/newsfirstlive-kannada/media/post_attachments/wp-content/uploads/2025/03/Bangalore-lorry-Accident-1.jpg)
ಬೆಂಗಳೂರು: ಥಣಿಸಂದ್ರದ ರೈಲ್ವೆ ಟ್ರ್ಯಾಕ್ ಬಳಿ ಇಂದು ಭೀಕರ ಅಪಘಾತ ಸಂಭವಿಸಿದೆ. ಹಿಂದೆಯಿಂದ ಬರ್ತಿದ್ದ BBMP ಕಸದ ಲಾರಿ ಬೈಕ್‌ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಬಿಬಿಎಂಪಿ ಕಸದ ಲಾರಿಗೆ ಥಣಿಸಂಧ್ರದಲ್ಲಿ ನಡೆದಿರೋ 4ನೇ ಪ್ರಕರಣ ಇದಾಗಿದ್ದು, ಸ್ಥಳೀಯರು ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಬ್ದುಲ್ ಖಾದರ್ ಎಂಬುವವರು ಇಂದು ಬೆಳಗ್ಗೆ ಮಗನ ಶಾಲೆಯ ಅಡ್ಮಿಷನ್‌ಗೆ ವಿಚಾರಿಸಲು ಮನೆಯಿಂದ ಹೊರಟಿದ್ದರು. ತಂದೆಯ ಜೊತೆ ಬೈಕ್ ಮೇಲೆ ಮಗ ಐಮಾನ್ ಕೂತಿದ್ದ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಿಂದೆಯಿಂದ ಬರ್ತಿದ್ದ ಕಸದ ಲಾರಿ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತಂದೆ ಒಂದು ಕಡೆ ಮಗ ಒಂದು ಕಡೆ ಬಿದ್ದಿದ್ದಾರೆ.
ಲಾರಿ ಗುದ್ದಿದ ರಭಸಕ್ಕೆ ಅಬ್ದುಲ್ ಖಾದರ್ ಫುಟ್‌ಪಾತ್ ಮೇಲೆ ಬಿದ್ರೆ ಮಗ ಐಮಾನ್ ರಸ್ತೆಗೆ ಬಿದ್ದಿದ್ದಾನೆ. ಆಗ ನಿಯಂತ್ರಣ ತಪ್ಪಿ ಮಗುವಿನ ತಲೆ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದಿದೆ. ಲಾರಿ ಕೆಳಗೆ ಸಿಕ್ಕ ಐಮಾನ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಐಮಾನ್ ತಂದೆ ಅಬ್ದುಲ್ ಖಾದರ್‌ಗೆ ಗಂಭೀರ ಗಾಯವಾಗಿದ್ದು, ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರು ಲಾರಿ ಚಾಲಕ ಕುಡಿದು ಚಾಲನೆ ಮಾಡುತ್ತಿದ್ದ ಎಂದು ಆರೋಪಿಸಿದ್ದು, ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆಗ ಕೆಲವರು ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡರ ವಿರುದ್ಧ ಮಾತನಾಡದಂತೆ ಗಲಾಟೆ ಮಾಡಿದ್ದಾರೆ. ಎರಡು ಗುಂಪಿನ ಮಧ್ಯೆ ನಡೆದ ಗಲಾಟೆ ಕೈ, ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.
ಗಲಾಟೆಗೆ ಕಾರಣವೇನು?
ಇತ್ತೀಚೆಗೆ ಥಣಿಸಂದ್ರದಲ್ಲಿ ಕಸದ ಲಾರಿಯಿಂದ ಆಗಿರುವ 4ನೇ ಅನಾಹುತ ಇದು. ಹೀಗಾಗಿ ಶಾಸಕರಿಗೆ ಮನವಿ ಮಾಡಿದ್ರೂ ಕಸದ ಲಾರಿಗಳಿಗೆ ಬಲಿಯಾಗ್ತಿರೋರ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಶಾಸಕರ ಬಗ್ಗೆ ಮಾತನಾಡದಂತೆ ಕೆಲವರು ಗಲಾಟೆ ಮಾಡಿದ್ದಾರೆ.
ಇದನ್ನೂ ಓದಿ: ಜಗತ್ತಿನ ಭಯಾನಕ 10 ಭೂಕಂಪಗಳು ಯಾವುವು ಗೊತ್ತಾ? ಬಲಿಯಾದವರ ಸಂಖ್ಯೆ ಸಾವಿರ ಅಲ್ಲ ಲಕ್ಷ, ಲಕ್ಷಗಳು!
ಕಸದ ಲಾರಿಗೆ ಬೆಂಕಿ ಬೀಳುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಡಿಸಿಪಿ ಮುಂದೆಯೇ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಹಾಕಿ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಮಗನನ್ನು ಶಾಲೆಗೆ ಸೇರಿಸಲು ಹೊರಟಿದ್ದ ತಂದೆ ಆಸ್ಪತ್ರೆ ಸೇರಿದ್ರೆ ಚೆನ್ನಾಗಿ ಓದಿ ತಂದೆಗೆ ಆಸರೆಯಾಗಬೇಕಿದ್ದ ಮಗ ಯಾರದೋ ನಿರ್ಲಕ್ಷ್ಯಕ್ಕೆ ಮಸಣವನ್ನು ಸೇರಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ