುದಕ್ಕೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಶಾಲಾ ಮಕ್ಕಳು ನಾಪತ್ತೆಯಾಗಿದ್ದ ಪ್ರಕರಣವೇ ಸಾಕ್ಷಿ. ಕೆಲವು ದಿನಗಳ ಹಿಂದೆ ಏಕಾಏಕಿ ನಾಪತ್ತೆಯಾಗಿದ್ದ ಮಕ್ಕಳು ಈಗ ಮನೆಗೆ ಬಂದಿದ್ದಾರೆ. ಮಕ್ಕಳು ಮನೆಗೆ ಬಂದಿದ್ದನ್ನು ಕಂಡು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಏನಿದು ನಾಪತ್ತೆಯ ಪ್ರಕರಣ?
ಕಳೆದ ಗುರುವಾರ ಎಂದಿನಂತೆ ಶಾಲೆಗೆ ಹೋಗಿದ್ದ 15 ಮತ್ತು 14 ವರ್ಷದ ಅಪ್ರಾಪ್ತರು, ಏಕಾಏಕಿ ಕಣ್ಮರೆಯಾಗಿದ್ದರು. ಸ್ಕೂಲ್ ಬಿಟ್ಟ ಮೇಲೆ ಅದೆಷ್ಟೋ ಗಂಟೆಯಾದರೂ ಮನೆಗೆ ಬಾರದ ಮಕ್ಕಳಿಂದಾಗಿ ಸಹಜವಾಗಿ ಪೋಷಕರನ್ನು ಕಂಗಾಲುಗೊಂಡಿದ್ದರು. ಕೂಡಲೇ ಸ್ನೇಹಿತರ, ಸಂಬಂಧಿಕರ ಬಳಿ ವಿಚಾರಸಿದ್ದಾರೆ. ರೈಲ್ವೆ, ಬಸ್ ನಿಲ್ದಾಣಗಳಲ್ಲಿಯೂ ಹುಡುಕಾಟ ನಡೆಸಿದ್ದಾರೆ. ಆದರೂ ಕೂಡ ಮಕ್ಕಳು ಎಲ್ಲಿಯೂ ಕಂಡು ಬಂದಿಲ್ಲ. ದಿಕ್ಕು ತೋಚದ ಪೋಷಕರು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೈಯಲ್ಲಿದ್ದ ದುಡ್ಡು ಖಾಲಿ, ಮನೆ ನೆನಪಿಸಿದ ಹಸಿವು
ಹೀಗೆ ಏಕಾಏಕಿ ನಾಪತ್ತೆಯಾಗಿದ್ದ ಮಕ್ಕಳು ಸೋಮವಾರದಂದು ಪ್ರತ್ಯಕ್ಷರಾಗಿದ್ದಾರೆ. ಇಬ್ಬರು ಮಕ್ಕಳಗಳ ಪೈಕಿ 15 ವರ್ಷದ ಬಾಲಕನಿಗೆ ಆತನ ತಾಯಿಯ ಮೇಲೆ ಬೇಜಾರಿತ್ತಂತೆ. ನನ್ನ ತಾಯಿ ದಿನಾ ಹೊಡೆಯುತ್ತಾರೆ ಎಂದು ತನ್ನ ಸ್ನೇಹಿತನ ಮುಂದೆ ಹೇಳಿಕೊಂಡಿದ್ದನಂತೆ. ಮತ್ತೊಬ್ಬ ಸ್ನೇಹಿತನು ಕೂಡ ತನ್ನ ಮನೆಯಲ್ಲಿನ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ. ನನ್ನ ಅಪ್ಪ ಅಮ್ಮನಿಗೆ ನಾನು ಅಂದ್ರೆ ಪ್ರೀತಿನೇ ಇಲ್ಲ. ಕೇವಲ ನನ್ನ ಅಣ್ಣ ಮತ್ತು ತಂಗಿಯನ್ನು ಮಾತ್ರ ಪ್ರೀತಿಯಿಂದ ಕಾಣುತ್ತಾರೆ ಎಂದು ಹೇಳಿದ್ದಾನೆ. ಕಡೆಗೆ ಇಬ್ಬರೂ ಮನೆ ಬಿಟ್ಟು ಎಲ್ಲಿಯಾದರೂ ಓಡಿ ಹೋಗೋಣ ಎಂದು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ:ರೇಣುಕಾಸ್ವಾಮಿ ಪ್ರಕರಣ.. ಕಾಣದ ಕೈಗಳ ಕುತಂತ್ರ ಎಂದಿದ್ದೇಕೆ ಪವಿತ್ರಾಗೌಡ.. ಪೋಸ್ಟ್ ಹಿಂದಿನ ಕಾರಣವೇನು?
ಮನೆ ಬಿಟ್ಟು ಹೋಗುವಾಗ ಮನೆಯಿಂದ 500 ರೂಪಾಯಿ ತೆಗೆದುಕೊಂಡು ಹೋಗಿದ್ದಾರೆ. ಇಬ್ಬರೂ ಯಶವಂತಪುರ ರೈಲ್ವೆ ಸ್ಟೇಷನ್ನಲ್ಲಿ ಮೂರು ದಿನ ಅಲ್ಲಿಯೇ ಊಟ ಮಾಡಿ ಅಲ್ಲಿಯೇ ಮಲಗಿದ್ದಾರೆ. ಮೂರು ದಿನದಲ್ಲಿ ಐನೂರು ರೂಪಾಯಿ ಖಾಲಿಯಾಗಿದೆ. ಕಡೆಗೆ ಮನೆಯ ನೆನಪಾಗಿದೆ ತಂದೆ ತಾಯಿಯ ನೆನೆಪು ಕಾಡಿದೆ. ಯಾವ ದಾರಿಯೂ ಕಾಣದೆ ಕೊನೆಗೆ ಸೋಮವಾರ ಸಾಯಂಕಾಲ ಇಬ್ಬರು ವಾಪಸ್ ಮನೆಗೆ ಬಂದಿದ್ದಾರೆ. ವಾಪಸ್ ಬಂದ ಮಕ್ಕಳನ್ನು ಕಂಡ ಪೋಷಕರು ದೊಡ್ಡದೊಂದು ನಿಟ್ಟುಸಿರು ಬಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ