/newsfirstlive-kannada/media/post_attachments/wp-content/uploads/2025/02/AUTO.jpg)
ಬೆಂಗಳೂರು: ಕೆಎಸ್ಆರ್ಟಿಸಿ, ಬಿಎಂಟಿಸಿ ಹಾಗೂ ಮೆಟ್ರೋ ದರ ಹೆಚ್ಚಳ ಮಾಡಿದ ಬೆನ್ನಲ್ಲೇ ಶೀಘ್ರವೇ ಆಟೋ ಪ್ರಯಾಣ ದರ ಕೂಡ ಏರಿಕೆ ಆಗುವ ಸಾಧ್ಯತೆ ಇದೆ. ಆಟೋ ಮೀಟರ್ ದರ ಹೆಚ್ಚಳ ಮಾಡುವಂತೆ ಒತ್ತಡ ಬಂದಿದ್ದು ಈ ಸಂಬಂಧ ಮಾರ್ಚ್ 12 ರಂದು ದರ ಪರಿಷ್ಕರಣೆ ಸಭೆ ನಡೆಯಲಿದೆ.
ದರ ಪರಿಷ್ಕರಣೆ ಸಭೆಯು ಮಾರ್ಚ್ 12 ರಂದು 11 ಗಂಟೆಗೆ ಇನ್ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ನಡೆಯಲಿದೆ. ಸಭೆಗೆ ಟ್ರಾಫಿಕ್ ಈಸ್ಟ್ ಡಿಸಿಪಿ ಅವರು ನೇತೃತ್ವ ವಹಿಸಲಿದ್ದಾರೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮೀಟರ್ ದರ ಹೆಚ್ಚಳ ಮಾಡುವಂತೆ ಕಳೆದ ವರ್ಷವೇ ಆಟೋ ಚಾಲಕ ಸಂಘಟನೆಗಳು ಮನವಿ ಮಾಡಿ, ಒತ್ತಾಯ ಮಾಡಿದ್ದವು. ಈಗ ಎಲ್ಲ ಸಾರಿಗೆಗಳ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ದಿನ ನಿತ್ಯದ ಹಲವಾರು ವಸ್ತುಗಳ ಬೆಲೆ ಹೆಚ್ಚಳವಾಗಿವೆ. ಇದರಿಂದ ಆಟೋ ಚಾಲಕರು ಜೀವನ ನಡೆಸುವುದು ಕಷ್ಟಕರಾಗಿದೆ. ಹೀಗಾಗಿ ಆಟೋ ಪ್ರಯಾಣ ದರ ಹೆಚ್ಚಳ ಮಾಡಬೇಕು ಎಂದು ಆಟೋ ಸಂಘಟನೆಗಳು ಒತ್ತಾಯಿಸಿವೆ.
ಇದನ್ನೂ ಓದಿ:2 ವರ್ಷ ಡೇಟಿಂಗ್, ಒಂದೇ ಸಿನಿಮಾದಲ್ಲಿ ನಟನೆ.. ಈಗ ತಮನ್ನಾ-ವಿಜಯ್ ದೂರ ದೂರ, ಕಾರಣ ಇಲ್ಲಿದೆ!
ಸದ್ಯಕ್ಕೆ ಸಿಲಿಕಾನ್ ಸಿಟಿಯಲ್ಲಿ ಆಟೋ ಮೀಟರ್ ದರ 2 ಕಿಲೋ ಮೀಟರ್ಗೆ 30 ರೂಪಾಯಿ ಇದೆ. ಈಗ 1 ಕಿಲೋ ಮೀಟರ್ಗೆ 5 ರೂಪಾಯಿ ಹಾಗೂ 2 ಕಿಲೋ ಮೀಟರ್ಗೆ 10 ರೂಪಾಯಿ ಏರಿಕೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಅಂದರೆ ಕನಿಷ್ಠ ದರವನ್ನು 30 ರೂಪಾಯಿ ಇದ್ದಿದ್ದನ್ನ 40 ರೂಪಾಯಿಗೆ ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿದೆ.
ಈಗ ಆಟೋಗಳ ಸಿಎನ್ಜಿ ಒಂದು ಕೆ.ಜಿಗೆ 88 ರೂಪಾಯಿ ಆಗಿದೆ. ಎಲ್ಪಿಜಿ ಕೆ.ಜಿ 61 ರೂಪಾಯಿ ಆಗಿದೆ. ಹೀಗಾಗಿ ಆಟೋ ಮೀಟರ್ ದರ ಪರಿಷ್ಕರಣೆಗೆ ಸೂಕ್ತ ಸಮಯ. ಕಡೆಯದಾಗಿ 2021ರಲ್ಲಿ ಆಟೋ ಮೀಟರ್ ದರ ಹೆಚ್ಚಳ ಮಾಡಲಾಗಿತ್ತು. ಅಂದಿನಿಂದ ಒಂದೇ ಬೆಲೆಯಲ್ಲಿ ಆಟೋ ಚಾಲನೆ ಮಾಡಲಾಗುತ್ತಿದೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಏರಿಕೆ ಮಾಡಲೇಬೇಕು ಎಂದು ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ.
ಸಭೆಯಲ್ಲಿ ಯಾರು ಯಾರು ಇರುತ್ತಾರೆ?
- ಸಭೆಯ ಅಧ್ಯಕ್ಷರು- ಟ್ರಾಫಿಕ್ ಈಸ್ಟ್ ಡಿಸಿಪಿ
- ಕಾರ್ಯದರ್ಶಿ- ಆಟೋ ರಿಕ್ಷಾ ರಹದ್ದಾರಿ ಕಚೇರಿ (RTO )
- ಸದಸ್ಯರು- ರಾಜಾಜಿನಗರದ ಆರ್ಟಿಒ ಅಧಿಕಾರಿ
- ಸದಸ್ಯರು- ಜಯನಗರ ಆರ್ಟಿಒ ಅಧಿಕಾರಿ
- ಕಾನೂನು ಮಾಪನ ಇಲಾಖೆ ಓರ್ವ ಅಧಿಕಾರಿ
- ಗ್ರಾಹಕರ ವೇದಿಕೆಯಿಂದ ಒಬ್ಬ ಪ್ರತಿನಿಧಿ
- ಬೆಂಗಳೂರು ಆಟೋ ಸಂಘಟನೆಗಳ ಮುಖಂಡರು
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ