/newsfirstlive-kannada/media/post_attachments/wp-content/uploads/2024/10/Babusapalya-Building-Collapse.jpg)
ಬೆಂಗಳೂರು: ಧಾರಾಕಾರ ಮಳೆಯ ಜೊತೆ, ಜೊತೆಗೆ ಸಿಲಿಕಾನ್ ಸಿಟಿ ಒಂದಾದ ಮೇಲ್ಲೊಂದು ಆಘಾತವನ್ನು ಎದುರಿಸುತ್ತಿದೆ. ನಿನ್ನೆ ಸಂಜೆ ಬಾಬುಸಾಪಾಳ್ಯದಲ್ಲಿ ನೋಡ ನೋಡ್ತಿದ್ದಂತೆ ಆರಂತಸ್ತಿನ ಕಟ್ಟಡ ನೆಲಸಮವಾಗಿತ್ತು. ಒಳಗಿದ್ದ ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು. ಅಕ್ಕಪಕ್ಕದವರು ಏನಾಗ್ತಿದೆ ಅಂತ ನೋಡೋವಷ್ಟರಲ್ಲಿ ಪಕ್ಕದಲ್ಲಿದ್ದ ಕಟ್ಟಡ ಕಣ್ಮರೆಯಾಗಿತ್ತು. ಅವಶೇಷಗಳಡಿ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದವರ ಉಸಿರುಗಟ್ಟಿತ್ತು.
ಕಟ್ಟಡ ಕುಸಿತದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆ..!
13 ಜನರ ರಕ್ಷಣೆ.. ಉಳಿದವರಿಗಾಗಿ ರಕ್ಷಣಾಕಾರ್ಯ
ಬಾಬುಸಾಪಾಳ್ಯದಲ್ಲಿ ನಡೆದ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಕಟ್ಟಡದಡಿ ಸಿಲುಕಿದ್ದ 14ಜನರನ್ನ ರಕ್ಷಣೆ ಮಾಡಿದ್ದು, ಇನ್ನು ಇಬ್ಬರಿಗಾಗಿ ರಕ್ಷಣಾ ಕಾರ್ಯ ಮುಂದುವರೆದಿದೆ. ಬಿಹಾರ ಮೂಲದವರಾದ ಅರ್ಮಾನ್, ಶ್ರೀರಾನ್ ಕಿರುಪಾಲ್, ಮೊಹಮ್ಮದ್ ಸಾಹಿಲ್, ಸೋಲೋ ಪಾಶ್ವಾನ್, ತಮಿಳುನಾಡು ಮೂಲದ ಸತ್ಯ ರಾಜು, ಮಣಿಕಂಠನ್, ಆಂಧ್ರಪ್ರದೇಶದ ತುಳಸಿರೆಡ್ಡಿ, ಉತ್ತರ ಪ್ರದೇಶ ಮೂಲದ ಪುಲ್ಚನ್ ಯಾದವ್ ಕಟ್ಟಡ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಜಸ್ಟ್ 50 ಪೈಸೆ ಹೆಚ್ಚು ವಸೂಲಿ ಮಾಡಿದ್ದಕ್ಕೆ ಅಂಚೆ ಇಲಾಖೆಗೆ ₹15 ಸಾವಿರ ದಂಡ; ಅಸಲಿಗೆ ಆಗಿದ್ದೇನು?
ಕಳಪೆ ಕಾಮಗಾರಿಯೇ ಆರಂತಸ್ತಿನ ಕಟ್ಟಡ ಕುಸಿತಕ್ಕೆ ಕಾರಣ!
ಕಳಪೆ ಕಾಮರಿಗಾರಿಯಿಂದಾಗಿಯೇ ಈ ದುರಂತ ನಡೆದಿದ್ದು, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಾರ್ಮಿಕ ಮೊಹಮ್ಮದ್ ಹರ್ಷದ್ ನೀಡಿರೋ ದೂರಿನ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಕಟ್ಟಡ ಮಾಲೀಕ ಮುನಿರಾಜರೆಡ್ಡಿ, ಆತನ ಪುತ್ರ ಭುವನ್ ರೆಡ್ಡಿ, ಕಾಂಟ್ರಾಕ್ಟರ್ ಮುನಿಯಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಸದ್ಯ ಹೆಣ್ಣೂರು ಪೊಲೀಸರು ಎ1 ಭರತ್ ರೆಡ್ಡಿಯನ್ನ ಬಂಧಿಸಿದ್ದು, ಮುನಿಯಪ್ಪನನ್ನ ವಶಕ್ಕೆ ಪಡೆದಿದ್ದಾರೆ. ಮೃತಪಟ್ಟ ಎಂಟು ಜನರಿಗೆ ಕಾರ್ಮಿಕ ಇಲಾಖೆಯಿಂದ ಪರಿಹಾರ ಕೊಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮೃತಪಟ್ಟವರಿಗೆ ಪರಿಹಾರ ಧನ ನೀಡಲು ಡಿಸಿಎಂ ಡಿ.ಕೆ.ಶಿವಕುಮಾರ್, ಕಾರ್ಮಿಕ ಸಚಿವ ಸಂತೊಷ್ ಲಾಡ್ ಸೂಚಿಸಿದ್ದರು.
ಬಾಬುಸಾಪಾಳ್ಯ ಕಟ್ಟಡ ದುರಂತ ಪ್ರಕರಣ ಸಂಬಂಧ ಇದುವರೆಗೂ ಮೂವರ ಬಂಧನವಾಗಿದೆ. ಅವಶೇಷಗಳ ಅಡಿ ನಾಪತ್ತೆಯಾಗಿರೋ ಗಜೇಂದ್ರ ಮತ್ತು ಏಳುಮಲೈಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಇಬ್ಬರು ಜೀವಂತವಾಗಿ ಸಿಗಲಿ ಅಂತ ಕಾರ್ಮಿಕರು ಹಾಗು ಕುಟುಂಬಸ್ಥರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ