ರೋಹಿತ್​ಗೆ ಪರ್ಯಾಯ ನಾಯಕ ಯಾರು? ರೇಸ್​​ನಲ್ಲಿ 5 ಆಟಗಾರರು..!

author-image
Ganesh
Updated On
ರೋಹಿತ್​ಗೆ ಪರ್ಯಾಯ ನಾಯಕ ಯಾರು? ರೇಸ್​​ನಲ್ಲಿ 5 ಆಟಗಾರರು..!
Advertisment
  • ಶ್ರೀಲಂಕಾ ಪ್ರವಾಸಕ್ಕೆ ಟೀಮ್​ ಇಂಡಿಯಾ ಸೆಲೆಕ್ಷನ್​
  • ಟೀಮ್​ ಸೆಲೆಕ್ಷನ್​ಗೂ ಮುನ್ನ ಹೊಸ ತಲೆನೋವು
  • ಪರ್ಯಾಯ ನಾಯಕನ ಬೆಳೆಸೋ ಸವಾಲು

ಶ್ರೀಲಂಕಾ ಪ್ರವಾಸದ ಟೀಮ್​ ಇಂಡಿಯಾ ಸೆಲೆಕ್ಷನ್​ಗೆ ಕೌಂಟ್​​ಡೌನ್​ ಶುರುವಾಗಿದ್ದು, ಏಕದಿನ ಸರಣಿಗೆ ಟೀಮ್​ ಸೆಲೆಕ್ಷನ್​ ದೊಡ್ಡ ತಲೆನೋವು ತಂದಿಟ್ಟಿದೆ. ರೋಹಿತ್ ಶರ್ಮಾ​​ ಉತ್ತರಾಧಿಕಾರಿಯನ್ನ ನೇಮಿಸೋ ದೊಡ್ಡ ಜವಾಬ್ದಾರಿ ಅಜಿತ್​ ಅಗರ್ಕರ್, ಗೌತಮ್​ ಗಂಭೀರ್​ ಹೆಗಲೇರಿದೆ. ನಾಯಕನ ಪಟ್ಟವೇರಲು ಆಟಗಾರರ ದಂಡೇ ರೆಡಿಯಿದೆ.

ಜಿಂಬಾಬ್ವೆ ಪ್ರವಾಸದ ದಿಗ್ವಿಜಯದ ಬೆನ್ನಲ್ಲೇ ಲಂಕೆಗೆ ಹಾರಲು ಟೀಮ್​ ಇಂಡಿಯಾ ಸಜ್ಜಾಗಿದೆ. ಜುಲೈ 27ರಿಂದ ಆರಂಭವಾಗಲಿರೋ ಟಿ20 ಹಾಗೂ ಏಕದಿನ ಸರಣಿಗೆ ಸಿದ್ಧತೆಗಳು ಶುರುವಾಗಿವೆ. ಈ ಮಧ್ಯೆ ಹೆಡ್​ಕೋಚ್​ ಗೌತಮ್​ ಗಂಭೀರ್​, ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​ ಮುಂದೆ ನಾಯಕನ ಆಯ್ಕೆಯ ಸವಾಲು ಎದುರಾಗಿದೆ.

ಇದನ್ನೂ ಓದಿ:ಬಯಲಾಯ್ತು ಗಂಗೂಲಿ ಅಸಲಿ ಮುಖವಾಡ.. ಕ್ರೆಡಿಟ್ ಆಸೆಗಾಗಿ ಸತ್ಯ ಒಪ್ಪಿಕೊಂಡ ದಾದಾ..!

publive-image

ಟೀಮ್​ ಸೆಲೆಕ್ಷನ್​ಗೂ ಮುನ್ನ ಹೊಸ ತಲೆನೋವು
ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಿಂದ ರೋಹಿತ್​ ರೆಸ್ಟ್​ ಪಡೆಯೋ ಸಾಧ್ಯತೆಯಿದೆ. ಹೀಗಾಗಿ ಏಕದಿನ ತಂಡದ ನಾಯಕನ್ಯಾರು ಎಂಬ ಪ್ರಶ್ನೆ ಹುಟ್ಟಿದೆ. ಮುಂದಿನ ವರ್ಷ ನಡೆಯೋ ಚಾಂಪಿಯನ್​ ಟ್ರೋಫಿ ಬಳಿಕ ರೋಹಿತ್ ಏಕದಿನ ಫಾರ್ಮೆಟ್​ಗೆ ಗುಡ್​ ಬೈ ಹೇಳೋ ಸಾಧ್ಯತೆಯಿದೆ. 2027ರಲ್ಲಿ ಏಕದಿನ ವಿಶ್ವಕಪ್​ ನಡೆಯಲಿದೆ. ಹೀಗಾಗಿ ರೋಹಿತ್​ಗೆ ಪರ್ಯಾಯ ನಾಯಕನನ್ನ ಈಗಿನಿಂದಲೇ ಬೆಳೆಸಬೇಕಿದ್ದು, ಗೌತಮ್​ ಗಂಭೀರ್​ ಮುಂದೆ ಬಿಗ್​ ಟಾಸ್ಕ್​ ಇದೆ.

ಕನ್ನಡಿಗ ರಾಹುಲ್​ಗೆ ಅದೃಷ್ಟ ಒಲಿಯುತ್ತಾ?
ಏಕದಿನ ನಾಯಕತ್ವದ ರೇಸ್​ನಲ್ಲಿ ಕೆ.ಎಲ್​ ರಾಹುಲ್​ ಮುಂಚೂಣಿಯಲ್ಲಿದ್ದಾರೆ. ಉತ್ತಮ ಟ್ರ್ಯಾಕ್​ ರೆಕಾರ್ಡ್​ ಹೊಂದಿರುವ ರಾಹುಲ್​ಗೆ ನಾಯಕನಾಗಿ ತಂಡವನ್ನ ಮುನ್ನಡೆಸಿದ ಅನುಭವವೂ ಇದೆ. ಗಂಭೀರ್​ ಲಕ್ನೋ ತಂಡದ ಮೆಂಟರ್​ ಆಗಿದ್ದಾಗ ರಾಹುಲ್​ ನಾಯಕನಾಗಿದ್ರು. ರಾಹುಲ್ ಸಾಮರ್ಥ್ಯದ ಬಗ್ಗೆ ಗಂಭೀರ್​ಗೆ ಅರಿವಿರೋದ್ರಿಂದ ಕನ್ನಡಿಗನಿಗೆ ಅದೃಷ್ಟ ಒಲಿಯೋ ಸಾಧ್ಯತೆಯಿದೆ.

ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್​​ಗೆ ಬಿಗ್ ಶಾಕ್ ಕೊಟ್ಟ ಪಂತ್.. ತಂಡ ತೊರೆಯಲು ನಿರ್ಧಾರ.. ಆಗಿದ್ದೇನು..?

publive-image

ಶ್ರೇಯಸ್​ ಅಯ್ಯರ್​ಗೆ ಮಣೆ ಹಾಕ್ತಾರಾ?
ಟೀಮ್​ ಇಂಡಿಯಾದಿಂದ ಕೆಲ ಕಾಲದಿಂದ ಹೊರಬಿದ್ದಿರೋ ಶ್ರೇಯಸ್​ ಅಯ್ಯರ್​ ಕಮ್​ಬ್ಯಾಕ್​ ಮಾಡಿ ನಾಯಕನಾದ್ರೂ ಅಚ್ಚರಿ ಪಡಬೇಕಿಲ್ಲ. ಗಂಭೀರ್ ಹಾಗೂ ಶ್ರೇಯಸ್​ ಒಟ್ಟಾಗಿ ಕೆಲಸ ಮಾಡಿ ಕೆಕೆಆರ್​ ತಂಡವನ್ನು ಚಾಂಪಿಯನ್​ ಮಾಡಿದ್ದಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ. ಶ್ರೇಯಸ್​ ವಯಸ್ಸು 29 ಆಗಿದ್ದು, ಟೀಮ್​ ಇಂಡಿಯಾದ ಭವಿಷ್ಯದ ನಾಯಕರಾಗಿ ಬೆಳೆಸಬಹುದು. ಹೀಗಾಗಿ ಶ್ರೇಯಸ್​ಗೆ ಮಣೆ ಹಾಕಿದ್ರೂ ಅಚ್ಚರಿಪಡಬೇಕಿಲ್ಲ.

ಡೇರ್​ ಡೆವಿಲ್​ ಪಂತ್​ಗೆ ಪಟ್ಟ ಕಟ್ತಾರಾ?
ಯುವ ಆಟಗಾರ ರಿಷಭ್​ ಪಂತ್​ರನ್ನು ಬಹು ಹಿಂದಿನಿಂದಲೇ ಬಿಸಿಸಿಐ ಮಟ್ಟದಲ್ಲಿ ಭವಿಷ್ಯದ ಕ್ಯಾಪ್ಟನ್​ ಆಗಿ ಬೆಳೆಸೋ ಪ್ರಯತ್ನ ನಡೆದಿತ್ತು. ಪಂತ್​ಗೆ ಅಪಘಾತವಾದ ಬಳಿಕ ಆ ಪ್ಲಾನ್​ ನಿಂತಿತ್ತು. ಇದೀಗ ರಿಷಭ್​ ಪಂತ್​ ಸಾಲಿಡ್ ಕಮ್​ಬ್ಯಾಕ್​ ಮಾಡಿದ್ದಾರೆ. ಮೂರೂ ಫಾರ್ಮೆಟ್​ನಲ್ಲಿ ಪಂತ್​ ಸಾಮರ್ಥ್ಯ ನಿರೂಪಿಸಿರೋದ್ರಿಂದ ಮತ್ತೆ ನಾಯಕತ್ವಕ್ಕೆ ಪರಿಗಣಿಸೋ ಸಾಧ್ಯತೆಯಿದೆ.

publive-image

ವೈಟ್​ ಬಾಲ್​ ಫಾರ್ಮೆಟ್​ಗೇ ಹಾರ್ದಿಕ್​ ನಾಯಕ?
ಟಿ20 ಫಾರ್ಮೆಟ್​ನ ಖಾಯಂ ನಾಯಕನಾಗಿ ಹಾರ್ದಿಕ್​ ಪಾಂಡ್ಯ ಗುರುತಿಸಿಕೊಂಡಿದ್ದಾರೆ. ಶ್ರೀಲಂಕಾ ಪ್ರವಾಸದ ಟಿ20 ಸರಣಿಯಲ್ಲೂ ಹಾರ್ದಿಕ್​ ತಂಡವನ್ನ ಮುನ್ನಡೆಸೋದು ಬಹುತೇಕ ಪಕ್ಕಾ ಆಗಿದೆ. ಹಾರ್ದಿಕ್​ ಏಕದಿನ ತಂಡಕ್ಕೂ ನಾಯಕನಾದ್ರೂ ಅಚ್ಚರಿ ಪಡಬೇಕಿಲ್ಲ. ಕೋಚ್​ ಹುದ್ದೆಗೆ ಗಂಭೀರ್​​ ನೇಮಕ ಮಾಡುವ ಸಂದರ್ಭದಲ್ಲಿ ಬಿಸಿಸಿಐ ಹಾರ್ದಿಕ್​​ ಜೊತೆ ಮಾತ್ರ ಚರ್ಚಿಸಿತ್ತು. ಈ ಚರ್ಚೆ ಭವಿಷ್ಯದ ನಾಯಕನ ಸುಳಿವು ನೀಡಿದೆ. ಹೀಗಾಗಿ ವೈಟ್​ಬಾಲ್​​ ಫಾರ್ಮೆಟ್​ಗೆ ಹಾರ್ದಿಕ್​ ನಾಯಕನಾಗಿ ನೇಮಕವಾದ್ರೂ ಅಚ್ಚರಿಯಿಲ್ಲ.

ಇದನ್ನೂ ಓದಿ:‘ಸ್ವಲ್ಪದ್ರಲ್ಲೇ ನನ್ನ ಸಾವು ತಪ್ಪಿತು..’ 7 ಮಂದಿ ಬಲಿ ಪಡೆದ ಗುಡ್ಡ ಕುಸಿತದ ಭಯಾನಕ ಕ್ಷಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

publive-image

ಅನುಭವಿ ಬೂಮ್ರಾಗೆ ಅವಕಾಶ ಸಿಗುತ್ತಾ?
ತಂಡದ ಹಿರಿಯ ವೇಗಿ ಜಸ್​ಪ್ರಿತ್​​ ಬೂಮ್ರಾಗೆ ನಾಯಕನ ಪಟ್ಟ ಒಲಿಯೋ ಸಾಧ್ಯತೆಯೂ ಇದೆ. ತಂಡವನ್ನ ಸಮರ್ಥವಾಗಿ ಮುನ್ನಡೆಸೋ ಸಾಮರ್ಥ್ಯ ಪ್ಲಸ್ ಅಪಾರ ಅನುಭವ ಹಾಗೂ ಚಾಣಾಕ್ಷತೆ ಬೂಮ್ರಾಗಿದೆ. ಬೂಮ್ರಾ ಜೊತೆಗೆ ಜಿಂಬಾಬ್ವೆ ಪ್ರವಾಸದಲ್ಲಿ ನಾಯಕತ್ವದ ಟೆಸ್ಟ್​ ಪಾಸ್​ ಆಗಿರೋ ಶುಭ್​ಮನ್​ ಗಿಲ್​ ಕೂಡ ಕ್ಯಾಪ್ಟನ್ಸಿ ರೇಸ್​ನಲ್ಲಿದ್ದಾರೆ. ಒಟ್ಟಿನಲ್ಲಿ, ನಾಯಕನ ಪಟ್ಟಕ್ಕಾಗಿ ಹಲವರ ನಡುವೆ ರೇಸ್​​ ಏರ್ಪಟ್ಟಿದ್ದು, ಕೋಚ್​ ಗೌತಮ್​ ಗಂಭೀರ್​, ಸೆಲೆಕ್ಟರ್​ ಅಜಿತ್​ ಅಗರ್ಕರ್​ ಯಾರಿಗೆ ಮಣೆ ಹಾಕ್ತಾರೆ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment