/newsfirstlive-kannada/media/post_attachments/wp-content/uploads/2025/02/Basant-Panchami.jpg)
144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳ ಇವತ್ತು ಮತ್ತೊಂದು ಪವಿತ್ರ ಸ್ನಾನಕ್ಕೆ ಸಜ್ಜಾಗಿದೆ. ಪ್ರಯಾಗ್‌ರಾಜ್‌ನಲ್ಲಿ ಇಂದು ಭಕ್ತಸಾಗರವೇ ನೆರೆದಿದ್ದು, ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನ ಮಾಡುತ್ತಿದ್ದಾರೆ.
ಈ ಬಾರಿಯ ಮಹಾಕುಂಭಮೇಳ 3 ಅಮೃತ ಸ್ನಾನಕ್ಕೆ ಸಾಕ್ಷಿಯಾಗಿದೆ. ಜನವರಿ 14ರ ಮಕರ ಸಂಕ್ರಾಂತಿ, ಜನವರಿ 29ರ ಮೌನಿ ಅಮಾವಾಸ್ಯೆ ಹಾಗೂ ಫೆಬ್ರವರಿ 3ರ ಬಸಂತ್ ಪಂಚಮಿಯಂದು ನಾಗಾಸಾಧುಗಳು ಅಮೃತ ಸ್ನಾನದಲ್ಲಿ ಮಿಂದೆದ್ದಿದ್ದಾರೆ. ಇವತ್ತು ಪವಿತ್ರ ಬಸಂತ್ ಪಂಚಮಿಯ ದಿನವಾಗಿದ್ದು, ಅಮೃತ ಸ್ನಾನ ಮಾಡಲಾಗುತ್ತಿದೆ.
ಅಮೃತ ಸ್ನಾನ ಅನ್ನೋದು ಮಹಾಕುಂಭಮೇಳದಲ್ಲಿ ಬಹಳ ಮುಖ್ಯವಾದದ್ದು. ಈ ದಿನವನ್ನು ಸೂರ್ಯ, ಚಂದ್ರ ಮತ್ತು ಗುರುವಿನ ಜ್ಯೋತಿಷ್ಯದ ಮೂಲಕ ಗುರುತಿಸಲಾಗುತ್ತದೆ. ಇಂದು ಗಂಗಾ ನದಿ ಪವಿತ್ರ ರೂಪ ಪಡೆಯುತ್ತದೆ. ಇಂದು ಕೋಟ್ಯಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಮೋಕ್ಷ ಪಡೆಯಲು ಹಾತೊರೆದಿದ್ದಾರೆ.
ಅಮೃತ ಸ್ನಾನಕ್ಕೆ ಹೇಗಿದೆ ವ್ಯವಸ್ಥೆ?
ಮೌನಿ ಅಮಾವಾಸ್ಯೆಯಂದು ಪ್ರಯಾಗ್‌ರಾಜ್‌ನಲ್ಲಿ ಕಾಲ್ತುಳಿತ ಸಂಭವಿಸಿದ್ದು, ಮಹಾಕುಂಭಮೇಳವೇ ಬೆಚ್ಚಿ ಬೀಳುವಂತೆ ಮಾಡಿದೆ. ಏನೇ ಆದರೂ ಪವಿತ್ರ ಸ್ನಾನಕ್ಕೆ ಹರಿದು ಬರುತ್ತಿರುವ ಭಕ್ತ ಕೋಟಿ ಮಾತ್ರ ಕಡಿಮೆ ಆಗುತ್ತಿಲ್ಲ.
ಮೌನಿ ಅಮಾವಾಸ್ಯೆ ಅಂತೆಯೇ ಬಸಂತ್ ಪಂಚಮಿ ಕೂಡ ಪವಿತ್ರ ದಿನವಾಗಿದ್ದು, ಕೋಟ್ಯಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಉತ್ತರ ಪ್ರದೇಶ ಸರ್ಕಾರ ಇವತ್ತು ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿದೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಇಡೀ ಪ್ರಯಾಗ್‌ರಾಜ್ ಆಡಳಿತ ವ್ಯವಸ್ಥೆಗೆ ‘ಶೂನ್ಯ ದೋಷ’ಕ್ಕೆ ಮಹತ್ವ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿರೋ ಆರೂಢ ಜ್ಯೋತಿಯ ಶಕ್ತಿ ಎಂಥದ್ದು? ರಹಸ್ಯ ಬಿಚ್ಚಿಟ್ಟ ನಾಗಾಸಾಧು!
ಮೌನಿ ಅಮಾವಾಸ್ಯೆಯ ಕಾಲ್ತುಳಿತದಲ್ಲಿ 30 ಭಕ್ತರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಬಸಂತ್ ಪಂಚಮಿಯಂದು ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. 2019ರ ಅರ್ಧ ಕುಂಭಮೇಳದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳ ತಂಡವನ್ನು ಪ್ರಯಾಗ್‌ರಾಜ್‌ನ ನಿರ್ವಹಣೆಗೆ ನೇಮಿಸಲಾಗಿದೆ.
ಪ್ರಯಾಗ್‌ರಾಜ್ ಮಹಾಕುಂಭಮೇಳದಲ್ಲಿ ಜನವರಿ 13ರಿಂದ ಇಲ್ಲಿಯವರೆಗೂ 33 ಕೋಟಿ 61 ಲಕ್ಷ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ. ಇಂದು ಮಹಾಕುಂಭಮೇಳದ 3ನೇ ಹಾಗೂ ಕೊನೆಯ ಅಮೃತ ಸ್ನಾನವಿದ್ದು ತ್ರಿವೇಣಿ ಸಂಗಮಕ್ಕೆ ಕೋಟಿಗೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ