/newsfirstlive-kannada/media/post_attachments/wp-content/uploads/2024/12/BELAGAVI_1.jpg)
ಪಂಚಮಸಾಲಿ ಮೀಸಲಾತಿ ಹೋರಾಟದ ಕಿಚ್ಚು ಮೊನ್ನೆ ಆರಂಭವಾಗಿತ್ತು. ಸುವರ್ಣಸೌಧದಕ್ಕೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದಂತೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಹಿಂಸಾರೂಪ ಪಡೆದ ಹೋರಾಟದಿಂದ ಬೆಳಗಾವಿ ಕೊತ ಕೊತ ಕುದಿಯುವಂತೆ ಮಾಡಿತ್ತು. ಇವತ್ತು, ಅದರ ಸೆಕೆಂಡ್ ಪಾರ್ಟ್ ಮುಂದುವರಿಯಲಿದೆ. ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ. ಸದನದಲ್ಲೂ ಮೀಸಲಾತಿ ಕಿಚ್ಚು ಧಗಧಗಿಸಲಿದೆ.
ಬೆಳಗಾವಿ ಅಧಿವೇಶನ ಅಂದ್ರೆನೇ ಹಾಗೇ ಸಿದ್ದರಾಮಯ್ಯ ಸರ್ಕಾರಕ್ಕೆ ಇಂದಿನಿಂದ ಅಗ್ನಿ ಪರೀಕ್ಷೆ ಕಾಲ. ಸರಣಿ ಹೋರಾಟಗಳ ಇತಿಹಾಸ ಹೊಂದಿರುವ ಬೆಳಗಾವಿಯ ಚಳಿಗಾಲ ಅಧಿವೇಶನಕ್ಕೆ ಈ ಬಾರಿಯೂ ಬಿಸಿ ಮುಟ್ಟಿದೆ. ಅದರಲ್ಲೂ ಪಂಚಮಸಾಲಿ ಮೀಸಲಾತಿ ಕಿಚ್ಚು ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲಿನ ಹಾದಿಯನ್ನ ತೆರೆದಿಟ್ಟಿದೆ. ಅಧಿವೇಶನದ 2ನೇ ದಿನವಾದ ನಿನ್ನೆ ಲಾಠಿಗಳು ಜಳಪಿಸಿವೆ. ಸಿಕ್ಕ ಸಿಕ್ಕವರ ಮೇಲೆ ಪ್ರಹಾರ ನಡೆದಿದೆ.
ಸುವರ್ಣಸೌಧದಲ್ಲಿ ಮಾರ್ದನಿಸಲಿದೆ ಲಾಠಿ ಏಟಿನ ಕಿಚ್ಚು!
ಅಂದ್ಹಾಗೆ ಇವತ್ತು ರಾಜ್ಯ ಸರ್ಕಾರದ ವಿರುದ್ಧ ಸಾಲು ಸಾಲು ಪ್ರತಿಭಟನೆಗಳು ನಡೆಯಲಿವೆ. ಅದರಲ್ಲೂ ಪಂಚಮಸಾಲಿ ಹೋರಾಟದ ಕಿಚ್ಚು ಮತ್ತೆ ಧಗಧಗಿಸಲಿದೆ. ರಾಜ್ಯಾದ್ಯಂತ ಪಂಚಮಸಾಲಿ ಮೀಸಲಾತಿಗಾಗಿ ರಾಜ್ಯಾದ್ಯಂತ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ರಸ್ತೆ ತಡೆಗೆ ಕರೆ ನೀಡಲಾಗಿದೆ.
ಇನ್ನು, ಲಾಠಿಚಾರ್ಜ್ ವಿಚಾರವಾಗಿ ಮಾತನಾಡಿದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು, ಹೋರಾಟ ಅತೀರೇಕವಾಗಬಾರದು ಅಂತ ಬುದ್ಧಿ ಹೇಳಿ, ಲಾಠಿಚಾರ್ಜ್ ಆಗಬಾರದಿತ್ತು ಅಂತ ಖಂಡಿಸಿದ್ದಾರೆ. ಅಲ್ಲದೆ, ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಸಮಾಜಕ್ಕೆ ಕಪ್ಪು ಚುಕ್ಕೆ ತರಲು ಕೆಲವರು ಯತ್ನಿಸುತ್ತಿದ್ದಾರೆ ಅಂತ ಟೀಕಿಸಿದ್ದಾರೆ.
ಇನ್ನು, ಪಂಚಮಸಾಲಿ ಪ್ರತಿಭಟನೆ ಕಾವಿನ ಮಧ್ಯೆ ಬೆಳಗಾವಿಯಲ್ಲಿ ಸಾಲು ಸಾಲು ಪ್ರತಿಭಟನೆಗಳು ನಡೆಯಲಿವೆ. ವಿವಿಧ ಸಂಘಟನೆಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾಗಿವೆ.
ಬೆಳಗಾವಿಯಲ್ಲಿ ಪ್ರತಿಭಟನೆಗಳ ಸಾಲು!
- ಕಾರ್ಮಿಕರ ವಿವಿಧ ಬೇಡಿಕೆ ಸಂಬಂಧ ಎಐಟಿಯುಸಿ ಪ್ರತಿಭಟನೆ
- ಅನುದಾನ ರಹಿತ ಶಾಲಾ ಕಾಲೇಜುಗಳಿಂದ ಅನುದಾನಕ್ಕೆ ಹೋರಾಟ
- ಪಂಚಾಯತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಪ್ರತಿಭಟನೆ
- ಭೂಮಾಪಕರಿಂದ ಕನಿಷ್ಠ ವೇತನ ಮತ್ತು ಖಾಯಂ ಮಾತಿಗೆ ಆಗ್ರಹ
- ಕಬ್ಬು ಬೆಳೆಗಾರರ ಸಂಘ ಸಹ ಬೆಂಬಲ ಬೆಲೆಗೆ ಒತ್ತಾಯಿಸಿ ಧರಣಿ
- ಒಟ್ಟು 10 ಸಂಘಟನೆಗಳ ಪ್ರತಿಭಟನೆಗೆ ಜಿಲ್ಲಾಡಳಿತದ ಅವಕಾಶ
ಇದನ್ನೂ ಓದಿ: ಪುಷ್ಪ 2 ಮಾದರಿಯಲ್ಲಿ ಮರಳು ದಂಧೆ.. ಸಿನಿಮೀಯ ರೀತಿಯಲ್ಲಿ ಪೊಲೀಸರು ರೇಡ್
ಹೀಗೆ ಪ್ರತಿಭಟನೆಗಳ ಸಾಲು ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿವೆ. ಇವೆಲ್ಲಕ್ಕೂ ಹೆಚ್ಚಾಗಿ ಇವತ್ತಿನ ಪಂಚಮಸಾಲಿ ಹೋರಾಟದ ಬಗ್ಗೆ ಎಲ್ಲಾ ಜಿಲ್ಲಾಡಳಿತಕ್ಕೂ ಸರ್ಕಾರ ಕಟ್ಟೆಚ್ಚರಕ್ಕೆ ಸೂಚನೆ ನೀಡಿದೆ. ಸದನದಲ್ಲೂ ಲಾಠಿ ಚಾರ್ಜ್ ವಿಚಾರ ಪ್ರತಿಧ್ವನಿಸಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರ ತನ್ನ ಕ್ರಮವನ್ನ ಹೇಗೆ ಸಮರ್ಥಿಸಲಿದೆ ಅನ್ನೋದು ಕಾದುನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ